News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾವು ಯಾರಿಗೆ ಮತ ನೀಡಬೇಕು?

electionಲೋಕಸಭೆಗೆ ಮೂರನೇ ಹಂತದ ಚುನಾವಣೆ ಮುಗಿದಿದೆ. ಈ ಮೂರು ಹಂತಗಳಲ್ಲೂ ದಾಖಲೆಯ ಮತದಾನ ಆಗಿರುವುದು ಏನನ್ನು ಸೂಚಿಸುತ್ತದೆ? ಮತದಾರರ ಜಾಗೃತಿ ಹಿಂದೆಂದಿಗಿಂತ ಹೆಚ್ಚಾಗಿದೆ ಎಂದಲ್ಲವೆ? ಎಲ್ಲೆಡೆ ಇದುವರೆಗೆ ಶೇ. 65 ಕ್ಕಿಂತ ಹೆಚ್ಚು ಪ್ರಮಾಣದ ಮತದಾನ ನಡೆದಿರುವುದು ಮತದಾರರ ಜಾಗೃತಿಗೆ ಸಾಕ್ಷಿಯಾಗಿದೆ. ಇದೊಂದು ಆರೋಗ್ಯಕರ ಬೆಳವಣಿಗೆ. ದೆಹಲಿಯಂತಹ ಸಾಂಪ್ರದಾಯಿಕವಾಗಿ ಕಡಿಮೆ ಮತದಾನ ಆಗುವಂತಹ ರಾಜ್ಯದಲ್ಲೂ ಈ ಬಾರಿ ಶೇ. 12 ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ. ಉಳಿದ ಕಡೆಗಳಲ್ಲೂ ಶೇ. 5 ರಿಂದ 8 ರಷ್ಟು ಪ್ರಮಾಣ ಹೆಚ್ಚಳವಾಗಿದೆ.

ಪ್ರಜಾತಂತ್ರೀಯ ಪ್ರಕ್ರಿಯೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ ಭರಪೂರ ಹೆಚ್ಚಿದೆ ಎನ್ನುವುದಕ್ಕೆ ಇದೊಂದು ಸಂಕೇತ. ಪ್ರಜಾತಂತ್ರಾತ್ಮಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಿದಾಗಲೇ ಪ್ರಜಾಪ್ರಭುತ್ವ ಅರ್ಥಪೂರ್ಣವಾಗಬಲ್ಲದು. ಅದರಲ್ಲೂ ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಬಲವರ್ಧನೆಗಿರುವ ಏಕೈಕ ರಹದಾರಿ. ಇದುವರೆಗೆ ಈ ರಹದಾರಿಯಲ್ಲಿ ಹೆಚ್ಚು ಜನ ಸಂಚರಿಸಿದ್ದೇ ಇಲ್ಲ. ಯಾರು ಗೆದ್ದರೇನು, ನಮಗೆ ರಾಗಿ ಬೀಸೋದು ತಪ್ಪುತ್ತದೆಯೇ ಎಂಬ ನಿರ್ಲಕ್ಷ ಭಾವವೇ ಎದ್ದುಕಾಣುತ್ತಿತ್ತು. