ಬೆಳ್ತಂಗಡಿ : ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಸದಸ್ಯರು ಮತ್ತು ಕ್ಷೇತ್ರದ ಸಿಬ್ಬಂದಿಗೆ ಮಾತ್ರ ಪ್ರಸ್ತುತ ಇರುವ ಸಂಪೂರ್ಣ ಸುರಕ್ಷಾ ಯೋಜನೆಯನ್ನು ಮುಂದಿನ ವರ್ಷ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಇದರಿಂದಾಗಿ 3.25 ಲಕ್ಷ ಕುಟುಂಬಗಳ 11.95 ಸದಸ್ಯರಿಗೆ ವಿಮಾ ಸೌಲಭ್ಯ ದೊರಕಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಅವರು ಮಂಗಳವಾರ ಧರ್ಮಸ್ಥಳದ ಡಾ| ಹೆಗ್ಗಡೆಯವರ ನಿವಾಸದಲ್ಲಿ ನಾಲ್ಕು ವಿಮಾ ಕಂಪನಿಗಳಿಗೆ ಮುಂದಿನ ವರ್ಷದ ವಿಮಾ ಸೌಲಭ್ಯ ನೀಡುವುದಕ್ಕಾಗಿ ೪೫.೪೦ ಕೋಟಿ ರೂ. ಪ್ರೀಮಿಯಂ ಹಸ್ತಾಂತರಿಸಿ ಮಾತನಾಡಿದರು.
ಸದಸ್ಯರಾದವರಿಗೆ ರಿಯಾಯಿತಿ ದರದಲ್ಲಿ ನಗದು ರಹಿತ ಚಿಕಿತ್ಸೆ ನೀಡುವುದಕ್ಕಾಗಿ ಈಗಾಗಲೇ ೧೫೦ ಅಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸಂಪೂರ್ಣ ಸುರಕ್ಷಾ ಜಾರಿಗೊಳಿಸಿದ ನಂತರ ಯೋಜನೆಯ ಫಲಾನುಭವಿಗಳಿಗೆ ವಿಮೆಯ ಮಹತ್ವ ತಿಳಿಯಿತು. ಹಿಂದೆ ಅನಾರೋಗ್ಯ ಉಂಟಾದಾಗ ಆಸ್ಪತ್ರೆಯ ಚಿಕಿತ್ಸೆ ಭರಿಸಲಾಗದೆ ದಿನಕಳೆಯುತ್ತಾ ರೋಗ ಉಲ್ಬಣಗೊಂಡ ನಂತರ ಚಿಕಿತ್ಸೆಗೆ ಹೋಗುತ್ತಿದ್ದರು. ಇದರಿಂದ ದುಬಾರಿ ವೆಚ್ಚ ಸಾಲ ಮಾಡಿ ಭರಿಸುವ ಪರಿಸ್ಥಿತಿ ಅವರದಾಗಿತ್ತು. ಆದರೆ ಈಗ ವಿಮೆಯ ಮಹತ್ವ ತಿಳಿದು ರೋಗ ಬರುವ ಮುನ್ನವೇ ಆರೋಗ್ಯ ತಪಾಸಣೆ ಮಾಡುವ ದೈರ್ಯ ಬಂದಿದೆ. ರೋಗದ ಲಕ್ಷಣಗಳು ಕಂಡು ಬಂದಾಗ ಕೂಡಲೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ ಎಂದರು.
ಧ. ಗ್ರಾ. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್ ಹೆಚ್. ಮಂಜುನಾಥ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳ ಆರೋಗ್ಯ ಸಮಸ್ಯೆಯಿಂದಾಗು ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಡಾ| ಹೆಗ್ಗಡೆಯವರು ೨೦೦೪ರಲ್ಲಿ ಆರಂಭಿಸಿದ ಸಂಪೂರ್ಣ ಸುರಕ್ಷಾ ಯೋಜನೆಯಡಿಯಲ್ಲಿ ಕಳೆದ ೧೨ ವರ್ಷಗಳಲ್ಲಿ ೭. ೭೫ಕ್ಷ ಜನರಿಗೆ ೩೩೨ಕೋಟಿ ರೂ. ಮೌಲ್ಯದ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಅಲ್ಲದೆ ಪಲಾನುಭವಿಗಳಿಗೆ ಮರಣ ಸಾಂತ್ವಾನ ಯೋಜನೆಯಂತೆ ೫೦೦೦ ರೂ. ನೀಡಲಾಗುತ್ತಿದ್ದು ಇದರಂತೆ ೩ ಕೋಟಿ. ರೂ. ವ್ಯಯಿಸಲಾಗಿದೆ. ಸಂಪೂರ್ಣ ಸುರಕ್ಷ ಯೋಜನೆ ಫಲಾನುಭವಿಗಳಿಗೆ ತಲುಪಿಸಲು ಸಿಬ್ಬಂದಿ, ಇತರ ವೆಚ್ಚವೆಂಬಂತೆ ಕ್ಷೇತ್ರದ ವತಿಯಿಂದ ಸುಮಾರು ೪ ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ ಎಂದರು.
ಈ ಸಂದರ್ಭ ಹೇಮಾವತಿ ವೀ. ಹೆಗ್ಗಡೆ, ನ್ಯಾಷನಲ್ ಇನ್ಸುರೆನ್ಸ್ ಕಂಪನಿಯ ಪಿ.ವಿ. ಶರಣ್, ಡಾ| ಸುಬ್ಬ ರಾವ್, ಯುನೈಟೆಡ್ ಇಂಡಿಯಾ ಕಂಪನಿಯ ಅಶೋಕ್ ಕುಮಾರ್, ಅಮರ್ಸಿಂಹ, ನ್ಯೂ ಇಂಡಿಯಾ ಇನ್ಸುರೆನ್ಸ್ ಕಂಪನಿಯ ಶೋಭಾ, ಮಿರ್ಜಾ ಕಪೂರ್, ಓರಿಯೆಂಟಲ್ ಇನ್ಸುರೆನ್ಸ್ ಕಂಪನಿಯ ಸುರೇಶ್ ಬಲರಾಮ್, ಸುರಕ್ಷಾ ವಿಭಾಗದ ನಿರ್ದೇಶಕ ಅಬ್ರಾಹಂ, ಹೆಚ್ಆರ್ಡಿ ವಿಭಾಗದ ಚಂದ್ರಶೇಖರ್, ಸುರಕ್ಷಾ ವಿಭಾಗದ ಯೋಜನಾಧಿಕಾರಿಗಳಾದ ಶಿವಪ್ರಸಾದ್, ಪದ್ಮಯ್ಯ, ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.