‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಕೂಗುವುದಿಲ್ಲ ಎಂದು ದಾರ್ಷ್ಟ್ಯದಿಂದ ಹೇಳುವವರೂ ಈ ದೇಶದಲ್ಲಿದ್ದಾರೆ. ಎಂಥೆಂಥವರೋ ಈ ದೇಶದಲ್ಲಿ ತುಂಬಿಕೊಂಡಿರುವಾಗ ಭಾರತ್ ಮಾತಾ ಕಿ ಜೈ ಎನ್ನಲಾರೆ ಎನ್ನುವ ಮಂದಿ ಇಲ್ಲಿರುವುದು ವಿಶೇಷವೇನಲ್ಲ.
ಭಾರತ್ ಮಾತಾ ಕಿ ಜೈ ಎನ್ನಲಾರೆ ಎಂದವರು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಒವೈಸಿ. ಈತ ಇಂತಹ ಇನ್ನೂ ಅದೆಷ್ಟೋ ಅಸಡ್ಡಾಳ ಹೇಳಿಕೆಗಳನ್ನು ಈ ಹಿಂದೆ ಹೇಳಿದ್ದು ಬಹುಶಃ ಕೆಲವರಿಗಾದರೂ ನೆನಪಿರಬಹುದು. ‘ನೀವು ನನ್ನ ಕತ್ತು ಸೀಳಿದರೂ ನಾನು ಈ ಘೋಷಣೆ ಕೂಗುವುದಿಲ್ಲ’ ಎಂದು ಬೇರೆ ಒವೈಸಿ ಹೇಳಿದ್ದಾರೆ. ಅಷ್ಟೇ ಅಲ್ಲ, ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ ಎಂದೂ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದ್ಗಿರ್ ಕಾರ್ಯಕ್ರಮದಲ್ಲಿ ಹೇಳಿ ಅವರು ವಿವಾದದ ಕಿಡಿ ಹಬ್ಬಿಸಿದ್ದಾರೆ.
ಇಷ್ಟಕ್ಕೂ ಒವೈಸಿಗೆ ಭಾರತ್ ಮಾತಾ ಕಿ ಜೈ ಎಂದು ಘೋಷಿಸಿ ಎಂದು ಯಾರು ಒತ್ತಡ ಹೇರಿದರೋ ಗೊತ್ತಿಲ್ಲ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಹೊಸ ಪೀಳಿಗೆಗೆ ದೇಶಭಕ್ತಿಯ ಘೋಷಣೆ ಕೂಗುವ ಬಗ್ಗೆ ತಿಳಿಸಿ ಹೇಳಬೇಕಾಗಿದೆ. ದೇಶಭಕ್ತಿ ಭಾವನೆಯನ್ನು ಅವರಲ್ಲಿ ಮೂಡಿಸಬೇಕಾಗಿದೆ ಎಂದು ಸಹಜವಾಗಿ ಹೇಳಿದ್ದರು. ಆದರೆ ಅವರು ಒತ್ತಾಯಪೂರ್ವಕವಾಗಿ ಪ್ರತಿಯೊಬ್ಬರ ಬಳಿ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿಸಬೇಕು ಎಂದೇನೂ ಹೇಳಿರಲಿಲ್ಲ. ಅಸಾದುದ್ದೀನ್ ಒವೈಸಿಗೆ ಭಾಗವತ್ ಅವರ ಈ ಹೇಳಿಕೆ ಕಿರಿಕ್ ಉಂಟು ಮಾಡಿದ್ದೇಕೆ ? ಇದರ ಬೆನ್ನಿಗೇ ಮಹಾರಾಷ್ಟ್ರದ ಎಐಎಂಐಎಂ ಶಾಸಕ ವಾರಿಸ್ ಪಠಾಣ್ ಕೂಡ ತಾನೂ ಭಾರತ್ ಮಾತಾ ಕಿ ಜೈ ಎಂದು ಹೇಳಲು ನಿರಾಕರಿಸಿ ವಿಧಾನ ಸಭೆಯಿಂದ ಅಮಾನತುಗೊಂಡಿದ್ದಾರೆ. ಭಾರತ್ ಮಾತಾ ಕಿ ಜೈ ವಿಚಾರ ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದೆ. ಈ ಘೋಷಣೆ ಕೂಗುವುದಿಲ್ಲ ಎಂಬ ಅಸಾದುದ್ದೀನ್ ಒವೈಸಿ ಹೇಳಿಕೆಗೆ ರಾಜ್ಯಸಭೆಯ ಸದಸ್ಯ ಹಾಗೂ ಕವಿ ಜಾವೇದ್ ಅಖ್ತರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ‘ನಮ್ಮ ಸಂವಿಧಾನ ಅವರಿಗೆ ಶೇರ್ವಾನಿ ಮತ್ತು ಟೋಪಿ ಧರಿಸಬೇಕು ಎಂದೂ ಹೇಳುವುದಿಲ್ಲ… ಭಾರತ್ ಮಾತಾ ಕಿ ಜೈ ಎಂದು ಹೇಳುವುದು ನನ್ನ ಕರ್ತವ್ಯವೊ ಅಲ್ಲವೋ ಎನ್ನುವುದನ್ನು ತಿಳಿಯಲು ನಾನು ಬಯಸುವುದಿಲ್ಲ. ಆದರೆ ಅದು ನನ್ನ ಹಕ್ಕು’ ಎಂದು ಹೇಳಿದರಲ್ಲದೆ ಹಲವು ಭಾರಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ ವಿದ್ಯಮಾನವೂ ನಡೆದಿದೆ. ಬಾಲಿವುಡ್ ನಟ ಅನುಪಮ್ ಖೇರ್ ‘ಭಾರತೀಯರಿಗೆ ಭಾರತ್ ಮಾತಾ ಕಿ ಜೈ ಘೋಷಣೆಯೇ ರಾಷ್ಟ್ರೀಯತೆಯ ನೈಜ ವ್ಯಾಖ್ಯಾನ. ಬೇರೆಲ್ಲವೂ ಪಲಾಯನವಾದದ ಮಾರ್ಗ’ ಎಂದು ಕುಟುಕಿದ್ದಾರೆ.
ಸಂವಿಧಾನ ದೇಶದ ನಾಗರಿಕರಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ದಯಪಾಲಿಸಿದೆ. ಏನನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ತನ್ನ ನಿರ್ದೇಶಕ ತತ್ವಗಳಲ್ಲಿ ಸೂಚ್ಯವಾಗಿ ಹೇಳಿದೆ. ಪ್ರತಿಯೊಂದನ್ನೂ ಬಿಡಿಸಿ ಹೇಳಲು ಹೋಗಿಲ್ಲ. ಏಕೆಂದರೆ ದೇಶದ ನಾಗರಿಕರು ತೀರಾ ದಡ್ಡರೂ, ಅವಿವೇಕಿಗಳೂ ಆಗಿರಲಾರರು ಎಂಬ ವಿಶ್ವಾಸ ಸಂವಿಧಾನ ಕರ್ತೃಗಳದ್ದಾಗಿತ್ತು. ಒವೈಸಿಯಂತಹ ಅವಿವೇಕಿಗಳು ಈ ದೇಶದಲ್ಲಿ ಹುಟ್ಟಿಬರುತ್ತಾರೆ, ಭಾರತ್ ಮಾತಾ ಕಿ ಜೈ ಎಂದು ಕತ್ತು ಸೀಳಿದರೂ ಹೇಳುವುದಿಲ್ಲ ಎನ್ನುತ್ತಾರೆ ಎಂಬುದು ಸಂವಿಧಾನದ ಕರ್ತೃಗಳಿಗೆ ಖಂಡಿತ ಗೊತ್ತಿರಲಿಕ್ಕಿಲ್ಲ. ಸಂವಿಧಾನವು ಭಾರತ್ ಮಾತಾ ಕಿ ಜೈ ಎಂದು ಹೇಳಲಬೇಕು ಎಂದು ಯಾರಿಗೂ ತಾಕೀತು ಮಾಡಿಲ್ಲ. ಆದರೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಬಾರದು ಎಂದೂ ಅದು ನಿರ್ದೇಶಿಸಿಲ್ಲ. ಭಾರತ್ ಮಾತಾ ಕಿ ಜೈ ಘೋಷಣೆ ಕೂಗುವುದು ದೇಶಕ್ಕೆ ಪ್ರತಿಯೊಬ್ಬರೂ ತೋರಿಸುವ ಗೌರವದ ಸಂಕೇತ ಎಂಬುದು ದೇಶದ ಜನಸಾಮಾನ್ಯರ ಸಹಜ ಅಭಿಮತ. ಒವೈಸಿಯಂಥವರಿಗೆ ಇವೆಲ್ಲ ಅರ್ಥವಾಗುವುದಾದರೂ ಹೇಗೆ?
