ಬೆಳ್ತಂಗಡಿ : ತಾಲೂಕಿನಲ್ಲಿ ನೂತನವಾಗಿ ರಚನೆಯಾಗಿರುವ ಐದು ಗ್ರಾಮ ಪಂಚಾಯತುಗಳಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿಯನ್ನು ಸಂಪೂರ್ಣ ಕೈಬಿಡಲಾಗಿದೆ. ಇದರಿಂದ ದಲಿತರಿಗೆ ಹಾಗೂ ಇತರೇ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಸೋಮವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತರ ಕುಂದುಕೊರತೆಗಳ ಪರಿಶೀಲನಾ ಸಭೆಯಲ್ಲಿ ಮುಖಂಡರುಗಳು ಒತ್ತಾಯಿಸಿದರು.
ಸಭೆಯಲ್ಲಿ ದಲಿತ ಮುಖಂಡ ಬಿ. ಕೆ. ವಸಂತ್ ಅವರು, ವಿಷಯ ಪ್ರಸ್ತಾಪಿಸಿದಾಗ ಅದಕ್ಕೆ ಚಂದು ಎಲ್., ಶೇಖರ ಲಾಯಿಲಾ ಹಾಗೂ ಇತರರು ಒಕ್ಕೊರಲಿನಿಂದ ಧ್ವನಿಗೂಡಿಸಿದರು. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರ ಸೂಚನೆಯಂತೆ ಮೀಸಲಾತಿಗೆ ಅವಕಾಶ ಕಲ್ಪಿಸದೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖಂಡರುಗಳು ಇದು ಸಂವಿಧಾನ ಬಾಹಿರ ಕೃತ್ಯವಾಗಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ನಡುವೆ ಸುಲ್ಕೇರಿ ಪಂಚಾಯತಿನಲ್ಲಿ ಮಾತ್ರ ಎರಡು ಹುದ್ದೆಗಳು ದಲಿತರಿಗೆ ಮೀಸಲಿರಿಸಲಾಗಿದೆ. ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು. ಈಗ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯನ್ನು ಕೈಬಿಟ್ಟು ಮೀಸಲಾತಿಗೆ ಅವಕಾಶ ನೀಡಿ. ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಒತಾಯಿಸಲಾಯಿತು.
ನೆರಿಯ ಗ್ರಾಮದ ಕಾಟಾಜೆಯಲ್ಲಿ ಸುಂದರ ಮಲೆಕುಡಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯದ ಸೂಚನೆಯಂತೆ ದಲಿತ ದೌರ್ಜನ್ಯ ಪ್ರಕರಣವನ್ನು ಬಿಟ್ಟು ಚಾರ್ಜಶೀಟ್ ಸಲ್ಲಿಕೆಯಾಗಿದೆ ಎಂದು ಸಭೆಗೆ ತಿಳಿಸಿದಾಗ, ಇದು ಸರಿಯಾದ ಕ್ರಮವಲ್ಲ. ಸರಕಾರ ಕೂಡಲೆ ಮಧ್ಯಪ್ರವೇಶಿಸಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಬೇಕು. ಇದೀಗ ಜಾಮೀನಿನಲ್ಲಿ ಹೊರ ಬಂದಿರುವ ಆರೋಪಿ ಸಾಕ್ಷಿಗಳಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಅಲ್ಲದೆ ಅವರ ವಿರುದ್ದ ಸುಳ್ಳು ಕೇಸುಗಳನ್ನು ದಾಖಲಿಸುತ್ತಿದ್ದಾರೆ. ಪೊಲೀಸರು ಕೂಡಲೇ ಆತನ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ಶೇಖರ ಎಲ್. ಒತ್ತಾಯಿಸಿದರು.
