ರಾಜಕೀಯವಾಗಿ ಧೃವೀಕರಣಗೊಂಡ ಮಾಧ್ಯಮ ವ್ಯಕ್ತಿಗಳು ಮತ್ತು ಎಡಪಂಥೀಯ ಬುದ್ದಿ ಜೀವಿಗಳು ಆಗಾಗ ಅಸಹಿಷ್ಣುತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಹರಣದ ಕುರಿತು ಬೊಬ್ಬೆ ಹೊಡೆಯುತ್ತಿರುತ್ತಾರೆ. ಅದರಲ್ಲೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಣ್ಣದೊಂದು ಹಿಂಸಾತ್ಮಕ ಪ್ರಕರಣ ಜರುಗಿದರೂ, ಆ ಪ್ರಕರಣಕ್ಕೂ ಅಲ್ಲಿನ ಸರ್ಕಾರಕ್ಕೂ ಏನೇನೂ ಸಂಬಂಧವಿರದಿದ್ದರೂ ಅದನ್ನು ಬಿಜೆಪಿ ಸರ್ಕಾರದ ತಲೆಗೆ ಕಟ್ಟುವಲ್ಲಿ ಈ ಬುದ್ಧಿಜೀವಿಗಳು, ಮಾಧ್ಯಮ ವ್ಯಕ್ತಿಗಳು ಅತ್ಯಂತ ನಿಷ್ಣಾತರು. ಆದರೆ ಕೇರಳದಲ್ಲಿ ಲಾಗಾಯ್ತಿನಿಂದ ಸಿಪಿಎಂ ಪಕ್ಷ ನಡೆಸುತ್ತಿರುವ ದೌರ್ಜನ್ಯ, ಹಿಂಸಾಚಾರವನ್ನು ಮಾಧ್ಯಮಗಳು ಸಿಪಿಎಂ-ಆರೆಸ್ಸೆಸ್ ನಡುವೆ ನಡೆದ ಘರ್ಷಣೆಗಳೆಂದೇ ಬಿಂಬಿಸುತ್ತಿವೆ. ವಾಸ್ತವ ಮಾತ್ರ ಬೇರೆಯೇ. ನಿಜವಾಗಿಯೂ ಕೇರಳದಲ್ಲಿ ನಡೆಯುತ್ತಿರುವುದು ಸಿಪಿಎಂ-ಆರೆಸ್ಸೆಸ್ ನಡುವಿನ ಸಂಘರ್ಷವೇ? ಅಥವಾ ಅದು ಸಿಪಿಎಂ ಭಯೋತ್ಪಾದಕರ ಕ್ರೌರ್ಯದ ನಗ್ನ ಪೈಶಾಚಿಕ ಪ್ರದರ್ಶನವೇ? ಎಂಬುದನ್ನು ಗಂಭೀರವಾಗಿ ಪರಾಮರ್ಶಿಸಬೇಕಾಗಿದೆ. ಆದರೆ ಹೀಗೆ ಪ್ರಾಮಾಣಿಕವಾಗಿ ಪರಾಮರ್ಶಿಸುವ ವ್ಯವಧಾನವಾಗಲಿ, ವಿವೇಕವಾಗಲಿ ಮಾಧ್ಯಮಗಳಿಗೆ ಎಲ್ಲಿದೆ?