ಒವೈಸಿ ಭಾರತ ಮಾತೆಗೆ ಜಯವಾಗಲಿ ಎಂದು ಹೇಳದಿದ್ದರೆ ಹಾಳಾಗಿ ಹೋಗಲಿ. ಆದರೆ, ಆತನ ಮಾತಿನ ‘ಧ್ವನಿ’ಯಾದರೂ ಏನು ಗೊತ್ತೆ? ಈ ನೆಲದ ನಿಯಮಗಳಿಗಾಗಲಿ, ಕಾನೂನಿಗಳಿಗಾಗಲಿ, ಸಂವಿಧಾನಕ್ಕಾಗಲಿ, ದೇಶಕ್ಕಾಗಲಿ ನಾನು ನಿಷ್ಠನಲ್ಲ ಎಂಬುದೇ ಆಗಿದೆ. ಇದು ಸೊಕ್ಕಿನ, ದೇಶದ್ರೋಹದ ಮಾತಲ್ಲದೆ ಮತ್ತೇನು? ಸಂವಿಧಾನ ಇಲ್ಲಿನ ನಾಗರಿಕರಿಗೆ ಕರ್ತವ್ಯ ಹಾಗೂ ಹಕ್ಕುಗಳನ್ನು ನೀಡಿರುವಂತೆಯೇ, ಹಲವು ಬಗೆಯ ಸೌಲಭ್ಯಗಳನ್ನೂ ಕರುಣಿಸಿದೆ. ಅದರಲ್ಲೂ ಅಲ್ಪಸಂಖ್ಯಾತರಿಗೆ ಅನೇಕ ಬಗೆಯ ಸೌಲಭ್ಯಗಳನ್ನು ಸಂವಿಧಾನ ದಯಪಾಲಿಸಿದೆ. ಒವೈಸಿಯಂಥವರಿಗೆ ಸಂವಿಧಾನ ದಯಪಾಲಿಸಿರುವ ಇಂತಹ ಎಲ್ಲ ಸೌಲಭ್ಯಗಳೂ ಬೇಕು. ಅದನ್ನು ಚಾಚೂ ತಪ್ಪದೇ ಸರ್ಕಾರದಿಂದ ಪಡೆಯುವುದರಲ್ಲಿ ಈ ಮಂದಿ ನಿಸ್ಸೀಮರು! ಆದರೆ ಹಕ್ಕು, ಕರ್ತವ್ಯ ಹಾಗೂ ಸೌಲಭ್ಯಗಳನ್ನು ನೀಡಿರುವ ಸಂವಿಧಾನ ಮತ್ತು ದೇಶವನ್ನು ಗೌರವಿಸುವುದು ಮಾತ್ರ ಇವರಿಗೆ ಬೇಕಿಲ್ಲ. ಇದು ದೇಶದ್ರೋಹವಲ್ಲದೇ ಮತ್ತೇನು? ದೇಶವೆಂಬುದು ಇಂಥವರ ಪಾಲಿಗೆ ತಾಯಿನಾಡಲ್ಲ, ಕೇವಲ ಒಂದು ಲಾಡ್ಜ್ ಮಾತ್ರ. ತಮ್ಮ ತೀಟೆ ತೀರಿಸಿಕೊಳ್ಳಲು ಇರುವ ಇದು ಒಂದು ಭೋಗಭೂಮಿ ಎಂದು ಈ ಮಂದಿ ಭಾವಿಸಿದಂತಿದೆ. ಹಾಗಾಗಿಯೇ ಇಂಥವರ ಬಾಯಲ್ಲಿ ಆಗಾಗ ಇಂತಹ ಕ್ಷುಲ್ಲಕ ಮಾತುಗಳು ಬರುತ್ತಿರುತ್ತವೆ.
