ಧಾರವಾಡ (ಮಂಡ್ಯಾಳ) : ಮಳೆ ನೀರು ಕೊಯ್ಲಿನಿಂದ ಬತ್ತಿದ ಬಾವಿ, ಕೊಳವೆ ಬಾವಿಗಳು ಮತ್ತೆ ನೀರು ಕೊಡುವಂತೆ ಮಾಡಬಹುದೇ?; ನೀರಿಂಗಿಸುವುದರಿಂದ ಹೊಲದಲ್ಲಿನ ತೆರೆದ ಮತ್ತು ಕೊಳವೆ ಬಾವಿಗಳ ಜಲಮಟ್ಟ ಏರುತ್ತದೆಯೇ..? ಇಂಗಿಸಿದ್ದು ಇಂಗಿಯೇ ಹೋದರೆ?
– ಇಂತಹ ಸಂಶಯವಿರುವವರು ನೇಚರ್ ರಿಸರ್ಚ್ ಸೆಂಟರ್ನ ಮೆಂಟರ್ ಕುಮಾರ ಭಾಗವತ ಅವರ ತೋಟಕ್ಕೆ ಸದ್ಯ ತುರ್ತಾಗಿ ಭೇಟಿ ನೀಡಬೇಕು!
ಮನಸ್ಸು ಮಾಡಬೇಕ್ರಿ; ಅರ್ಧ ಕೆಲಸ ಅಲ್ಲೇ ಆದ್ಹಂಗ. ಬಾಕೀದ್ದು ತಾನ ಆಗಿ ಹೋಗ್ತದ.. ಕೃಷಿಕರಿಗೆ ಮನಸ್ಸಿದ್ದರೆ ನೀರಿಗೆ ಮಾರ್ಗವಿದೆ ಎಂಬುದನ್ನು ಸಾಧಿಸಿರುವ ಕುಮಾರ ಭಾಗವತ ಅವರ ಮಾತು, ಈ ವರ್ಷದ ಅನಾವೃಷ್ಟಿ ಹಿಂದೆಂದಿಗಿಂಲೂ ಇಂದು ಹೆಚ್ಚು ತೀವ್ರವಾದಾಗಲೂ.. ನಾವು ನಿರಾಶರಾಗಬೇಕಿಲ್ಲ ಎಂಬುದನ್ನು ಈ ಜಲ ಸಾಧನೆ ಪ್ರಾಯೋಗಿಕ ಮಾದರಿಯಾಗಿ ನಿಲ್ಲುತ್ತದೆ.
ಮಳೆ ಬಂದಾಗ ತೋಟದ ಇಕ್ಕೆಲದ ಗುಡ್ಡಗಳಿಂದ ರಭಸವಾಗಿ ಇಳಿದು, ಅಷ್ಟೇ ವೇಗದಲ್ಲಿ ಕೊಳ್ಳಗಳ ಮೂಲಕ ಓಡಿ ಹರಿದು ಹೋಗುತ್ತಿದ್ದ ಲಕ್ಷಾಂತರ ಗ್ಯಾಲನ್ ನೀರನ್ನು ಒಂದೂವರೆ ಎಕರೆ ಕೆರೆಯಲ್ಲಿ ತಡೆದು, ಮೂರು ಕೊಳವೆ ಬಾವಿಗಳಿಗೆ ಮರು ಪೂರಣ ಮತ್ತು ವರ್ಷಪೂರ್ತಿ 50 ಎಕರೆಯಲ್ಲಿ ತೋಟ ಮತ್ತು ಭರ್ತಿ ಕೃಷಿ ಕಾಯಕವನ್ನು ಕೈಗೆತ್ತಿಕೊಳ್ಳುವ ಹುಮ್ಮಸ್ಸಿನಲ್ಲಿರುವ ಕೃಷಿಕ ಕುಮಾರ ಭಾಗವತ್, ಈಗ ತಮ್ಮ ನೀರ ನೆಮ್ಮದಿಯ ಕಾಯಕದಿಂದ ಬಯಲು ಸೀಮೆ ರೈತರ ಗಮನ ಸೆಳೆದಿದ್ದಾರೆ.
