News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದ ಪ್ರಾತಃಸ್ಮರಣೀಯರ ಮಾನ ಹರಾಜು ಹಾಕುತ್ತಿರುವ ವಿದೇಶಿ ಸಾಂಸ್ಕೃತಿಕ ಭಯೋತ್ಪಾದಕರು!

ಭಾರತದ ಆಧ್ಯಾತ್ಮಿಕತೆ, ಇಲ್ಲಿನ ಮಹಾನ್ ಪುರುಷರ ವಿರುದ್ಧ ಹೀನಾಮಾನವಾಗಿ ತೆಗಳುವುದು, ಆ ಚೇತನಗಳ ನೆನಪಿಗೆ ಮಸಿ ಬಳಿಯುವುದೆಂದರೆ ಕೆಲವು ವಿದೇಶಿ ಲೇಖಕರಿಗೆ ಅದೇನೋ ಈಗಲೂ ವಿಕೃತ ಸಂತೋಷ. ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಮಾಹಿತಿಗಳನ್ನು ತುರುಕಿ ನಮ್ಮ ದೇಶದ ಪ್ರಾತಃಸ್ಮರಣೀಯರ ವ್ಯಕ್ತಿತ್ವಕ್ಕೆ ಕುಂದು ತರುವ ಪ್ರಯತ್ನಗಳನ್ನು ಈ ವಿಘ್ನಸಂತೋಷಿಗಳು ಮಾಡುತ್ತಲೇ ಇರುತ್ತಾರೆ. ಇಂಥವರಲ್ಲಿ ವೆಂಡಿ ಡೊನಿಗರ್, ಜಫ್ರಿ ಕೃಪಾಲ್ ಹಾಗೂ ಪೀಟರ್ ಹೀಸ್ ಪ್ರಮುಖರು.

ವೆಂಡಿ ಡೊನಿಗರ್ ತನ್ನ The Hindus : An Alternative History ಎಂಬ ಕೃತಿಯಲ್ಲಿ ಹಿಂದು ಶ್ರದ್ಧಾ ಬಿಂದುಗಳ ಮೇಲೆ ಇನ್ನಿಲ್ಲದಂತೆ ಘಾತವೆಸಗಿದ್ದಾಳೆ. ಆಕೆಗೆ ಹೇಗಾದರೂ ಮಾಡಿ ಹಿಂದು ನಂಬಿಕೆಗಳನ್ನು ಕಲುಷಿತಗೊಳಿಸಿ ಹಿಂದು ಸಮುದಾಯದಲ್ಲಿ ಸಂಶಯದ, ಅರಾಜಕತೆಯ ಬೀಜ ಬಿತ್ತುವುದೇ ತನ್ನ ಜೀವಿತದ ಉದ್ದೇಶವೆನಿಸಿದೆ.ಆಕೆಯ ಸಾಲಿಗೆ ಈಗ ಜೆಫ್ರಿ ಕೃಪಾಲ್ ಹಾಗೂ ಪೀಟರ್ ಹೀಸ್ ಕೂಡ ಸೇರ್ಪಡೆಯಾಗಿದ್ದಾರೆ.

