ಬೆಳ್ತಂಗಡಿ: ತೃಪ್ತಿ ಮತ್ತು ಮಾನವೀಯತೆಯ ಗುಣಗಳನ್ನು ಬಾಲ್ಯದಲ್ಲೆ ಮಕ್ಕಳಲ್ಲಿ ಪಡಿಮೂಡುವಂತೆ ಮಾಡುವುದು ಆದ್ಯ ಕರ್ತವ್ಯವಾಗಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೆತ್ತವರಿಗೆ, ಪೋಷಕರಿಗೆ ಕರೆ ನೀಡಿದರು.
ಅವರು ಭಾನುವಾರ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ಶ್ರೀ ಸತ್ಯದೇವತೆ ದೈವಸ್ಥಾನ ಅಳದಂಗಡಿ ಹಾಗೂ ಅಳದಂಗಡಿ ಅರಮನೆ ವತಿಯಿಂದ ನಡೆದ 13 ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಇಂದು ಸಮಾಜದಲ್ಲಿ ಶ್ರೀಮಂತಿಕೆ ಹಾಗೂ ಅಧಿಕಾರಕ್ಕೆ ಮನ್ನಣೆ ಸಿಗುವುದು ಹೆಚ್ಚಾಗುತ್ತಿದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲವಾಗಿದೆ. ಮೌಲ್ಯಗಳು ಕುಸಿಯುತ್ತಿವೆ. ಕಾನೂನಿಕ ಚೌಕಟ್ಟಿನಲ್ಲಿ ಶ್ರೀಮಂತರಾಗುವುದರಲ್ಲಿ ತಪ್ಪಿಲ್ಲ ಆದರೆ ಇನ್ನೊಬ್ಬರಿಂದ ಕಸಿದು ಧನಿಕರಾಗುವುದು ಸರಿಯಲ್ಲ. ಇದ್ದವರು ಇಲ್ಲದವರಿಗೆ ಸಹಾಯ ಮಾಡುವುದೇ ದೊಡ್ಡ ಗುಣ ಎಂದು ಸ್ಪಷ್ಟಪಡಿಸಿದರು.
ಜೀಪ್, ಬ್ಯಾಂಕ್, ಬೋಫೋರ್ಸ, ಕೊಲ್ಗೇಟ್, 2ಜಿ ಹಗರಣಗಳಿಂದ ಕೆಲವರು ದೇಶದ ಸಂಪತ್ತನ್ನೇ ನುಂಗಿಬಿಟ್ಟರು. ಕೇಂದ್ರ ಸರಕಾರ ಕುಡಿಯುವ ನೀರಿನ ಯೋಜನೆಗಾಗಿ ರಾಜ್ಯ ಸರಕಾರ ನೀಡಿದ ರೂ. 51 ಸಾವಿರ ಕೋಟಿ ರೂ. ಗಳನ್ನೂ ನಿರ್ದಯವಾಗಿ ಕೆಲವರು ನುಂಗಿದರು. ಅಲ್ಲದೆ ಸರಕಾರಿ ನೌಕರಿ ಅಪೇಕ್ಷಿಸಿ ಕೆಲಸಕ್ಕೆ ಸೇರಿದವರು ಕರ್ತವ್ಯವನ್ನೇ ಮರೆಯುತ್ತಿರುವುದು ವಿಷಾದನೀಯ. ಈ ಹಿಂದೆ ರಾಜ್ಯದ ಗಣಿ ಹಗರಣದಲ್ಲಿ ಮೂವರು ಮುಖ್ಯಮಂತ್ರಿಗಳು, 9ಮಂತ್ರಿಗಳು, 750 ಅಧಿಕಾರಿಗಳು ಶಾಮಿಲಾಗಿರುವ ಬಗ್ಗೆ ವರದಿ ನೀಡಿದ್ದೆ. ಸಂಗ್ರಹಿಸಿದ್ದ ಸಾವಿರಾರು ಟನ್ ಅದಿರು ಸಮುದ್ರದ ಅಲೆಗಳಲ್ಲಿ ಕೊಚ್ಚಿಹೋಯಿತು ಎಂದು ವರದಿ ನೀಡಿ ಅದನ್ನು ಮುಚ್ಚಿ ಹಾಕಲಾಯಿತು ಎಂದು ಅವರು ವಿಷಾದಿಸಿದರು.
ನಾವು ತೃಪ್ತಿ ಮತ್ತು ಮಾನವೀಯತೆಯ ಗುಣಗಳನ್ನು ಆಳವಾಗಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಪರಿವರ್ತನೆಯನ್ನು ತರಲು ಸಾಧ್ಯ. ಬದಲಾವಣೆ ಆಗದಿದ್ದಲ್ಲಿ ಮುಂದಿನ ಪೀಳಿಗೆ ಕಷ್ಟದಲ್ಲಿ ಬದುಕಬೇಕಾಗುತ್ತದೆ. ಪೋಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಅರಿವನ್ನು ಉಂಟು ಮಾಡುವತ್ತ ಗಮನ ಹರಿಸಬೇಕು ಎಂದು ತಿಳಿಸಿದರಲ್ಲದೆ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರದ ಕಾರ್ಯವನ್ನು ಶ್ಲಾಘಿಸಿದರು.