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಚುನಾವಣೆಯ ದಿನ ಕುಟುಂಬ ಸದಸ್ಯರೊಂದಿಗೆ ಪಿಕ್ನಿಕ್‌ಗೋ ಅಥವಾ ಇನ್ನೆಲ್ಲಿಗೋ ಹೋಗಿ ಮತದಾನಕ್ಕೆ ಗೈರುಹಾಜರಾಗುತ್ತಿದ್ದ ಪ್ರಸಂಗಗಳೇ ಹೆಚ್ಚು. ಹಾಗಾಗಿ ಎಲ್ಲೆಡೆ ಕಡಿಮೆ ಪ್ರಮಾಣದ ಮತದಾನವಾಗಿ ಯಾರೋ ಅಯೋಗ್ಯರು ಗೆದ್ದು ಬರುತ್ತಿದ್ದರು. ಚುನಾವಣೆ ಎಂಬುದು ಆಗ ಪ್ರಜಾಪ್ರಭುತ್ವ ಬಲವರ್ಧನೆಗೆ ಚಿಮ್ಮುಹಲಗೆಯಾಗದೆ ಅದೊಂದು ಪ್ರಹಸನವೆನಿಸುತ್ತಿತ್ತು. ಈ ಬಾರಿ ಹಾಗಾಗಿಲ್ಲ ಎನ್ನುವುದೊಂದು ಆಶಾಕಿರಣ. ಪ್ರತಿಯೊಬ್ಬರೂ ಮತದಾನ ಮಾಡಬೇಕು, ಅದು ಪ್ರತಿಯೊಬ್ಬರ ಕರ್ತವ್ಯ ಎಂಬ ಸಂದೇಶವನ್ನು ಚುನಾವಣಾ ಆಯೋಗ ಕೂಡ ಅಭಿಯಾನ ಕೈಗೊಂಡು ಪ್ರಚಾರ ಮಾಡಿತ್ತು. ಸಾರ್ವಜನಿಕ ಗಣ್ಯರು ಕೂಡ ಮತದಾನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಇವೆಲ್ಲದರ ಒಟ್ಟು ಪರಿಣಾಮವೋ ಏನೋ ಮತದಾನ ಪ್ರಮಾಣದಲ್ಲಿ ಈ ಬಾರಿ ಹೆಚ್ಚಳ ಕಂಡುಬಂದಿದೆ. ಮತದಾರರು ಮನೆಯಲ್ಲೇ ಕುಳಿತಿರದೆ, ರಾಗಿ ಬೀಸೋದು ತಪ್ಪುತ್ತದೆಯೇ ಎಂಬ ಅದೇ ಸವಕಲು ತಕರಾರಿಗೆ ಜೋತುಬೀಳದೆ ಒಂದಿಷ್ಟು ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.

ಮತದಾನ ಪ್ರಮಾಣದಲ್ಲಿ ಈ ಬಾರಿ ಆಗಿರುವ ಈ ಹೆಚ್ಚಳದ ಬಗ್ಗೆ ಪ್ರತಿಯೊಂದು ಪ್ರಮುಖ ರಾಜಕೀಯ ಪಕ್ಷವೂ ತನ್ನದೇ ಆದ ವಿಶ್ಲೇಷಣೆ ನಡೆಸಿದೆ. ನಮ್ಮ ಪಕ್ಷಕ್ಕೆ ಸಿಕ್ಕಿರುವ ಅಭೂತಪೂರ್ವ ಬೆಂಬಲಕ್ಕೆ ಮತದಾನ ಪ್ರಮಾಣದ ಈ ಹೆಚ್ಚಳವೇ ಸಾಕ್ಷಿ ಎಂದು ಪ್ರಮುಖ ಪಕ್ಷಗಳು ಷರಾ ಬರೆದಿವೆ. ಬರೆದುಕೊಳ್ಳಲಿ ಬಿಡಿ. ಫಲಿತಾಂಶ ಪ್ರಕಟವಾಗುವ ದಿನದವರೆಗೂ ಈ ಪಕ್ಷಗಳು ಹೀಗೆ ಹೇಳಿಕೊಳ್ಳಲು ಯಾವುದೇ ಅಭ್ಯಂತರವಿರುವುದಿಲ್ಲ. ಒಮ್ಮೆ ಫಲಿತಾಂಶ ಪ್ರಕಟವಾಗಲು ಶುರುವಾಯಿತೆಂದರೆ ಆಗ ಮತದಾನದಲ್ಲಾದ ಹೆಚ್ಚಳ ಯಾವ ಪಕ್ಷಕ್ಕೆ ಪೂರಕವಾಗಿತ್ತು ಎನ್ನುವುದು ತಾನಾಗಿಯೇ ಗೊತ್ತಾಗುತ್ತದೆ.

