ಬೆಳ್ತಂಗಡಿ : ನಮಗೆ ದೇವಸ್ಥಾನಗಳು ಉತ್ಸಾಹವನ್ನು ತುಂಬಿಸಿದರೆ, ದೈವ ಸ್ಥಾನಗಳು ಶಕ್ತಿಯನ್ನು ನೀಡುತ್ತವೆಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಶಿ ಅಭಿಪ್ರಾಯಪಟ್ಟರು.
ಅವರುತಾಲೂಕಿನ ನಿಟ್ಟಡೆಗ್ರಾಮದ ಪೆರ್ಮುಡ ಪಂಡಿಜೆಕಲ್ಲಾಣಿ ಶ್ರೀ ಕೊಡಮಣಿತ್ತಾಯ, ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಮತ್ತು ನಾಗಸನ್ನಿಧಿ ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕಉಪನ್ಯಾಸ ನೀಡಿದರು.
ಶಕ್ತಿಯ ರೂಪವೇ ದೈವ. ದೇವರ ಅಂಶವನ್ನೇ ದೈವಸ್ಥಾನಗಳೂ ಒಳಗೊಂಡಿವೆ. ದೈವಗಳ ವಿಶೇಷತೆಯೆಂದರೆ ಅವು ನಮ್ಮೊಂದಿಗೆ ಮಾತನಾಡುತ್ತವೆ, ಸಂವಹನ ನೀಡುತ್ತವೆ. ಅಭಯ ನೀಡುತ್ತವೆ. ದೈವ ನಮ್ಮನ್ನು ನತಮಸ್ತಕನನ್ನಾಗಿಸುತ್ತದೆ. ಭಗವಂತನಿಂದ ನೀನು ನಾನಾಗು ಎಂಬ ಸಂದೇಶವನ್ನು ಹೊತ್ತು ನಮ್ಮಲ್ಲಿರುವ ಶಕ್ತಿಯನ್ನು ಉದ್ದೀಪನಗೊಳಿಸುತ್ತವೆ. ಕೊಟ್ಟು ಬದುಕು ಎಂಬ ನೀತಿಯನ್ನು ನಮಗೆ ತಿಳಿಸಿಕೊಡುವುದೇ ದೈವಗಳು ಎಂದರು.
ದೇವರಿರಲಿ, ದೈವವಿರಲಿ ನಮಗೆ ನಂಬಿಕೆ ಮುಖ್ಯ.ಇದರ ಬಗ್ಗೆ ಅಪನಂಬಿಕೆಗೆ, ಪ್ರಶ್ನೆಮಾಡುವ ವ್ಯವಸ್ಥೆಗೆ ಅದು ಕಾರಣವಾಗಬಾರದು. ದೇವತಾ ಕಾರ್ಯಗಳಿಂದ ನಮ್ಮನ್ನು ನಾವು ಪರಿಶುದ್ಧಗೊಳಿಸಿಕೊಳ್ಳುತ್ತೇವೆ ಎಂದ ಅವರು ಕಲ್ಲಾಣಿಯಲ್ಲಿ ದೈವಸ್ಥಾನದ ಸಾನಿಧ್ಯಕ್ಕೆ ಒತ್ತುಕೊಟ್ಟು, ಸಮರ್ಪಣಾ ಭಾವದಿಂದ ಕೆಲಸಕಾರ್ಯಗಳನ್ನು ಮಾಡಿರುವುದನ್ನು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮತಿ ಗೌರವಾಧ್ಯಕ್ಷ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ ವಹಿಸಿದರು. ಅತಿಥಿಗಳಾಗಿ ಮೂಡಬಿದ್ರೆ ಶ್ರೀ ಧನಲಕ್ಷ್ಮೀಗ್ರೂಪ್ಸ್ನ ಶ್ರೀಪತಿ ಭಟ್, ವಕೀಲ ಹರೀಶ್ ಪೂಂಜ ವೇದಿಕೆಯಲ್ಲಿದ್ದರು.
