ಬೆಳ್ತಂಗಡಿ : ಮನುಷ್ಯ ಜೀವನದಲ್ಲಿ ಶಿಸ್ತು ಇಲ್ಲದಿದ್ದರೆ ಪ್ರಗತಿ ಅಸಾಧ್ಯ. ಶಿಸ್ತು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತದೆ. ಆದ್ದರಿಂದ ಧರ್ಮಸ್ಥಳ ಯೋಜನೆಯ ಸ್ವ ಸಹಾಯ ಸಂಘಗಳಲ್ಲಿ ಶಿಸ್ತಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಹೇಳಿದ್ದಾರೆ.
ಅವರು ಮಂಗಳವಾರ ಲಾಯಿಲಾ ಗ್ರಾ. ಪಂ. ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ವಲಯದ ನೂತನ 10 ಸ್ವ ಸಹಾಯ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಯೋಜನೆ ಪ್ರಾರಂಭವಾದಾಗ ಮೂಲ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮೂಲಭೂತ ಸೌಕರ್ಯ ನೀಡಲಾಯಿತು. ನಂತರ ಸ್ವಾವಲಂಬನೆ ಕಲಿಸಲಾಯಿತು. ಬಡತನ ನಿವಾರಣೆಗೆ ಸರಕಾರ ಸಾಕಷ್ಟು ಸವಲತ್ತು ನೀಡುತ್ತಿದ್ದು ಧರ್ಮಸ್ಥಳ ಯೋಜನೆ ಕೂಡಾ ಅನೇಕ ಅವಕಾಶಗಳನ್ನು ನೀಡಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದು ತಾಲೂಕಿನಿಂದ 60 ಸಾವಿರ ಲೀ. ಹಾಲು ಪ್ರತಿದಿನ ಡೈರಿಗೆ ನೀಡಲಾಗುತ್ತಿದೆ. 2ಸಾವಿರ ಇದ್ದ ಪ್ರಗತಿ ಬಂಧು ತಂಡಗಳ ಸಂಖ್ಯೆ ಹೆಚ್ಚಿದ್ದು ಈಗ 4 ಸಾವಿರ ಸ್ವಸಹಾಯ ಸಂಘಗಳು ತಾಲೂಕಿನಲ್ಲಿವೆ. ರಾಜ್ಯದಲ್ಲಿ ೩.೪ ಲಕ್ಷ ಸ್ವ ಸಹಾಯ ಸಂಘಗಳು ಇದ್ದು 35 ಲಕ್ಷ ಸದಸ್ಯರಿದ್ದಾರೆ. ರಾಜ್ಯ ಜನ ಸಂಖ್ಯೆಯ ಐದನೇ ಒಂದಂಶ ಮಂದಿ ಧರ್ಮಸ್ಥಳ ಯೋಜನೆ ಜತೆ ಸಂಬಂಧ ಹೊಂದಿದ್ದಾರೆ. ನಮ್ಮ ಸ್ವ ಸಹಾಯ ಸಂಘಗಳ ಸೇವೆಯಿಂದಾಗಿ ಹೆಸರು ಪಡೆದಿವೆ ಎಂದರು.
ನಾವು ಸ್ವ ಸಹಾಯ ಸಂಘಗಳಿಗೆ ತರಬೇತಿ, ಮಾರ್ಗದರ್ಶನ ನೀಡಿ ಸ್ವಾವಲಂಬಿಗಳಾಗುವಂತೆ ಮಾಡುತ್ತೇವೆ. ಬ್ಯಾಂಕುಗಳಿಂದ ನೇರ ಸಾಲ ದೊರೆಯುತ್ತಿದ್ದು ನಾವು ಸಾಲ ಕೊಡಿಸುವುದು ಹಾಗೂ ಕಟ್ಟಿಸುವುದು ಮಾತ್ರ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಂಡಿಕೇಟ್ ಬ್ಯಾಂಕ್ ಪ್ರಬಂದಕ ಸೂರ್ಯ ನಾರಾಯಣ ಭಟ್, ಸಾಲದ ಸದ್ವಿನಿಯೋಗ ನಡೆಸಿ. ಯಾವ ಉದ್ದೇಶಕ್ಕೆ ಸಾಲ ಪಡೆದಿರುತ್ತೀರೋ ಅದೇ ಉದ್ದೇಶಕ್ಕೆ ಬಳಸಿ ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ವಿಶ್ವಾಸ ಉಳಿಸಿಕೊಳ್ಳಿ ಎಂದರು.ಜಿ.ಪಂ. ಸದಸ್ಯೆ ಸೌಮ್ಯಲತಾ, ಪತ್ರಕರ್ತ ಲಕ್ಷ್ಮೀ ಮಚ್ಚಿನ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್ ಸ್ವಾಗತಿಸಿ, ಬೆಳ್ತಂಗಡಿ ವಲಯ ಮೇಲ್ವಿಚಾರಕ ಸುರೇಶ್ ನಿರ್ವಹಿಸಿದರು. ಲಾಲ ಸೇವಾ ಪ್ರತಿನಿಧಿ ಪುಷ್ಪಾ ಶೆಣೈ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.