ಬೆಳ್ತಂಗಡಿ : ಕ್ಷಣಿಕ ಸುಖಭೋಗಗಳಿಗೆ ಮರುಳಾಗದೆ, ತನ್ನನ್ನು ತಾನು ಗೆದ್ದು ಜ್ಞಾನವನ್ನು ಹಂಚುವ ಕೆಲಸ ಆಗಬೇಕು ಎಂದು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿಜಯರಾಜ ಅಧಿಕಾರಿ ಮಾರಗುತ್ತು ಹೇಳಿದರು.
ಅವರು ಮಂಗಳವಾರ ರಾತ್ರಿ ತಾಲೂಕಿನ ನಿಟ್ಟಡೆ ಗ್ರಾಮದ ಪೆರ್ಮುಡ ಪಂಡಿಜೆ ಕಲ್ಲಾಣಿ ಶ್ರೀ ಕೊಡಮಣಿತ್ತಾಯ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಮತ್ತು ನಾಗಸನ್ನಿಧಿ ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾರಂಭದ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಭಗವಂತನಿಗೆ ತನ್ನನ್ನು ಅರ್ಪಿಸಿ ಜೀವನದಲ್ಲಿ ಹೇಗೆ ಮುಂದುವರಿಯಬೇಕು ಎಂಬುದನ್ನು ಋಷಿಮುನಿಗಳು, ಸಾಧು ಸಂತರು, ಮಹಾಪುರುಷರು ತೋರಿಸಿಕೊಟ್ಟಿದ್ದಾರೆ. ಮಾನಸಮ್ಮಾನಕ್ಕೆ ಶರಣಾಗದೆ, ಅಹಿಂಸೆ, ಕ್ಷಮೆ, ಶಾಂತಿ, ನೇರತನ, ಜ್ಞಾನಿಗಳ ಸೇವೆ, ಅಂತರಂಗ-ಬಹಿರಂಗ ಸ್ವಚ್ಛತೆ, ಸ್ಥೈರ್ಯ, ಧೃಢತೆ, ಆತ್ಮನಿಗ್ರಹ ಮೊದಲಾದ ಗುಣಗಳಿಂದ ಭಗವಂತನನ್ನು ನಾವು ತಲುಪಬಹುದಾಗಿದೆ. ಇದರಿಂದ ಜ್ಞಾನದ ಸಿದ್ಧಿ ಲಭಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲ ನಡಿಬೆಟ್ಟುಗುತ್ತು ನೇಮಿರಾಜ ಶೆಟ್ಟಿ ವಹಿಸಿದ್ದರು. ಅತಿಥಿಗಳಾಗಿ ಜಿ.ಪಂ. ಸದಸ್ಯರಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ತೇಜಾಕ್ಷಿ, ಎಸ್ಕೆಡಿಆರ್ಡಿಪಿ ವೇಣೂರು ವಲಯ ಮೇಲ್ವಿಚಾರಕ ಶ್ರೀನಿವಾಸ್, ದಾನಿ ವೆಂಕಟೇಶ್ ಅಳದಂಗಡಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಲಕ್ಷ್ಮಣ ಹೆಬ್ಬಾರ್ ವೇದಿಕೆಯಲ್ಲಿದ್ದರು.
ಸಮಿತಿ ಅಧ್ಯಕ್ಷ ಅಶೋಕ ಪಾಣೂರು ಸ್ವಾಗತಿಸಿದರು. ಗೌರವ ಸಲಹೆಗಾರ ಪ್ರವೀಣಚಂದ್ರ ಜೈನ್ ನಡಿಬೆಟ್ಟುಗುತ್ತು ಪ್ರಸ್ತಾವಿಸಿದರು. ಕಾರ್ಯದರ್ಶಿ ರತ್ನಾಕರ ಅಂಕರ್ಜಾಲು ವಂದಿಸಿದರು. ಶ್ರೇಯಾಂಕ ರಾನಡೆ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮೊದಲು ಮಾಲಾಡಿಯ ನೃತ್ಯ ತಂಡದವರಿಂದ ನೃತ್ಯ ಕಾರ್ಯಕ್ರಮ, ಬಳಿಕ ಫಲ್ಗುಣಿ ಕಲಾ ತಂಡ ವೇಣೂರು ಇವರಿಂದ ರವಿಂಚಂದ್ರ ಬಿ. ಸಾಲ್ಯಾನ್ ವಿರಚಿತ ಹೇಮಂತ್ ಕುಮಾರ್ ನಿರ್ದೇಶನದ ಪುರ್ಸಗ್ ಪುರ್ಸೊತ್ತಿಜ್ಜಿ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.
ವೈದಿಕ ಕಾರ್ಯಕ್ರಮದಂಗವಾಗಿ ಟಿ. ವಿಷ್ಣುಮೂರ್ತಿ ಭಟ್ ಅಸ್ರಣ್ಣ ನೇತೃತ್ವದಲ್ಲಿ ಸಂಜೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ವಾಸ್ತುಬಲಿ, ರಾಕ್ಷೆಘ್ನ ಹೋಮ, ಭುಃ ವರಾಹ ಹೋಮ, ದೈವಗಳ ಅಧಿವಾಸ, ದಿಕ್ಪಾಲಕ ಬಲಿ ನಡೆದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.