ಕಮ್ಯುನಿಷ್ಟರು ಎಲ್ಲೇ ಅಧಿಕಾರಕ್ಕೆ ಬಂದರೂ ತಮ್ಮದಕ್ಕಿಂತ ಭಿನ್ನವಾದ ರಾಜಕೀಯ ಸಿದ್ದಾಂತಗಳನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎನ್ನುವುದು ಸಿದ್ದವಾದ ಸಂಗತಿ. ಇಡೀ ಜಗತ್ತಿನಲ್ಲಿ ಕಮ್ಯುನಿಷ್ಟರು ಅಧಿಕಾರಕ್ಕೇರಿದ ಕಡೆಯಲ್ಲೆಲ್ಲಾ ಶಾಂತಿ, ನೆಮ್ಮದಿ, ಸೌಹಾರ್ದತೆ ಮರೀಚಿಕೆಯಾಗಿರುವುದು ಇದೇ ಕಾರಣಕ್ಕಾಗಿ. ರಷ್ಯಾ, ಕ್ಯೂಬಾ, ಚೀನಾ, ವಿಯೆಟ್ನಾಂ ಮೊದಲಾದೆಡೆ ಕಮ್ಯುನಿಷ್ಟರು ಅಧಿಕಾರಕ್ಕೆ ಬಂದ ಬಳಿಕ ಅಲ್ಲಿನ ನೆಮ್ಮದಿಯ ವಾತಾವರಣ ಹೇಗೆ ಭಯಾನಕ ಸ್ವರೂಪಕ್ಕೆ ತಿರುಗಿತು ಎಂಬುದು ಇತಿಹಾಸದಿಂದ ವೇದ್ಯ. ರಷ್ಯಾದಲ್ಲಿ ಕಳೆದ ಶತಮಾನದ 2ನೇ ದಶಕದಲ್ಲಿ ನಡೆದ ಅಕ್ಟೋಬರ್ ಕ್ರಾಂತಿಯ ಬಳಿಕ ಈ ವಿದ್ಯಮಾನ ಇನ್ನಷ್ಟು ಹೆಚ್ಚು ನಿಖರವಾಗುತ್ತಿದೆ. ಅದರಲ್ಲೂ ಮಾರ್ಕ್ಸಿಸ್ಟರ ಆಳ್ವಿಕೆ ಎಂದರೆ ಅದೊಂದು ಬಗೆಯ ಸರ್ವಾಧಿಕಾರವೆಂದೇ ಅರ್ಥ. ಕಮ್ಯುನಿಷ್ಟ್ ಪಕ್ಷದ ಆಡಳಿತ ಏನು ಹೇಳುತ್ತದೆಯೋ ಅದೇ ಸತ್ಯ. ಅದನ್ನು ಯಾರೂ ಪ್ರತಿಭಟಿಸುವಂತಿಲ್ಲ. ಪ್ರತಿಭಟಿಸಿದವರಿಗೆ ತಕ್ಕ ಶಿಕ್ಷೆ ಕಾದಿರುತ್ತದೆ. ಕಮ್ಯುನಿಷ್ಟ್ ಅಧಿಕಾರವಿದ್ದಡೆಯಲ್ಲೆಲ್ಲಾ ಇತರ ಪಕ್ಷಗಳ ಕಾರ್ಯಕರ್ತರು, ನಾಯಕರು ಶಾಂತಿ, ನೆಮ್ಮದಿಯಿಂದ ಬದುಕುವಂತೆಯೇ ಇಲ್ಲ. ಕೇರಳದ ಪಾಲಿಗಂತೂ ಈ ಮಾತು ಅಕ್ಷರಶಃ ನಿಜವಾಗಿದೆ.