ನಮ್ಮ ಪ್ರಧಾನಿ ನರೇಂದ್ರ ಮೋದಿ ತಮ್ಮ ಮೊತ್ತಮೊದಲ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಮಹರ್ಷಿ ಅರವಿಂದ ಅವರನ್ನು ಸ್ಮರಿಸಿ, ದೇಶಕ್ಕೆ ಅವರ ಕೊಡುಗೆ ಅಪಾರವೆಂದು ಕೊಂಡಾಡಿದ್ದರು. ಆದರೆ ಜೆಫ್ರಿ ಕೃಪಾಲ್ ತನ್ನ Kali’s Child   ಎಂಬ ಕೃತಿಯಲ್ಲಿ ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರನ್ನು ಅತೀ ತುಚ್ಛವಾಗಿ ನಿಂದಿಸಿದ್ದಾರೆ. ಅವರಿಬ್ಬರೂ ಸಲಿಂಗಕಾಮಿಗಳೆಂದು ಹೀನಾಯವಾಗಿ ಚಿತ್ರಿಸಿದ್ದಾರೆ. ಇನ್ನೊಬ್ಬ ವಿಕೃತ ಲೇಖಕ ಪೀಟರ್ ಹೀಸ್ ತನ್ನ Lives of Sri Aurovindo ಎಂಬ ಕೃತಿಯಲ್ಲಿ ಮಹರ್ಷಿ ಅರವಿಂದರನ್ನು ಆತ ಬಣ್ಣಿಸಿರುವುದು “An individual of loose moral character and a sexually frustrated poet suffering from schizophrenia’  ಎಂಬುದಾಗಿ! ಹೀಗೆ ಈ ಮೂವರು ಲೇಖಕರೂ ತಮ್ಮೊಳಗೆ ಒಂದು ರಹಸ್ಯ ಒಪ್ಪಂದ ಮಾಡಿಕೊಂಡು ಹಿಂದು ಶ್ರದ್ಧಾ ಬಿಂದುಗಳ ಮೇಲೆ ಸಾಂಸ್ಕೃತಿಕ ಆಕ್ರಮಣ ನಡೆಸಲು ಹುನ್ನಾರ ನಡೆಸಿದ್ದಾರೆಂಬುದು ಅವರ ಈ ವಿಕೃತ ಕೃತಿಗಳನ್ನು ಓದಿದಾಗ ವೇದ್ಯವಾಗುತ್ತದೆ.

Nera-arti (1)

ವೆಂಡಿ ಡೊನಿಗರ್, ಆಕೆಯೇ ಹೇಳಿಕೊಂಡಂತೆ ತಾನೊಬ್ಬ ಇತಿಹಾಸಕಾರಳಲ್ಲ . ಆದರೂ ಆಕೆ ಹಿಂದುಗಳ ಕುರಿತು ಪರ್ಯಾಯ ಇತಿಹಾಸ ರಚಿಸುವ ಸಾಹಸಕ್ಕೆ ಕೈ ಇಕ್ಕಿರುವುದು ಸೊಜಿಗ. ಪುಸ್ತಕದುದ್ದಕ್ಕೂ ಹಿಂದುಗಳಿಗೆ ಯಾವುದೇ ಪ್ರಾಚೀನ ಸಂಸ್ಕೃತಿ, ನಾಗರಿಕತೆ ಇರಲಿಲ್ಲ, ಲೈಂಗಿಕವಾಗಿ ಅವರೆಲ್ಲ ಅತೀವ ಆಸ್ತಕರು. ಕೋತಿಯ ಸ್ವಭಾವವನ್ನು ಮೈಗೂಡಿಸಿಕೊಂಡವರು. ಮಾನವೀಯತೆಯ ಗಂಧಗಾಳಿಯೇ ಅವರಲ್ಲಿಲ್ಲ… ಇತ್ಯಾದಿ ಬಾಯಿಗೆ ಬಂದಂತೆ ಯಾವುದೇ ಆಧಾರಗಳಿಲ್ಲದೆ ಈಕೆ ವರ್ಣಿಸಿದ್ದಾಳೆ. ಜೆಫ್ರಿ ಕೃಪಾಲ್ ಕೂಡ ಈ ವಿಷಯದಲ್ಲಿ ಡೊನಿಗರ್‌ಗೇನೂ ಕಡಿಮೆ ಇಲ್ಲ ಎಂಬಂತೆ ತನ್ನ ಕೃತಿಯಲ್ಲಿ ವಿವೇಕಾನಂದ ಹಾಗೂ ರಾಮಕೃಷ್ಣ ಪರಮಹಂಸರನ್ನು ಹೀನಾಯವಾಗಿ ಜರೆದಿದ್ದಾನೆ. ಅಸಲಿಗೆ ಈತನಿಗೆ ಬಂಗಾಲಿ ಭಾಷೆಯ, ಅಲ್ಲಿನ ಸಂಸ್ಕೃತಿಯ ಗಂಧಗಾಳಿ ಕೂಡ ಇಲ್ಲ. ರಾಮಕೃಷ್ಣ ಪರಮಹಂಸರನ್ನು ಒಬ್ಬ ಪ್ರಣಯದುನ್ಮಾದದಲ್ಲಿರುವ ತಾಂತ್ರಿಕ ವ್ಯಕ್ತಿ, ವಿವೇಕಾನಂದರೆಂದರೆ ಪರಮಹಂಸರ ದೈಹಿಕ ಬಯಕೆಗಳನ್ನು ಪೂರೈಸುತ್ತಿದ್ದ ಒಬ್ಬ ಯುವಕ ಎಂದೆಲ್ಲ ಬರೆದಿದ್ದಾನೆ.

