ಕೋಲ್ಡ್ ಬ್ಲಡೆಡ್ ಮರ್ಡರ್ ಕೇಳಿದ್ದೇವೆ. ಇದು ಕೂಡಾ ಕೋಲ್ಡ್ ಬ್ಲಡೆಡ್ ಕ್ರೈಮ್. ಇಲ್ಲಿ ಯಾರಿಗೂ ಯಾರೂ ಕೂಡ ಹೊಡೆಯುವುದಿಲ್ಲ. ರಕ್ತ ಬರುವ ಮಾತೇ ಇಲ್ಲ. ಮೈಯಲ್ಲಿ ಒಂದು ಚೂರು ಗಾಯ ಕೂಡಾ ಆಗುವುದಿಲ್ಲ. ಆದರೂ ದೇಹದ ಒಳಗೆ ಆಗುವ ನೋವು ಇದೆಯಲ್ಲಾ, ಅದು ಹೊರಗೆ ಗೊತ್ತಾಗುವುದೇ ಇಲ್ಲ. ಸೈಲೆಂಟ್ ಆಗಿ ನಿಮ್ಮನ್ನು ಮಾನಸಿಕವಾಗಿ ಕೊಂದು ಬಿಡುತ್ತದೆ. ಹಾಗೆ ನಿಮ್ಮನ್ನು ಮಾನಸಿಕವಾಗಿ ಹಿಂಸಿಸಿ, ದೋಷಿಸಿ ನಿಮ್ಮ ದುಃಖವನ್ನು ಎಂಜಾಯ್ ಮಾಡುವ ಗುಂಪೊಂದು ಹುಟ್ಟಿಕೊಂಡಿದೆ. ಅವರ ಪ್ರಮುಖ ಅಸ್ತ್ರ ಸಾಮಾಜಿಕ ತಾಣವಾಗಿರುವ ಫೇಸ್ಬುಕ್ ಹಾಗೂ ವಾಟ್ಸ್ಅಪ್.
ಬೀಚ್ಗಳಲ್ಲಿ, ಪಾರ್ಕ್ಗಳಲ್ಲಿ ಒಟ್ಟಾಗಿ ಕಂಡುಬರುವ ಯುವಜೋಡಿಗಳನ್ನು ಹುಡುಕಿ ಅವರ ಫೋಟೋ ತೆಗೆಯುವುದು, ಆ ಫೋಟೋಗಳನ್ನು ಫೇಸ್ಬುಕ್ ಮತ್ತು ವಾಟ್ಸ್ಅಪ್ನಲ್ಲಿ ಪ್ರಚಾರ ಮಾಡಿ ನಿಮ್ಮ ಮಾನ ಮರ್ಯಾದೆ ಕಳೆಯುತ್ತೇವೆ ಎಂದು ಹೆದರಿಸುವುದು, ಅದಕ್ಕಾಗಿ ಒಂದಿಷ್ಟು ಹಣ ಕೊಡಲೇಬೇಕು ಎಂದು ಬ್ಲಾಕ್ಮೇಲ್ ಮಾಡುವುದು, ಹಣ ಇಲ್ಲದಿದ್ದರೆ ಚಿನ್ನ, ಮೊಬೈಲ್ ಯಾವುದಾದರೊಂದು ಕಿತ್ತುಕೊಂಡು ಅವರನ್ನು ಅಲ್ಲಿಂದ ಓಡಿಸುವುದು, ಇದೆಲ್ಲಾ ಈ ತಂಡ ಮಾಡಿಕೊಂಡು ಬಂದಿರುವ ಕೆಲಸ.