ಕೇರಳದಲ್ಲಿ ಯಾವುದೇ ರಾಜಕೀಯಪ್ರೇರಿತ ಸಂಘರ್ಷಗಳು ನಡೆದಾಗಲೆಲ್ಲ, ಅಲ್ಲಿ ಒಂದು ಕಡೆ ಪ್ರಮುಖ ಪಾತ್ರವಹಿಸುವುದು ಸಿಪಿಎಂ ಎಂಬುದು ಹಗಲಿನಷ್ಟು ಸ್ಪಷ್ಟ. ಸಿಪಿಎಂ vs ಕಾಂಗ್ರೆಸ್, ಸಿಪಿಎಂ vs ಆರೆಸ್ಸೆಸ್, ಸಿಪಿಎಂ vs ಬಿಜೆಪಿ, ಸಿಪಿಎಂ vs ಕೇರಳ ಕಾಂಗ್ರೆಸ್, ಸಿಪಿಎಂ vs ಸಿಪಿಐ, ಕೆಲವು ಬಾರಿ ಸಿಪಿಎಂ vs ಸಿಪಿಎಂ ಆಗಿದ್ದೂ ಇದೆ. ಆರೆಸ್ಸೆಸ್ ಮತ್ತು ಪರಿವಾರದ ಸಂಘಟನೆಗಳಂತೂ ಸಿಪಿಎಂ ದೌರ್ಜನ್ಯಕ್ಕೆ ಬಹುತೇಕವಾಗಿ ತುತ್ತಾಗಿದೆ. ಇಂತಹ ರಾಜಕೀಯ ಕೊಲೆಕೃತ್ಯ ವಿದ್ಯಮಾನಗಳು ಕೇರಳದಲ್ಲಿ ಪ್ರಾರಂಭವಾಗಿದ್ದು 1940ರ ಆರಂಭದಿಂದಲೇ. ಅವಿಭಜಿತ ಕಮ್ಯುನಿಷ್ಟ್ ಪಕ್ಷ ಕೇರಳದಲ್ಲಿ ಆಗಿನ್ನೂ ಅಧಿಕಾರದ ರುಚಿ ನೋಡಿರಲಿಲ್ಲ. 1948ರಲ್ಲಿ ಮೊದಲಬಾರಿಗೆ ತಿರುವನಂತಪುರದಲ್ಲಿ ಸಿಪಿಐ ಪಕ್ಷದ ಗೂಂಡಾಗಳು ಆರೆಸ್ಸೆಸ್ ಮೇಲೆ ಹಲ್ಲೆ ನಡೆಸಿದರು. ಆರೆಸ್ಸೆಸ್ನ ಸಾಂಘಿಕ್ ಒಂದರಲ್ಲಿ ಆಗಿನ ಸರಸಂಘಚಾಲಕರಾದ ಶ್ರೀ ಗುರೂಜೀ ಗೋಳವಲ್ಕರ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗಲೇ ಈ ಹಲ್ಲೆ ನಡೆದಿತ್ತು. ಆರೆಸ್ಸೆಸ್ನ ಈಗಿನ ಹಿರಿಯ ಸ್ವಯಂ ಸೇವಕರಾಗಿರುವ ಪಿ. ಪರಮೇಶ್ವರನ್ ಆಗ ಸಾಂಘಿಕ್ನ ಮುಖ್ಯ ಶಿಕ್ಷಕರಾಗಿದ್ದರು. ಸಂಘದ ಮೇಲೆ ನಡೆದ ಈ ದಾಳಿಯನ್ನು ಸ್ವಯಂಸೇವಕರು ಸಮರ್ಥವಾಗಿಯೇ ಎದುರಿಸಿದ್ದರು. ಕಾರ್ಯಕ್ರಮಕ್ಕೆ ಯಾವುದೇ ತಡೆಯಾಗಲಿಲ್ಲ. ಗುರೂಜಿಯವರು ಏನೂ ಆಗದವರಂತೆ ತಮ್ಮ ಭಾಷಣ ಮುಂದುವರೆಸಿದ್ದರು. ಆದಾದ ಬಳಿಕ ೧೯೫೨ರಲ್ಲಿ ಗುರೂಜಿಯವರು ಅಳಪ್ಪುರದಲ್ಲಿ ಇಂತಹದೇ ಇನ್ನೊಂದು ಸಭೆಯಲ್ಲಿ ಮಾತನಾಡುತ್ತಿರುವಾಗ ಮತ್ತೆ ಸಿಪಿಐ ಗೂಂಡಾಗಳು ಹಲ್ಲೆ ನಡೆಸಿದ್ದರು. ಆಗಲೂ ಕಾರ್ಯಕ್ರಮಕ್ಕೆ ಯಾವುದೇ ತಡೆಯುಂಟಾಗಲಿಲ್ಲ.