ಶಾಸಕ ಕೆ. ವಸಂತ ಬಂಗೇರ ಪ್ರತಿಭಾ ಪುರಸ್ಕಾರ ಮಾಡಿದರು. ಹತ್ತನೇ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸುಶ್ರುತ್ ಯು.ಕೆ ಅವರನ್ನು ಸಮ್ಮಾನಿಸಲಾಯಿತು. ಅಳದಂಗಡಿ ಪ.ಪೂ.ಕಾಲೇಜಿನ ವಿಜ್ಞಾನ ವಿಭಾಗಕ್ಕೆ ರೂ. 10,000, ಅಳದಂಗಡಿಯ ಸರಕಾರಿ ಆಸ್ಪತ್ರೆಯ ಹಾಸಿಗೆ ವ್ಯವಸ್ಥೆಗೆ ರೂ. 5000, ಸನಿಹದ ಪಂಡಿಜೆ ಸರಕಾರಿ ಶಾಲೆಯ ಗೌರವ ಶಿಕ್ಷಕಿಗೆ ಮಾಸಿಕ ರೂ. 8000, ಬಡಗಕಾರಂದೂರು ಶಾಲೆಯ ಗೌರವ ಶಿಕ್ಷಕಿಗೆ ಮಾಸಿಕ ರೂ.20,000 ಸಹಾಯಧನವನ್ನು ದೈವಸ್ಥಾನ ಮತ್ತು ಅರಮನೆ ವತಿಯಿಂದ ವಿತರಿಸಲಾಯಿತು. ಧರ್ಮಸ್ಥಳ ಬೃಂದಾವನ ಹೋಟೇಲಿನ ನರಸಿಂಹ ಪ್ರಭು ಅವರು ಗೋಪಾಲಕೃಷ್ಣ ಪ್ರಭು ಸ್ಮರಣಾರ್ಥ ನೀಡಿರುವ ಸಹಾಯಧನವನ್ನು ಸ್ವೀಕರಿಸಿ ವಿತರಿಸಲಾಯಿತು.
ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲ ಅಧ್ಯಕ್ಷತೆ ವಹಿಸಿದ್ದರು. ಅಜಿಲರ ತಾಯಿ ಸರಸ್ವತಿ ಅಮ್ಮ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿದ್ದ ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ, ತಾ.ಪಂ. ಸದಸ್ಯರಾದ ಸುಧೀರ್ ಸುವರ್ಣ, ವಿನುಷಾ ಪ್ರಕಾಶ್, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು. ಸುಮಾರು ೪೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬರೆಯುವ ಹೊತ್ತಗೆಗಳನ್ನು ಉಚಿತವಾಗಿ ಪಡದುಕೊಂಡರು. ಈ ಹಿಂದೆ ಪುಸ್ತಕಗಳನ್ನು ಪಡೆದುಕೊಂಡು ಶಿಕ್ಷಣ ಮುಂದುವರಿಸುತ್ತಿರುವವರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸುಲ್ಕೇರಿ ಮೊಗ್ರು ಸಿ.ಎ.ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ಶೆಟ್ಟಿ ನೊಚ್ಚ, ಅಳದಂಗಡಿ ಗ್ರಾ.ಪಂ. ಮಾಜಿ ಸದಸ್ಯ ಮೋಹನದಾಸ್, ಪತ್ರಕರ್ತ ವಿಜಯಕುಮಾರ್ ಮತ್ತಿತರರು ಸಹಕರಿಸಿದರು.
ಸತ್ಯದೇವತೆ ದೈವಸ್ಥಾನದ ಆಡಳ್ತೆ ಮೊಕ್ತೇಸರ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಅಳದಂಗಡಿ ಗ್ರಾ.ಪಂ.ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು ವಂದಿಸಿದರು. ಅಜಿತ್ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.
ಕರ್ನಾಟಕದಲ್ಲಿನ ಲೋಕಾಯುಕ್ತ ಸಂಸ್ಥೆ ದೇಶದಲ್ಲೇ ಅತ್ಯುತ್ತಮ ಮಾದರಿ ವ್ಯವಸ್ಥೆಯಾಗಿದೆ. ಆದರೆ ಎಸಿಬಿಯಂತಹ ಇನ್ನೊಂದು ಸಂಸ್ಥೆಯನ್ನು ರಚಿಸಲಾಗಿದೆ. ಸರಕಾರ ಲೋಕಾವನ್ನು ಉಳಿಸಿ ಜನರಿಗೆ ಉಪಕಾರ ಮಾಡಲಿ -ಸಂತೋಷ್ ಹೆಗ್ಡೆ
ನಾನು 48 ವರ್ಷಗಳ ಕಾಲ ರಾಜಕೀಯ ಜೀವನ ನಡೆಸಿದ್ದೇನೆ. ಇನ್ನೆರಡು ವರ್ಷಗಳ ಬಳಿಕ ನಿವೃತ್ತಿ ಹೊಂದುವೆ– ವಸಂತ ಬಂಗೇರ
ಜಿಂದಾಲ್ ಸಂಸ್ಥೆಯವರು ನನ್ನನ್ನು ಸಮ್ಮಾನಿಸುವಾಗ ನನಗೆ ರೂ. 1 ಕೋಟಿಯ ಚೆಕ್ನ್ನು ನೀಡಿದ್ದರು. ಆದರೆ ನಾನದನ್ನು ಇಟ್ಟುಕೊಳ್ಳದೆ ಕೇಂದ್ರ ಸರಕಾರದ ಈಗಿನ ಮಂತ್ರಿ ಜ| ವಿ.ಕೆ.ಸಿಂಗ್ ಅವರ ಸಲಹೆ ಮೇರೆಗೆ ನಿವೃತ್ತ ಯೋಧರ ಫಂಡ್ಗೆ ದಾನವಾಗಿ ನೀಡಿದೆ. ಇನ್ನೊಬ್ಬರಿಗೆ ಉಪದೇಶಿಸುವ ಮೊದಲು ತಾನೇನು ಮಾಡಿದ್ದೇನೆ ಎಂದು ಹೇಳಲು ಈ ವಿಚಾರ ತಿಳಿಸಿದ್ದೇನೆ- ಸಂತೋಷ್ ಹೆಗ್ಡೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.