ಕಾರ್ಕಳ: ಸಮಾಜದಲ್ಲಿ ಮೌಲ್ಯಯುತ ಬದುಕಿಗೆ ಶಿಕ್ಷಣ ಅನಿವಾರ್ಯ ಎಂದು ಶಾಸಕ ಎಚ್.ಗೋಪಾಲ ಭಂಡಾರಿ ಹೇಳಿದ್ಧಾರೆ.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಯ್ಯಾರಿನಲ್ಲಿ ನಡೆದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪಿಸಲು ಸಹಕಾರಿಯಾಗುತ್ತದೆ ಎಂದರು. ದೇಶದ ಸಂಪನ್ಮೂಲ ಕ್ರೋಢೀಕರಣ ಮತ್ತು ಆಯವ್ಯಯದ ಒಟ್ಟು ಶೇ.40ರಷ್ಟು ಅನುದಾನವನ್ನು ಶಿಕ್ಷಣ ಮತ್ತು ಆರೋಗ್ಯಕ್ಕೆ ಮೀಸಲಿಡಲಾಗುತ್ತಿದೆ. ಶಿಕ್ಷಣವು ಸಾರ್ವತ್ರಿಕವಾಗಿ ಎಲ್ಲರಿಗೂ ಲಭಿಸುವಂತೆ ಸರಕಾರವು ಸೂಕ್ತ ಕ್ರಮ ಕೈಗೊಂಡಿದೆ.
ಪ್ರಸ್ತುತ ಶಿಕ್ಷಣ ಸಂಸ್ಥೆಗಳ ಕೊರತೆಯಿಲ್ಲ. ಬದಲಾಗಿ ಗುಣಾತ್ಮಕ ಶಿಕ್ಷಣ ನೀಡಬೇಕಾಗಿದೆ. ಒಂದನೇ ತರಗತಿಯಿಂದಲೇ ಆಂಗ್ಲ ಭಾಷೆಯ ಪಠ್ಯಪುಸ್ತಕ ಹಾಗೂ ಆರನೇ ತರಗತಿಯಿಂದ ಆಂಗ್ಲಮಾಧ್ಯಮ ಶಿಕ್ಷಣ ನೀಡುವ ಚಿಂತನೆ ಸರಕಾರದ ಮುಂದಿದ್ದು, ಇದು ಸಾಧ್ಯವಾದಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಜಾಗತಿಕಮಟ್ಟದ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಸ್ವಾತಂತ್ರಪೂರ್ವದಲ್ಲಿ ತಾಲೂಕಿನಲ್ಲಿ ಒಂದೇ ಒಂದು ಪ್ರೌಢಶಾಲೆಯಿದ್ದರೆ, ಪ್ರಸ್ತುತ 65ಕ್ಕೂ ಮಿಕ್ಕಿ ಪ್ರೌಢಶಾಲೆಗಳು ನಮ್ಮಲ್ಲಿದೆ. ಶಿಕ್ಷಣದ ವ್ಯವಸ್ಥೆಯನ್ನು ಸರಕಾರ ಕಲ್ಪಿಸಿದರೆ, ಅದಕ್ಕೆ ಪೂರಕವಾಗಿ ಊರ ದಾನಿಗಳ ನೆರವಿನಿಂದ ಇಂತಹ ಗ್ರಾಮೀಣ ಪ್ರದೇಶದ ಶಾಲೆಗಳು ಅಭಿವೃದ್ಧಿ ಕಂಡಿದೆ. ಪ್ರಸ್ತುತ ಶತಮಾನೋತ್ಸವ ಆಚರಣೆಯಲ್ಲಿರುವ ಈ ಶಾಲೆ, ಹಳೆವಿದ್ಯಾರ್ಥಿ ಸಂಘ, ಪೋಷಕರು, ಶಿಕ್ಷಕರು ಹಾಗೂ ಅಭಿವೃದ್ಧಿ ಸಮಿತಿ ಕೈಗೊಂಡ ಕಾರ್ಯ ಶ್ಲಾಘನೀಯ ಎಂದರು.
ಮಿಯ್ಯಾರು ಚರ್ಚ್ನ ಧರ್ಮಗುರುಗಳಾದ ರೆ.ಫಾ.ಜೆರೋಮ್ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ನಾಗಪ್ಪ ಮೇರ, ಮಿಯ್ಯಾರು ಗ್ರಾ.ಪಂ.ಅಧ್ಯಕ್ಷೆ ಬೇಬಿ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ನಾಯಕ್, ಅಧ್ಯಕ್ಷ ಜೆರಾಲ್ಡ್ ಡಿಸಿಲ್ವಾ, ಕಾರ್ಯಾಧ್ಯಕ್ಷ ಮಾಧವ ಕಾಮತ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿದಾಸ್ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಾಬು ಪೂಜಾರಿ, ಉದ್ಯಮಿ ಶರತ್ ಶೆಟ್ಟಿ, ದಾನಿಗಳಾದ ರಾಜು ಎಂ.ಶೆಟ್ಟಿ, ಆನಂದ ಶೆಟ್ಟಿ, ಜಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸುಜಾತ ಸ್ವಾಗತಿಸಿ, ಮುಖ್ಯ ಶಿಕ್ಷಕ ಪ್ರಕಾಶ್ ವರದಿ ವಾಚಿಸಿದರು. ಎಂ.ರಮೇಶ್ ನಾಯಕ್ ಸ್ವಸ್ತಿ ವಾಚನ ನೆರವೇರಿಸಿದರು. ಮಾಧವ ಕಾಮತ್ ಪ್ರಾಸ್ತವಿಕವಾಗಿ ಮಾತನಾಡಿ, ವಿಠಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.