ಭಾರತ ಮಾತೆಗೆ ಅಗೌರವ ಸೂಚಿಸಿದವರ ಯಾದಿಯಲ್ಲಿ ಒವೈಸಿಯೇ ಮೊದಲಿಗರಲ್ಲ. ಇದಕ್ಕೂ ಮೊದಲು ಎಂ.ಎಫ್. ಹುಸೇನ್ ಎಂಬ ಕಲಾವಿದ ಕೂಡ ಭಾರತ ಮಾತೆಗೆ ಅಗೌರವ ತೋರಿದ್ದ. ಈ ದೇಶದ ಶ್ರದ್ಧಾ ಬಿಂದುಗಳಾಗಿರುವ ಸೀತೆ, ಸರಸ್ವತಿ, ಭಾರತ ಮಾತೆಯರ ಚಿತ್ರಗಳನ್ನು ವಿಕೃತ, ಅರೆನಗ್ನಾವಸ್ಥೆಯಲ್ಲಿ ಚಿತ್ರಿಸಿ ಬಹುಸಂಖ್ಯಾತರ ಭಾವನೆಗೆ ಆಳವಾದ ಗಾಯ ಮಾಡಿದ್ದ. ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ವಿಕೃತ ಕಲಾಕೃತಿ ರಚಿಸಿದ್ದಾಗ ದೇಶದಾದ್ಯಂತ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು. ಅನಂತರ ಹುಸೇನ್ ವಿರುದ್ಧ ಮೊಕದ್ದಮೆ ಕೂಡ ದಾಖಲಾಯಿತು. 94 ರ ಇಳಿ ವಯಸ್ಸಿನಲ್ಲಿ ಹುಸೇನ್ಗೆ ಕೋರ್ಟುಗಳಿಗೆ ಪದೇಪದೇ ಎಡತಾಕುವ ತಾಕತ್ತಿಲ್ಲದೆ, ಆತ ಖತಾರ್ ದೇಶಕ್ಕೆ ಪಲಾಯನ ಮಾಡಿದ್ದ. ಕೊನೆಗೆ ಹುಸೇನ್ ಅಲ್ಲೇ ಕೊನೆಯುಸಿರೆಳೆದದ್ದು ಈಗ ಹಳೆಯ ಕಥೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡುತ್ತಿದ್ದ ಹುಸೇನ್ ತನ್ನ ಬದುಕಿನಲ್ಲಿ ಅಪ್ಪಿತಪ್ಪಿ ಕೂಡ ಪ್ರವಾದಿ ಮಹಮ್ಮದರ ಯಾವುದೇ ರೀತಿಯ ಚಿತ್ರವನ್ನೂ ಬಿಡಿಸಿರಲಿಲ್ಲ. ಭಾರತ ಮಾತೆಯ ನಗ್ನ ಚಿತ್ರ ಬಿಡಿಸಿದ್ದಕ್ಕೆ ಹುಸೇನ್ ತಮ್ಮದೇ ಆದ ಸಮರ್ಥನೆಯನ್ನು ನೀಡಿದ್ದರು. ನಗ್ನತೆ ಪರಿಶುದ್ಧತೆಯ ಸಂಕೇತ. ಅದಕ್ಕಾಗಿಯೇ ನಾನು ದೇವದೇವತೆಗಳ ನಗ್ನಚಿತ್ರ ರಚಿಸಿರುವೆ ಎಂದಿದ್ದರು. ಆದರೆ ಅವರೆಂದೂ ಮುಸ್ಲಿಂ ಪ್ರವಾದಿಗಳ ನಗ್ನ ಚಿತ್ರ ಬಿಡಿಸುವ ಧೈರ್ಯ ತೋರಿರಲಿಲ್ಲ ಬಹುಶಃ ಮುಸ್ಲಿಂ ಪ್ರವಾದಿಗಳು ಪರಿಶುದ್ಧರೆಂದು ಹುಸೇನ್ಗೆ ಅನಿಸಿರಲಿಕ್ಕಿಲ್ಲವೇನೋ!
