ಕುಂಬಳೆ : ಕುಂಬಳೆ ಸೀಮೆಯ ಅದಿ ಪರ್ಮಲೆ ಅಂತ್ಯ ಪುತ್ಯೆ ಎಂದೇ ಖ್ಯಾತಿವೆತ್ತ ಪುತ್ತಿಗೆಯ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ನೂತನ ಪಾಪೆ ಬಂಡಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಮಾ.23 ರಿಂದ 25ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ದೇಲಂಪಾಡಿ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
ಅತ್ಯಾಕರ್ಷಕವಾದ ಪಾಪೆ ಬಂಡಿಯ ನಿರ್ಮಾಣ ಕಾರ್ಯದಲ್ಲಿ ಶಿಲ್ಪಿಗಳು ನಿರತವಾಗಿದ್ದು ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಕ್ಷೇತ್ರ ಅಡಳಿತ ಸಮಿತಿ,ಸೇವಾ ಸಮಿತಿ,ನವೀಕರಣ ಸಮಿತಿ,ಬ್ರಹ್ಮಕಲಶೋತ್ಸವ ಹಾಗೂ ಉಪ ಸಮಿತಿಯ ಸದಸ್ಯರುಗಳು ಸಹಕರಿಸುತ್ತಿದ್ದಾರೆ. ಕ್ಷೇತ್ರ ಪರಿಸರವನ್ನು ಸುಂದರವಾಗಿ ಅಲಂಕರಿಸಲಾಗಿದ್ದು ಮಹಾದ್ವಾರಗಳನ್ನು ಸ್ಥಾಪಿಸಲಾಗಿದೆ. ಬ್ರಹ್ಮಕಲಶೋತ್ಸವದ ಮೂರು ದಿನವೂ ಪ್ರಸಾದ ಬೋಜನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ಇದೀಗ ನೂತನ ಪಾಪೆ ಬಂಡಿಗಳ ನಿರ್ಮಾಣ ಕಾರ್ಯ ನಡೆಸಲಾಗಿದೆ. ಇದಕ್ಕಾಗಿ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿಗಳು ರಕ್ಷಾಧಿಕಾರಿಯಾಗಿ ಮಾಯಿಪ್ಪಾಡಿ ಅರಮನೆಯ ದಾನಮಾರ್ತಾಂಡವರ್ಮ ರಾಜ ರಾಮಂತರಸುಗಳು ಗೌರವಾಧ್ಯಕ್ಷರಾಗಿ ಇಚ್ಲಂಪಾಡಿ ಸುಬ್ಬಯ್ಯ ರೈಗಳು ಅಧ್ಯಕ್ಷರಾಗಿ ವಿವಿಧ ಧಾರ್ಮಿಕ ಕ್ಷೇತ್ರದ ಮುಂದಾಳುಗಳು ಸಲಹೆಗಾರರಾಗಿ,ಸಮಿತಿ ಸದಸ್ಯರಾಗಿ ನವೀಕರ ಸಮಿತಿಯನ್ನು ರಚಿಸಲಾಗಿತ್ತು.ಇದೀಗ ಶಿಲ್ಪಿ ಪುತ್ತಿಗೆ ವಿಷ್ಣು ಆಚಾರ್ಯರ ನೇತೃತ್ವದಲ್ಲಿ ಸುಮಾರು ೨೦ರಷ್ಟು ಬಡಗಿಗಳು ಪಾಪೆ ಬಂಡಿಯ ನಿರ್ಮಾಣ ಕಾರ್ಯದಲ್ಲಿ ಸಹಕರಿಸುತ್ತಿದ್ದು ಅತ್ಯಾಮೂಲ್ಯವಾದ ಬೆಲೆಬಾಳುವ ಮರದ ಅತ್ಯಾಕರ್ಷಕವಾದ ಕೆತ್ತನೆಯಿಂದ ಕೂಡಿದ ಬಂಡಿಯು ಭಕ್ತ ಜನರ ಕಣ್ಮನ ಸೆಳೆಯುತ್ತಿದೆ.
ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಮಾ.23 ಕ್ಕೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆರಂಭಗೊಳ್ಳಲಿದೆ. ಇದರ ಅಂಗವಾಗಿ ಮಾ.23ಕ್ಕೆ ಸಂಜೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ವಿಶೇಷ ಕಾರ್ತಿಕ ಪೂಜೆ,ದೀಪಾರಾಧನೆ ,ದೈವಗಳಿಗೆ ತಂಬಿಲ ನಡೆಯಲಿದೆ. ಮಾ.24ಕ್ಕೆ ಸಂಜೆ 3ಗಂಟೆಗೆ ಕಟ್ಟತ್ತಡ್ಕದ ಬಬ್ಬರ್ಯ ಕಲ್ಲಿನಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆಯು ಕ್ಷೇತ್ರಕ್ಕೆ ಆಗಮಿಸಲಿದೆ. ರಾತ್ರಿ ಎಸ್.ಕೆ.ಎಸ್.ಕ್ಲಬ್ಬಿನ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.ಮಾ.25ಕ್ಕೆ ಬೆಳಿಗ್ಗೆ 9-29 ರಿಂದ 11-36ರ ಶುಭ ಮುಹೂರ್ತದಲ್ಲಿ ಪಾಪೆ ಬಂಡಿಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರಗಲಿದೆ. ಬಳಿಕ ತಂಬಿಲ ಹಾಗೂ 10 ಗಂಟೆಗೆ ಜರಗುವ ಧಾರ್ಮಿಕ ಸಭೆಯಲ್ಲಿ ನ್ಯಾ.ಸುಬ್ಬಯ್ಯ ರೈಗಳ ಅಧ್ಯಕ್ಷತೆಯಲ್ಲಿ ನಡೆಯಲಿದ್ದು,ಮಾಣಿಲ ಶ್ರೀಧಾಮದ ಶ್ರೀಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ಆಶೀರ್ವಚನ ನೀಡುವರು.ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಡಾ.ಅನಿಲ್ ಕುಮಾರ್ ರೈ ಧಾರ್ಮಿಕ ಉಪನ್ಯಾಸ ನೀಡುವರು.
ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಅರುಣಾ ಜೆ.ರೈ,ಉದ್ಯಮಿ ವಸಂತ ಪೈ ಬದಿಯಡ್ಕ,ಸತೀಶ್ಚಂದ್ರ ಭಂಡಾರಿ,ಸಂಧ್ಯಾ ವಿ.ಶೆಟ್ಟಿ,ಎಂ.ವಿಶ್ವನಾಥ ರೈ ಮಾಯಿಪ್ಪಾಡಿ,ರವೀಂದ್ರ ನಾಯಕ್ ಶೇಣಿ,ಬಂಟಪ್ಪ ಪೂಜಾರಿ ನೇರೋಳ್ತಡಿ,ಅಪ್ಪಣ್ಣ ಮಾಸ್ಟರ್,ಮಂಜುನಾಥ ಭಂಡಾರಿ ಪಂಜಳ,ಚಂದ್ರಾವತಿ ಮೊದಲಾದವರು ಉಪಸ್ಥಿತರಿರುವರೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.ವರ್ಷಾವಧಿ ಜಾತ್ರೋತ್ಸವವು ಏ.6 ರಿಂದ 10 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಕ್ಷೇತ್ರದ ಕಾರ್ಯಾಧ್ಯಕ್ಷ ಜಯಶಂಕರ ರೈ,ಕಾರ್ಯದರ್ಶಿ ಉಮಾನಾಥ ಭಂಡಾರಿ,ಮ್ಯೇನೇಜಿಂಗ್ ಟ್ರಸ್ಟೀ ಅಧಿಕಾರಿ ನಾರಾಯಣಯ್ಯ,ಉಪಾಧ್ಯಕ್ಷ ದಾಮೋದರ ಡಿ, ಗುರಿಕ್ಕಾರರಾದ ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ, ಮಹಾಲಿಂಗೇಶ್ವರ ಅಧಿಕಾರಿ, ಗಿರೀಶ್ ಭಟ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.