ಬೆಳ್ತಂಗಡಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ರವರ 124ನೇ ಜನ್ಮ ದಿನಾಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ರಾಷ್ಟ್ರ ನಾಯಕನಿಗೆ ಅಗೌರವ ಸೂಚಿಸಿದ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರರವರ ವಿರುದ್ಧ ಖಂಡನಾ ನಿರ್ಣಯ ತೆಗೆದುಕೊಂಡ ಘಟನೆ ಬುಧವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತಹಶೀಲ್ದಾರ್ ಪುಟ್ಟುಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ನಿವಾರಣಾ ಸಭೆಯಲ್ಲಿ ನಡೆಯಿತು.
ಸಭೆ ಆರಂಭಗೊಳ್ಳುತ್ತಿದ್ದಂತೆಯೇ ದಲಿತ ಮುಖಂಡರು ಮಾತನಾಡಿ ಶಿಶಿಲ ಗ್ರಾಮ ಪಂಚಾಯತ್ ಸೇರಿದಂತೆ ತಾಲೂಕಿನ ಕೆಲವೊಂದು ಗ್ರಾಮ ಪಂಚಾಯತ್ಗಳು ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಆಚರಿಸದೇ ನಿರ್ಲಕ್ಷ್ಯ ವಹಿಸಿದೆ. ಈ ರೀತಿ ಸಂವಿಧಾನ ಶಿಲ್ಪಿಯ ಜನ್ಮ ದಿನಾಚರಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದರು.
ಈ ಸಂದರ್ಭ ಸಭೆಯಲ್ಲಿದ್ದ ಎಲ್ಲಾ ಮುಖಂಡರು ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಇದೇ ಸಂದರ್ಭ ಮಾತನಾಡಿದ ದಲಿತ ಮುಖಂಡರುಗಳು ಶಾಸಕ ವಸಂತ ಬಂಗೇರ ತಾಲೂಕು ಮಟ್ಟದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ರಾಷ್ಟ್ರ ನಾಯಕನಿಗೆ ಅವಮಾನ ಮಾಡಿದ್ದಾರೆ. ಅವರ ವಿರುದ್ಧ ಖಂಡನಾ ನಿರ್ಣಯಕ್ಕೆ ಆಗ್ರಹಿಸಿದರು. ಈ ಸಂದರ್ಭ ಎಲ್ಲಾ ಮುಖಂಡರು ಖಂಡನಾ ನಿರ್ಣಯಕ್ಕೆ ಒತ್ತಾಯಿಸಿದರು.
ಶಿರಾಡಿ ಘಾಟಿ ಬಂದ್ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿ ಮೂಲಕ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಟ ಲಾರಿಗಳು ಸಾಗುತ್ತಿದ್ದು ಇದರಿಂದಾಗಿ ಹಲವಾರು ಜೀವ ಹಾನಿಯಾಗಿದೆ. ಅದನ್ನುತಡೆಯುವ ಕೆಲಸ ಆಗಬೇಕಾಗಿದೆ ಎಂದು ಒತ್ತಾಯ ಕೇಳಿಬಂತು.
ಖಾಸಗಿ ಆಸ್ಪತ್ರೆಗಳು ಬಡಜನರನ್ನು ಹಗಲು ದರೋಡೆಗೈಯುವ ಕೆಲಸದಲ್ಲಿ ನಿರತರಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು. ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಖಾಸಗಿ ಅಂಬುಲೆನ್ಸ್ಗಳು ಕಮಿಷನ್ ಆಸೆಗಾಗಿ ಬಡವರನ್ನು ದೋಚುವ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದುಕೊಂಡು ಹೋಗಿ ಬಡವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಮೇಲಂತಬೆಟ್ಟು ದಲಿತ ಕಾಲೊನಿಯ ಸಮೀಪ ಕಾರ್ಯಾಚರಿಸುತ್ತಿರುವ ದುರ್ನಾತ ಬೀರುವ ಹಂದಿ ವಧಾಗ್ರಹವನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂತು.