ಪೀಟರ್ ಹೀಸ್ ನೆಟ್ಟಗೆ ಕಾಲೇಜು ಮೆಟ್ಟಿಲನ್ನೂ ಹತ್ತಿಲ್ಲ. ಶಾಲೆಯಿಂದ ಹೊರದೂಡಲ್ಪಟ್ಟ , ಯಾವುದೇ ಅಧಿಕೃತ ಶೈಕ್ಷಣಿಕ ಅಹರ್ತೆಯನ್ನೇ ಹೊಂದಿರದ ಒಬ್ಬ ಕ್ರಿಮಿನಲ್. ಟ್ಯಾಕ್ಸಿ ಡ್ರೈವಿಂಗ್ ಪರೀಕ್ಷೆಯಲ್ಲೂ ಅನುತ್ತೀರ್ಣನಾದ ವ್ಯಕ್ತಿ ತಾನೆಂದು ಆತನೇ ಹೇಳಿಕೊಂಡಿದ್ದಾನೆ. ಹೀಗಿದ್ದರೂ ಆತ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತದ ಆಧ್ಯಾತ್ಮಿಕತೆಗೆ ಹೊಸ ತಿರುವು ನೀಡಿದ ಮಹಾನ್ ವ್ಯಕ್ತಿ ಶ್ರೀ ಅರವಿಂದರ ಬದುಕು ಹಾಗೂ ಸಾಧನೆಗಳಿಗೆ ಕಳಂಕ ತರುವ ಹುನ್ನಾರವನ್ನು ತನ್ನ ಕೃತಿಯಲ್ಲಿ ನಡೆಸಿದ್ದಾನೆ. ವಿಷಾದದ ಸಂಗತಿಯೆಂದರೆ, ಮಹರ್ಷಿ ಅರವಿಂದರನ್ನು ಹೀನಾಮಾನವಾಗಿ ತೆಗಳಿರುವ ಪೀಟರ್ ಹೀಸ್ ಎಂಬ ದುಷ್ಟ ವ್ಯಕ್ತಿಗೆ ಪಾಂಡಿಚೆರಿಯ ಶ್ರೀ ಅರವಿಂದೋ ಆಶ್ರಮದ ಟ್ರಸ್ಟಿಗಳೇ ಬೆಂಗಾವಲಾಗಿ ನಿಂತಿದ್ದಾರೆ! ಆತನನ್ನು ಶ್ರೀ ಅರವಿಂದೋ ಅಶ್ರಮ ಪತ್ರಾಗಾರದ ಒಬ್ಬ ಸ್ಥಾಪಕನೆಂದು ಈ ಟ್ರಸ್ಟಿಗಳು ಹೆಸರಿಸಿರುವುದು ಇನ್ನಷ್ಟು ಆಘಾತಕಾರಿ ಸಂಗತಿ.