ಕುಮಾರ ಭಾಗವತ ವೃತ್ತಿಯಿಂದ ನಿಗದಿಯ ಜೆಓಸಿ ಕಾಲೇಜಿನ ಹೈನುಗಾರಿಕೆ ವಿಭಾಗದಲ್ಲಿ ಉಪನ್ಯಾಸಕ. ಪ್ರವೃತ್ತಿಯಿಂದ ರೈತ ಮತ್ತು ಜೇನು ಕೃಷಿಕ. ಮುಗದ ಬಳಿಯ ಮಂಡ್ಯಾಳದಲ್ಲಿ ಆತ್ಮೀಯರೋರ್ವರ 50 ಎಕರೆ ಜಮೀನಿನಲ್ಲಿ ತನು-ಮನದಿಂದ ಕೃಷಿ ಕಾಯಕದಲ್ಲಿ ತೊಡಗಿರುವ ಕುಮಾರ, ಸದಾ ಪ್ರಯೋಗಶೀಲ ಹಾಗೂ ಪ್ರಗತಿಪರ ರೈತ. ನಿಜಾರ್ಥದಲ್ಲಿ ಪ್ರಾಯೋಗಿಕ ಪರಿಸರವಾದಿ!
ಆತ್ಮೀರೋರ್ವರು ಜಮೀನು ಖರೀದಿಸಿದ 8 ವರ್ಷಗಳಲ್ಲೇ ಅದಕ್ಕೊಂದು ಸ್ವರೂಪ ಕೊಟ್ಟಿರುವ ಕುಮಾರ, ಮಲೆನಾಡ ಸೆರಗಿನ ಹಳ್ಳಿ ಮಂಡ್ಯಾಳದಲ್ಲಿ ಕಲ್ಲು-ಕ್ವಾರಿ, ಮಟ್ಟಿ ಮಣ್ಣಿನ ಪಾತಳಿಯ ನೆಲವನ್ನು ಬಗೆದು, ಅಗೆದು ಅನ್ನ ಬೆಳೆಯುವುದನ್ನು ಸವಾಲಾಗಿ ಸ್ವೀಕರಿಸಿ ಗೆದೆಯುವ ಹಂತದಲ್ಲಿದ್ದಾರೆ. ಸದ್ಯ ತೋಟದ ಖರ್ಚು-ವೆಚ್ಚ ಅದರ ಗಳಿಕೆಗೆ ಸಮನಾಗುವ ಹಂತಕ್ಕೆ ತಂದಿದ್ದು ಭಗೀರಥ ಪ್ರಯತ್ನವೇ. ತೋಟಗಾರಿಕೆ ಬೆಳೆ ಮತ್ತು ವೃಕ್ಷಾಧಾರಿತ ಕೃಷಿಗೆ ಒತ್ತು ನೀಡಿರುವ ಅವರು ವರ್ಷದುದ್ದಕ್ಕೂ ನೀರಿನ ಅಲಭ್ಯತೆಯಿಂದ ಬೆಳೆ ಉಳಿಸಿಕೊಳ್ಳಲು ಹೈರಾಣಾದವರು. ಆದರೆ, ಈ ಬಾರಿ ಯಶೋಗಾಥೆ.
ಸತತ ಪ್ರಯತ್ನದ ಫಲವಾಗಿ ತಮ್ಮ ಜಮೀನಿನ ಒಂದು ಬದಿಯಲ್ಲಿ ಹಬ್ಬಿರುವ ಗುಡ್ಡದ ಸಾಲನ್ನೇ ಆಸರೆಯಾಗಿಸಿಕೊಂಡು, ಒಂದರ್ಥದಲ್ಲೇ ಗುಡ್ಡಕ್ಕೇ ಲಾಳಿಕೆ ಅಳವಡಿಸಿದಂತೆ ಇದೇ ತಿಂಗಳ ಮೊದಲ ಅಡ್ಡ ಮಳೆಯನ್ನು ಯಶಸ್ವಿಯಾಗಿ ಕೆರೆಗೆ ಹರಿಸಿಕೊಂಡು ಜಮೀನನ್ನು ನಳನಳಿಸುವಂತೆ ಕುಮಾರ ಮಾಡಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ನುರಿತ ಕರೆ-ಕಟ್ಟೆ ಕುಶಲಿಗಳನ್ನು ಬಳಸಿಕೊಂಡು, ಸತತ ಒಂದೂವರೆ ತಿಂಗಳು ಕೆರೆಯ ಬದುವನ್ನು ಭದ್ರಗೊಳಿಸಿದ್ದಾರೆ. ಗುಡ್ಡದಿಂದ ಹರಿದು ಬರುವ ನೀರು ಒಂದು ಬದಿಯಿಂದ ಕೆರೆ ಸೇರಿದರೆ, ಇಂಗಿ ಉದರ ಭರಿಸಿಕೊಂಡ ಬಳಿಕ ಹೆಚ್ಚುವರಿ ನೀರನ್ನು ತನ್ನ ಉದರದಲ್ಲಿ ಕನಿಷ್ಟ 10 ತಿಂಗಳು ಕಾಪಿಡುವಂತೆ ಚೀಪುಗಲ್ಲಿನ ಬಾಂದಾರಗಳನ್ನು ನಿರ್ಮಿಸಿದ್ದಾರೆ. ಕೆರೆ ಮೈದುಂಬಿದ ಬಳಿಕ ಹೆಚ್ಚುವರಿ ನೀರು ಹರಿದು ಸರಾಗವಾಗಿ ಹೋಗುವಂತೆ, ಮುಂದೆ ಕಾಲುವೆಗಳ ಮೂಲಕ ಹೊಲಕ್ಕೆ ಸರಬರಾಜಾಗುವಂತೆ ವ್ಯವಸ್ಥೆಗೊಳಿಸಿದ್ದಾರೆ.