ಅಷ್ಟು ಮಾತ್ರ ಅಲ್ಲ, ನಂತರ ಆ ಹುಡುಗಿಯರ ಫೋಟೋಗಳನ್ನು ಬಳಸಿ ಅದನ್ನು ಕೆಟ್ಟದಾಗಿ ಚಿತ್ರಿಸಿ ವಾಟ್ಸ್ಅಪ್ನಲ್ಲಿ ಹಾಕಿ ಬಿಡುವುದು. ಕ್ಷಣಾರ್ಧದಲ್ಲಿ ಆ ಫೋಟೋ ಅಸಂಖ್ಯಾತ ಮೊಬೈಲುಗಳಲ್ಲಿ ಹರಿದಾಡಿಬಿಡುತ್ತದೆ. ಅಲ್ಲಿಗೆ ಆ ತಂಡ ಮಾನಸಿಕ ವಿಕೃತಿಯನ್ನು ಅನುಭವಿಸಿ ಬಿಡುತ್ತದೆ. ಅದು ನಂತರ ಯಾವ ಮಟ್ಟಕ್ಕೆ ಹೋಗುತ್ತದೆ ಅಂದರೆ ಅದೇ ತಂಡ ಆ ಹುಡುಗಿಯ ಪೋಟೋಗೆ ಒಂದು ನೇಣಿನ ಕುಣಿಕೆಯೋ ಹಾರವೋ ಹಾಕಿ ಆ ಯುವತಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಸುಳ್ಳು ಸುದ್ದಿ ಹಬ್ಬಿಸಿಬಿಡುವುದು.
ಈ ಕುತಂತ್ರವನ್ನು ವ್ಯವಸ್ಥಿತವಾಗಿ ಮಾಡುವ ಗುಂಪಿನ ವಿರುದ್ಧ ಆಕ್ರೋಶಗಳು ಈಗ ವ್ಯಕ್ತವಾಗುತ್ತಿವೆ. ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವ ತಂಡದ ವಿರುದ್ಧ ಯುವಪಡೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಅದರ ಮೊದಲ ಹಂತವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ವಿದ್ಯಾರ್ಥಿನಿ ಚೈತ್ರಾ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು ಶೈಕ್ಷಣಿಕವಾಗಿ ಇಡೀ ರಾಜ್ಯಕ್ಕೆ ಹೆಸರು ತಂದುಕೊಟ್ಟಿರುವ ನಗರ. ಇದು ಮೆಟ್ರೋ ಸಿಟಿ ಅಲ್ಲದಿದ್ದರೂ ಇಡೀ ರಾಷ್ಟ್ರದ ಮೆಟ್ರೋ ಸಂಸ್ಕೃತಿ ಇಲ್ಲಿ ಮೈ ಚಾಚಿ ಮಲಗಿಕೊಂಡಿದೆ. ಅದಕ್ಕೆ ಕಾರಣ ಇಲ್ಲಿರುವ ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಅನೇಕ ಪದವಿ ಕಾಲೇಜುಗಳು ಎಂದರೆ ತಪ್ಪಿಲ್ಲ. ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಇಲ್ಲಿ ಯಾವುದೇ ರೀತಿಯ ಅಂಕೆ ಇರುವುದಿಲ್ಲ. ಅವರನ್ನು ಎಲ್ಲಿ, ಯಾಕೆ, ಎಷ್ಟು ಹೊತ್ತಿಗೆ ಹೋಗುತ್ತಿ ಎಂದು ಕೇಳುವ ತಾಪತ್ರಯವನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಕಳೆದ ಬಾರಿ ದೇರಳಕಟ್ಟೆಯ ಮೆಡಿಕಲ್ ವಿದ್ಯಾರ್ಥಿನಿಯನ್ನು ದುರುಳರು ಎನು ಮಾಡಿದ್ದರು ಎಂದು ಮೊದಲಿನಿಂದ ವಿವರಿಸುವ ಅಗತ್ಯ ಇಲ್ಲ. ಆದರೆ ಅದೇ ಸ್ವೇಚ್ಛಾಚಾರ ಈ ಪುಂಡ ಪೋಕರಿಗಳಿಗೆ ರಸವತ್ತಾದ ಫಲವತ್ತಾದ ಟೈಮ್ಪಾಸ್ ಆಗಿದೆ.