ಆದರೆ ಒಂದು ಸಾರ್ವತ್ರಿಕ ಅಭಿಪ್ರಾಯವಂತೂ ಇದ್ದೇ ಇದೆ. ಮತದಾನ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದರೆ ದೇಶದ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂಬುದೇ ಆ ಸಾರ್ವತ್ರಿಕ ಅಭಿಪ್ರಾಯ. ರಾಜಕೀಯ ಕ್ಷೇತ್ರದಲ್ಲಿ ಬೀಸಲಿರುವ ಬದಲಾವಣೆಯ ಗಾಳಿ ಯಾವುದು? ಅದನ್ನು ವಿವರಿಸಬೇಕಾದ ಅಗತ್ಯವಿಲ್ಲ. ಕೇಂದ್ರದಲ್ಲಿ ಕಳೆದೊಂದು ದಶಕದಿಂದ ಆಡಳಿತ ನಡೆಸುತ್ತಿರುವ ಯುಪಿಎ ಸರ್ಕಾರ ತೊಲಗಿ, ಆ ಜಾಗದಲ್ಲಿ ಹೊಸದೊಂದು ಸರ್ಕಾರ ಸ್ಥಾಪಿತವಾಗಲಿದೆ. ಇದುವರೆಗಿನ ಹಲವಾರು ಚುನಾವಣಾ ಸಮೀಕ್ಷೆಗಳು ಬಿತ್ತರಿಸಿರುವ ಸಂದೇಶವೂ ಅದೇ ಆಗಿದೆ. ಕಾಂಗ್ರೆಸ್ ಮುಖಂಡರು ಮಾತ್ರ ಇದನ್ನು ಸುತರಾಂ ಒಪ್ಪಲಿಕ್ಕಿಲ್ಲ. ಆ ಮಾತು ಬೇರೆ. ಕಾಂಗ್ರೆಸ್ ಮಂದಿ ಒಪ್ಪಿದರೆ ಮಾತ್ರ ದೇಶದಲ್ಲಿ ಬದಲಾವಣೆ ಆಗುತ್ತದೆ ಎಂದೇನಿಲ್ಲವಲ್ಲ. ಇಷ್ಟಕ್ಕೂ ಇಷ್ಟು ದೀರ್ಘಕಾಲ ಅಧಿಕಾರದಲ್ಲಿದ್ದರೂ ಯಾವುದೇ ಮಹತ್ತರ ಬದಲಾವಣೆ ತರಲು ಸಾಧ್ಯವಾಗದ ಕಾಂಗ್ರೆಸ್‌ಗೆ ಈ ಬಾರಿಯಾದರೂ ವಿಶ್ರಾಂತಿ ನೀಡದಿದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತದಾರರೆಸಗುವ ಅಪಚಾರವೇ ಆಗಬಹುದು. ಮತದಾನ ಪ್ರಮಾಣದಲ್ಲಾದ ಹೆಚ್ಚಳವನ್ನು ತಮಗೆ ಬೇಕಾದಂತೆ ರಾಜಕೀಯ ಪಕ್ಷಗಳು ವ್ಯಾಖ್ಯಾನಿಸಿಕೊಂಡರೂ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂದ ನಿಜವಾದ ಗೆಲುವು ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದುವರೆಗೆ ನಡೆಯುತ್ತಿದ್ದ ಚುನಾವಣೆಗಳಲ್ಲಿ ಮತಪೆಟ್ಟಿಗೆ ಅಪಹರಣ, ನಕಲಿ ಮತದಾನ, ಮತಗಠ್ರಿಡಿ ವಶ, ಬಲವಂತದ ಮತದಾನ, ಹಿಂಸಾಕೃತ್ಯಗಳು… ಹೀಗೆ ಹಲವು ಬಗೆಯ ಅಡ್ಡಿ ಆತಂಕಗಳು ಉಂಟಾಗುತ್ತಿದ್ದ ವರದಿಗಳೇ ಹೆಚ್ಚು. ಆದರೆ ಈ ಬಾರಿ ಚುನಾವಣೆಯಲ್ಲಿ ಅಂತಹ ಅಪಸವ್ಯಗಳಿಗೆ ವಿದಾಯ ಹೇಳಲಾಗಿದೆ. ಮಾವೋ ಬೆಂಬಲಿಗರ ಬಾಹುಳ್ಯವಿರುವ ಪ್ರದೇಶಗಳಲ್ಲಿ ಒಂದಿಷ್ಟು ಹಿಂಸಾಕೃತ್ಯ ನಡೆದಿದ್ದರೂ ಮತದಾರರು ಅಲ್ಲಿ ಹೆದರಿ ಹಿಂದೆ ಸರಿದಿಲ್ಲ. ಹೆಚ್ಚಿನ ಪ್ರಮಾಣದ ಮತದಾನ ಅಲ್ಲಿ ನಡೆದಿದೆ. ಅಂದರೆ ಜನರು ತಮ್ಮ ಮತದಾನದ ಹಕ್ಕನ್ನು , ಏನೇ ಅಡ್ಡಿ ಬಂದರೂ ಚಲಾಯಿಸದೆ ಬಿಡಕೂಡದು ಎಂಬ ದೃಢಸಂಕಲ್ಪದ ಮನೋಭಾವ ತಳೆದಿದ್ದಾರೆ ಎಂಬುದು ಈ ಬಾರಿ ವ್ಯಕ್ತವಾಗಿದೆ.

ಇನ್ನು ಮತದಾನದ ಉಳಿದ ಹಂತಗಳು ಆರಂಭವಾಗಲಿವೆ. ಕರ್ನಾಟಕದಲ್ಲಿ ಇದೇ ಏ. 17 ರಂದು ನಡೆಯಲಿರುವ ಚುನಾವಣೆಗೆ ಇನ್ನೇನು ಕ್ಷಣಗಣನೆ ಆರಂಭವಾಗಲಿದೆ. ಈ ಬಾರಿ ಯಾರಿಗೆ ಮತ ಚಲಾಯಿಸಬೇಕು ಎಂಬ ಪ್ರಶ್ನೆಗೆ ಬಹುತೇಕ ಮತದಾರರು ಇಷ್ಟರೊಳಗೇ ಉತ್ತರ ಹುಡುಕಿಕೊಂಡಿದ್ದಾರೆ. ಉತ್ತರ ಹುಡುಕಿಕೊಳ್ಳದ ಮಂದಿ ತೀರಾ ವಿರಳ. ವಿದ್ಯಾವಂತರಲ್ಲಿ ಈ ಬಾರಿ ಮತ ಹಾಕಲೇಬೇಕೆಂಬ ಜಾಗೃತಿ ಉಂಟಾಗಿರುವುದು ಒಂದು ಆರೋಗ್ಯಕರ ಬೆಳವಣಿಗೆ. ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್, ಬಿಜೆಪಿ ಜೊತೆಗೆ ಈ ಬಾರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮೀ ಪಕ್ಷ (ಎಎಪಿ) ಹಲವೆಡೆ ತನ್ನ ಚಹರೆ ಮೂಡಿಸಿರುವುದು ಇನ್ನೊಂದು ವಿಶೇಷ . ಆದರೆ ದೆಹಲಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದರೂ ಕೇವಲ 49 ದಿನ ಮಾತ್ರ ವಿಫಲ ಅಧಿಕಾರ ನಡೆಸಿದ ಕಳಂಕ ಆಪ್ ಪಕ್ಷಕ್ಕೆ ಅಂಟಿಕೊಂಡಿದೆ. ಅದನ್ನು ಜನರು