ನೀರ್ಚಾಲು : ಹವಿಗನ್ನಡ ಸಾಹಿತ್ಯಕ್ಷೇತ್ರದಲ್ಲಿ “ಧರ್ಮವಿಜಯ” ಎಂಬ ಮಹಾಕಾವ್ಯವನ್ನು ಬರೆದು, ಹವ್ಯಕ ಭಾಷೆ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ಹವ್ಯಕ ಭಾಷೆಯಲ್ಲಿ ಉತ್ತಮ ಸಾಹಿತ್ಯ ರಚನೆಗಳ ಸಾಧ್ಯತೆಗಳನ್ನು ಸಮಾಜಕ್ಕೆ ತೋರಿಸಿಕೊಟ್ಟ ಹಿರಿಯ ಸಾಹಿತಿ ದಿವಂಗತ ಬಾಳಿಲ ಪರಮೇಶ್ವರ ಭಟ್ಟರ ಸ್ಮಾರಕಾರ್ಥವಾಗಿ ಅಂತರ್ಜಾಲದಲ್ಲಿನ ಹವ್ಯಕ ಭಾಷಾ ಪ್ರೇಮಿಗಳ ಒಕ್ಕೂಟ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಕೊಡಮಾಡುವ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿಗೆ ಈ ಬಾರಿ ಡಾ| ಹರಿಕೃಷ್ಣ ಭರಣ್ಯ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮೇ 14, ಶನಿವಾರದಂದು ಅಪರಾಹ್ನ 2.30ಕ್ಕೆ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಜರಗಲಿದೆ. ಇದೇ ಸಂದರ್ಭದಲ್ಲಿ ಪ್ರತಿಷ್ಠಾನವು ಆಯೋಜಿಸಿದ ವಿಷು ವಿಶೇಷ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಮತ್ತು ದೇರಾಜೆ ಸೀತಾರಾಮಯ್ಯರವರ ಕೃತಿ ಆಧಾರಿತ ‘ಕುರುಕ್ಷೇತ್ರಕ್ಕೊಂದು ಆಯೋಗ’ ಎಂಬ ವಿಶಿಷ್ಠ ಯಕ್ಷ-ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಮೇ 16.1951ರಂದು ಪಾಣಾಜೆ ಸನಿಹದ ಭರಣ್ಯ-ಮೇಣ ರಾಮಕೃಷ್ಣ ಭಟ್ ಮತ್ತು ಶಂಕರಿ ದಂಪತಿಗಳ ಮಗನಾಗಿ ಜನಿಸಿದ ಹರಿಕೃಷ್ಣ ಭರಣ್ಯ ಇವರು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ, ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಎಂ.ಎ, ಮದರಾಸು ವಿಶ್ವವಿದ್ಯಾನಿಲಯದಲ್ಲಿ ಎಮ್.ಫಿಲ್ ಮತ್ತು ಮದುರೈ ಕಾಮರಾಜ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಅವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನೆ ಕೇಂದ್ರದ ತುಳುನಿಘಂಟು ಯೋಜನೆ, ಮದುರೈ ಕಾಮರಾಜ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಉಪನ್ಯಾಸಕ ಮತ್ತು ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 2010ರಲ್ಲಿ ನಿವೃತ್ತಿ ಹೊಂದಿದ್ದಾರೆ.
ಹೊನ್ನಾವರದಲ್ಲಿ ಜರಗಿದ ಪ್ರಥಮ ಹವಿಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಮದುರೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಬೆಂಗಳೂರಿನ ಹವಿಗನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಮದುರೈ ವಿವಿಯ ಭಾರತೀಯ ಭಾಷೆಗಳ ಸಮಿತಿಯ ಅಧ್ಯಕ್ಷರಾಗಿಯೂ ಗುರುತಿಸಲ್ಪಟ್ಟ ಭರಣ್ಯರ ನಾಟಕ, ಕತೆ, ಕವನ, ಕಾದಂಬರಿ, ವಿಮರ್ಶೆ, ಸಂಶೋಧನೆ, ಅನುವಾದ ಸಾಹಿತ್ಯ ಸಹಿತ ಮೂವತ್ತಮೂರು ಕೃತಿಗಳು ಪ್ರಕಟಗೊಂಡಿವೆ. ಹವಿಗನ್ನಡದಲ್ಲಿ ನಾಲ್ಕು ನಾಟಕಂಗೊ, ದೊಡ್ಡಜಾಲು ಕಾದಂಬರಿ, ಸಾವಿರದೊಂದು ಗೆಣಸಲೆ ಕವನ ಸಂಕಲನ, ಹರಟೆ ಇವರ ಪ್ರಸಿದ್ಧ ಕೃತಿಗಳು. ಹವಿಗನ್ನಡ ಸಾಹಿತ್ಯ ಸಂಸ್ಕೃತಿಗಳ ಸಮೀಕ್ಷೆ ‘ಈ ನೆಲದ ಕಂಪು’ ಮತ್ತು ಹವಿಗನ್ನಡ ಧ್ವನಿಸುರುಳಿಯನ್ನೂ ಹೊರತಂದಿರುವ ಭರಣ್ಯರಿಗೆ ಅರ್ಹವಾಗಿ “ಹವಿಗನ್ನಡ ಸೂರಿ” ಪ್ರಶಸ್ತಿಯೂ ಸಂದಿದೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಮಾಜಿಕ ಧುರೀಣ ಆನೆಕಾರ ಗಣಪಯ್ಯ ವಹಿಸಲಿದ್ದಾರೆ. ‘ಅಯಶ್ಶಿಲ್ಪ’ ಸುಳ್ಯದ ಗಿರೀಶ್ ಭಾರದ್ವಾಜ್, ಮಡಿಕೇರಿ ಆಕಾಶವಾಣಿ ಕಲಾವಿದ ಸುಬ್ರಾಯ ಸಂಪಾಜೆ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಗೌರವಾಧ್ಯಕ್ಷ ಈಶ್ವರ ಭಟ್ ಎಸ್. ಎಳ್ಯಡ್ಕ ಮತ್ತು ಅಧ್ಯಕ್ಷ ಶ್ರೀಕೃಷ್ಣ ಶರ್ಮ ಹಳೆಮನೆ ಶುಭ ಹಾರೈಸಲಿದ್ದಾರೆ. ಕಾರ್ಯಕ್ರಮದ ನಂತರ ಕದ್ರಿ ನವನೀತ ಶೆಟ್ಟಿ ಮತ್ತು ತಂಡದಿಂದ ದೇರಾಜೆ ಸೀತಾರಾಮಯ್ಯರವರ ಕೃತಿ ಆಧಾರಿತ ‘ಕುರುಕ್ಷೇತ್ರಕ್ಕೊಂದು ಆಯೋಗ’ ಎಂಬ ವಿಶಿಷ್ಠ ಯಕ್ಷ-ನಾಟಕ ಪ್ರದರ್ಶನ ಜರಗಲಿದೆ.
ಆಧುನಿಕ ಅಂತರ್ಜಾಲದ ಮೂಲಕ ಪ್ರಕಟಗೊಂಡು, ಹವ್ಯಕಭಾಷಾ ಸಾಹಿತ್ಯದ ಬೆಳವಣಿಗೆಗೆ ಬೃಹದ್ವೇದಿಕೆಯಾಗಿ ರೂಪುಗೊಂಡ ಸಾಹಿತ್ಯ ಬಳಗ ಒಪ್ಪಣ್ಣ-ನೆರೆಕರೆ. ಎಲ್ಲ ಆಸಕ್ತರಿಗೂ ಮುಕ್ತ ಪ್ರವೇಶವನ್ನಿತ್ತು ಬರೆಯಲು-ಬೆರೆಯಲು ಪ್ರೇರೇಪಿಸುತ್ತಾ, ಇದೀಗ ಏಳುನೂರಕ್ಕೂ ಹೆಚ್ಚು ಲೇಖಕರ – ಐದು ಸಾವಿರಕ್ಕೂ ಅಧಿಕ ಲೇಖನಗಳನ್ನು ಹೊಂದಿದ್ದು, ದಿನೇದಿನೇ ಬೆಳೆಯುತ್ತಿದೆ. ಅಕ್ಷರಯಜ್ಞದ ಮೂಲಕ ಸಾಹಿತ್ಯಸೇವೆಗೈಯುತ್ತಿರುವ ಈ ಬಳಗವನ್ನು ನಮ್ಮ ಹಳ್ಳಿಜೀವನವನ್ನು ನೆನಪಿಸುವಂತೆ ಬೈಲು ಎಂದು ಕರೆಯುವುದು ರೂಢಿ.
ಈ ಬೈಲು ಸಮಾಜವನ್ನು ತಲುಪುವ ಉದ್ದೇಶದಿಂದ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಆ ಮೂಲಕ ಸಾಹಿತ್ಯ ಪ್ರಕಟಣೆಗಳು, ಲಲಿತಕಲೆಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಧನಸಹಾಯ, ಸನಾತನ ಜೀವಿಕೆಯ ಪ್ರಸಾರ, ಪ್ರಚಾರ-ಇತ್ಯಾದಿ ಕೈಂಕರ್ಯಗಳನ್ನು ಮಾಡುತ್ತಾ ಬಂದಿದೆ. ಪ್ರತಿಷ್ಠಾನದ ಧ್ಯೇಯೋದ್ದೇಶಗಳಲ್ಲೊಂದಾದ ಲಲಿತಕಲೆ ಸಂಚಾಲಕತ್ವದಲ್ಲಿ 2013 ರಲ್ಲಿ ಅಷ್ಟಾವಧಾನ ಕಾರ್ಯಕ್ರಮ, 2014 ರಲ್ಲಿ ಕಾವ್ಯ-ಗಾನ-ಯಾನ ಎಂಬ ವಿನೂತನ ಕಾರ್ಯಕ್ರಮ ಮತ್ತು 2015 ರಲ್ಲಿ ಯಕ್ಷಗಾನವನ್ನು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಅಭೂತಪೂರ್ವವಾಗಿ ಆಯೋಜಿಸಿತ್ತು. ಕಳೆದ ವರ್ಷ ‘ಬಾಳಿಲ’ ಪ್ರಶಸ್ತಿಯನ್ನು ಖ್ಯಾತ ಸಾಹಿತಿ ವಿ.ಬಿ.ಹೊಸಮನೆ ಇವರಿಗೆ ಪ್ರದಾನ ಮಾಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.