ಬೆಳ್ತಂಗಡಿ : ನೆರಿಯ ಗ್ರಾಮದ ಕಾಟಾಜೆ ಪರಿಸರದಲ್ಲಿ ವಾಸಿಸುತ್ತಿರುವ 22 ಕುಟುಂಬಗಳಿಗೆ ಅವರಜಮೀನಿಗೆ ಹಕ್ಕು ಪತ್ರ ನೀಡಲುಅಗತ್ಯಕ್ರಮ ಕೈಗೊಳ್ಳುವಂತೆ ಹಾಗೂ ಭೂಮಾಲಕರಿಂದ ದೌರ್ಜನ್ಯಕ್ಕೆ ಒಳಗಾದ ಸುಂದರ ಮಲೆಕುಡಿಯ ಅವರಿಗೆ ಅಂಗವಿಕಲ ವೇತನ ಒದಗಿಸಲುಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎ.ಬಿಇಬ್ರಾಹಿಂ ಅವರು ಬೆಳ್ತಂಗಡಿ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಬೆಳ್ತಂಗಡಿಯಲ್ಲಿ ಗುರುವಾರ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭ ಸುಂದರ ಮಲೆಕುಡಿಯ ಅವರು ತಮ್ಮ ಜಮೀನಿಗೆ ಹಕ್ಕು ಪತ್ರ ನೀಡುವಂತೆ ಮನವಿ ಸಲ್ಲಿಸಿದಾಗ ಕಡತಗಳನ್ನು ತರಿಸಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು ಅಕ್ರಮ ಸಕ್ರಮ ಕಡತಗಳನ್ನು ಕೂಡಲೆ ಸಮಿತಿಯ ಮುಂದೆ ಇಡುವಂತೆ ಸೂಚಿಸಿದರು.ಈ ಜಮೀನು ಪೊರಂಬೋಕು ಎಂದು ಪಹಣಿ ಪತ್ರದಲ್ಲಿ ನಮೂದಾಗಿರುವ ಬಗ್ಗೆ ಕಂದಾಯ ಅಧಿಕಾರಿಗಳು ತಿಳಿಸಿದಾಗ ಜಂಟಿ ಸರ್ವೆ ನಡೆಸಿದಾಗ ಇದು ಅರಣ್ಯ ಇಲಾಖೆಯ ಜಮೀನಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಸುಂದರ ಮಲೆಕುಡಿಯ ಮತ್ತು ಇತರರು ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಕಡತಗಳನ್ನು ಕೂಡಲೆ ಸಮಿತಿಯ ಮುಂದೆ ಇಡುವಂತೆ ಸೂಚನೆ ನೀಡಲಾಯಿತು. ತನ್ನ ಎರಡೂ ಕೈಗಳನ್ನು ಕಳೆದು ಕೊಂಡಿರುವ ಸುಂದರ ಮಲೆಕುಡಿಯ ಅವರು ದುಡಿದು ಬದುಕುವುದು ಕಷ್ಟವಾಗಿದ್ದು ಅವರಿಗೆ ಅಂಗವಿಕಲ ವೇತನ ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ನಿವೃತ್ತ ಸೈನಿಕ ಚಂದಪ್ಪಅವರಿಗೆ ಮಂಜೂರಾಗಿರುವ ಜಮೀನು ಇನ್ನೂ ಅವರಿಗೆ ಹಸ್ತಾಂತರ ಮಾಡಲು ಸಾಧ್ಯವಾಗದಿರುವ ಬಗ್ಗೆ ಜಿಲ್ಲಾಧಿಕಾರಿಯವರು ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಳೆದ ಹಲವು ವರ್ಷಗಳಿಂದ ಅವರು ಅಲೆಯುತ್ತಿದ್ದಾರೆ ನ್ಯಾಯಾಲಯದ ಆದೇಶವೂ ಅವರ ಪರವಾಗಿದೆ ಎರಡು ತಿಂಗಳ ಹಿಂದೆ ಈ ಬಗ್ಗೆ ಸೂಚನೆ ನೀಡಿದ್ದರೂ ಇನ್ನೂ ಯಾಕೆ ವಿಳಂಬ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು ಅದಕ್ಕೆ ತಹಶೀಲ್ದಾರ್ ಅವರು ನ್ಯಾಯಾಲಾಯದ ತಡೆಯಾಜ್ಞೆ ಇದೆ ಎಂದಾಗ ಯಾವುದೋ ಆದೇಶಗಳನ್ನು ಹಿಡಿದು ದಿಕ್ಕು ತಪ್ಪಿಸುವುದು ಬೇಡ ಈಗ ಹೈಕೋರ್ಟ್ ಆದೇಶದಂತೆ ಅವರಿಗೆ ಮಂಜೂರಾಗಿರುವ ಜಮೀನನ್ನು ಅವರಿಗೆ ಹಸ್ತಾಂತರಿಸಿ ಎಂದು ಸೂಚಿಸಿದರು.