ಮರೆಯುವುದು ಸಾಧ್ಯವಿಲ್ಲ. ದೆಹಲಿಯಂತಹ ಒಂದು ಚಿಕ್ಕ ರಾಜ್ಯದ ಆಡಳಿತವನ್ನೇ ಸಮರ್ಪಕವಾಗಿ ನಿರ್ವಹಿಸಲಾಗದವರು ಇನ್ನು ಇಡೀ ದೇಶದ ಆಡಳಿತ ನಿಭಾಯಿಸುವುದು ಸಾಧ್ಯವೇ ಎಂಬ ಪ್ರಶ್ನೆ ಮತದಾರರ ಮುಂದಿದೆ. ಕಾಂಗ್ರೆಸ್ ಸತತ ಒಂದು ದಶಕ ಕಾಲ ಅಧಿಕಾರದಲ್ಲಿದ್ದರೂ, ಸ್ಥಿರ ಸರ್ಕಾರವಿದ್ದರೂ ಸ್ವಚ್ಛ, ಸಮರ್ಪಕ, ದಕ್ಷ ಆಡಳಿತ ನಡೆಸಲು ಸಾಧ್ಯವಾಗಲಿಲ್ಲವೇಕೆ ಎಂಬ ಇನ್ನೊಂದು ಪ್ರಶ್ನೆಯೂ ಮತದಾರರನ್ನು ಕಾಡತೊಡಗಿದೆ. ಗುಜರಾತ್, ಮಧ್ಯಪ್ರದೇಶ, ಛತ್ತೀಸಗಢ ರಾಜ್ಯಗಳಲ್ಲಿ ಬಿಜೆಪಿ ಸತತ ದಶಕ ಕಾಲ ಉತ್ತಮ ಆಡಳಿತ ನಿರ್ವಹಿಸಿದ ಕುರಿತು ಮತದಾರರ ಮನದಲ್ಲಿ ಅಚ್ಚರಿ, ಕುತೂಹಲ ಇರುವುದು ಕೂಡ ಸುಳ್ಳಲ್ಲ. ಆ ಪಕ್ಷಕ್ಕೇ ಮತ ನೀಡಿದರೆ ಕೇಂದ್ರದಲ್ಲೂ ಅಂತಹ ಉತ್ತಮ ಆಡಳಿತ ವ್ಯವಸ್ಥೆಯನ್ನು ಕಣ್ಣಾರೆ ಕಾಣಬಹುದಲ್ಲವೆ ಎಂಬ ಆಸೆ ಕೂಡ ಮತದಾರರ ಮನದಲ್ಲಿ ಅಂಕುರಿಸಿದೆ.

ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಮಥಿಸಿದ ಮಾತುಗಳು, ಉಕ್ಕಿ ಹರಿದ ಹಾಲಾಹಲವೇನೂ ಕಡಿಮೆ ಪ್ರಮಾಣದ್ದಾಗಿರಲಿಲ್ಲ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಮೇಲೆ ಎರಗಿದ ವಾಗ್ಬಾಣಗಳಂತೂ ಅತ್ಯಂತ ಕ್ರೂರ ಹಾಗೂ ನೀತಿಸಂಹಿತೆಯ ಸ್ಪಷ್ಟ ಉಲ್ಲಂಘನೆಯ ಸಂಕೇತಗಳಾಗಿದ್ದವು. ನರೇಂದ್ರ ಮೋದಿಯನ್ನು ಕೊಚ್ಚಿ ಕೊಚ್ಚಿ ಹಾಕುವೆ ಎಂದು ಉತ್ತರ ಪ್ರದೇಶ ಸಹರಾನ್ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಅಬ್ಬರಿಸಿದ್ದರೆ, ಅಜಂ ಖಾನ್ ಎಂಬ ಅದೇ ರಾಜ್ಯದ ಸಚಿವ ಕಾರ್ಗಿಲ್ ಯುದ್ಧದ ಗೆಲುವಿಗೆ ಮುಸಲ್ಮಾನ ಯೋಧರೇ ಕಾರಣ ಎಂದು ತುಚ್ಛ, ಆಘಾತಕಾರಿ ಹೇಳಿಕೆ ನೀಡಿರುವುದು ಚುನಾವಣಾ ಪ್ರಚಾರದಲ್ಲಿ ಸಭ್ಯತೆ, ದೇಶಹಿತ ಸಂಪೂರ್ಣ ಸತ್ತುಹೋಗಿರುವುದಕ್ಕೆ ನಿದರ್ಶನ. ಇನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅತ್ಯಾಚಾರದ ಕುರಿತು ನೀಡಿದ ಹೇಳಿಕೆಯಂತೂ ಇಡೀ ದೇಶವನ್ನೇ ಕೆರಳಿಸಿದೆ. ಅತ್ಯಾಚಾರ ಎಸಗುವ ಹುಡುಗರು ಏನೋ ಸಣ್ಣ ತಪ್ಪು ಮಾಡುತ್ತಾರೆ. ಆದರೆ ಅದಕ್ಕೆ ಗಲ್ಲು ಶಿಕ್ಷೆ ವಿಧಿಸುವುದು ಸರಿಯಲ್ಲ. ಹುಡುಗರು ತಪ್ಪು ಮಾಡುವುದು ಸಹಜ. ತಾವು ಅಧಿಕಾರಕ್ಕೆ ಬಂದರೆ ಅತ್ಯಾಚಾರ ತಡೆ ಕಾನೂನಿಗೆ ತಿದ್ದುಪಡಿ ತರುವುದಾಗಿ ಮುಲಾಯಂ ಹೇಳಿದ್ದಾರಲ್ಲ, ಅವರಿಗೆ ಒಂದಿಷ್ಟಾದರೂ ನಾಚಿಕೆಯಾಗುವುದಿಲ್ಲವೇ? ಒಂದು ವೇಳೆ ಅವರ ಸೊಸೆಯ ಮೇಲೋ, ಸಂಬಂಧಿಕ ಮಹಿಳೆಯ ಮೇಲೋ ಅತ್ಯಾಚಾರ ನಡೆದರೆ ಆಗಲೂ ಇಂತಹ ಹೇಳಿಕೆ ನೀಡುತ್ತಾರಾ? ಅವರ ಇನ್ನೊಬ್ಬ ಶಿಷ್ಯ ಅಬು ಅಜ್ಮಿ ಅತ್ಯಾಚಾರ ನಿಯಂತ್ರಿಸಲು ಸಂತ್ರಸ್ತೆಯರು, ವಿವಾಹೇತರ ಸಂಬಂಧ ಹೊಂದಿರುವ ಮಹಿಳೆಯರನ್ನು ಗಲ್ಲಿಗೇರಿಸಬೇಕು ಎಂದು ತಾಲಿಬಾನ್ ಮಾದರಿಯಲ್ಲಿ ಹೇಳಿಕೆ ನೀಡಿದ್ದಾರೆ. ತಮಾಷೆಯೆಂದರೆ ಅಜ್ಮಿಯ ಸೊಸೆ, ನಟಿ ಆಯೇಷಾ ಠಾಕಿಯ ಕೂಡ ಈ ಹೇಳಿಕೆಯನ್ನು ವಿರೋಧಿಸಿದ್ದಾರೆ. ಮುಲಾಯಂ ಸಿಂಗ್ , ಅಬು ಅಜ್ಮಿ ವಿರುದ್ಧ ಇಡೀ ದೇಶ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ನಮ್ಮ ದೇವೇಗೌಡರು ಮಾತ್ರ `ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಮುಲಾಯಂ ಸಿಂಗ್ ಸ್ವತಂತ್ರರು. ನಾನೇಕೆ ಅವರ ಹೇಳಿಕೆ ಖಂಡಿಸಲಿ?’ ಎಂದು ಮುಗುಮ್ಮಾಗಿ ಹೇಳಿರುವುದು ಗೌಡರ ಬೌದ್ಧಿಕ ದಾರಿದ್ರ್ಯವನ್ನು , ತಿಳಿವಳಿಕೆಯ ಪಡಪೋಶಿತನವನ್ನು ಬಯಲಾಗಿಸಿದೆ.