ತೋಟದ ನೆತ್ತಿಯ ಮೇಲೆ ಈ ಕೆರೆ ರೂಪುಗೊಂಡಿದ್ದು, ಇಡೀ ಹೊಲದಲ್ಲಿ ಅಂತರ್ಜಲದ ಪ್ರಮಾಣ ಮತ್ತು ಮಟ್ಟ ಏರುಪೇರಾಗದಂತೆ ಕಾಯ್ದುಕೊಳ್ಳಬೇಕು ಎಂಬ ಮುಂದಾಲೋಚನೆಯಿಂದ ಈ ನಿರ್ಮಿತಿ ಗಮನ ಸೆಳೆಯುತ್ತದೆ. ಹೊಲದ ಗಟ್ಟಿ ಮಣ್ಣು, ಅಲ್ಲಿಯೇ ಲಭ್ಯವಿರುವ ಕಲ್ಲಿನ ಕ್ವಾರಿಯಿಂದ ಕಲ್ಲು ಬಳಸಿ, ಭದ್ರ ಅಟ್ಟಣಿಗೆ ಮತ್ತು ಮೀನು ಸಾಕಣೆಗೂ ಅವಕಾಶ ನೀಡುವ ತೆರದಿ ಕೆರೆ ರೂಪುಗೊಂಡಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ, ನಮ್ಮ ಭಾಗದಲ್ಲಿ ವಾರ್ಷಿಕ ಮಳೆ ಕನಿಷ್ಟ 400-500 ಮಿಲಿ ಲೀಟರ್ ಬಿದ್ದರೂ ಕೆರೆ ವರ್ಷದುದ್ದಕ್ಕೂ ಮೈದುಂಬಿ ನಿಂತು, ಕೃಷಿ ಕಾಯಕಕ್ಕೆ ಆಸರೆಯಾಗಲಿದೆ.
ಯಂತ್ರಗಳನ್ನು ಬಳಸಿ ಕೆರೆ ಅಗೆದು, ಪಾತಳಿ ವಿಸ್ತರಿಸಿದ ಖರ್ಚು ಸುಮಾರು ರೂ. 12 ಲಕ್ಷ, ರೂ. 2.5 ಲಕ್ಷ ಬೇಡಿಕೆಗೆ ತಕ್ಕ ಕ್ವಾರಿ ಕಲ್ಲುಗಳನ್ನು ಅಗೆದು-ತೆಗೆದು ಒದಗಿಸುವ ಗುತ್ತಿಗೆದಾರನ ಖರ್ಚು ಮತ್ತು ನುರಿತ ಕಾರ್ಮಿಕರ ಕೂಲಿ ಗುತ್ತಿಗೆ ಅಂದಾಜು 2.5೫ ಲಕ್ಷ ರೂಪಾಯಿ ಸೇರಿದಂತೆ, ಇಡೀ ತೋಟದ ನೆತ್ತಿಯಿಂದ ಹರಿದು ಬರುವ ನೀರು ಅಲ್ಲಲ್ಲಿ ಅಡ್ಡಲಾಗಿ ನಿರ್ಮಿಸಿದ ಹಾಳೆಗಳಲ್ಲಿ ನಿಂತು, ಇಂಗಿ ನಂತರ ಹೆಚ್ಚುವರಿ ಬದುವುಗಳನ್ನು ಹಾರಿ ಅಥವಾ ಒಡೆದು ಸಾಗಿ ಬಂದು ಈ ಕೆರೆಗೆ ಸೇರುವಂತೆ ವ್ಯವಸ್ಥೆಗೊಳಿಸುವಲ್ಲಿ 1 ಲಕ್ಷ ರೂಪಾಯಿ.. ಹೀಗೆ 18 ಲಕ್ಷ ರೂಪಾಯಿ ಖರ್ಚಿನಲ್ಲಿ ಶಾಶ್ವತ ಕೆರೆಯನ್ನು ಕುಮಾರ ರೂಪಿಸಿದ್ದಾರೆ. ಲಕ್ಷಾಂತರ ಗ್ಯಾಲನ್ ನೀರು ಈಗ ಸಂಗ್ರಹವಾಗಲಿದೆ.
