ಬೆಳ್ತಂಗಡಿ : ನಮ್ಮನ್ನು ನಾವು ಪರಾಮರ್ಶೆಗೊಳಪಡಿಸಿದಾಗ ಬುದ್ದಿ ನಿರ್ಮಲವಾಗುತ್ತದೆ ಎಂದು ಕನ್ಯಾಡಿ ಶ್ರೀ ಗುರುದೇವ ಮಠಾಧಿಪತಿ, ನಿತ್ಯಾನಂದ ನಗರ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ನುಡಿದರು. ಬೆಳಾಲು ಗ್ರಾಮದ ಮಾಯಾ ಮಹಾದೇವ ದೇವಸ್ಥಾನದ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮದ 7 ದಿನವಾದ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ತ್ಯಾಗದ ತುತ್ತತುದಿಯಲ್ಲಿ ಭಗವಂತ ನೆಲೆಸಿರುತ್ತಾನೆ. ಅದರ ಪ್ರತೀಕವೇ ದೇವಸ್ಥಾನದ ನಿರ್ಮಾಣ. ಮಾಯಾದಲ್ಲಿ ತ್ಯಾಗದ ಛಾಯೆಯನ್ನು ನಾವು ಕಾಣಬಹುದಾಗಿದೆ. ತಾದಾತ್ಮ್ಯತೆ, ತಲ್ಲೀನತೆ, ಏಕತೆ, ಐಕ್ಯತೆಯ ಕಣ್ಣು ನಮಗೆ ಇದ್ದಲ್ಲಿ ಭಗವಂತ ನಮ್ಮೊಳಗೆ ಐಕ್ಯನಾಗುತ್ತಾನೆ. ಆಧ್ಯಾತ್ಮದಿಂದ ಜ್ಞಾನಲೋಕದಲ್ಲಿ ವಿಹರಿಸಬಹುದಾಗಿದೆ. ಧರ್ಮದ ಪಥದಲ್ಲಿ ನಡೆದಾಗ ನಿರಂತರ ನೆಮ್ಮದಿ, ಪ್ರಗತಿ ಕಾಣಲು ಸಾಧ್ಯ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು, ಜಾತಿ, ರಾಜಕಾರಣ, ವರ್ಗ ಬಿಟ್ಟು ಒಟ್ಟಾಗಿ ಸೇರುವ ಕೇಂದ್ರವೇ ದೇವಸ್ಥಾನ. ಹೀಗಾಗಿ ದೇಗುಲಗಳು ಸಮಾಜ ಕಟ್ಟುವ ಸ್ಥಾನಗಳಾಗಿವೆ. ದೇವರು ಇರುವುದೇ ಸಮಾಜವನ್ನು ಒಗ್ಗೂಡಿಸಲು ಎಂಬುದು ನಮ್ಮೆಲ್ಲರ ನಂಬಿಕೆ. ವಾರದ ಭಜನೆ, ಹರಿಕಥೆ, ಭಾಗವತ, ರಾಮಾಯಣ, ಮಹಾಭಾರತದ ಪ್ರವಚನಗಳು ದೇವಸ್ಥಾನಗಳಲ್ಲಿ ಮತ್ತೆ ಪ್ರಾರಂಭವಾದರೆ ನಮ್ಮಲ್ಲಿ ಸುಂದರವಾದ ಧಾರ್ಮಿಕ ಪ್ರಜ್ಞೆ ನಿರ್ಮಾಣವಾಗಲು ಸಾಧ್ಯ ಎಂದ ಅವರು ದೇವಸ್ಥಾನಗಳನ್ನು ಕಟ್ಟುವ ಮನಸ್ಸು ಆಡಳಿತ ಮಾಡುವವರಲ್ಲಿ ಇದ್ದಲ್ಲಿ ಮತ್ತು ಜನರು ಸಣ್ಣಪುಟ್ಟ ರಾಜಕಾರಣಕ್ಕೆ ಮನಸು ಮಾಡದಿದ್ದಲ್ಲಿ ಮಾತ್ರ ನಮ್ಮ ಆಶಯಗಳು ನೆರವೇರಲು ಸಾಧ್ಯ ಎಂದರು.
ವೇದಿಕೆಯಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳ್ತೆ ಮೊಕ್ತೇಸರ ಧರ್ಮಭೂಷಣ ಯು. ವಿಜಯರಾಘವ ಪಡ್ವೆಟ್ನಾಯ, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಪಸಿಂಹ ನಾಯಕ್, ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ, ಉಜಿರೆ ದಂತ ವೈದ್ಯ ಎಂ.ಎಂ.ದಯಾಕರ್, ರಬ್ಬರ್ ಮಂಡಳಿ ಸದಸ್ಯ ಪದ್ಮನಾಭ ಮಾಣಿಂಜೆ, ಬೆಳಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಕೋಟ್ಯಾನ್, ಸದಸ್ಯರಾದ ಜಯಂತ ಗೌಡ, ಸತೀಶ್ ಗೌಡ, ವಿಮಲಾ, ಉದ್ಯಮಿ ಗಿರೀಶ್ ಗೌಡ ಅತಿಥಿಗಳಾಗಿ ಉಪಸ್ಥಿತರಿದ್ದರು.
ಆಡಳಿತ ಮೊಕ್ತೇಸರ ವೆಂಕಟರಮಣ ಗೌಡ ಕೈಕುರೆ, ಆನುವಂಶಿಕ ಮೊಕ್ತೇಸರ ಪ್ರಕಾಶ್ ಕುಮಾರ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಚ್. ಪದ್ಮಗೌಡ, ಕಾರ್ಯದರ್ಶಿ ಶೇಖರ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸೋಮೇಗೌಡ, ಪ್ರಧಾನ ಕಾರ್ಯದರ್ಶಿ ದಾಮೋದರ ಗೌಡ, ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್, ಮೋಹನ ಗೌಡ, ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಅಧ್ಯಕ್ಷ ಮೋಹನ ಪೂಜಾರಿ ಇದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ ಶರ್ಮ ಕೋಲ್ಪಾಡಿ ಸ್ವಾಗತಿಸಿ ಪ್ರಸ್ತಾವಿಸಿದರು.ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ನಾರಾಯಣ ಸುವರ್ಣ ವಂದಿಸಿದರು. ಸಭೆ ಮತ್ತು ಸಾಂಸ್ಕೃತಿಕ ಸಮಿತಿ ಪ್ರಧಾನ ಸಂಚಾಲಕ ಮಹೇಶ್ ಪುಳಿತ್ತಡಿ ಕಾರ್ಯಕ್ರಮ ನಿರ್ವಹಿಸಿದರು.
ರಾಮ ರಾಜ್ಯದ ಕಲ್ಪನೆಯನ್ನು ಅರ್ಥೈಸಲು ರಾಜಕಾರಣಿಗಳು ಬಿಡುವುದಿಲ್ಲ. ತಾಯಿ ಮಗುವನ್ನು ನೋಡಿಕೊಳ್ಳುವಂತೆ, ರಾಜ ಪ್ರಜೆಗಳನ್ನು ಪಾಲಿಸಬೇಕು – ಕನ್ಯಾಡಿ ಶ್ರೀ
ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ಅನೂಚಾನವಾಗಿ ಅದ್ಭುತವಾಗಿ ನಡೆದರೆ ಭಕ್ತರು ಆಕರ್ಷಣೆಗೊಳಗಾಗುತ್ತಾರೆಯಲ್ಲದೆ ಅವರಲ್ಲಿ ಭಕ್ತಿ, ವಿಶ್ವಾಸ ಮೂಡುತ್ತದೆ. ಇದರಿಂದ ದೇವಳದ ಅಭಿವೃದ್ದಿ ಸಾಧ್ಯ– ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿಯವರು ಮುಜರಾಯಿ ಸಚಿವರಾಗಿದ್ದಾಗ ದೇಗುಲಕ್ಕೆ ರೂ. 5 ಲಕ್ಷ ಅನುದಾನವನ್ನು ಒದಗಿಸಿರುವುದನ್ನು ಬ್ರಹ್ಮಕಲಶೋತ್ಸವ ಅಧ್ಯಕ್ಷರು ಪ್ರಸ್ತಾವನೆಯಲ್ಲಿ ಸ್ಮರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.