ಕಲ್ಲಾಣಿಯಲ್ಲಿ 15 ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವಡಾಕಯ್ಯ ಹಾಗೂ 30 ವರ್ಷಗಳಿಂದ ದೈವದಕಾರ್ಯ ನಿರ್ವಹಿಸುತ್ತಿರುವ ಬಾಬು ನಲ್ಕೆ ಅವರನ್ನು ಗೌರವಿಸಲಾಯಿತು.
ಸಮಿತಿ ಅಧ್ಯಕ್ಷ ಅಶೋಕ್ ಪಾಣೂರು ಸ್ವಾಗತಿಸಿದರು. ಗೌರವ ಸಲಹೆಗಾರರಾದ ಪ್ರವೀಣಚಂದ್ರ ಜೈನ್ ಪ್ರಸ್ತಾವಿಸಿದರೆ, ಲಕ್ಷ್ಮಣ ಹೆಬ್ಬಾರ್ ಅನಿಸಿಕೆ ವ್ಯಕ್ತಪಡಿಸಿದರು. ಕೋಶಾಧಿಕಾರಿ ಪಿ.ಪ್ರಶಾಂತ ಹೆಬ್ಬಾರ್ ವಂದಿಸಿದರು. ಶ್ರೇಯಾಂಕ್ ರಾನಡೆ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ಸೀಮೆಯ ಅಸ್ರಣ್ಣರಾದ ಟಿ. ವಿಷ್ಣುಮೂರ್ತಿ ಭಟ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಚಂಡಿಕಾ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪರ್ವ ಸಂಕ್ರಾಂತಿ ನಡೆಯಿತು.
ಪೂರ್ವಾಹ್ನ ಪೆರ್ಮುಡಗುತ್ತಿನಿಂದ ಕೊಡಮಣಿತ್ತಾಯ ದೈವದ ಮತ್ತು ಫಂಡಿಜೆಗುತ್ತಿನಿಂದ ಗ್ರಾಮದ ಕಲ್ಕುಡ ಕಲ್ಲುರ್ಟಿ ದೈವದ ಭಂಡಾರವನ್ನು ತರಲಾಯಿತು. ಕೊಡಮಣಿತ್ತಾಯ ದೈವದದರ್ಶನ ನೆರವೇರಿತು. ರಾತ್ರಿ ದೈವಗಳ ನೇಮೋತ್ಸವ, ಸುಡುಮದ್ದು ಪ್ರದರ್ಶನ, ಬಲೇ ತೆಲಿಪಾಲೆ ತಂಡದವರ ತೆಲಿಕೆದ ಗೊಂಚಿಲ್ ಕಾರ್ಯಕ್ರಮಗಳು ನಡೆದವು.
800 ವರ್ಷಗಳ ಇತಿಹಾಸವಿರುವ ಕಲ್ಲಾಣಿ ದೈವಸ್ಥಾನವು ಸುಮಾರು ಇಪ್ಪತ್ತೈದು ಲಕ್ಷ ರೂ.ವೆಚ್ಚದಲ್ಲಿ ನವೀಕರಿಸಲಾಗಿದೆ. ಗುಡಿಗಳ ಪಕ್ಕದಲ್ಲೇ ಸುಮಾರು 450 ವರ್ಷಗಳ ಹಿಂದೆ ವೀರ ಶಂಭು ಕಲ್ಕುಡ ತನ್ನ ಒಂದೇ ಕೈಯಿಂದ 35 ಅಡಿ ಎತ್ತರದ ವೇಣೂರಿನ ಬಾಹುಬಲಿ ಮೂರ್ತಿಯನ್ನು ಕೆತ್ತಿದ ಹಾಗೂ ಆತ ನಿರ್ಮಿಸಿದ ಕೆರೆ ಇರುವ ಐತಿಹಾಸಿಕ, ಪ್ರವಾಸೀ ತಾಣಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.