ಪೀಟರ್ ಹೀಸ್‌ನನ್ನು ಹೀಗೆ ಪ್ರತಾಗಾರಕ್ಕೆ ಒಬ್ಬ ಸ್ಥಾಪಕನೆಂದು ಟ್ರಸ್ಟಿಗಳು ಘೋಷಿಸಿದ ಕೂಡಲೇ ಆಶ್ರಮದ ಭಕ್ತರೆಲ್ಲ ತಿರುಗಿ ಬಿದ್ದರು. ದೊಡ್ಡ ಗಲಾಟೆಯೇ ನಡೆಯಿತು. ದೇಶಾದ್ಯಂತ ಈ ಕಳವಳಕಾರಿ ವಿದ್ಯಮಾನದ ವಿರುದ್ಧ ಆಶ್ರಮದ ಭಕ್ತರು ಪ್ರತಿಭಟಿಸಿದರು. ಒರಿಸ್ಸಾ ಸರ್ಕಾರವಂತೂ ತನ್ನ ಗೆಜೆಟ್ ಅಧಿಸೂಚನೆಯಲ್ಲಿ, ಪೀಟರ್ ಹೀಸ್‌ನ ಉದ್ದೇಶ ದೇಶದಲ್ಲಿ ಕೋಮುಭಾವನೆಯನ್ನು ಉದ್ರೇಕಿಸುವುದೇ ಆಗಿದೆ ಎಂದು ಘೋಷಿಸಿತು. ಇಷ್ಟೆಲ್ಲ ನಡೆದ ಬಳಿಕವೂ ಅರವಿಂದ ಆಶ್ರಮದ ಟ್ರಸ್ಟಿಗಳು ಪೀಟರ್ ಹೀಸ್ ಗೆ ಆರ್ಥಿಕ ನೆರವು ನೀಡಿದ್ದಲ್ಲದೆ ಆತನಿಗೆ ಆಶ್ರಮದಲ್ಲೇ ತಂಗಲು ಸೌಲಭ್ಯವನ್ನೂ ಕರುಣಿಸಿದರು. ಕಚ್ಚುವ ಹಾವಿಗೆ ಹಾಲೆರೆಯುವುದೆಂದರೆ ಹೀಗೆ ಅಲ್ಲವೇ! ಟ್ರಸ್ಟಿಗಳ ಕಿತಾಪತಿ ಅಲ್ಲಿಗೇ ಮುಗಿಯಲಿಲ್ಲ. ಪೀಟರ್ ಹೀಸ್‌ನನ್ನು ಶ್ರೀ ಅರವಿಂದ ಸಮಗ್ರ ಕೃತಿಗಳ ಸಂಕಲನಕ್ಕೆ ಮುಖ್ಯ ಸಂಪಾದಕನೆಂದು ನೇಮಿಸಿದರು. ಭಕ್ತರ ಪ್ರತಿಭಟನೆಗೆ ಕವಡೆಯ ಕಿಮ್ಮತ್ತೂ ಇರಲಿಲ್ಲ.

