ಬೆಳ್ತಂಗಡಿ: ಪರಿಸರ ಸಂರಕ್ಷಣೆ ಎಂಬುದು ಕೇವಲ ಸಭೆ ಭಾಷಣಗಳಿಗಷ್ಟೇ ಸೀಮಿತವಾಗುತ್ತಿರುವ ಸನ್ನಿವೇಶವೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ ತಾಲೂಕಿನ ಶಾಲೆಯೊಂದು ಪ್ರತ್ಯಕ್ಷ ನೀರಿಂಗಿಸುವ ಮೂಲಕ ಮಾದರಿ ಕಾರ್ಯವೊಂದನ್ನು ಮಾಡುತ್ತಿದೆ.
ಈ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣವನ್ನು ನೀಡುವ ಜೊತೆಗೆ ಇಂದಿನ ಅತೀ ಅಗತ್ಯವಿರುವ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿಯನ್ನು ಉಂಟು ಮಾಡುವ ಕೆಲಸವನ್ನು ಮಾಡುತ್ತಿದ್ದು, ಶಾಲಾ ಪರಿಸರದಲ್ಲಿ ನೀರಿಂಗಿಸುವ ಪ್ರಯೋಗವನ್ನು ಯಶಸ್ವಿಯಾಗಿ ಮಾಡಲಾಗಿದೆ. ಈ ಶಾಲೆಯ ಹೆಸರು ಉಜಿರೆಯಿಂದ ಸುಮಾರು ಐದು ಕಿ.ಮಿ.ದೂರದಲ್ಲಿರುವ ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ.
ಕಳೆದ ಆರೇಳು ವರ್ಷಗಳಿಂದ ಸದ್ದಲ್ಲದೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ನೀರಿಂಗಿಸುವ ಕಾರ್ಯವನ್ನು ಮಾಡುತ್ತಿದ್ದು, ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ವಿಶೇಷ ಖರ್ಚಿಲ್ಲದೆ ನೀರ ಹರಿವಿನ ಮಾರ್ಗವನ್ನೇ ಅನುಸರಿಸಿ ಸಹಜವಾಗಿ ಅಲ್ಲಲ್ಲಿನ ನೀರನ್ನು ಅಲ್ಲಲ್ಲಿಯೇ ಇಂಗಿಸುವ ಪ್ರಯತ್ನ ಇಲ್ಲಿ ಮಾಡಲಾಗುತ್ತಿದೆ. ಶಾಲಾ ಆವರಣದೊಳಗೆ ಹರಿಯುವ ನೀರನ್ನು ಎರಡು ಭಾಗವಾಗಿ ವಿಂಗಡಿಸಿ ಹರಿಯುವಂತೆ ಮಾಡಲಾಗಿದೆ. ಆ ಎರಡು ಬಾಗಗಳಲ್ಲಿ ಹರಿದು ಹೋಗುವ ಜಾಗದಲ್ಲಿ ಧಾರಾಳವಾಗಿ ಹಸಿರು ಹುಲ್ಲು ಬೆಳೆಯುವಂತೆ ಮಾಡಿದ್ದಾರೆ. ಜೊತೆಗೆ ನೀರು ಹರಿಯುವ ದಿಕ್ಕಿನಲ್ಲಿ ಸಣ್ಣ ಸಣ್ಣ ನೀರಿನ ಕೊಳದಂತಿರುವ ಇಂಗುಗುಂಡಿಗಳನ್ನು ರಚಿಸಲಾಗಿದೆ. ಜೊತೆಗೆ ತೆಂಗಿನ ಮರಗಳ ಹೊಂಡಗಳನ್ನು ನೀರಿಂಗಿಸುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಹೀಗೆ ಶಾಲಾ ಆವರಣದೊಳಗಿನ ನೀರು ಹಸಿರು ಹಾಸಿನ ಮೇಲೆ ಹರಿಯುತ್ತಾ ಇಂಗು ಗುಂಡಿಗಳಲ್ಲಿ ತುಂಬುತ್ತಾ, ಇಂಗುತ್ತಾ ಹರಿವಿನ ವೇಗವನ್ನು ಕಳಕೊಂಡು ನಿಧಾನವಾಗಿ ಹರಿದು ರಬ್ಬರ್ ತೋಟದಲ್ಲಿ ವಿಶಾಲವಾಗಿ ಮಾಡಿರುವ ಪ್ಲೇಟ್ಗಳಲ್ಲಿ ಹರಿದು ಇಂಗುತ್ತದೆ.