ತಾಲೂಕಿನಲ್ಲಿರುವ ದಲಿತರಿಗೆ ಮೀಸಲಿರಿಸಲಾಗಿರುವ ಡಿ.ಸಿ ಮನ್ನಾ ಜಾಗಗಳನ್ನು ಗುರುತಿಸಿ ಅಕ್ರಮ ತೆರವುಗೊಳಿಸುವಂತೆ ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಸಂಸ ಮುಖಂಡ ಚಂದು ಎಲ್. ಪ್ರಸ್ತಾವಿಸಿದರು. ಇದಕ್ಕೆ ದ್ವನಿಗೂಡಿಸಿದ ಸಂಜೀವ ಆರ್. ಹಾಗೂ ಇತರರು ತಾಲೂಕಿನಲ್ಲಿ ಅಕ್ರಮವಾಗಿರುವ ಡಿಸಿ ಮನ್ನಾ ಜಮೀನಿನ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಈಗ ಮಾಹಿತಿ ಲಭ್ಯವಿಲ್ಲ. ಇದನ್ನು ಒಂದು ವಾರದಲ್ಲಿ ಪರಿಶೀಲಿಸಿ ಮಾಹಿತಿ ನೀಡುವುದಾಗಿ ಹಾಗೂ ಅಕ್ರಮಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರರು ತಿಳಿಸಿದರು.
ತಾಲೂಕಿನಲ್ಲಿ ಅಕ್ರಮ ಮದ್ಯ ಹಾವಳಿ ಇದೆ. ಅದರ ವಿರುದ್ದ ಕ್ರಮ ಕೈಗೊಳ್ಳುವಳ್ಳಿ ಅಬಕಾರಿ ಇಲಾಖೆ ವಿಫಲವಾಗಿದೆ. ಅಕ್ರಮ ಮದ್ಯ ಮಾರಾಟಗಾರರ ವಿರುದ್ದ ಸರಿಯಾಗಿ ಪ್ರಕರಣ ದಾಖಲಿಸದೆ ಆರೋಪಿಗಳ ವಿರುದ್ದ ಸಣ್ಣಪುಟ್ಟ ಪ್ರಕರಣ ದಾಖಲಿಸಿ ಬಿಡಲಾಗುತ್ತದೆ. ಇದು ಸರಿಯಲ್ಲ, ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟವನ್ನು ನಿಲ್ಲಿಸಲು ಕೂಡಲೆ ಕ್ರಮ ಕೈಗೊಳ್ಳುಬೇಕು. ಇಲ್ಲವಾದಲ್ಲಿ ತಾಲೂಕಿನಲ್ಲಿ ದುರಂತಗಳೇ ನಡೆಯುವ ಅಪಾಯವಿದೆ ಎಂದು ತಿಳಿಸಿದಾಗ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗಿನ ನಿವಾಸಿಗಳಿಗೆ ಒಕ್ಕಲೇಳುವಂತೆ ಕಿರುಕುಳ ನೀಡಲಾಗುತ್ತಿರುವ ಬಗ್ಗೆ ಹಾಗೂ ಅಲ್ಲಿನ ಮೂಲಭೂತ ಸೌಲಭ್ಯಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳದಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈಗಾಗಲೆ 37 ಅರಣ್ಯ ಅಕ್ರಮ ಪ್ರಕರಣಗಳನ್ನು ಗುರುತಿಸಲಾಗಿದೆ. ನ್ಯಾಯಾಲಯಗಳ ಸೂಚನೆಯಂತೆ ಮೂರು ಎಕ್ರೆಗಿಂತ ಹೆಚ್ಚಿರುವ ಅಕ್ರಮಣಕಾರರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರನ್ನೂ ಬಲವಂತವಾಗಿ ಒಕ್ಕಲೆಬ್ಬಿಸಲಾಗುತ್ತಿಲ್ಲ ಎಂದು ಇಲಾಖೆಯವರು ತಿಳಿಸಿದರು.
ದಲಿತ ಕಾಲೋನಿಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಾಣುವ ಪ್ರಯತ್ನ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು. ಅಂಬೇಡ್ಕರ್ ಅವರ ೧೨೫ ನೆಯ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಹಶೀಲ್ದಾರ್ ಪ್ರಸನ್ನ ಮೂರ್ತಿ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ರಾವ್, ಬೆಳ್ತಂಗಡಿ ಎಸ್ಸೈ ಸಂದೇಶ್ ಪಿ.ಜಿ., ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಜಿಪಂ ಸದಸ್ಯರುಗಳಾದ ಕೊರಗಪ್ಪ ನಾಯ್ಕ್, ಶೇಖರ ಕುಕ್ಕೇಡಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.