ತಾಲೂಕು ಆರೋಗ್ಯ ಇಲಾಖೆಯ ಎನ್.ಓ.ಸಿ.ಯಿಲ್ಲದೆ ವಧಾಗ್ರಹಕ್ಕೆ ಮೇಲಂತಬೆಟ್ಟು ಗ್ರಾ.ಪಂ. ಪಿಡಿಓ ಪರವಾನಿಗೆ ನೀಡಿದ್ದು ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಯಿತು. ಈ ಸಂದರ್ಭ ಮಾತನಾಡಿದ ತಾಲೂಕು ಕಾರ್ಯ ನಿರ್ವಹಣಾಧಿಕಾರಿಕೆ.ಎನ್. ಮಹಾಂತೇಶ್ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ತಾಲೂಕಿನಲ್ಲಿ ಸಾವಿರಾರು ಎಕರೆ ದಲಿತರಿಗೆ ಮೀಸಲಿಟ್ಟ ಡಿ.ಸಿ ಮನ್ನಾ ಜಮೀನು ಶ್ರೀಮಂತರು, ಅರಣ್ಯ ಇಲಾಖೆಗಳು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತಕ್ಷಣ ತೆರವು ಮಾಡಬೇಕೆಂದು ಒತ್ತಾಯಿಸಲಾಯಿತು. ಈ ಸಂದರ್ಭ ಮಾತನಾಡಿದ ದಲಿತ ಮುಖಂಡರು ಡಿ.ಸಿ. ಮನ್ನಾ ಜಮೀನು ಭಿಕ್ಷೆಯಲ್ಲ. ಅದು ನಮ್ಮ ಹಕ್ಕು ಆದರೂ ನಾವೀಗ ಜಮೀನಿಗಾಗಿ ಭಿಕ್ಷೆ ಬೇಡುವ ಕಾಲ ಬಂದಿದೆ. ತಾಲೂಕು ಆಡಳಿತದ ನಿರ್ಲಕ್ಷದಿಂದಾಗಿ ದಲಿತರು ಭೂಮಿ ಇದ್ದರೂ ನಿರ್ಗತಿಕರಾಗುತ್ತಿದ್ದಾರೆ ಎಂಬ ಮಾತು ಸಭೆಯಲ್ಲಿ ವ್ಯಕ್ತವಾಯಿತು. ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಈ ಬಗ್ಗೆ ಮುಂದಿನ ಸಭೆಯೊಳಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಕನ್ಯಾಡಿ ಗ್ರಾಮದ ಜಮೀನಿನ ವಿವಾದವೊಂದರಲ್ಲಿ ಶಾಸಕರು ಅನಗತ್ಯವಾಗಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ದಬ್ಬಾಳಿಕೆಯ ಮೂಲಕ ದಲಿತರ ಜಮೀನಿನಲ್ಲಿ ಬಲಾತ್ಕಾರವಾಗಿ ರಸ್ತೆಯೊಂದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂತು. ತಾಲೂಕಿನಲ್ಲಿ ೫೪ ಸಾವಿರ ಎಕರೆ ಜಮೀನಿನ ಅತಿಕ್ರಮಣದ ಬಗ್ಗೆ ಮೌನವಹಿಸಿರುವ ತಾಲೂಕು ಆಡಳಿತ ಕನ್ಯಾಡಿ ಗ್ರಾಮದ ಬಡ ದಲಿತರ ವಶದಲ್ಲಿದ್ದ ಕೇವಲ 2 ಸೆಂಟ್ಸ್ ಜಮೀನನ್ನು 100ಕ್ಕೂ ಹೆಚ್ಚು ಪೊಲೀಸರ ಸಹಕಾರದಲ್ಲಿ ತೆರವು ಮಾಡಿರುವ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ದಲಿತರ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣ ಮಾಡಬಾರದು ಎಂದು ಸಭೆ ಒಕ್ಕೊರಳ ನಿರ್ಣಯಕ್ಕೆ ಆಗ್ರಹಿಸಿತು.
ತಾಲೂಕಿನ ಲೈಲ ಸೇರಿದಂತೆ ಶಿರ್ಲಾಲು, ಚಾರ್ಮಾಡಿ, ಕೊಯ್ಯೂರು ಮೊದಲಾದ ಗ್ರಾಮಗಳಲ್ಲಿ ವ್ಯಾಪಕವಾದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ವ್ಯಾಪಕ ಚರ್ಚೆ ನಡೆದು ಈ ಬಗ್ಗೆ ವಾರದೊಳಗೆ ಪರಿಹಾರಕ್ಕೆ ಒತ್ತಾಯಿಸಲಾಯಿತು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್. ಮಹಂತೇಶ್, ತಾಲೂಕು ಸಮಾಜಕಲ್ಯಾಣಾಧಿಕಾರಿ ಮೋಹನ್ಕುಮಾರ್, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷೆ ಸಿ.ಕೆ. ಚಂದ್ರಕಲಾ, ತಾ.ಪಂ. ಸದಸ್ಯರುಗಳಾದ ವಿಮಲ, ಕೇಶವ ಎಂ. ಉಪಸ್ಥಿತರಿದ್ದರು.
ಚರ್ಚೆಯಲ್ಲಿ ಡಿ.ಎಸ್.ಎಸ್. ಅಂಬೇಡ್ಕರ್ವಾದದ ಮುಖಂಡರಾದ ರಮೇಶ್ ಆರ್., ಸಂಜೀವ ಆರ್., ವೆಂಕಣ್ಣ ಕೊಯ್ಯೂರು, ನೇಮಿರಾಜ್ ಕಿಲ್ಲೂರು, ದಲಿತ ಸಂಘಟನೆಗಳ ಒಕ್ಕೂಟಗಳ ಅಧ್ಯಕ್ಷ ಬೇಬಿ ಸುವರ್ಣ, ದಲಿತ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಶೇಖರ ಎಲ್., ದಲಿತ ಮುಖಂಡರಾದ ರಾಜು ಪಡಂಗಡಿ, ಪುಷ್ಪರಾಜ್ ಶಿರ್ಲಾಲು ಮೊದಲಾದವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.