ಇದರಿಂದಾಗಿ ಪೀಟರ್ ಹೀಸ್ ಹಾಗೂ ಕೆಲವು ಅನರ್ಹ ವಿದೇಶಿ ವ್ಯಕ್ತಿಗಳಿಗೆ ಅರವಿಂದರ ಬರಹಗಳು, ಅಮೂಲ್ಯ ದಾಖಲೆಗಳು ಮತ್ತಿತ್ತರ ಸಂಗತಿಗಳನ್ನೊಳಗೊಂಡ ಪತ್ರಾಗಾರದ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಸಾಧ್ಯವಾಯಿತು. ಆದರೆ ಆಶ್ರಮದ ಸ್ಥಳೀಯ ಗಣ್ಯ ಭಕ್ತರಲ್ಲಿ ಯಾರಿಗೂ ಇಂತಹ ಅವಕಾಶ ನೀಡಲು ಟ್ರಸ್ಟಿಗಳು ಸಮ್ಮತಿಸಲಿಲ್ಲ. ಹಾಗೆ ನೋಡಿದರೆ ಸಾರ್ವಜನಿಕ ಸಂಸೆಗಳಲ್ಲಿರುವ ಅಮೂಲ್ಯ ದಾಖಲೆಗಳು ಎಲ್ಲರ ಸ್ವತ್ತು. ಅದನ್ನು ನೋಡುವ, ಪರಾಮರ್ಶಿಸುವ ಅಧಿಕಾರ ಸಾರ್ವಜನಿಕರಿಗೆ ಇದ್ದೇ ಇದೆ. ಆದರೆ ಅರವಿಂದೋ ಆಶ್ರಮದ ಅಮೂಲ್ಯ ದಾಖಲೆಗಳನ್ನು ನೋಡುವ ಅಧಿಕಾರವನ್ನು ಸಾರ್ವಜನಿಕರಿಗೆ ನಿರಾಕರಿಸಲಾಯಿತು. ಕೆಲವೇ ವಿದೇಶಿ ವ್ಯಕ್ತಿಗಳಿಗೆ ಮಾತ್ರ ಅಂತಹ ಪರಮಾಧಿಕಾರ ನೀಡಲಾಯಿತು. ಟ್ರಸ್ಟಿಗಳ ಇಂತಹ ಷಡ್ಯಂತ್ರ ಪೀಟರ್ ಹೀಸ್ ಪಾಲಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಯಿತು. ಮಹರ್ಷಿ ಅರವಿಂದರ ಕುರಿತು ಇನ್ನಷ್ಟು ತೇಜೋವಧೆ ಮಾಡಲು ಅವನಿಗೆ ಸುವರ್ಣ ಅವಕಾಶ ಲಭಿಸಿದಂತಾಯಿತು. ಆದರೆ ಪೀಟರ್ ಹೀಸ್ ತನ್ನ ಕೃತಿಯಲ್ಲಿ ಗೀಚಿದ್ದೆಲ್ಲವೂ ಹಸಿ ಹಸಿ ಸುಳ್ಳಿನ ಕಂತೆ. ಆತ ಹೆಣೆದ ಈ ಸುಳ್ಳಿನ ಕಂತೆಗೆ ಆಶ್ರಮದ ಪತ್ರಾಗಾರದಲ್ಲಿ ಯಾವ ದಾಖಲೆಯೂ ಇಲ್ಲ.

ಪಾಂಡಿಚೆರಿಯಲ್ಲಿರುವ ಶ್ರೀ ಅರವಿಂದೋ ಆಶ್ರಮ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿರುವ ಆಕರ್ಷಕ ಆಧ್ಯಾತ್ಮಿಕ ಕೇಂದ್ರ. ಪ್ರವಾಸಿಗರ ಕಾರಣದಿಂದಾಗಿ ಆಶ್ರಮಕ್ಕೆ ಸಾಕಷ್ಟು ಆದಾಯವೂ ಹರಿದು ಬರುತ್ತಿದೆ. ಸಾಕಷ್ಟು ಮಂದಿಗೆ ಅಲ್ಲಿ ಉದ್ಯೋಗವೂ ದೊರೆತಿದೆ. ಆದರೆ ಪ್ರಸಿದ್ಧಿಯ ಪ್ರಭಾವಳಿಯಲ್ಲಿ ಇರಬೇಕಿದ್ದ ಆಶ್ರಮಕ್ಕೆ ಪೀಟರ್ ಹೀಸ್‌ನಂತಹ ವಿಕೃತ ವ್ಯಕ್ತಿ ಮಸಿ ಬಳಿಯಲು ಹುನ್ನಾರ ನಡೆಸಿರುವುದನ್ನು ಯಾರೂ ವಿರೋಧಿಸದೆ ತಣ್ಣಗೆ ಇರುವುದು ಮಾತ್ರ ಎಂತಹ ವಿಪರ್ಯಾಸ!