ಇನ್ನು ಮೋದಿ ತನ್ನ ಪತ್ನಿ ಜಶೋದ ಬೆನ್ ಕುರಿತು ನಾಮಪತ್ರದಲ್ಲಿ ಮೊದಲ ಬಾರಿಗೆ ದಾಖಲಿಸಿರುವ ಬಗ್ಗೆ ರಾಹುಲ್ ಗಾಂಧಿ ವ್ಯಂಗ್ಯವಾಡಿರುವುದು ಆತ ಇನ್ನೂ ಬಚ್ಚ ಎಂಬುದನ್ನು ಸಾಬೀತುಪಡಿಸಿದೆ. ಇದೊಂದು ವೈಯಕ್ತಿಕ ವಿಚಾರ. ಅದನ್ನು ಕೆದಕುವುದು ಸಭ್ಯತೆಯಲ್ಲ ಎಂಬ ಸಾಮಾನ್ಯ ಜ್ಞಾನವೂ ರಾಹುಲ್‌ಗೆ ಇಲ್ಲದಿರುವುದು ಶೋಚನೀಯ. ಮೋದಿ ಪತ್ನಿಯ ಕುರಿತು ಲೇವಡಿ ಮಾಡುವ ರಾಹುಲ್ ಗಾಂಧಿ ತನ್ನ ಮುತ್ತಾತ ನೆಹರು, ಮೌಂಟ್‌ಬ್ಯಾಟನ್ ಪತ್ನಿ ಎಡ್ವಿಲ್ದ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ತಾನು ಶ್ರೀಲಂಕಾದ ಗೆಳತಿಯೊಬ್ಬಳ ಜೊತೆ ಅಮೆರಿಕದ ವಿಮಾನ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಾಗ ಪಟ್ಟ ಅವಸ್ಥೆ ಮುಂತಾದ ಪ್ರಸಂಗಗಳು ರಹಸ್ಯವಾಗಿ ಉಳಿದಿಲ್ಲ ಎಂಬುದನ್ನು ಮರೆತರೆ ಹೇಗೆ? ನೆಹರು ವಂಶದ ಇತಿಹಾಸವನ್ನು ಕೆದಕಿದರೆ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಇಂತಹ ಹಲವು ಬಾನಗಡಿ ಪ್ರಸಂಗಗಳು ತೆರೆದುಕೊಳ್ಳುತ್ತವೆ. ಅಷ್ಟಕ್ಕೂ ಮೋದಿ ತನ್ನ ಬಾಲ್ಯ ವಿವಾಹ ಕುರಿತು ಇದುವರೆಗೆ ಬಹಿರಂಗಪಡಿಸಿರಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಅವರಿಂದ ಆಗಿರುವ ಪ್ರಮಾದವಾದರೂ ಏನು? ತಮ್ಮ ಅನಧಿಕೃತ ಪತ್ನಿಯರ ಬಗ್ಗೆ ಚುನಾವಣಾ ನಾಮಪತ್ರದಲ್ಲಿ ಅಫಿಡವಿಟ್ ಸಲ್ಲಿಸದ ರಾಜಕಾರಣಿಗಳು ಅದೆಷ್ಟು ಮಂದಿ ಇಲ್ಲ?

