ಪುತ್ತೂರು : ಕುಮ್ಕಿ ಭೂಮಿ ಕಾನೂನು- ಒಂದು ವಿಶ್ಲೇಷಣೆ ರಾಜ್ಯ ಮಟ್ಟದ ವಿಚಾರ ಸಂಕಿರಣ ನೆಹರು ನಗರ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಮೇ 20 ರಂದು ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಕೆ.ಜಿ. ಕೃಷ್ಣಮೂರ್ತಿ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನೆಹರು ನಗರ ವಿವೇಕಾನಂದ ಕಾನೂನು ಮಹಾವಿದ್ಯಾಲಯ, ವಿವೇಕಾನಂದ ಸಂಶೋಧನ ಮತ್ತು ಅಧ್ಯಯನ ಕೇಂದ್ರ, ಭಾರತೀಯ ಕಿಸಾನ್ ಸಂಘದ ಪುತ್ತೂರು ಶಾಖೆ ಆಶ್ರಯದಲ್ಲಿ ಕೃಷಿಕರ ಮನದಲ್ಲಿ ಕಾಡುತ್ತಿರುವ ಕುಮ್ಕಿ ಭೂಮಿ ವಿಚಾರದಲ್ಲಿ ಒಂದು ದಿನದ ವಿಚಾರ ಸಂಕಿರಣ ನಡೆಯಲಿದೆ. ಬೆಳಗ್ಗೆ 9-30ಕ್ಕೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಕುಕ್ಕಾಜೆ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ಜಿಪಂ ಸದಸ್ಯೆ ಮೀನಾಕ್ಷಿ ಬಾಬು ಶಾಂತಿಗೋಡು, ವಿವೇಕಾನಂದ ಸಂಶೋಧನ ಮತ್ತು ಅಧ್ಯಯನ ಕೇಂದ್ರದ ಕಾರ್ಯಾಧ್ಯಕ್ಷ ವಿ.ವಿ.ಭಟ್ ಉಪಸ್ಥಿತರಿರುವರು ಎಂದು ಹೇಳಿದರು.
ಬೆಳಗ್ಗೆ 10-15ಕ್ಕೆ ನಡೆಯುವ ಪ್ರಥಮ ಗೋಷ್ಠಿಯಲ್ಲಿ ಕುಮ್ಕಿ ಭೂಮಿ ಹಕ್ಕು- ಬೆಳವಣಿಗೆ ವಿಚಾರದಲ್ಲಿ ಭಾರತೀಯ ಕಿಸಾನ್ ಸಂಘದ ಪುತ್ತೂರು ಸಂಚಾಲಕ ಎಂ.ಜಿ.ಸತ್ಯನಾರಾಯಣ ಮಾತನಾಡುವರು. ಎರಡನೇ ಗೋಷ್ಠಿಯಲ್ಲಿ ಸೊಪ್ಪಿನ ಬೆಟ್ಟ ಕಾನೂನು ವಿಚಾರದಲ್ಲಿ ಉಚ್ಛ ನ್ಯಾಯಾಲಯದ ವಕೀಲ ಶಂಕರ ಎಸ್. ಭಟ್, ಜಮ್ಮಾ ಮತ್ತು ಬಾಣೆ ಭೂಮಿ ಕಾನೂನು ವಿಚಾರದಲ್ಲಿ ಮಡಿಕೇರಿಯ ವಕೀಲ ಕೆ.ಪಿ.ಬಾಲಸುಬ್ರಹ್ಮಣ್ಯ ಮಾತನಾಡಲಿದ್ದಾರೆ. 12-30ಕ್ಕೆ ಕುಮ್ಕಿ ಪ್ರತ್ಯಕ್ಷ ನ್ಯಾಯಾಲಯ ವಿದ್ಯಾರ್ಥಿಗಳಿಂದ ನಡೆಯಲಿದೆ. ಮಧ್ಯಾಹ್ನ 1-45ಕ್ಕೆ ಕುಮ್ಕಿ ಕಾನೂನು- ತಿದ್ದುಪಡಿಯ ವಿಶ್ಲೇಷಣೆ ವಿಚಾರದಲ್ಲಿ ವಕೀಲ ಕೆ.ಆರ್.ಆಚಾರ್ಯ ಮಾತನಾಡುವರು. 3ಕ್ಕೆ ಸಮಾರೋಪ ನಡೆಯಲಿದ್ದು, ಶಾಸಕ ಸುನಿಲ್ ಕುಮಾರ್ ಸಮಾರೋಪ ಭಾಷಣ ಮಾಡುವರು. ನೆಹರುನಗರ ವಿವೇಕಾನಂದ ಸಂಶೋಧನ ಮತ್ತು ಅಧ್ಯಯನ ಕೇಂದ್ರದದ ಶಿವಪ್ರಸಾದ ಇ. ಅತಿಥಿಯಾಗಿರುವರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಕುಕ್ಕಾಜೆ ರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕ ಸಂತೋಷ್ ಬೋನಂತಾಯ, ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ವಿಘ್ನೇಶ್ವರ ವರ್ಮುಡಿ, ಕುಮ್ಕಿ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ನೆಕ್ಕಿಲ ರಾಮಚಂದ್ರ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.