ಯಾವುದೇ ದೇಶದಲ್ಲಿರಲಿ, ಅಲ್ಲಿನ ಪ್ರಜೆಗಳು ಆ ದೇಶಕ್ಕೆ, ಅಲ್ಲಿನ ಸಂವಿಧಾನಕ್ಕೆ, ಅಲ್ಲಿನ ಕಾನೂನುಗಳಿಗೆ ಗೌರವ ತೋರಬೇಕಾದುದು ಪರಮ ಕರ್ತವ್ಯ. ಭಾರತದ ಪ್ರಜೆಯಾಗಿರುವ, ಸಂಸತ್ ಸದಸ್ಯನೂ ಆಗಿರುವ ಅಸಾದುದ್ದೀನ್ ಒವೈಸಿಗೆ ಇದನ್ನೆಲ್ಲ ತಿಳಿಸಿ ಹೇಳಬೇಕಾದ ಅಗತ್ಯವಿಲ್ಲ. ಮಹಾಯೋಗಿ ಅರವಿಂದರು ಈ ದೇಶವನ್ನು ‘ವಿಶ್ವದ ದಿವ್ಯಮಾತೆ, ಜಗನ್ಮಾತೆ, ಆದಿಶಕ್ತಿ, ಮಹಾಮಾಯೆ, ಮಹಾದುರ್ಗೆ ಮೈತಾಳಿದ ಜೀವಂತ ಅವತಾರ’ ಎಂದು ಬಣ್ಣಿಸಿದ್ದಾರೆ. ನಮ್ಮ ಶ್ರೇಷ್ಠಕವಿ ರವೀಂದ್ರನಾಥ ಠಾಗೂರ್ ಅವರು ‘ದೇವಿಭುವನ ಮನಮೋಹಿನಿ … ನೀಲಸಿಂಧುಜಲ ಧೌತಚರಣತಲ’ (ಭುವನ ಮನಮೋಹಿನಿಯಾದ ದೇವಿ… ಸಮುದ್ರದ ನೀಲ ಜಲ ನಿನ್ನ ಚರಣಗಳನ್ನು ತೊಳೆಯುತ್ತದೆ) ಎಂದು ಸ್ತುತಿಸಿದ್ದಾರೆ. ಸ್ವಾತಂತ್ರ್ಯದ ವರಕವಿ ಬಂಕಿಮಚಂದ್ರರು ‘ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀಂ’ (ದಶಯುಧಪಾಣಿಯಾದ ಲಯಕಾರಿಣಿ ನೀನು) ಎಂದು ಹಾಡಿ ಹೊಗಳಿದ್ದಾರೆ. ಈ ನಾಡಿಗಿಂತ ಪವಿತ್ರವಾದುದು ನಮಗೆ ಇನ್ಯಾವುದೂ ಇಲ್ಲ. ನಾಡಿನ ಧೂಳಿನ ಕಣಕಣವೂ, ಮರ ಕಲ್ಲು ಹೊಳೆ ಒಂದೊಂದು ಜಡಚೇತನಗಳೆಲ್ಲವೂ ನಮಗೆ ಪವಿತ್ರ ಎಂಬ ಗಾಢ ಭಕ್ತಿಯನ್ನು ನಿತ್ಯ ಜಾಗೃತವಾಗಿಡಲು ನಮ್ಮ ಹಿರಿಯರು ಹಲವು ಬಗೆಯ ನಿತ್ಯ ವಿಧಿಗಳನ್ನು ಅಳವಡಿಸಿರುವುದು ನಮಗೆ ತಿಳಿದಿರುವ ಸಂಗತಿಯೇ. ಭೂಮಿ ತಾಯಿಯನ್ನು ದಿನವಿಡೀ ಅನಿವಾರ್ಯವಾಗಿ ತನ್ನ ಪಾದಗಳಿಂದ ತುಳಿಯುವುದಕ್ಕಾಗಿ ಕ್ಷಮೆಯಾಚಿಸುವುದು ಈ ದೇಶದ ಒಂದು ಸಂಪ್ರದಾಯ. ರೈತ ಕೂಡ ಭೂಮಿಯನ್ನು ನೇಗಿಲಿನಿಂದ ಉಳುವುದಕ್ಕೆ ಮುನ್ನ ಭೂಮಿಗೆ ನಮಸ್ಕರಿಸಿ ತಾಯಿಯ ಕ್ಷಮೆ ಬೇಡುವುದು ಇಲ್ಲಿನ ಶ್ರೇಷ್ಠ ಪರಂಪರೆ.
