News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಹೊಸ ‘ಭಾಗ್ಯ’ವಿಲ್ಲ, ಸದ್ಯ ತೂಗಿಸಿಕೊಂಡು ಹೋದರೆ ಸಾಕಾಗಿದೆಯೇನೊ?

Untitled-1ಸದ್ಯಕ್ಕೆ ವಿಧಾನಸಭೆಗೆ ಅಥವಾ ಮಹಾನಗರಪಾಲಿಕೆಗೆ ಚುನಾವಣೆ ದೂರ ಇರುವುದರಿಂದ ಮಂಗಳೂರು ಮಹಾನಗರ ಪಾಲಿಕೆ ಈ ಬಾರಿ ವಿಶೇಷ “ಭಾಗ್ಯ”ಗಳಿಲ್ಲದ ಬಜೆಟ್ ಮಂಡಿಸಿದೆ. ಕಳೆದ ಬಾರಿ ಪಾಲಿಕೆಯ ಆಡಳಿತಾಧಿಕಾರಿಯೂ ಆಗಿದ್ದ ಜಿಲ್ಲಾಧಿಕಾರಿಯವರು ಮಂಡಿಸಿದ ಬಜೆಟ್‌ನಿಂದ ನಿರೀಕ್ಷಿಸಿದ್ದಷ್ಟು ವರಮಾನ ಬರದೇ ಇದ್ದ ಕಾರಣ ಇದ್ದದರಲ್ಲಿಯೇ ಕಡಿಮೆ ನಿರೀಕ್ಷೆ ಇಟ್ಟುಕೊಂಡು ಕಡಿಮೆ ಉಳಿಕೆ ಆದರೂ ಪರವಾಗಿಲ್ಲ ಎನ್ನುವ ದೃಷ್ಟಿಯ ಬಜೆಟ್ ಮಂಡಿಸಲಾಗಿದೆ.

ಯಾವುದೇ ರೀತಿಯ ಹೊಸ ಯೋಜನೆಗಳ ಘೋಷಣೆ ಇಲ್ಲದೆ 2015-16ನೆ ಸಾಲಿಗೆ ಒಟ್ಟು ಅಂದಾಜು ರಾಜಸ್ವ ಆದಾಯ358.44ಕೋಟಿ ರೂ. ಹಾಗೂ ರಾಜಸ್ವ ವೆಚ್ಚ ೩೫೮.೪೨ ಕೋಟಿ ರೂ.ಗಳೊಂದಿಗೆ 1.50 ಲಕ್ಷ ರೂ.ಗಳ ಉಳಿಕೆ ಬಜೆಟ್‌ಗೆ ಮಂಗಳೂರು ಮಹಾನಗರ ಪಾಲಿಕೆಯು ಅನುಮೋದನೆ ನೀಡಿದೆ.

ಮನಪಾ ಸಭಾಂಗಣದಲ್ಲಿ ನೂತನ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಂಬಂಧಿ ವಿಶೇಷ ಸಭೆಯಲ್ಲಿ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್ ಅವರು 201415ನೆ ಸಾಲಿನ ಪರಿಷ್ಕೃತ ಅಂದಾಜು ಪಟ್ಟಿ ಹಾಗೂ 2015-16ನೆ ಸಾಲಿನ ಆಯವ್ಯಯ ಅಂದಾಜು ಪಟ್ಟಿಯನ್ನು ಮಂಡಿಸಿದ್ದಾರೆ. ಆದರೆ ಚರ್ಚೆಯ ಸಂದರ್ಭ ವಿಪಕ್ಷ ಸದಸ್ಯರು ಆಯವ್ಯಯ ಪಟ್ಟಿಯಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನ ಅಭಿವೃದ್ಧಿ ಕಾಮಗಾರಿಗಳ ಕುರಿತು ಗೊಂದಲವಿರುವುದಾಗಿ ಸಭೆಯ ಗಮನಕ್ಕೆ ತಂದಿದ್ದರು.ಈ ಬಗ್ಗೆ ತಿದ್ದುಪಡಿಯೊಂದಿಗೆ ಬಜೆಟನ್ನು ಅನುಮೋದಿಸುವುದಾಗಿ ಮೇಯರ್ ತಿಳಿಸಿದ್ದಾರೆ.