ಶ್ರೀ ಅರವಿಂದೋ ಆಶ್ರಮದ ಆಡಳಿತ ನಿರ್ವಹಿಸುವ ಟ್ರಸ್ಟ್‌ಗೆ ಐವರು ಟ್ರಸ್ಟಿಗಳಿದ್ದಾರೆ. ಆದರೆ ಇವರೆಲ್ಲರ ಮೇಲೂ ಒಂದಲ್ಲ ಒಂದು ಆರೋಪಗಳಿವೆ. ಆಶ್ರಮದ ನಿವಾಸಿಗಳ ಮೇಲೆ ಬಲಾತ್ಕಾರ, ಲೈಂಗಿಕ ಕಿರುಕುಳ, ಅವರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ ಹೀನ ಪ್ರಯತ್ನ… ಇತ್ಯಾದಿ ಆರೋಪಗಳು ಕೇಳಿಬರುತ್ತಿವೆ. ಹೀಗಿದ್ದರೂ ಈ ಟ್ರಸ್ಟಿಗಳೆಲ್ಲರೂ ಶಾಶ್ವತ ಟ್ರಸ್ಟಿಗಳಾಗಿ ಮುಂದುವರೆದಿದ್ದಾರೆ. ಏಕೆಂದರೆ ಅಲ್ಲಿ ಕಾಲಕಾಲಕ್ಕೆ ಟ್ರಸ್ಟಿಗಳ ನೇಮಕಕ್ಕೆ ಯಾವುದೇ ನಿಗದಿತ ಚುನಾವಣೆಗಳೇ ನಡೆಯುವುದಿಲ್ಲ. ಟ್ರಸ್ಟಿಗಳು ನಡೆದದ್ದೇ ದಾರಿ. ಅವರು ಹೇಳಿದ್ದೇ ಆದೇಶ. ಹೇಳುವವರು, ಕೇಳುವವರು ಅವರಿಗೆ ಯಾರೂ ಇಲ್ಲದಂತಾಗಿದೆ. ಕಳೆದ ಒಂದು ದಶಕದಿಂದ ಈ ಟ್ರಸ್ಟಿಗಳ ವಿರುದ್ಧ ಮಾನವ ಹಕ್ಕುಗಳ ಉಲ್ಲಘಂನೆ, ಮಹಿಳೆ ಹಾಗೂ ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಆರ್ಥಿಕ ಅವ್ಯವಹಾರ, ಭೂ ಕಬಳಿಕೆ, ತೆರಿಗೆ ವಂಚನೆ, ಆಶ್ರಮದ ಬೆಲೆಬಾಳುವ ಸ್ವತ್ತುಗಳ ಕಾನೂನುಬಾಹಿರ ಮಾರಾಟ… ಹೀಗೆ ಹಲವು ಆರೋಪಗಳು ಕೇಳಿಬಂದಿವೆ. ಇಂಗ್ಲಿಷ್‌ನ ದಿ ವೀಕ್, ತೆಹಲ್ಕಾ, ಔಟ್‌ಲುಕ್ ಸಾಪ್ತ್ತಾಹಿಕ ಪತ್ರಿಕೆಗಳು ಆಶ್ರಮದ ಈ ಎಲ್ಲ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲಿ ವಿಸ್ತೃತ ವರದಿ ಪ್ರಕಟಿಸಿವೆ. 2008 ರಲ್ಲಿ ಸಿಎನ್‌ಎನ್- ಐಬಿಎನ್ ವಾಹಿನಿ ಕುಟುಕು ಕಾರ್ಯಾಚರಣೆ ನಡೆಸಿ ಆಶ್ರಮದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ, ಮಾನವ ಹಕ್ಕುಗಳ ಉಲ್ಲಘಂನೆ ಹಾಗೂ ಟ್ರಸ್ಟಿಗಳ ಭೂ ಕಬಳಿಕೆ ಪ್ರಕರಣಗಳನ್ನು ಬಯಲಿಗೆಳೆದಿತ್ತು. ಈಗಿನ ಮ್ಯಾನೇಜಿಂಗ್ ಟ್ರಸ್ಟಿ ಭೂ ಕಬಳಿಕೆ ಹಾಗೂ ಪೋರ್ಜರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ಪಡೆದು ಸದ್ಯ ಹೊರ ಬಂದಿದ್ದಾರೆ. ಆದರೇನು, ಈಗಲೂ ಅವರ ನಿಯಂತ್ರಣದಲ್ಲೇ ಆಶ್ರಮದ ಎಲ್ಲ ವ್ಯವಹಾರಗಳು ನಡೆಯುತ್ತಿವೆ.