ಇದಾಗಿ ಒಂದು ದಶಕದ ಬಳಿಕ ಕಮ್ಯುನಿಷ್ಟ್ ಪಕ್ಷ ಸಿಪಿಐ ಮತ್ತು ಸಿಪಿಎಂ ಎಂಬ ಎರಡು ಹೋಳುಗಳಾಗಿ ಇಬ್ಭಾಗವಾಯಿತು. ಸಿಪಿಎಂ ಆರೆಸ್ಸೆಸ್ ವಿರುದ್ಧ ಮತ್ತಷ್ಟು ಭಯಾನಕವಾಗಿ ಹಲ್ಲೆಗಳಿಗೆ ತೊಡಗಿತು. 1969 ರಲ್ಲಿ ತ್ರಿಶ್ಶೂರ್ ಕೇರಳವರ್ಮ ಕಾಲೇಜು ಆವರಣದಲ್ಲಿ ಸ್ವಾಮಿ ಚಿನ್ಮಯಾನಂದರ ಪ್ರವಚನ ನಡೆಯುತ್ತಿದ್ದಾಗ ಎಸ್ಎಫ್ಐನ ಪೂರ್ವಾಶ್ರಮದ ಆವತಾರವಾದ ಕೆಎಸ್ಎಫ್ ಹಲ್ಲೆ ನಡೆಸಲು ಯತ್ನಿಸಿದರೂ ಆರೆಸ್ಸೆಸ್ ಸ್ವಯಂಸೇವಕರ ಸರ್ಪಕಾವಲಿನಿಂದಾಗಿ ಅದು ವಿಫಲಗೊಂಡಿತು. ಸ್ವಾಮೀಜಿಯವರಿಗೆ ಕಿಂಚಿತ್ತೂ ಧಕ್ಕೆಯಾಗದಂತೆ ಸ್ವಯಂಸೇವಕರು ನಿಗಾವಹಿಸಿದ್ದರು. ಈ ಘಟನೆ ಎಸ್ಎಫ್ಐ ಕಾರ್ಯಕರ್ತರಲ್ಲಿ ಸೇಡಿನ ಕಿಡಿ ಹಚ್ಚಿತು. ಸಮಯ ಸಿಕ್ಕಾಗಲೆಲ್ಲಾ ಅವರು ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ತೊಡಗಿದ್ದು ಈಗ ಇತಿಹಾಸ.
1969 ರಲ್ಲಿ ಸಿಪಿಎಂ ಗೂಂಡಾಗಳ ಕ್ರೌರ್ಯಕ್ಕೆ ಮೊಟ್ಟಮೊದಲಬಾರಿಗೆ ಬಲಿಯಾದ ಆರೆಸ್ಸೆಸ್ ಕಾರ್ಯಕರ್ತ ವಡಿಕ್ಕಲ್ ರಾಮಕೃಷ್ಣನ್. ತಲಶ್ಶರಿಯಲ್ಲಿ ಸಿಹಿತಿಂಡಿ ಮಾಡಿ ಮಾರಾಟಮಾಡುತ್ತಿದ್ದ ವ್ಯಕ್ತಿ ಈತ. ಇದಾಗಿ ಒಂದು ತಿಂಗಳ ಬಳಿಕ ಸಿಪಿಎಂ ಗೂಂಡಾಗಳು ಕೊಟ್ಟಾಯಂ ಜಿಲ್ಲೆಯ ಪೊಂಕುನ್ನಮ್ ಎಂಬಲ್ಲಿ ಶ್ರೀಧರನ್ ನಾಯರ್ ಎಂಬ ಇನ್ನೊಬ್ಬ ಆರೆಸ್ಸೆಸ್ ಕಾರ್ಯಕರ್ತನನ್ನು ಕೊಂದು ಹಾಕಿದರು. ಅದೇ ವರ್ಷ ಪಾಲಕ್ಕಾಡ್ನಲ್ಲಿ ರಾಮಕೃಷ್ಣನ್ ಎಂಬ ಇನ್ನೊಬ್ಬ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆಯೂ ನಡೆಯಿತು. ಈ ಮೂರೂ ಹತ್ಯಾ ಪ್ರಕರಣಗಳಲ್ಲಿ ಈಗ ಕೇರಳದ ಮುಖ್ಯಮಂತ್ರಿಯಾಗಿರುವ ಪಿನರಾಯಿ ವಿಜಯನ್ ಹಾಗು ಪಾಲಿಟ್ಬ್ಯೂರೋ ಸದಸ್ಯರಾಗಿರುವ ಕೊಡಿಯೇರಿ ಬಾಲಕೃಷ್ಣನ್ ಅವರ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇದಾದ ಬಳಿಕ 1970 ಜನವರಿ 11 ರಂದು ಎರ್ನಾಕುಲಂ ಜಿಲ್ಲೆಯ ಪಾರೂರುನಲ್ಲಿ ಸಿಪಿಎಂ ಗೂಂಡಾಗಳಿಂದ ಭೀಕರ ಹತ್ಯೆಗೊಳಗಾದದ್ದು ಆರೆಸ್ಸೆಸ್ ಕಾರ್ಯಕರ್ತ ಹಾಗೂ ಮಾಜಿ ಪ್ರಚಾರಕ ವೆಲಿಯುತುನಾಡು ಚಂದ್ರನ್. ನಲ್ಲೆಂಕರ ಎಂಬಲ್ಲಿ ಸಂಘದ ಮಂಡಲ ಕಾರ್ಯವಾಹ ಶಂಕರನಾರಾಯಣನ್ ಅವರನ್ನೂ ಇದೇ ರೀತಿ ಭೀಕರವಾಗಿ 1973 ರಲ್ಲಿ ಕೊಲ್ಲಲಾಯಿತು. 1974 ರಲ್ಲಿ ಸಿಪಿಎಂ ಗೂಂಡಾಗಳು ಇನ್ನೊಬ್ಬ ಮಂಡಲ ಕಾರ್ಯವಾಹ ಸುಧೀಂದ್ರನ್ ಅವರನ್ನು ಕೊಚ್ಚಿಯಲ್ಲಿ ಕೊಚ್ಚಿ ಹಾಕಿದರು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ತುರ್ತುಪರಿಸ್ಥಿತಿ ವಿರುದ್ಧ ಆಂದೋಲನ ಹಮ್ಮಿಕೊಂಡು ಜನಜಾಗೃತಿ ನಡೆಸುತ್ತಿದ್ದರೆ, ಸಿಪಿಎಂ ಕಾರ್ಯಕರ್ತರು ಮಾತ್ರ ಕಾಂಗ್ರೆಸ್ನ ಸರ್ವಾಧಿಕಾರವನ್ನು ವಿರೋಧಿಸದೆ ಕೈಕಟ್ಟಿ ಕುಳಿತಿದ್ದು ಅವರ ಹೇಡಿತನಕ್ಕೆ ನಿದರ್ಶನ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅವರಿಗೆ ಅದೆಂತಹ ನಂಬಿಕೆ ಇದೆ ಎಂಬುದು ಆಗ ಬಟ್ಟಬಯಲಾಗಿತ್ತು! ಸಿಪಿಎಂನ ಇಂತಹ ಧೋರಣೆಗೆ ಬೇಸತ್ತು ಅನೇಕ ಸಿಪಿಎಂನ ಸಕ್ರಿಯ ಕಾರ್ಯಕರ್ತರು ಆರೆಸ್ಸೆಸ್ಗೆ ಸೇರಿದ್ದರು. ಸಿಪಿಎಂನ ಭದ್ರಕೋಟೆಗಳಾದ ಕಣ್ಣೂರು, ಅಳಪ್ಪುರ ಹಾಗೂ ಕರಾವಳಿಯ ತ್ರಿಶ್ಶೂರ್ನಲ್ಲಿ ಕಮ್ಯುನಿಸ್ಟ್ ತೊರೆದು ಆರೆಸ್ಸೆಸ್ಗೆ ಸೇರ್ಪಡೆಯಾದವರು ಬಹಳಷ್ಟು ಮಂದಿ.