2015-16ನೆ ಸಾಲಿಗೆ ನೀರಿನ ಶುಲ್ಕದಿಂದ 45ಕೋಟಿ ರೂ., ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಿಂದ 40 ಕೋಟಿ ರೂ., ಉದ್ದಿಮೆ ಪರವಾನಿಗೆಯಿಂದ 3 ಕೋಟಿ ರೂ., ಅಭಿವೃದ್ದಿ ಶುಲ್ಕಗಳು ಸೇರಿ 4.75 ಕೋಟಿ ರೂ., ಮಾರುಕಟ್ಟೆಗಳಿಂದ 2.75 ಕೋಟಿ ರೂ., ಘನತ್ಯಾಜ್ಯ ಕರ ಮತ್ತು ಶುಲ್ಕ ರೂಪದಲ್ಲಿ 14.00 ಕೋಟಿ ರೂ. ಹಾಗೂ ಸರಕಾರದಿಂದ ಅನುದಾನ ಮತ್ತು ಇತರೆ ಮೂಲಗಳಿಂದ ಒಟ್ಟು 358.44 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕಲ್ಯಾಣ ಕಾರ್ಯಕ್ರಮಗಳ ಸಹಿತ 159.86 ಕೋಟಿ ರೂ., ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿಗಳಿಗಾಗಿ 45.21 ಕೋಟಿ ರೂ., ಘನತ್ಯಾಜ್ಯ ನಿರ್ವಹಣೆಗಾಗಿ 20 ಕೋಟಿ ರೂ., ಭದ್ರತಾ ಸಿಬ್ಬಂದಿ ವೆಚ್ಚಗಳಿಗಾಗಿ 2 ಕೋಟಿ ರೂ. ಮತ್ತು ಇತರ ವೆಚ್ಚ ಸೇರಿ ಒಟ್ಟು ೩೫೮.೪೨ ಕೋಟಿ ರೂ. ಅಂದಾಜಿಸಲಾಗಿದೆ ಎಂದು ಹರಿನಾಥ್ ಸಭೆಯಲ್ಲಿ ಬಜೆಟ್ ವಿವರ ನೀಡಿದ್ದಾರೆ.

ಬಿಪಿಎಲ್ ಕುಟುಂಬಕ್ಕೆ ಮನೆ ರಿಪೇರಿ ಅನುದಾನದಲ್ಲಿ ೫೦೦೦ ರೂ. ಹೆಚ್ಚಳ ಮಾಡುವ ಮೂಲಕ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಲಾಭದ ದೃಷ್ಟಿಯನ್ನು ಕಾಂಗ್ರೆಸ್ ಇಟ್ಟಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ (ಪರಿಶಿಷ್ಟ ಜಾತಿ ಮತ್ತು ಪಂಗಡವರನ್ನು ಹೊರತುಪಡಿಸಿ) ಮನೆ ರಿಪೇರಿ ಮಾಡಲು 2015-16 ನೆ ಸಾಲಿಗೆ ಫಲಾನುಭವಿಗಳಿಗೆ ನೀಡಲಾಗುವ ಅನುದಾನವನ್ನು ತಲಾ 15000 ರೂ.ಗಳಿಂದ 20000 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಮನಪಾ ವ್ಯಾಪ್ತಿಯ ನಿರ್ದಿಷ್ಠ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಇ ಟೆಂಡರ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇದರಿಂದ ತೆರಿಗೆ ರೂಪದಲ್ಲಿ ಸುಮಾರು 2.20 ಕೋಟಿ ರೂ. ನಿರೀಕ್ಷಿಸಲಾಗಿದೆ. ಪರವಾನಿಗೆ ಇಲ್ಲದೆ ವ್ಯಾಪಾರ ಮಾಡುವವರನ್ನು ಪತ್ತೆ ಹಚ್ಚಲು ಈಗಾಗಲೇ ನೀಡಲಾಗಿರುವ ಉದ್ದಿಮೆ ಪರವಾನಿಗೆಗಳ ನವೀಕರಣ, ಹೊಸ ಪರವಾನಿಗೆ ನೀಡುವ ಬಗ್ಗೆ ಸಮಿತಿಯ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಸಲಹೆ ಮಾರ್ಗದರ್ಶನ ನೀಡಲು ಕ್ರಮ ತೆಗೆದುಕೊಂಡು ಆರೋಗ್ಯ ಇಲಾಖೆಯನ್ನು ಚುರುಕುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.