ಹೀಗಿರುವಾಗ ಪೀಟರ್ ಹೀಸ್‌ನಂತಹ ವಿಕೃತಮತಿಗೆ ಅರವಿಂದ ಮಹರ್ಷಿಯ ಬದುಕಿಗೆ ಮಸಿ ಬಳಿಯುವ ಅನಿಷ್ಟ ಕೃತಿ ರಚಿಸಲು ಧೈರ್ಯ ಬರದೆ ಇದ್ದಿತೇ? ಪೀಟರ್ ಹೀಸ್‌ಗೆ ಕುಮ್ಮಕ್ಕು ಸಿಗುವುದೇ ಇಂತಹ ಸ್ವಾರ್ಥಿ ಟ್ರಸ್ಟಿಗಳಿಂದ. ಅರವಿಂದ ಆಶ್ರಮದಲ್ಲೇ ಆ ಆಶ್ರಮವನ್ನು ಸರ್ವನಾಶ ಮಾಡುವ ಶತ್ರುಗಳಿದ್ದಾರೆ. ಆಶ್ರಮದೊಳಗಿನ ಈ ಶತ್ರುಗಳನ್ನು ಸದೆಬಡಿಯುವವರಾರು? ಹೊರಗಿನ ಬುದ್ಧಿ ಜೀವಿಗಳು, ವಿರೋಧಿಗಳಿಗಿಂತ ಒಳಗೇ ಇರುವ ಈ ಸಾಂಸ್ಕೃತಿಕ ಭಯೋತ್ಪಾದಕರನ್ನು ದಮನಿಸುವವರು ಯಾರು?

ಸರ್ಕಾರ ಹಾಗೂ ಜನತೆ ಇವನ್ನೆಲ್ಲ ನೋಡಿ ಸುಮ್ಮನೆ ಕುಳಿತು ಬಿಟ್ಟರೆ ಅನಾಹುತ ತಪ್ಪಿದ್ದಲ್ಲ. ನಮ್ಮ ಶ್ರದ್ಧಾಕೇಂದ್ರಗಳಿಗೆ ನಾನಾ ಬಗೆಯ ವೇಷ ತೊಟ್ಟು, ಅಲ್ಲಿ ಆಶ್ರಯ ಪಡೆದು ನಮ್ಮ ವಿರುದ್ಧವೇ ಕತ್ತಿ ಝಳಪಿಸುವ ಈ ಸಾಂಸ್ಕೃತಿಕ ಭಯೋತ್ಪಾದಕರ ವಿರುದ್ಧ ಸಮರ ಸಾರಲೇ ಬೇಕು. ಪ್ರಾತಃಸ್ಮರಣೀಯರಾದ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಅರವಿಂದ ಮಹರ್ಷಿ ಮೊದಲಾದವರ ತೇಜೋವಧೆ ನಡೆಸುವ ವಿಕೃತ ಲೇಖಕ – ಲೇಖಕಿಯರಿಗೆ ತಕ್ಕ ಪಾಠ ಕಲಿಸಲೇಬೇಕು. ಹಾಗೆ ಮಾಡದಿದ್ದರೆ ಇದೊಂದು ಹೆದರಿ ಹಿಂದೆ ಸರಿಯುವ ರಣಹೇಡಿ ಸಮಾಜವೆನಿಸಿಕೊಳ್ಳುತ್ತದೆ. ಆ ಸ್ಥಿತಿಯನ್ನು ನಾವಾಗಿಯೇ ತಂದುಕೊಳ್ಳುವುದು ಎಷ್ಟು ಸೂಕ್ತ?

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top