ಸಿಪಿಎಂ ನಾಯಕರ ಕಣ್ಣು ಕೆಂಪಗಾಗಿದ್ದು ಆವಾಗಲೇ. ತಮ್ಮ ಪಕ್ಷ ತೊರೆದು ಆರೆಸ್ಸೆಸ್ ಸೇರಿದ ಕಾರ್ಯಕರ್ತರನ್ನು ಅವರು ಕ್ಷಮಿಸಲು ಸರ್ವಥಾ ಸಿದ್ಧರಿರಲಿಲ್ಲ. ಅವರ ಬದುಕನ್ನು ಅಂತ್ಯಗೊಳಿಸುವುದೊಂದೇ ಅವರ ಈ ‘ಪಾಪ’ಕ್ಕೆ ತಕ್ಕ ಶಿಕ್ಷೆ ಎಂದು ಸಿಪಿಎಂ ನಾಯಕತ್ವ ನಿರ್ಧರಿಸಿತು. ಅದರ ಪರಿಣಾಮವೇ 1978 ರಿಂದ ಕಮ್ಯುನಿಸ್ಟ್ ತೊರೆದು ಆರೆಸ್ಸೆಸ್ಗೆ ಸೇರಿದ ನೂರಾರು ಸಂಖ್ಯೆಯ ಕಾರ್ಯಕರ್ತರ ಸರಣಿ ಕೊಲೆ ಪ್ರಕರಣಗಳು. ಮೊದಮೊದಲು ಮಾರ್ಕ್ಸಿಸ್ಟ್ ಗೂಂಡಾಗಳು ಕೊಲೆ ಕೃತ್ಯಕ್ಕೆ ಬಳಸುತ್ತಿದ್ದುದು ಲಾಂಗು, ಮಚ್ಚು ಹಾಗು ತಲವಾರುಗಳನ್ನು. ಆದರೆ ಆರೆಸ್ಸೆಸ್ ಕಾರ್ಯಕರ್ತರು ಇದಕ್ಕೆಲ್ಲಾ ಬೆದರದಿದ್ದಾಗ ಸಿಪಿಎಂ ಗೂಂಡಾಗಳು ಬಾಂಬ್ ತಯಾರಿಕೆ ಆರಂಭಿಸಿದರು. ಅನೇಕ ಕಡೆಗಳಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲು ಈ ಬಾಂಬ್ಗಳನ್ನು ಬಳಸಲಾಯಿತು.
ಕೇರಳದಲ್ಲಿ ಒಮ್ಮೆ ಯುಡಿಎಫ್ ಅಧಿಕಾರಕ್ಕೇರಿದರೆ ಇನ್ನೊಮ್ಮೆ ಎಲ್ಡಿಎಫ್ ಅಧಿಕಾರಕ್ಕೇರುವುದು ರಾಜಕೀಯ ಸಂಪ್ರದಾಯವೇ ಆಗಿಬಿಟ್ಟಿದೆ. ಯುಡಿಎಫ್ ಅಧಿಕಾರದಲ್ಲಿದ್ದಾಗ ಕೊಲೆ, ಹಿಂಸಾಚಾರ ಘಟನೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿರುತ್ತದೆ. ಆದರೆ ಎಲ್ಡಿಎಫ್ ಅಧಿಕಾರಕ್ಕೇರಿದಾಗಲೆಲ್ಲ ಅದು ಭಯಾನಕ ಸ್ವರೂಪ ಪಡೆದುಕೊಳ್ಳುತ್ತದೆ. ರಾಜಕೀಯ ವಿರೋಧಿಗಳನ್ನು ಸದೆಬಡಿಯಲು ಕಮ್ಯುನಿಷ್ಟರು ಅಧಿಕಾರವನ್ನು ಅಸ್ತ್ರವನ್ನಾಗಿ ಎಗ್ಗಿಲ್ಲದೆ ಬಳಸಿಕೊಳ್ಳುತ್ತಿರುವುದು ಒಂದು ನಗ್ನ ಸತ್ಯ. ಕಮ್ಯುನಿಸ್ಟ್ ಗೂಂಡಾಗಳ ವಿರುದ್ಧ ನ್ಯಾಯಾಲಯದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಗಳೂ ಸಾಕಷ್ಟಿವೆ. ಇಂತಹ ನ್ಯಾಯಾಧೀಶರಿಗೆ ಅನಂತರ ಪೊಲೀಸ್ ರಕ್ಷಣೆ ನೀಡಲಾಗಿದೆ. ಇದುವರೆಗೆ ಮಾರ್ಕ್ಸಿಷ್ಟರ ಈ ಭಯಾನಕ ಕೊಲೆ ಕೃತ್ಯಗಳಿಗೆ ಜೀವತೆತ್ತ ಸಂಘಪರಿವಾರದ ಕಾರ್ಯಕರ್ತರ ಸಂಖ್ಯೆ 267 ಕ್ಕೂ ಹೆಚ್ಚು.
