ಬೆಳ್ತಂಗಡಿ : ಸಶಕ್ತ ಹಾಗೂ ಸ್ವಾವಲಂಬಿ ಸಮಾಜಕ್ಕಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಿಸುತ್ತಿರುವ ಕಾರ್ಯಗಳು ದೇಶಕ್ಕೇ ಮಾದರಿ. ಐಡಿಬಿಐ ಬ್ಯಾಂಕು ಯೋಜನೆಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಐಡಿಬಿಐ ಚೆಯರ್ ಮನ್ ಕಿಶೋರ್ ಖಾರಟ್ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದ ಕೇಂದ್ರ ಕಚೇರಿಯಲ್ಲಿ ನಿರ್ಗತಿಕರಿಗೆ ಮಾಸಾಶನ ವಿತರಣಾ ಕಾರ್ಯಕ್ರಮದಲ್ಲಿ ಮಾಸಾಶನ ವಿತರಿಸಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ಐಡಿಬಿಐ ಬ್ಯಾಂಕ್ ಕಮರ್ಶಿಯಲ್ ಬ್ಯಾಂಕ್ ಆದ ಮೇಲೆ ಬಡವರಿಗಾಗಿ ಏನಾದರು ಮಾಡಬೇಕು ಎಂಬ ಗುರಿಯನ್ನಿಟ್ಟುಕೊಂಡಿತ್ತು. ಆದರೆ ಕ್ರಮೇಣ ಈ ಕಾರ್ಯ ಬ್ಯಾಂಕಿನಿಂದ ಮಾತ್ರ ಮಾಡಲು ಅಸಾಧ್ಯ ಎಂದರಿತು ಸ್ವಯಂಸೇವಾ ಸಂಸ್ಥೆಯ ಹುಡುಕಾಟದಲ್ಲಿರುವಾಗ ಧರ್ಮಸ್ಥಳ ಯೋಜನೆಯ ಕಾರ್ಯವೈಖರಿ ಗಮನ ಸೆಳೆಯಿತು. ಹೀಗಾಗಿ ಯೋಜನೆಯೊಂದಿಗೆ ಬ್ಯಾಂಕು ಕೆಲಸ ಮಾಡುತ್ತಿದೆ. ಯೋಜನೆಯ ಸ್ವಾವಲಂಬಿ ಸಮಾಜದ ಕಲ್ಪನೆ ದೇಶದ ಮೂಲೆ ಮೂಲೆಗೂ ಪಸರಿಸಿದಲ್ಲಿ ಮುಂದಿನ 10 ವರ್ಷದಲ್ಲಿ ಸಶಕ್ತ ಭಾರತವನ್ನು ನೋಡಬಹುದಾಗಿದೆ ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ಸ್ವಾವಲಂಬನೆ ಯೋಜನೆಯ ಗುರಿ. ತನ್ನ ಬದುಕನ್ನು ಇತರರು ನಿರ್ಧರಿಸದೇ ತಾನೇ ಯೋಜನೆ ರೂಪಿಸಿ ಜೀವನ ನಡೆಸುವಂತಾಗಬೇಕು ಎಂಬ ಉದ್ದೇಶ ಕಳೆದ 30 ವರ್ಷದ ಯೋಜನೆಯ ಕಾರ್ಯದಿಂದ ಯಶಸ್ವಿಯಾಗತೊಡಗಿದೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಬ್ಯಾಂಕುಗಳು ಸಹಯೋಗ ನೀಡುತ್ತಿವೆ. 70 ಸಾವಿರ ಸ್ವಸಹಾಯ ಸಂಘಗಳಿದ್ದು 10 ಲಕ್ಷ ಕುಟುಂಬಗಳಿಗೆ ಯೋಜನೆ ತಲುಪಿದೆ ಎಂದರು.
ವೇದಿಕೆಯಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀನಿವಾಸನ್, ಸಿಜಿಎಂ ಗಳಾದ ನಾರಾಯಣ ಮೂರ್ತಿ, ಸುರೇಶ್ ಕಾಕತ್ಕರ್, ಜಿಎಂ ಗಳಾದ ವರ್ಗೀಸ್, ಕೃಷ್ಣನ್, ಡಿಜಿಎಂ ಮಂಜುನಾಥ್ ಇದ್ದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್.ಮಂಜುನಾಥ್ ಸ್ವಾಗತಿಸಿದರು. ಫಲಾನುಭವಿ ಚಂಪಾ ಅನುಭವ ಹಂಚಿಕೊಂಡರು. ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ರೂಪಾ ಜೈನ್ ವಂದಿಸಿದರು. ಯೋಜನೆಯ ನಿರ್ದೇಶಕಿ ಮಮತಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಬ್ಯಾಂಕುಗಳು ಬಡವರಿಗೆ ಸಾಲ ನೀಡಲು ಹಿಂದೇಟು ಹಾಕುವ ಸಂದರ್ಭದಲ್ಲಿ ಯೋಜನೆಯ ಸ್ವಸಹಾಯ ಸಂಘದ ಪರಿಕಲ್ಪನೆಯಿಂದ ಸಾಲ ಕ್ಲಪ್ತ ಮರುಪಾವತಿಯಾಗುತ್ತಿರುವುದು ಹೆಮ್ಮೆಯ ವಿಷಯ. ದೇಶದ ಬೇರೆ ಸ್ವಯಂಸೇವಾ ಸಂಸ್ಥೆಗಳಿಗೆ ಡಾ| ಹೆಗ್ಗಡೆಯವರ ಮಾರ್ಗದರ್ಶನ ಸಿಗುವಂತಾಗಬೇಕು- ಖಾರಟ್
ಸ್ವಸಹಾಯ ಸಂಘಗಳಲ್ಲಿ ಸದಸ್ಯರು ತೆಗೆದ ಹಣ ಸರಿಯಾಗಿ ಸದುಪಯೋಗವಾಗಿ ಮರುಪಾವತಿಯಾಗುತ್ತಿರುವುದರಿಂದ ಕುಟುಂಬ ನಿರ್ವಹಣೆ ಯೋಗ್ಯವಾಗಿ ನಡೆಯುತ್ತಿದೆ- ಡಾ| ಹೆಗ್ಗಡೆ
ಯೋಜನೆಯ ವತಿಯಿಂದ ಪ್ರಾಯೋಜಿಸಲಾಗಿರುವ 70,000ಕ್ಕೂ ಮಿಕ್ಕಿದ ಸಂಘಗಳಿಗೆ ೯೫೦.೦೦ ಕೋಟಿ ರೂ. ಮಿಕ್ಕಿದ ಆರ್ಥಿಕ ನೆರವನ್ನು ಐಡಿಬಿಐ ಒದಗಿಸಿದೆ- ಡಾ|ಎಲ್.ಎಚ್. ಮಂಜುನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.