ಚೈತ್ರಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಕಾರ್ಯಕರ್ತೆ ಕೂಡಾ ಹೌದು. ಆಕೆಯ ವಿರುದ್ಧ ಫೇಸ್ಬುಕ್ ನಲ್ಲಿ ಬಹಳ ಕೆಟ್ಟದಾಗಿ ಬರೆಯಲಾಗಿತ್ತು. ಅವಹೇಳನಕಾರಿಯಾಗಿ ಬರೆದು ಆಕೆಯ ತೇಜೋವಧೆ ನಡೆಸಲಾಗಿತ್ತು. ಅನಾಮಧೇಯ ಮೊಬೈಲಿನಿಂದ ಬಂದ ಸಂದೇಶದಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅದೇ ಫೇಸ್ಬುಕ್ನಲ್ಲಿ ಸಂದೇಶ ರವಾನಿಸಲಾಗಿತ್ತು. ಇದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಯಾವುದೇ ರಾಷ್ಟ್ರಕಟ್ಟುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವ ಚೈತ್ರಾ ಅವರ ನೈತಿಕ ಸ್ಥೈರ್ಯವನ್ನು ಕುಂದಿಸುವ ಪ್ರಯತ್ನ ಎನ್ನುವುದರಲ್ಲಿ ಯಾವುದೇ ಸಂಶಯ ಇರಲಿಲ್ಲ. ನೀಚರ ಇಂತಹ ಪ್ರಯತ್ನವನ್ನು ವಿಫಲಗೊಳಿಸುವ ನಿಟ್ಟಿನಲ್ಲಿ ಚೈತ್ರಾ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಮಂಗಳೂರು ಮುಸ್ಲಿಂ ಕುಡ್ಲ ಎನ್ನುವ ಫೇಸ್ಬುಕ್ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕುಮಟಾದ ಕಾಲೇಜೊಂದರ ಕಂಪ್ಯೂಟರ್ ಸೈನ್ಸ್ ಪಾರ್ಟ್ ಟೈಂ ಶಿಕ್ಷಕಿಯೊಬ್ಬರ ಅರೆನಗ್ನ ಫೋಟೋಗಳು ವಾಟ್ಸ್ಅಪ್ನಲ್ಲಿ ಹರಿದಾಡಿದ್ದವು. ಅದು ವಾಟ್ಸ್ಅಪ್ಗೆ ಹೇಗೆ ಬಂದಿತು, ಅದು ನೈಜವೋ ಅಥವಾ ಗ್ರಾಫಿಕ್ಸ್ ಕೈಚಳಕವೋ ಗೊತ್ತಿಲ್ಲ. ಆದರೆ ಆ ಯುವತಿಯ ಮಾನ ಹರಾಜು ಹಾಕುವ ಪ್ರಯತ್ನ ನಡೆದದ್ದು ಮಾತ್ರ ನಿಜ. ಅವಳಾಗಿಯೇ ಅದನ್ನು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಯಾವುದೇ ಯುವತಿ ತನ್ನ ನಗ್ನ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕಿ ತನ್ನ ಪ್ರಚಾರ ಆಗಲಿ ಎಂದು ಚಿಂತಿಸುವಷ್ಟು ನಮ್ಮ ದೇಶ ಮುಂದಕ್ಕೆ ಹೋಗಿಲ್ಲ, ಹೋಗುವುದೂ ಬೇಡಾ. ಆದರೆ ನನ್ನ ದೇಹ ನನ್ನ ಇಷ್ಟ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಸಿನೆಮಾ ನಟಿಯರು ಸ್ಪಷ್ಟವಾಗಿ ನಮ್ಮ ಮಾತಿನ ಬಾವಾರ್ಥ ಹೇಳದೇ ಹೋದರೆ ಅದರ ದುಷ್ಪರಿಣಾಮ ಬೇರೆಯದೇ ಆಗಬಹುದು. ಆದರೆ ಒರ್ವ ಹೆಣ್ಣುಮಗಳ ಎದೆಭಾಗ ನಗ್ನವಾಗಿರುವ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕುವ ಮನಸ್ಸುಗಳು ಅದೇನು ಸಾಧಿಸುತ್ತದೆಯೋ ಯಾರಿಗೆ ಗೊತ್ತು. ಅದಾಗಿ ಎರಡೇ ದಿನಕ್ಕೆ ಅದನ್ನು ವಾಟ್ಸ್ಅಪ್ನಲ್ಲಿ ಹಾಕಿದ ಯುವಕನ ಮೇಲೆ ಹಲ್ಲೆ ಆಯಿತು ಎನ್ನುವ ಫೋಟೋ ಕೂಡ ಹರಿದಾಡಿತು. ಆದರೆ ಅದು ನಿಜವಲ್ಲ ಎನ್ನುವಂತಹ ಮಾತು ಕೂಡ ಅದರ ಹಿಂದೆಯೇ ಪೋಸ್ಟ್ ಆಯಿತು. ಆದಾಗಿ ವಾರದೊಳಗೆ ಈ ಎಲ್ಲಾ ಸಂಗತಿಗಳಿಂದ ಬೇಸತ್ತ ಆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಸುದ್ದಿ ಅದೇ ಸಾಮಾಜಿಕ ತಾಣಗಳಲ್ಲಿ ಬಂತು. ಅದು ನಿಜನಾ, ಸುಳ್ಳಾ ಯಾರಿಗೆ ಗೊತ್ತು, ಒಟ್ಟಿನಲ್ಲಿ ಯಾರದ್ದೋ ತೆವಲಿಗೆ ಇನ್ಯಾವುದೋ ಹೆಣ್ಣು ಮಗು ಬಲಿಯಾದದ್ದು ನಿಜ.
ಅಷ್ಟಕ್ಕೂ ಈ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಸಿಗುತ್ತಾ ಎನ್ನುವುದು ಪ್ರಶ್ನೆ. ಈಗಂತೂ ಸಾಮಾಜಿಕ ತಾಣಗಳಲ್ಲಿ ನಮ್ಮ ಭಾವನೆಗಳನ್ನು ನಿರ್ಬಂಧಿಸುವ ಐಟಿ ಆಕ್ಟ್ 66 ಎ ಮೇಲೆ ನಿರ್ಬಂಧ ಹೇರಿರುವುದರಿಂದ ವಿಷ್ನ ಸಂತೋಷಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಸಾಮಾಜಿಕ ತಾಣಗಳು ಧರ್ಮ, ಧರ್ಮಗಳ ನಡುವಿನ ಕಚ್ಚಾಟಕ್ಕೆ ಕಾರಣವಾಗುತ್ತವೆ. ಒಂದು ಧರ್ಮದ ಹೆಣ್ಣುಮಗಳ ತೇಜೋವಧೆಗೆ ಮತ್ತೊಂದು ಧರ್ಮದ ಪುಂಡರು ಕಾಯುತ್ತಿರುತ್ತಾರೆ. ಆದರಿಂದ ಮುಸ್ಲಿಂ ಕುಡ್ಲದ ಮೇಲೆ ಚೈತ್ರಾ ಅವರು ಹಾಕಿರುವ ಪ್ರಕರಣದಲ್ಲಿ ನಿಜಕ್ಕೂ ಅವರಿಗೆ ನ್ಯಾಯ ಸಿಗುತ್ತಾ ಎನ್ನುವುದು ಪ್ರಶ್ನೆ. ಆದರೆ ಎಷ್ಟೋ ಬಾರಿ ಸಾಮಾಜಿಕ ತಾಣಗಳಲ್ಲಿ ತಮ್ಮ ಮಾನ ಹಾನಿಯಾದ್ರೂ ಕೂಡ ಅದೆಷ್ಟೋ ಮಂದಿ ದೂರು ಕೊಡೋದಿಕ್ಕೂ ಭಯಪಡುತ್ತಾರೆ. ಮಾತ್ರವಲ್ಲ ಹತ್ತಾರು ಗ್ರೂಪ್ಗಳಲ್ಲಿ ಇಂತಹಾ ವಿಡಿಯೋಗಳು ಹರಿದಾಡುತ್ತಿರೋದ್ರಿಂದಾಗಿ ವಾಟ್ಸಾಪ್ನ ಈ ಕಿರಿಕಿರಿ ಪೊಲೀಸರಿಗೂ ಹೇಗೆ ಬಿಡಿಸಬೇಕೆನ್ನುವುದು ಕಗ್ಗಂಟಾಗಿ ಉಳಿದಿದೆ. ಇನ್ನು ಸೈಬರ್ ಕ್ರೈಂ ಪೊಲೀಸರಿಂದಲೂ ಕೂಡ ಯುವತಿಯರ ಮಾನಹಾನಿ ತಡೆಯಲು ಸಾಧ್ಯವಾಗಿಲ್ಲ. ಇದರ ಜೊತೆಗೆ ಅನ್ಯಕೋಮಿನ ಯುವಕರ ಜೊತೆ ಯುವತಿಯರು ಕಾಣಿಸಿಕೊಂಡರೆ ಅಂಥವರ ಫೊಟೋಗಳನ್ನು ಆಕೆ ನೇಣು ಬಿಗಿದು ಸತ್ತಿದ್ದಾಳೆ ಅನ್ನೋ ರೀತಿಯಲ್ಲಿ ಹಬ್ಬಿಸಲಾಗುತ್ತದೆ. ಇನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದರಿಂದ ಅಂತಹ ಕೀಚಕರ ಉಪಟಳ ವಿಪರೀತವಾಗಿದೆ. ಅತ್ತ ಪೊಲೀಸರು ಮೊಬೈಲಿನಲ್ಲಿಯೂ ಆಪ್ಸ್ ಮೂಲಕ ನಮಗೆ ದೂರು ಕೊಡಬಹುದು ಎಂದು ಸುದ್ದಿಗೋಷ್ಟಿ ಮಾಡಿ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಇಂತಹ ವಿಕೃತರ ಪುಂಡಾಟದಿಂದಾಗಿ ಅದೆಷ್ಟೋ ಯುವತಿಯರ ಭವಿಷ್ಯ ಇದೀಗ ತೂಗೂಯ್ಯಾಲೆಯಲ್ಲಿದೆ. ಮಾತ್ರವಲ್ಲ ಕರಾವಳಿಯಲ್ಲಿ ವಾಟ್ಸಾಪ್ಗಳಿಂದಾಗಿ ಅದೆಷ್ಟೋ ಸಂಸಾರ ಒಡೆದು ಹೋಗಿದೆ. ಸಾಮಾಜಿಕ ತಾಣಗಳಲ್ಲಿ ಫೋಟೋ ಹರಿದಾಡುವ ಭಯದಿಂದ ಹಲವರು ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿದ್ದಾರೆ. ಇಂತಹ ವಿಕೃತಿಗಳ ಕುಕೃತ್ಯ ಹೀಗೆ ಮುಂದುವರಿದರೆ ಅದೆಷ್ಟೋ ಅಮಾಯಕರು ಬಲಿಯಾಗಬೇಕಾದ ಸ್ಥಿತಿ ಬಂದೊದಗಲಿದೆ. ಪೊಲೀಸರು ಇಂತಹ ಪ್ರಕರಣಗಳನ್ನು ಯಾವಾಗ ಗಂಭೀರವಾಗಿ ಸ್ವೀಕರಿಸುತ್ತಾರೋ ಆವಾಗ ಈ ಪ್ರಕರಣಗಳು ಕಡಿಮೆಯಾಗಬಹುದು. ಇಂತಹ ಕೃತ್ಯ ಯಾರು ಮಾಡುತ್ತಾರೆ ಎಂದು ಪತ್ತೆ ಹಚ್ಚಿ ಅಂತಹ ವ್ಯಕ್ತಿಯ ಮಾನವನ್ನು ಅದೇ ವಾಟ್ಸ್ಪ್ನಲ್ಲಿ ಕಳಿಯುವ ಸಮಯ ಯಾವಾಗ ಬರುತ್ತದೋ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.