ಬೆಳ್ತಂಗಡಿ : ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಹಾಗೂ ತತ್ಕರ ಕಮಲ ಸಂಜಾತ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಏ. 20 ರಿಂದ 24ರ ವರೆಗೆ ಬೆಳ್ತಂಗಡಿ ತಾಲೂಕಿಗೆ ಆಗಮಿಸಿ ಮೊಕ್ಕಂ ಹೂಡಲಿದ್ದು, ವಿವಿಧ ಕಡೆಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಕ್ತರನ್ನು ಅನುಗ್ರಹಿಸಲಿದ್ದಾರೆ ಎಂದು ಶಾಸಕ ಕೆ. ವಸಂತ ಬಂಗೇರ ತಿಳಿಸಿದರು.
ಅವರು ಸೋಮವಾರ ಬೆಳ್ತಂಗಡಿ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶ್ರೀಗಳ ಕಾರ್ಯಕ್ರಮ ಬಗ್ಗೆ ವಿವರಿಸಿದರು. ಉಭಯ ಶ್ರೀಗಳು ಏ. 20 ರಂದು ಸಂಜೆ ಬೆಳ್ತಂಗಡಿಗೆ ಆಗಮಿಸುವರು. ಶ್ರೀಗಳನ್ನು ಸಂಜೆ ಜೈನ್ಪೇಟೆ ಶ್ರೀ ರತ್ನತತ್ರಯ ತೀರ್ಥಕ್ಷೇತ್ರದ ಬಳಿಯಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆ ಮೂಲಕ ಹಳೆಕೋಟೆಯ ನನ್ನ ಮನೆಗೆ ಆಗಮಿಸಲಿದ್ದು, ಪಾದಪೂಜೆ ನಡೆಯಲಿದೆ. ಬಳಿಕ ಮನೆಯ ಪಕ್ಕದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಎ. 21 ರಂದು ಅಪರಾಹ್ನ 3 ಗಂಟೆಗೆ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದ ಶಿಲಾನ್ಯಾಸವನ್ನು ಶ್ರೀಗಳು ನೆರವೇರಿಸಲಿದ್ದಾರೆ.
ಉಭಯ ಜಗದ್ಗುರುಗಳು ಎ. 21 ರಂದು ಮುಂಡಾಜೆಯ ಗುಂಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾದಲ್ಲಿ, ಎ. 22 ರಂದು ಅರಸಿನಮಕ್ಕಿ ಸಮೀಪದ ದರ್ಭೆತ್ತಡ್ಕ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ, ಶ್ರೀ ಶಂಕರ ವೇದವಿದ್ಯಾ ಗುರುಕುಲದಲ್ಲಿ, ಎ. 23 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೊಕ್ಕಾಂ ಹೂಡಲಿದ್ದಾರೆ. ಉಭಯ ಶ್ರೀಗಳ ಈ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದರು.
ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಇದರ ಅಧ್ಯಕ್ಷ ಪಿ. ಲಕ್ಷ್ಮೀನಾರಾಯಣ ರಾವ್ ಮಾತನಾಡಿ, ಶಾಸಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮದ ಬಳಿಕ ಲಾಯಿಲಾ ಗ್ರಾಮದ ಸುಬ್ರಹ್ಮಣ್ಯ ನಗರದಲ್ಲಿರುವ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ ಇದರ ಶ್ರೀ ಸುಬ್ರಹ್ಮಣ್ಯ ಸಭಾ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಲಾಯಿಲಾ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿವೇಕಾನಂದ ಪ್ರಭು ಮಾತನಾಡಿ ಸಭಾಭವನವನ್ನು ಲೋಕಾರ್ಪಣೆ ಮಾಡಿದ ಬಳಿಕ ಲಾಯಿಲಾದ ವೆಂಕಟರಮಣ ದೇವಳಕ್ಕೆ ಶ್ರೀಗಳು ಆಗಮಿಸಲಿದ್ದಾರೆ. ಚಂದ್ರಮೌಳೀಶ್ವರ ಪೂಜೆ ನಡೆದು ದೇವಳದಲ್ಲಿ ಮೊಕ್ಕಾಂ ಹೂಡಲಿದ್ದಾರೆ. ಎ. 21 ರಂದು ಉಭಯ ಶ್ರೀಗಳಿಂದ ಭಕ್ತರಿಗೆ ಆಶೀರ್ವಚನ, ಫಲ, ಮಂತ್ರಾಕ್ಷತೆ ನಡೆಯಲಿದೆ. ಶ್ರೀದ್ವಯರಿಗೆ ಪಾದಪೂಜೆ, ಭಿಕ್ಷಾವಂದನೆ, ವಸ್ತ್ರಸಮರ್ಪಣೆ ನಡೆಸಲು ಭಕ್ತರಿಗೆ ಅವಕಾಶವಿದೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬಿಲ್ಲವ ಮಹಾಮಂಡಲ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಸ್ಥಾನಿಕ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಶ್ರೀಪತಿ ರಾವ್, ಮಹಾದೇವ ತಾಮನ್ಕರ್, ಶಾಸಕರ ಆಪ್ತ ಕಾರ್ಯದರ್ಶಿ ಪ್ರಶಾಂತ್ ಬಳೆಂಜ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.