ಶಾಲಾ ಹೊರಾವರಣದ ನೀರು ಹೊರಾಂಗಣದಲ್ಲಿ ಶಾಲಾ ಮೈದಾನದ ಬದಿಯಲ್ಲಿ ಮಾಡಲಾದ ಹೊಂಡಗಳಲ್ಲಿ ತುಂಬಿ ಹರಿಯುತ್ತದೆ. ಅದು ಹೇಗಿದೆ ಎಂದರೆ ದೊಡ್ಡ ಹೊಂಡದಲ್ಲಿ ತುಂಬಿ ಹರಿದು ಸಣ್ಣ ಹೊಂಡಗಳಲ್ಲಿ ತುಂಬಿ ಹರಿಯುವಂತೆ ಸರಪಣಿ ಹೊಂಡಗಳನ್ನು ಮಾಡಲಾಗಿದೆ. ಹೆಚ್ಚುವರಿ ನೀರು ಹೊರ ಹರಿಯುತ್ತದೆ. ಇದರೊಂದಿಗೆ ೨೦೦ ಮೀ ವಿಸ್ತಾರದ ಮೈದಾನದ ನೀರ ಹರಿವನ್ನು ಮೈದಾನದ ಬದಿಯಲ್ಲಿ ಹರಿಯುವಂತೆ ಮಾಡಿದ್ದು ಕ್ರೀಡಾಂಗಣಕ್ಕೆ ಒಂದು ಸುತ್ತು ಬಂದು ಒಂದೇ ಬದಿಯಲ್ಲಿ ಹರಿದು ಹೋಗುತ್ತಿದೆ. ಅಲ್ಲಿಯೂ ಹಾಗೆಯೇ ಹರಿದು ಹೋಗುವ ದಾರಿಯಲ್ಲಿ ಸಣ್ಣ, ದೊಡ್ಡ ಹೊಂಡಗಳನ್ನು ಮಾಡಲಾಗಿದೆ. ಇಲ್ಲೆಲ್ಲಾ ನೀರು ತುಂಬಿ ಹರಿಯುತ್ತಾ ಇನ್ನೊಂದು ಹೊಂಡಕ್ಕಿಳಿದು ಮತ್ತೆ ತುಂಬಿ ಮುಂದಕ್ಕೆ ಹರಿಯುತ್ತದೆ. ಹೀಗೆ ನೀರು ಹರಿದು ಬರುವಾಗಲೇ ಅಷ್ಟುದ್ದಕ್ಕೂ ನಿಂತು ತುಂಬಿ ಇಂಗುವುದಕ್ಕೆ ಅವಕಾಶ ಸಿಕ್ಕಂತಾಗಿದೆ.
ಈ ಶಾಲೆಯ ಸುತ್ತೆಲ್ಲಾ ಹಸಿರು ಸಿರಿ ಕಂಗೊಳಿಸುತ್ತಿದ್ದು ಮಾತ್ರವಲ್ಲದೆ ಗಾರ್ಡನ್ನನ್ನೇ ನೀರಿಂಗಿಸುವಂತೆ ಮಾಡಲಾದ ಪ್ರಯೋಗ ಅತೀ ವಿಶಿಷ್ಟ. ಶಾಲಾ ಆವರಣದೊಳಗೆ ಮಾಡಿನ ನೀರು ನೆಲಕ್ಕೆ ಬೀಳುವ ಸುತ್ತ ಹಸಿರು ಗಿಡ ಬೆಳೆಸಲಾಗಿದೆ. ಮಾಡಿನ ನೀರು ಎಲ್ಲೂ ನೇರವಾಗಿ ನೆಲಕ್ಕೆ ಬೀಳದೆ ಗಿಡಗಳ ಮೇಲೆ ಬಿದ್ದು ನಂತರ ನೆಲವನ್ನು ತಲುಪುತ್ತದೆ. ಇದರಿಂದಾಗಿ ಮಣ್ಣಿನ ಸವಕಳಿ ಅತ್ಯುತ್ತಮ ರೀತಿಯಲ್ಲಿ ತಡೆಯಲ್ಪಟ್ಟಿದೆ. ಆರೇಳು ವರ್ಷಗಳಿಂದ ಈ ಪ್ರಯೋಗ ಜಾರಿಯಲ್ಲಿರುವುದರಿಂದ ಇದೀಗ ಮತ್ತೆ ಇಂಗು ಗುಂಡಿಗಳನ್ನು ನವೀಕರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಅವರೊಂದಿಗೆ ಶಾಲಾ ಆವರಣದಲ್ಲಿರುವ ಬೋರ್ವೇಲ್ಗೆ ನೀರಿಂಗಿಸುವ ನೂತನ ಪ್ರಯೋಗಕ್ಕೆ ಶಾಲಾ ಆಡಳಿತ ಮಂಡಳಿಯವರ ಮೂಲಕ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರು, ಮತ್ತು ಸಿಬ್ಬಂದಿಯವರು ಮುಂದಾಗಿದ್ದಾರೆ. ಇಂತಹ ಪ್ರಯೋಗಗಳಿಂದಾಗಿ ಈ ವರ್ಷದ ಬಿರು ಬೇಸಿಗೆಯಲ್ಲೂ ಇಲ್ಲಿನ ಬಾವಿಯ ನೀರು ಬತ್ತದಿರುವುದು ವಿಶೇಷ.