2015ರ ಜೂನ್ ಅಂತ್ಯಕ್ಕೆ ತುಂಬೆ ಅಣೆಕಟ್ಟು ಪೂರ್ಣಗೊಳ್ಳುವುದಾಗಿ ಮನಪಾ “ವಿಶ್ವಾಸ” ಇಟ್ಟುಕೊಂಡಿರುವುದು ಈ ಬಾರಿಯ ಬಜೆಟ್‌ನ ವಿಶೇಷ ಎಂದೇ ಹೇಳಬೇಕಾಗಬಹುದು. ಮಂಗಳೂರು ಮಹಾನಗರ ಪಾಲಿಕೆಗೆ ನೀರು ಪೂರೈಕೆಯ ಪ್ರಮುಖ ವ್ಯವಸ್ಥೆಯಾಗಿರುವ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ತುಂಬೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ 2015ರ ಜೂನ್ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಬಳಿಕ ಮನಪಾ ವ್ಯಾಪ್ತಿಗೊಳಪಡುವ ಎಲ್ಲಾ ಪ್ರದೇಶಗಳಿಗೂ ನಿರಂತರವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ವರದಿಯಲ್ಲಿ ತಿಳಿಸಲಾಗಿದೆ.

2018ರಲ್ಲಿ 48.21 ಕೋಟಿ ರೂ. ವೆಚ್ಚಕ್ಕೆ ಅಂದಾಜಿಸಲಾಗಿದ್ದ ಕಿಂಡಿ ಅಣೆಕಟ್ಟಿನ ವೆಚ್ಚ ಬಳಿಕ ೭೫.೫೦ ಕೋಟಿರೂ.ಗಳಿಗೆ ಏರಿಕೆಯಾಗಿ ಅನುದಾನದ ಕೊರತೆಯಿಂದ ಕಾಮಗಾರಿ ಕುಂಠಿತಗೊಂಡಿತ್ತು. ಇದೀಗ ರಾಜ್ಯ ಸರಕಾರದ ಅನುದಾನದೊಂದಿಗೆ ಕಾಮಗಾರಿ ಶೇ. 70ರಷ್ಟು ಪೂರ್ಣಗೊಂಡಿದೆ ಎಂದು ಹರಿನಾಥ್ ಸಭೆಯಲ್ಲಿ ತಿಳಿಸಿದರು.

ಉಪ ಮೇಯರ್ ಪ್ರಥಮ ಸಭೆಗೆ ಅನುಪಸ್ಥಿತಿಯಿದದ್ದು ವಿಪಕ್ಷ ಮುಖಂಡರ ಟೀಕೆಗೆ ಗುರಿಯಾಯಿತು. ನೂತನ ಉಪ ಮೇಯರ್ ಪುರುಷೋತ್ತ ಚಿತ್ರಾಪುರ ಅವರು ಬಜೆಟ್‌ನ ವಿಶೇಷ ಸಭೆಯಲ್ಲಿ ಅನುಪಸ್ಥಿತರಾಗುವ ಮೂಲಕ ಪ್ರಥಮ ಸಭೆಗೇ ಗೈರುಹಾಜರಾಗುವ ಮೂಲಕ, `ಉಪ ಮೇಯರ್‌ರವರಿಂದ ಸಭೆಗೆ ಬಹಿಷ್ಕಾರ’ ಎಂಬ ವಿಪಕ್ಷ ನಾಯಕರ ಆಕ್ಷೇಪಕ್ಕೆ ಗುರಿಯಾದರು. ಈ ಸಂದರ್ಭ ಪ್ರತಿಕ್ರಿಯಿಸಿದ ಮೇಯರ್ ಜೆಸಿಂತಾ ವಿಜಯಾ ಆಲ್ಪ್ರೆಡ್, ಉಪ ಮೇಯರ್‌ರವರು ತುರ್ತು ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿರುವುದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ತುಂಬೆ ಅಣೆಕಟ್ಟಿಗೆ ಅನುದಾನ ನೀಡುವ ವಿಷಯದಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆದು ತುಂಬೆಯ ಅಣೆಕಟ್ಟಿನ ನಿರ್ಮಾಣದ ಕ್ರೆಡಿಟ್ ಯಾರಿಗೆ ಸೇರಲಿದೆ ಎನ್ನುವುದು ಬರುವ ದಿನಗಳಲ್ಲಿ ಗೊತ್ತಾಗಲಿದೆ.

