News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಬೆಳ್ತಂಗಡಿ ತಾಲೂಕಿನಾದ್ಯಂತ ಡೆಂಗ್ಯೂ, ಮಲೇರಿಯಾ ಹರಡುವ ಭೀತಿ

ಬೆಳ್ತಂಗಡಿ: ತಾಲೂಕಿನಾದ್ಯಂತ ಮಾರಣಾಂತಿಕವಾದ ಡೆಂಗ್ಯೂ ಜ್ವರ ಹರಡುತ್ತಿದ್ದು ಪ್ರತಿನಿತ್ಯ ನೂರಾರು ಜನರು ಜ್ವರ ಪೀಡಿತರಾಗಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇವರಲ್ಲಿ ಹೆಚ್ಚಿನವರು ಡೆಂಗ್ಯೂ ಪೀಡಿತರೇ ಆಗಿದ್ದಾರೆ ಎಂಬುದು ಅಪಾಯಕಾರಿ ವಿಚಾರವಾಗಿದೆ. ತಾಲೂಕಿನಲ್ಲಿ ಈಗಾಗಲೆ ಇಬ್ಬರು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ ಇದು ಜನರ ಭಯ ಹೆಚ್ಚಿಸಲು ಕಾರಣವಾಗಿದೆ.

15dl_DENGE1

ತಾಲೂಕು ಆರೋಗ್ಯಾಧಿಕಾರಿಯವರು ನೀಡುವ ಮಾಹಿತಿಯಂತೆ ತಾಲೂಕಿನಲ್ಲಿ ಮೇ ವರೆಗೆ 35 ಪ್ರಕರಣಗಳು ದಾಖಲಾಗಿತ್ತು. ಇದೀಗ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ 66 ಮಂದಿ ಜ್ವರ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು 22 ಮಂದಿ ಡೆಂಗ್ಯೂ ಪೀಡಿತರಾಗಿದ್ದಾರೆ ಎಂಬುದು ಖಚಿತಗೊಂಡಿದೆ. ಇದು ಸರಕಾರಿ ಆಸ್ಪತ್ರೆಯ ದಾಖಲೆಗಳದರೆ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ರೋಗದಿಂದ ಚಿಕಿತ್ಸೆ ಪಡೆದಿರುವವರ ಲೆಕ್ಕ ಯಾರ ಬಳಿಯೂ ಇಲ್ಲವಾಗಿದೆ. ಇದನ್ನು ಸಂಗ್ರಹಿಸುವ ಅಧವಾ ಡೆಂಗ್ಯೂ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ. ಆರಂಭದಲ್ಲಿಯೆ ಡೆಂಗ್ಯೂ ಪತ್ತೆಯಾಗಿರುವ ಪ್ರಕರಣಗಳಲ್ಲಿ ರೋಗಿಗಳು ಬೇಗನೆ ಗುಣಮುಖರಾಗುತ್ತಿದ್ದಾರೆ. ಆದರೆ ಆರಂಭದಲ್ಲಿ ರೋಗ ಪತ್ತೆಯಾಗದಿದ್ದರೆ ಚಿಕಿತ್ಸೆಗೆ ತೊಂದರೆಯಾಗುತ್ತಿದ್ದು ರೋಗ ತೀವ್ರ ಸ್ಥಿತಿಗೆ ತಲುಪಿರುವ ಹಲವರು ಈಗಾಗಲೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ತಾಲೂಕಿನಲ್ಲಿ ನಾವೂರು ಪ್ರದೇಶದಲ್ಲಿ ಅತ್ಯಂತ ಹೆಚ್ಚಾಗಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಇಲ್ಲಿ ಈಗಾಗಲೆ ಆರೋಗ್ಯ ಇಲಾಖೆಯ ವತಿಯಿಂದ ಗ್ರಾಮ ಪಂಚಾಯತಿನ ಸಹಕಾರದೊಂದಿಗೆ ಶುಚಿತ್ವ ಹಾಗೂ ಫಾಗಿಂಗ್ ಮಾಡಲಾಗಿದೆ. ಅದೇರೀತಿ ಡೆಂಗ್ಯೂ ಪ್ರಕರಣಗಳು ದಾಖಲಾಗಿರುವ ವೇಣೂರು, ಹತ್ಯಡ್ಕ ಪ್ರದೇಶಗಳಲ್ಲಿಯೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕಿನ ವಿವಿಧೆಡೆಗಳಲ್ಲಿ ಡೆಂಗ್ಯೂವಿನೊಂದಿಗೆ ಮಲೇರಿಯಾ ಜ್ವರವೂ ಹರಡುತ್ತಿದೆ. ಜ್ವರ ಪೀಡಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದರೂ ಯಾವುದೇ ಸಮರ್ಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಮಳೆಗಾಲ ಆರಂಭಗೊಂಡು 15 ದಿನಗಳೇ ಕಳೆದಿದ್ದರೂ ಇನ್ನೂ ಸರಿಯಾಗಿ ಮಳೆ ಬಾರದಿರುವುದು ಸೊಳ್ಳೆಗಳ ಬೆಳವಣಿಗೆಗೆ ಪೂರಕವಾಗಿದ್ದು ಇದರಿಂದಾಗಿ ಸಾಂಕ್ರಮಿಕ ರೋಗಗಳು ಅತ್ಯಂತ ತೀವ್ರವಾಗಿ ಹರಡುತ್ತಿದೆ. ಈ ಹಿನ್ನಲೆಯಲ್ಲಿ ಇನ್ನೂ ಕೆಲ ದಿನಗಳ ಕಾಲ ಈ ರೋಗಗಳು ನಿಯಂತ್ರಣಕ್ಕೆ ಬರುವುದು ಕಷ್ಟ ಎನ್ನುವುದು ತಜ್ಞರ ಅಭಿಪ್ರಾಯ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಮಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಸೊಳ್ಳೆಗಳಿಂದ ಹರಡುವ ಈ ರೋಗಗಳು ಅತ್ಯಂತ ವೇಗವಾಗಿ ಹರಡುತ್ತಿದೆ. ಇಬ್ಬರು ಮೂವರು ಡೆಂಗ್ಯೂ ಪೀಡಿತರು ಇರುವ ಮನೆಗಳು ಸಾಕಷ್ಟಿವೆ. ಇಲ್ಲಿರುವ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಪ್ರತಿನಿತ್ಯ ಲಭ್ಯರಿಲ್ಲದ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳ ರೋಗಿಗಳು ಚಿಕಿತ್ಸೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗಿದೆ. ಖಾಸಗಿ ಆಸ್ಪತ್ರೆಗಳು ಮನಬಂದಂತೆ ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿಬರುತ್ತಿದೆ. ತಾಲೂಕಿನ ಯಾವುದೇ ಆಸ್ಪತ್ರೆಗೆ ಹೋದರೂ ಜ್ವರ ಪೀಡಿತರ ಗುಂಪೇ ಕಾಣಸಿಗುತ್ತದೆ.

ಪರಿಸ್ಥಿತಿ ನಿಯಂತ್ರಣದಲ್ಲಿ – ಆರೋಗ್ಯಾಧಿಕಾರಿ: ತಾಲೂಕಿನಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದರೂ ನಿಯಂತ್ರಣದಲ್ಲಿದೆ. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೂನ್ 16 ರಿಂದ 25 ರ ವರೆಗೆ ಇಲಾಖೆಯ ವತಿಯಿಂದ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ರೋಗ ಹರಡದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.
-ಡಾ| ಕಲಾಮಧು, ತಾಲೂಕು ಆರೋಗ್ಯಾಧಿಕಾರಿ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top