ಕ್ರೌರ್ಯಕ್ಕೆ ಕೊನೆ ಹಾಡಲು ಆರೆಸ್ಸೆಸ್ ಸಂಧಾನ
ಮಾರ್ಕ್ಸಿಷ್ಟ್ ಗೂಂಡಾಗಳ ಈ ಕೊಲೆ, ಕ್ರೌರ್ಯ ವಿದ್ಯಮಾನಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕೆಂದು ಆರೆಸ್ಸೆಸ್ ಮೊದಲಿನಿಂದಲೂ ಪ್ರಯತ್ನ ನಡೆಸುತ್ತಲೇ ಬಂದಿದೆ. ಕೇರಳದಲ್ಲಿ ಯಾವುದೇ ಕಾರಣಕ್ಕೂ ಹಿಂಸಾಚಾರ ಸರಿಯಲ್ಲ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ನೆತ್ತರು ಹರಿಯಕೂಡದು ಅದೇನಿದ್ದರೂ ಕೇವಲ ಮಾತಿನ ಹಂತದಲ್ಲೇ ಮುಕ್ತಾಯಗೊಳ್ಳಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಕೂಡದು ಎಂಬುದು ಆರೆಸ್ಸೆಸ್ ನಿಲುವು. ಇದಕ್ಕಾಗಿ ಸಿಪಿಎಂ ನಾಯಕರಾದ ಇಎಂಸ್ ನಂಬೂದರಿಪಾಡ್, ಇಕೆ ನಯನಾರ್, ವಿಎಸ್ ಅಚ್ಯುತಾನಂದನ್ ಮೊದಲಾದ ಹಿರಿಯ ಕಮ್ಯುನಿಸ್ಟ್ ನಾಯಕರೊಂದಿಗೆ ಸಂಘದ ವರಿಷ್ಠರಾದ ಪಿ. ಪರಮೇಶ್ವರನ್, ರಂಗಾಹರಿ, ಸೇತುಮಾಧವನ್ ಮೊದಲಾದ ಗಣ್ಯರು ಮಾತುಕತೆ ನಡೆಸುತ್ತಲೇ ಬಂದಿದ್ದಾರೆ. ಸಾಕಷ್ಟು ಬಾರಿ ಇಂತಹ ಮಾತುಕತೆಗಳು, ಸಂಧಾನಗಳು ನಡೆದಿವೆ. ಮಾತುಕತೆ ನಡೆದಾಗಲೆಲ್ಲ ಕಮ್ಯುನಿಷ್ಟ್ ನಾಯಕರು ತಮಗೆ ಇಂತಹ ಹಿಂಸಾಕೃತ್ಯಗಳಲ್ಲಿ ನಂಬಿಕೆಯಿಲ್ಲ, ಆಸಕ್ತಿಯೂ ಇಲ್ಲ, ಅದು ನಮ್ಮ ಉದ್ದೇಶವೂ ಅಲ್ಲ ಎಂದು ಸ್ಪಷ್ಟಪಡಿಸುತ್ತಲೇ ಬಂದಿದ್ದಾರೆ. ಆದರೆ ಇಂತಹ ಸಂಧಾನ ಮಾತುಕತೆ ನಡೆದ ಮರುದಿನವೇ ಸಂಘಪರಿವಾರದ ಪ್ರಮುಖರೊಬ್ಬರ ಕೊಲೆಯಾಗುತ್ತಿರುವುದು ಮಾತ್ರ ವಿಪರ್ಯಾಸ. ಒಮ್ಮೆ 1999 ರ ನವೆಂಬರ್ 29 ರಂದು ಜಸ್ಟಿಸ್ ವಿಆರ್ ಕೃಷ್ಣಯ್ಯರ್ ಅವರ ಕೊಚ್ಚಿಯ ನಿವಾಸದಲ್ಲಿ ಕಮ್ಯುನಿಷ್ಟ್ ಹಾಗೂ ಆರೆಸ್ಸೆಸ್ ನಾಯಕರ ನಡುವೆ ಸಂಧಾನ ಮಾತುಕತೆ ನಡೆದಿತ್ತು. ಇನ್ನುಮುಂದೆ ಇಂತಹ ಹಿಂಸೆಯನ್ನು ಕೈಬಿಡಲಾಗುವುದೆಂದು ಆ ಸಭೆಯಲ್ಲಿ ಕಮ್ಯುನಿಷ್ಟ್ ನಾಯಕರು ಆಶ್ವಾಸನೆಯನ್ನೂ ನೀಡಿದ್ದರು. ಆದರೆ ಅದರ ಮರುದಿನವೇ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಕೃಷ್ಣನ್ ಮಾಸ್ಟರ್ ಅವರನ್ನು ತರಗತಿಯಲ್ಲಿ ಪಾಠಮಾಡುತ್ತಿರುವಾಗಲೇ ಬರ್ಬರವಾಗಿ ಕಮ್ಯುನಿಷ್ಟ್ ಗೂಂಡಾಗಳು ಕೊಚ್ಚಿಹಾಕಿದ್ದರು! ಕಮ್ಯುನಿಷ್ಟರು ಆಡುವುದು ಒಂದು, ಮಾಡುವುದೇ ಇನ್ನೊಂದು ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕೆ?
ಈಗ ಮತ್ತೆ ದೇವರನಾಡು ಕೇರಳದಲ್ಲಿ ಎಲ್ಡಿಎಫ್ ಅಧಿಕಾರಕ್ಕೇರಿದೆ. ಅಲ್ಲದೆ, ಈ ಬಾರಿ ಅಲ್ಲಿನ ಅಸೆಂಬ್ಲಿಯಲ್ಲಿ ಬಿಜೆಪಿ ಖಾತೆಯನ್ನೂ ತೆರೆದಿದೆ. ಬಿಜೆಪಿಯ ಮತ ಗಳಿಕೆ ಪ್ರಮಾಣವೂ ಗಮನಾರ್ಹವಾಗಿ ಏರಿಕೆಯಾಗಿದೆ. ಇವೆಲ್ಲಾ ಅಂಶಗಳು ಎಲ್ಡಿಎಫ್ ಪಾಲಿಗೆ ನುಂಗಲಾರದ ಕಹಿ ಹಾಗಲಕಾಯಿ. ಅವರು ಈ ಬಾರಿ ಖಂಡಿತ ಸುಮ್ಮನಿರುವುದಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ದಿನವೇ ಅದರ ಮುನ್ಸೂಚನೆ ದೊರಕಿದೆ. ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಮೇಲೆ ಹಲ್ಲೆಗಳು ಮತ್ತೆ ಗರಿಗೆದರಿದೆ. ಅದು ಇನ್ನು ಯಾವ ಪರಾಕಾಷ್ಠೆಗೆ ತಲುಪುತ್ತದೋ ಗೊತ್ತಿಲ್ಲ. ಕೇರಳದಲ್ಲಿ ನಡೆದಿರುವ ಈ ಹಿಂಸಾ ಕೃತ್ಯಗಳನ್ನು ನಿಯಂತ್ರಿಸಬೇಕೆಂದು ಸಂಘಪರಿವಾರದ ನಿಯೋಗವೊಂದು ರಾಷ್ಟ್ರಪತಿಗೆ ಇತ್ತೀಚೆಗೆ ಮನವಿ ಮಾಡಿಕೊಂಡಿರುವುದು ಇದೇ ಹಿನ್ನೆಲೆಯಲ್ಲಿ. ಕೇರಳದಲ್ಲಿ ಕತ್ತಿ-ಸುತ್ತಿಗಗಳ ಕ್ರೌರ್ಯ ಇಷ್ಟೊಂದು ಪರಾಕಾಷ್ಠೆಗೆ ತಲುಪಿದ್ದರೂ ಎಡಪಂಥೀಯ ಮಾಧ್ಯಮಗಳಿಗೆ, ಬುದ್ಧಿಜೀವಿಗಳಿಗೆ ಅದೊಂದು ಮಾನವಹಕ್ಕು ವಿರೋಧಿ ಕೃತ್ಯ ಎನಿಸುತ್ತಲೇ ಇಲ್ಲವಲ್ಲ! ಛೆ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.