ಮುಖ್ಯ ಸಚೇತಕ ಶಶಿಧರ ಹೆಗ್ಡೆಯವರು ತುಂಬೆ ಅಣೆಕಟ್ಟು ಕಾಮಗಾರಿಗೆ ಸಿದ್ಧರಾಮಯ್ಯನವರು 40 ಕೋಟಿರೂ.ಗಳನ್ನು ನೀಡಿದ್ದಾರೆ ಎಂದು ಹೇಳಿದಾಗ ಆಕ್ಷೇಪಿಸಿದ ವಿಪಕ್ಷ ಸದಸ್ಯರು ತಮ್ಮ ಅವಧಿಯಲ್ಲೂ 21ಕೋಟಿ ರೂ. ಅಣೆಕಟ್ಟಿಗಾಗಿ ನೀಡಲಾಗಿದೆ ಎಂದು ಹೇಳುವ ಮೂಲಕ ವಿಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಕೆಲ ಹೊತ್ತು ವಾಗ್ವಾದಕ್ಕೆ ಕಾರಣವಾಯಿತು. ಸಚೇತಕರು ರಾಜಕೀಯ ಮಾತನಾಡುತ್ತಿದ್ದಾರೆಂದು ಆರೋಪಿಸಿ ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮೇಯರ್‌ರವರು ಅಧಿಕಾರಿಯಿಂದ ಯಾವ ಅವಧಿಯಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ ಎಂಬ ಉತ್ತರವನ್ನು ಕೊಡಿಸುವ ಮೂಲಕ ವಾಗ್ವಾದಕ್ಕೆ ಅಂತ್ಯ ಹಾಡಿದರು.

ನಿರೀಕ್ಷೆಯಂತೆ ವಿಪಕ್ಷಗಳು ಬಜೆಟ್ ಅನ್ನು ಟೀಕಿಸಿವೆ.ಕಳೆದ ಸಾಲಿನಲ್ಲಿ ನೀರಿನ ಸಂಗ್ರಹದಿಂದ 36 ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿತ್ತು. ಆದರೆ ಸಂಗ್ರಹವಾಗಿರುವುದು 19.67 ಕೋಟಿರೂ. ಆಸ್ತಿ ತೆರಿಗೆಯಲ್ಲೂ 30 ಕೋಟಿರೂ. ಬೇಡಿಕೆ ಇದ್ದರೂ19.56 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಯಾವುದೇ ಹೊಸ ಯೋಜನೆ ಇಲ್ಲ. ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಮಂಗಳೂರು ಮಹಾನಗರ ಪಾಲಿಕೆಯನ್ನು ಸೀಮೆಎಣ್ಣೆ ಮುಕ್ತ ನಗರವಾಗಿ ಘೋಷಿಸುವುದಾಗಿ ಹೇಳಿದ್ದರೂ ಅದಕ್ಕಾಗಿ ಬಜೆಟ್‌ನಲ್ಲಿ ಯಾವುದೇ ಅನುದಾನ ಇರಿಸಲಾಗಿಲ್ಲ. ಹಾಗಾಗಿ ಯಾವುದೇ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಇದು ಶೂನ್ಯ ಬಚೆಟ್ ಆಗಿದ್ದು, ಇದನ್ನು ವಿರೋಧಿಸುವುದಾಗಿ ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top