ಅದೇನೇ ಇರಲಿ, ಕೆಲವು ವಾಮಪಂಥೀಯ ಸಾಹಿತಿಗಳು, ಬಿಜೆಪಿ ವಿರೋಧಿಗಳು ಮೋದಿಯನ್ನು ಹೀನಾಮಾನ ತೆಗಳಿದ ಮಾತ್ರಕ್ಕೆ ಅವರೊಬ್ಬ ದಕ್ಷ, ಸಚ್ಚಾರಿತ್ರ್ಯವಂತ ಆಡಳಿತಗಾರ ಎಂಬುದಕ್ಕೆ ಕಳಂಕ ಖಂಡಿತ ತಟ್ಟದು. ಮೋದಿ ಪ್ರಧಾನಿಯಾದರೆ ಸಶಕ್ತ, ಸಮರ್ಥ ಭಾರತವನ್ನು ಕಟ್ಟಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬಲ್ಲರು ಎಂಬ ಭರವಸೆ ದೇಶದಾದ್ಯಂತ ಪಕ್ಷಭೇದ ಮೀರಿ ವ್ಯಕ್ತವಾಗಿದೆ. ಯುಪಿಎ ಮತ್ತೆ ಅಧಿಕಾರಕ್ಕೇರಿದರೆ ಅದು ಎಂತಹ ಆಡಳಿತ ನಡೆಸಬಲ್ಲದು ಎಂಬುದಕ್ಕೆ ಕಳೆದೊಂದು ದಶಕದ ದೇಶದ ಕೆಟ್ಟ ಇತಿಹಾಸ ಸಾಲದೆ? ಆ ಇತಿಹಾಸ ಮತ್ತೆ ಮರುಕಳಿಸಬೇಕೆ? ದೇಶ ನೆಮ್ಮದಿ ಇಲ್ಲದ ರಾತ್ರಿಗಳನ್ನು ಕಾಣಬೇಕೆ? ನಿರಂತರ ಮಾನಭಂಗಕ್ಕೊಳಗಾಗುವ ಮಹಿಳೆಯರ ರೋದನಕ್ಕೆ ಈ ದೇಶ ಸಾಕ್ಷಿಯಾಗಬೇಕೆ? ಸಾಲದ ಬಾಧೆ ತಡೆಯಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಭ್ರಷ್ಟಾಚಾರದ ಹಗರಣಗಳು ಮತ್ತೆ ಮರುಕಳಿಸಿ ದೇಶದ ಮಾನ ಹರಾಜಾಗಬೇಕೆ? ಭಯೋತ್ಪಾದಕರಿಗೆ ಈ ದೇಶ ಆಡುಂಬೊಲವಾಗಬೇಕೆ?

ಈ ಎಲ್ಲ ಪ್ರಶ್ನೆಗಳಿಗೆ ನಾವು ಏ. 17 ರಂದು ಮತಗಟ್ಟೆಗೆ ತೆರಳುವಾಗ ಗಂಭೀರವಾಗಿ ಆಲೋಚಿಸಿ ಯಾರಿಗೆ ಮತ ನೀಡಬೇಕೆಂದು ನಿರ್ಧರಿಸಬೇಕಾಗಿದೆ. ನಮ್ಮ ಒಂದು ಮತಕ್ಕೆ – ದೇಶದ ಭವಿಷ್ಯವನ್ನು ನಿರ್ಧರಿಸುವ ಸಾಮರ್ಥ್ಯವಿದೆ. ಭ್ರಷ್ಟಾಚಾರವನ್ನು ಹತ್ತಿಕ್ಕುವ ತಾಕತ್ತಿದೆ. ದುರಾಡಳಿತವನ್ನು ಕೊನೆಗಾಣಿಸುವ ಬಲವಿದೆ. ಸುಶಾಸನವನ್ನು ಪ್ರತಿಷ್ಠಾಪಿಸುವ ಅವಕಾಶವಿದೆ. ಯೋಚಿಸಿ, ತಪ್ಪದೇ ಯೋಗ್ಯರಿಗೆ ಮತ ಚಲಾಯಿಸಿ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top