ಕಳೆದೊಂದು ವಾರದಲ್ಲಿ ಕೆರೆಯಿಂದ ತೋಟದ ಅಂತರ್ಜಲ ಮರುಪೂರಣಗೊಂಡದ್ದಕ್ಕೆ ಸಾಕ್ಷಿ ಎಂಬಂತೆ, ಬಿರು ಬೇಸಿಗೆಯಲ್ಲಿ 2.5 ಇಂಚು ನೀರು ಸುರಿಸುತ್ತಿದ್ದ ಕೊಳವೆ ಬಾವಿಗಳು 3 ಇಂಚು ಸುರಿಸಲಾರಂಭಿಸಿವೆ! ಮಳೆಗಾಲದ ವೇಳೆಗೆ 4 ರಿಂದ 5 ಇಂಚು ಅನಾಯಾಸವಾಗಿ ಹರಿಸಬಲ್ಲವು ಎಂಬ ಲೆಕ್ಕಾಚಾರ ಅವರದ್ದು.
ಸದ್ಯ ಹಾಳೆಗಳಿಗೆ ಅಡ್ಡಲಾಗಿ ರೂಪಿಸಲಾದ ಬದುವಿನಗುಂಟ ಅರಿಶಿಣ ಮತ್ತು ನುಗ್ಗೆ ಬೀಜವನ್ನು ಕುಮಾರ ಬಿತ್ತಿ, ನೈಸರ್ಗಿಕವಾಗಿಯೇ ಬದುಗಳನ್ನು ಬಿಗಿಗೊಳಿಸಿದ್ದಾರೆ. 5 ಬಗೆಯ ಮಾವು, ಗೋಡಂಬಿ, ತೆಂಗು, ಪೇರಲ, ಕರಿಬೇವು, ನಿಂಬೆ, ಗಜನಿಂಬೆ, ಕಂಚಿ ಕಾಯಿ ಅವರ ತೋಟದಲ್ಲಿ ನಳನಳಿಸುತ್ತಿದ್ದು, ಭತ್ತ, ಗೋವಿನಜೋಳ, ತರಹೇವಾರಿ ಕಾಯಿಪಲ್ಯೆ ಸೇರಿದಂತೆ ಪವಾಡಧಾನ್ಯ ಮತ್ತು ಆಹಾರ ಧಾನ್ಯಗಳನ್ನು ಸಂಪೂರ್ಣ ಸಾವಯವ ಕೃಷಿ ವಿಧಾನದಿಂದ ಬೆಳೆಸುವ ಪ್ರಯತ್ನ ಗಮನ ಸೆಳೆಯುತ್ತದೆ. ಕುಮಾರ ಅವರೇ ಪರಿಸರ ಸ್ನೇಹಿ ವಿಧಾನದಲ್ಲಿ ವಿನ್ಯಾಸಗೊಳಿಸಿದ ಎರಡು ಮನೆಗಳು ಮತ್ತು ಅತಿಥಿ ಗೃಹ ಸಹ ಇಲ್ಲಿ ವಿಶೇಷವಾಗಿವೆ.
ಆಸಕ್ತರು ನಿರ್ಮಿತಿಯನ್ನು ವೀಕ್ಷಿಸಲು ಸಂಪರ್ಕಿಸಿ: ಕುಮಾರ ಭಾಗವತ – 9449809685 (ಸಂಜೆ 6.30 ರಿಂದ 8.30)
ಲೇಖಕರು : ಹರ್ಷವರ್ಧನ ವಿ. ಶೀಲವಂತ
ಮುಖ್ಯಸ್ಥ, (ಯೋಜನೆ, ಸಂಶೋಧನೆ, ಅನುಷ್ಟಾನ ಮತ್ತು ನ್ಯಾಯದಾನ)
ನೇಚರ್ ರಿಸರ್ಚ್ ಸೆಂಟರ್ (ರಿ), ಧಾರವಾಡ.
ಸಂಪರ್ಕ:98865 21664
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.