ಬಂಟ್ವಾಳ: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿ ಸರ್ಕಾರದ ಪರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಈಗಾಗಲೇ ಈ ಸಂಬಂಧವಾಗಿ ತೀರ್ಮಾನಿಸಿದಂತೆ ಮುನ್ನಡೆಯಲಿದೆ. ಈ ವಿಚಾರವಾಗಿ ತಾನು ಯಾವುದೇ ಹೆಚ್ಚು ಪ್ರತಿಕ್ರಿಯೆ ನೀಡಲಾರೆ ಎಂದು ಶುಕ್ರವಾರ ಬಿ.ಸಿ.ರೋಡ್ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿ ನ್ಯಾಯಾಲಯದ ತೀರ್ಪು ಹೊರಬೀಳುವ ಸಂದರ್ಭದಲ್ಲಿ ಸಾರಿಗೆ ಸಚಿವರೂ ಆದ ರಾಮಲಿಂಗಾರೆಡ್ಡಿಯವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಿ.ಸಿ.ರೋಡ್ನಲ್ಲಿ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ನರ್ಮ್ ಪ್ರಾಯೋಗಿಕ ಆರಂಭ: ಮಂಗಳೂರು ಹಾಗೂ ಉಡುಪಿಗೆ ನರ್ಮ್ ಯೋಜನೆಯಡಿ ಮಂಜೂರುಗೊಂಡಿರುವ ಕೆಎಸ್ಆರ್ಟಿಸಿ ಬಸ್ ಸಂಚಾರವನ್ನು ಎರಡು ತಿಂಗಳುಗಳಾ ಕಾಲ ಪ್ರಯೋಗಿಕವಾಗಿ ಆರಂಭಿಸಿ ಬಳಿಕ ಮೂರು ತಿಂಗಳ ಒಳಗಾಗಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ರಾಮಲಿಂಗಾರೆಡ್ಡಿಯವರು ಉತ್ತರಿಸಿದರು.
ಮಾಸಿಕ ಪಾಸ್ ದರ ಇಳಿಕೆಯಲ್ಲಿ ಮೌನ: ಬಸ್ ದರ ಇಳಿಕೆಯ ಸಂದರ್ಭದಲ್ಲಿ ನೀಡಿರುವ ಭರವಸೆಯಂತೆ ವಿದ್ಯಾರ್ಥಿಗಳ ಹಾಗೂ ಮಾಸಿಕ ಸೀಝನ್ ಪಾಸ್ ದರವನ್ನು ಮಾರ್ಚ್ ತಿಂಗಳಲ್ಲಿ ಇಳಿಸುವ ಕುರಿತಾದ ಪತ್ರಕರ್ತರ ಪ್ರಶ್ನೆಗೆ ಸಚಿವ ರಾಮಲಿಂಗಾರೆಡ್ಡಿಯವರು ಯಾವುದೇ ಪ್ರತಿಕ್ರಿಯೆ ನೀಡದೆ ಮುಂದಕ್ಕೆ ಸಾಗಿದರು.
ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ತಾಕೀತು: ಮಂಗಲೂರು-ಧರ್ಮಸ್ಥಳ ಮಾರ್ಗದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆಯ ಪೀಕ್ ಅವರ್ನಲ್ಲಿ ಬಸ್ಗಳು ಕೈಕೊಡುವ ಮೂಲಕ ಈ ಮಾರ್ಗದ ಪ್ರಯಾಣಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆದಾಗ, ತಕ್ಷಣ ಸ್ಪಂದಿಸಿದ ಸಚಿವರು, ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿಯನ್ನು ಕರೆದು ಈ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ಸಚಿವ ರಮಾನಾಥ ರೈ ಉಪಸ್ಥಿತರಿದ್ದರು.
ತಾಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕಾರ್ಯನಿರತ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಒದಗಿಸುವಂತೆ ಕೋರಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತೀವರ್ಷ ಮಂಡನೆಯಾಗುವ ರಾಜ್ಯ ಬಜೆಟ್ನಲ್ಲಿ ಉಚಿತ ಬಸ್ ಪಾಸ್ನ ಉಲ್ಲೇಖವಿದ್ದರೂ, ಬೇರೆ ಬೇರೆ ಕಾರಣಗಳಿಂದ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಾ, ಕೆಎಸ್ಆರ್ಟಿಸಿ ಬಸ್ಗಳನ್ನು ಆಶ್ರಯಿಸಿಕೊಂಡಿರುವ ಕಾರ್ಯನಿರತ ಪತ್ರಕರ್ತರು ಉಚಿತ ಬಸ್ ಪಾಸ್ನಿಂದ ವಂಚಿತರಾಗುತ್ತಿದ್ದಾರೆ ಎಂದು ಸಚಿವರ ಗಮನಸೆಳೆಯಲಾಯಿತು.
ತಾಲೂಕು ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚಾರ ನಡೆಸುತ್ತಿರುವ ಕಾರ್ಯನಿರತ ಪತ್ರಕರ್ತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಉಚಿತ ಬಸ್ಪಾಸ್ ಒದಗಿಸಬೇಕು. ಬಂಟ್ವಾಳ ತಾಲೂಕು ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ಎಲ್ಲಾ ಪತ್ರಕರ್ತರಿಗೆ ಸರ್ಕಾರದ ವತಿಯಿಂದ ಉಚಿತ ಬಸ್ ಪಾಸ್ ನೀಡುವಂತೆ ಸಚಿವರಿಗೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯ ಸಂಘದಿಂದ ಬಂದ ಪಟ್ಟಿಯನ್ನು ಆಧರಿಸಿ ಬಸ್ ಪಾಸ್ ನೀಡುತ್ತೇವೆ. ಸೂಕ್ತದಾಖಲೆಗಳೊಂದಿಗೆ ರಾಜ್ಯ ಸಂಘದ ಪ್ರೆಸ್ ಕ್ಲಬ್ ಮೂಲಕ ಪಟ್ಟಿ ಸಲ್ಲಿಸಿದರೆ, ಉಚಿತ ಬಸ್ ಪಾಸ್ ವಿತರಣೆಗೆ ಕ್ರಮ ಜರಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಕಾರ್ಯದರ್ಶಿ ರತ್ನದೇವ್ ಪುಂಜಾಲಕಟ್ಟೆ, ಜಿಲ್ಲಾ ಸಂಘದ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ, ಸದಸ್ಯರಾದ ಕಿಶೋರ್ ಪೆರಾಜೆ, ಚಂದ್ರಹಾಸ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.