ಕುವೆಟ್ಟುಗ್ರಾಮದ ಪಣಕಜೆ ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಗುಡಿಸಲುಗಳನ್ನು ಕಟ್ಟಿ ಕುಳಿತವರು ತಮ್ಮನ್ನು ಒಕ್ಕಲೆಬ್ಬಿಸಲು ಕಂದಾಯ ಇಲಾಖೆ ಮುಂದಾಗುತ್ತಿದೆ. ಹಲವಾರು ಎಕ್ರೆ ಸರಕಾರಿ ಜಮೀನು ಅಕ್ರಮವಾಗಿದ್ದರೂ ಅದನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಮಹಿಳೆಯರು ಸೇರಿದಂತೆ ಆಗಮಿಸಿದ್ದ ಜನರು ಜಿಲ್ಲಾಧಿಕಾರಿಯವರಲ್ಲಿ ದೂರು ನೀಡಿದ್ದರು. ಈ ಬಗ್ಗೆ ತಹಸೀಲ್ದಾರರಲ್ಲಿ ಪ್ರಶ್ನಿಸಿದ ಅವರು ತೆರವುಗೊಳಿಸುವುದಾದರೆ ಎಲ್ಲರನ್ನೂತೆರವು ಗೊಳಿಸಿ ಮೊದಲು ದೊಡ್ಡ ಅಕ್ರಮಗಳತ್ತ ಗಮನ ಹರಿಸಿ ಎಂದು ಸೂಚಿಸಿದರು.
ಕನ್ಯಾಡಿ ಗ್ರಾಮದಲ್ಲಿ ಒಂದೇ ಜಮಿನಿಗೆ ಇಬ್ಬರಿಗೆ ಹಕ್ಕುಪತ್ರ ನಿಡಲಾಗಿರುವ ಕುತೂಹಲಕಾರಿ ವಿಚಾರವೊಂದನ್ನು ಜಿಲ್ಲಾಧಿಕಾರಿಯವರ ಮುಂದೆ ತರಲಾಯಿತು. ಕಾಂತಪ್ಪ ನ್ಯಾಕ ಎಂಬವರಿಗೆ ೧೯೭೬ ರಲ್ಲಿ ೩.೧೩ ಎಕ್ರೆ ಜಮೀನು ಮಂಜೂರಾಗಿತ್ತು ಇದೀಗ ತಮಗೆ ಹಕ್ಕು ಪತ್ರ ಹಾಗೂ ಪಹಣಿ ಪತ್ರಗಳಿಲ್ಲ ಇದೀಗ ಇದೇ ಜಮೀನು ಇನ್ನೊಬ್ಬರಿಗೆ ಮಂಜೂರು ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದಾಗ ಕೂಡಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಜಮಿನು ಅಳತೆ ಮಾಡಿ ಮಾಹಿತಿ ನೀಡುವಂತೆ ಅವರು ಸೂಚಿಸಿದರು.
ಚಿಬಿದ್ರೆಚರ್ಚ್ಗೆ ಸ್ಮಶಾನ ಮಂಜೂರು ಮಾಡುವ ಬಗ್ಗೆ ಮನವಿ ಸಲ್ಲಿಸಲಾಯಿತು. 2014 ರಲ್ಲಿ ಜಮೀನು ಮಂಜೂರಾಗಿದೆ ಹಕ್ಕು ಪತ್ರವೂ ಸಿಕ್ಕಿದೆ ಆದರೆ ಈಗ ಕಚೇರಿಯಲ್ಲಿ ಕಡತವೇ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಯಿತು. ಸಾರ್ವಜನಿಕರು ಇನ್ನೂ ಹಲವಾರು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಮನವಿ ಸಲ್ಲಿಸಲಾಯಿತು. ಸರ್ವೆ ಇಲಾಖೆಯ ಬಗ್ಗೆ ಎಂದಿನಂತೆ ಹೆಚ್ಚಿನ ದೂರುಗಳು ಈ ಬಾರಿಯೂ ಕೇಳಿ ಬಂದಿತ್ತು. ತಹಸೀಲ್ದಾರ್ ಪ್ರಸನ್ನಮೂರ್ತಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.