8,9,10 ನೇ ತರಗತಿಯಲ್ಲಿರುವ ಬೆಳಾಲಿನ ಈ ಪ್ರೌಢಶಾಲೆಯಲ್ಲಿ ನೀರಿಂಗಿಸುವ ಪ್ರಯೋಗದೊಂದಿಗೆ ಹಲವಾರು ವಿನೂತನ ಶೈಕ್ಷಣಿಕ ಪ್ರಯೋಗಗಳು ನಡೆಯುತ್ತಿರುವುದನ್ನು ಗುರುತಿಸಲೇಬೇಕು. ತೀರಾ ಹಳ್ಳಿ ಪ್ರದೇಶದ ಶಾಲೆಯಾದರೂ ಪೇಟೆ ಶಾಲೆಗಿಂತಲೂ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಇಲ್ಲಿ ನೀಡಲಾಗುತ್ತಿದೆ. ಶೈಕ್ಷಣಿಕವಾಗಿಯೂ ಅನೇಕ ಅವಕಾಶಗಳನ್ನು ಇಲ್ಲಿ ಕಲ್ಪಿಸಲಾಗಿದೆ. ವಿಶೇಷವಾಗಿ ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ೮ನೇ ತರಗತಿಯಿಂದಲೇ ಪ್ರತಿ ತರಗತಿಗೆ ವಾರಕ್ಕೆ 2 ವಿಶೇಷ ತರಗತಿಗಳು, ೧೫ ಕಂಪ್ಯೂಟರ್ಗಳ ಮೂಲಕ ಉಚಿತ ಕಂಪ್ಯೂಟತ್ ಶಿಕ್ಷಣ, ಯೋಗ ಮತ್ತು ನೈತಿಕ ತರಬೇತಿಗಳು, ಸಾಹಿತ್ಯ- ಸಾಂಸ್ಕೃತಿಕ ಚಟುವಟಿಕೆಗಳು, ಪ್ರತಿ ವರ್ಷ ಅಕ್ಟೋಬರ್ನಲ್ಲಿ ೨ ದಿನ ಏಪ್ರಿಲ್ನಲ್ಲಿ ೭ ದಿನಗಳ ಕ್ರೀಡೆ ಮತ್ತು ಮನೋಲ್ಲಾಸ ವಿಶೇಷ ಶಿಬಿರ, ತರಗತಿ ವಾರು ವಾಚನಾಲಯ ಮತ್ತು ಭಿತ್ತಿ ಪತ್ರಿಕೆ ಸರಕಾರಿ ಕಚೇರಿಗಳ, ಉಜಿರೆ ಕಾಲೇಜು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಗಳ ಭೇಟಿ, ಕ್ರೀಡಾ ತರಬೇತಿ ಇತ್ಯಾದಿ ಹತ್ತಾರು ಚಟುವಟಿಕೆಗಳು ಗಮನಾರ್ಹ.
ಈ ರೀತಿಯ ವಿಶೇಷ ಪ್ರಯೋಗಗಳಿಗೆ ಶಾಲೆಯ ಆಡಳಿತ ಮಂಡಳಿಯವರು ನೀಡುವ ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ಶಿಕ್ಷಕರೆಲ್ಲರ ಕ್ರಿಯಾಶೀಲತೆ ಕಾರಣವಾಗಿದೆ. ವಿಶಿಷ್ಟ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿರುವ ಈ ಪ್ರೌಢಶಾಲೆಯು ತಾಲೂಕಿನಲ್ಲಿಯೇ ಗುರುತಿಸುವಂತಾಗಿದೆ.
ಸುಮಾರು 10 ವರ್ಷಗಳ ಹಿಂದೆ ನಮ್ಮ ಶಾಲೆಯಲ್ಲಿ ಪರಿಸರ ತಜ್ಞ ಶ್ರೀಪಡ್ರೆಯವರಿಂದ ಪರಿಸರದ ಕುರಿತು ಕಾರ್ಯಾಗಾರ ಏರ್ಪಡಿಸಿದ್ದೆವು. ಆಗ ಅವರು ಪರಿಸರ ಸಂರಕ್ಷಣೆ, ನೀರಿನ ಇಂಗಿಸುವಿಕೆ ಬಗ್ಗೆ ಮಾಹಿತಿ ನೀಡಿದ್ದರು. ನಮ್ಮ ಶಾಲೆಯ ಪರಿಸರವೂ ನೀರಿಂಗಿಸುವಿಕೆಗೆ ಪೂರಕವಾಗಿರುವುದರಿಂದ, ನೀರು ಹರಿದು ಹೋಗುವ ದಿಕ್ಕು ಕೂಡ ಸರಿಯಾಗಿರುವುದರಿಂದ ಅವರ ಮಾರ್ಗದರ್ಶನದಂತೆ ಏಲು ವರ್ಷಗಳ ಹಿಂದೆಯೇ ಶಾಲೆಯಲ್ಲಿ ನೀರಿಂಗಿಸುವ ಪ್ರಯೋಗಕ್ಕೆ ಮುಂದಾಗಿದ್ದೇವೆ. ಅದು ಈಗ ಯಶಸ್ವಿಯಾಗಿದೆ- ರಾಮಕೃಷ್ಣ ಭಟ್ ಚೊಕ್ಕಾಡಿ, ಶಾಲಾ ಮುಖ್ಯೋಪಾಧ್ಯಾಯರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.