ಇಂಗ್ಲೆಂಡನ್ನು ತೊರೆದು ಸ್ವಾಮಿ ವಿವೇಕಾನಂದರು ಭಾರತಕ್ಕೆ ಹೊರಡಲಿದ್ದಾಗ ಯಾರೋ ಕೇಳಿದರು – ಅಮೆರಿಕ, ಇಂಗ್ಲೆಂಡ್ಗಳಂತಹ ಅತೀ ಶ್ರೀಮಂತ ಪಾಶ್ಚಾತ್ಯ ರಾಷ್ಟ್ರಗಳನ್ನು ಸಂದರ್ಶಿಸಿದ ಮೇಲೆ ಮಾತೃ ಭೂಮಿಯ ಕುರಿತು ನಿಮಗೆ ಏನನ್ನಿಸುತ್ತದೆ? ಅವರೆಂದರು : ‘ಮೊದಲು ಭಾರತವನ್ನು ಪ್ರೀತಿಸುತ್ತಿದ್ದೆ. ಆದರೆ ಈಗ ಭಾರತದ ಪ್ರತಿ ಧೂಳಿನ ಕಣವೂ ನನಗೆ ಪವಿತ್ರ. ಅದು ನನ್ನ ಪವಿತ್ರ ಯಾತ್ರಾಸ್ಥಳವಾಗಿದೆ’. ವಿವೇಕಾನಂದರು ಪಾಶ್ಚಾತ್ಯ ದೇಶಗಳ ವಿಜಯಯಾತ್ರೆ ಮುಗಿಸಿ ಭಾರತಕ್ಕೆ ಕಾಲಿಟ್ಟೊಡನೆ ಅವರು ಮಾಡಿದ ಮೊದಲ ಕೆಲಸವೆಂದರೆ – ಈ ಭೂಮಿಯ ಮೇಲೆ ಪ್ರೀತಿಯಿಂದ ಹೊರಳಾಡಿದ್ದು. ತಮ್ಮ ದೇಹದ ಮೇಲೆ ಮರಳಿನಿಂದ ಅಭಿಷೇಕ ಮಾಡಿಕೊಂಡಿದ್ದು. ‘ಭೌತಿಕತೆಯಲ್ಲಿ ಮುಳುಗಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ನನ್ನ ಶರೀರ ಇಷ್ಟೆಲ್ಲಾ ಕಾಲ ಇದ್ದ ಕಾರಣ ಇದು ಕಲುಷಿತಗೊಂಡಿದೆ ಅದಕ್ಕಾಗಿ ಈ ಪವಿತ್ರ ನೆಲದ ಧೂಳಿನಿಂದ ನನ್ನನ್ನು ಪರಿಶುದ್ಧಗೊಳಿಸಿಕೊಳ್ಳುತ್ತಿದ್ದೇನೆ’ ಎಂದು ಸ್ವಾಮೀಜಿ ಆಗ ಹೇಳಿದ್ದರು.
ರಾಷ್ಟ್ರಕವಿಯೆಂದು ಅಪಾರವಾಗಿ ನಾವೆಲ್ಲ ಗೌರವಿಸುವ ಕುವೆಂಪು ‘ದೇಶ ನನ್ನದು ನನ್ನದು ನಾಡು ಎನ್ನದ ಮಾನವನೆದೆ ಸುಡುಗಾಡು’ ಎಂಬ ಸುಂದರವಾದ ಕವಿತೆಯ ಮೂಲಕ ದೇಶದ ಬಗ್ಗೆ ಇಲ್ಲಿನ ಪ್ರಜೆಗಳಿರಬೇಕಾದ ಉತ್ಕಟ ಭಾವನೆಯನ್ನು ಅಭಿವ್ಯಕ್ತಗೊಳಿಸಿದ್ದಾರೆ.
ಕೆಲವರು ಭಾವಿಸಿರುವಂತೆ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆ ಆರೆಸ್ಸೆಸ್ನವರದ್ದಲ್ಲ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅನೇಕ ದೇಶಭಕ್ತರು ಆ ಸಂದರ್ಭದಲ್ಲಿ ಕೂಗಿದ ಘೋಷಣೆಗಳಲ್ಲಿ ಇದು ಪ್ರಮುಖವಾಗಿತ್ತು. ನಮ್ಮ ಸ್ವಾತಂತ್ರ ಹೋರಾಟಗಾರರ ಈ ಘೋಷಣೆಯನ್ನು ಆರೆಸ್ಸೆಸ್ ತನ್ನ ಶಾಖೆಗಳಲ್ಲಿ ಪ್ರತಿನಿತ್ಯ ಅನುಷ್ಠಾನಕ್ಕೆ ತಂದಿದೆ. ಆ ಘೋಷಣೆಗೊಂದು ಕಿಮ್ಮತ್ತನ್ನು ಗಳಿಸಿಕೊಟ್ಟಿದೆ. ಅಸಾದುದ್ದೀನ್ ಒವೈಸಿಯವರ ಅಂತರಂಗದಲ್ಲಿ ಭಾರತ್ ಮಾತಾ ಕಿ ಜೈ ಎಂಬುದು ಆರೆಸ್ಸೆಸ್ ಘೋಷಣೆ ಎಂಬ ತಪ್ಪು ಕಲ್ಪನೆ ಇದ್ದರೆ ಅದು ಆತನ ಬೌದ್ಧಿಕ ದಿವಾಳಿತನಕ್ಕೆ ಸಂಕೇತ, ಅಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.