ಆಕೆ ಅದೆಷ್ಟು ಚೀರಿರಬಹುದೋ ಯಾರಿಗೆ ಗೊತ್ತು. ಅದು ಆತ್ಮಹತ್ಯೆನಾ ಅಥವಾ ಕೊಲೆನಾ ಅಥವಾ ಆಕಸ್ಮಿಕನಾ, ಮೂರರಲ್ಲಿ ಯಾವುದಾದರೂ ಒಂದು ಆಗಿರಲೇಬೇಕು. ಅದು ಗೊತ್ತಾಗಲೂ ಕನಿಷ್ಟ ಎಷ್ಟು ವರ್ಷಗಳು ಬೇಕಾಗಬಹುದು, ಇದು ಮೊದಲನೇ ಪ್ರಶ್ನೆ. ನನ್ನ ಮಗಳದ್ದು ಕೊಲೆನೆ ಅದರಲ್ಲಿ ಯಾವುದೂ ಸಂಶಯವಿಲ್ಲ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ಕೊಟ್ಟ ಮೇಲೆ ಈಗ ಅದೇ ದಾರಿಯಲ್ಲಿ ಪೊಲೀಸರು ತನಿಖೆ ಆರಂಭಿಸಬೇಕಾಗುತ್ತದೆ. ಅಲ್ಲಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊರ್ವ ಹೆಣ್ಣು ಜೀವ ಅನಾವಶ್ಯಕವಾಗಿ ಸಾವಿನೊಂದಿಗೆ ಸರಸಕ್ಕೆ ಮುಂದಾಗಿ ಬಿಟ್ಟಿದೆ. ಆದರೆ ಹದಿನೆಂಟು ವರ್ಷದ ಭಾಗ್ಯಶ್ರೀಗೆ ಮೇಲಿನ ಮೂರು ಕಾರಣಗಳೊಂದಿಗೂ ಸಂಬಂಧವಿರಲಿಲ್ಲ. ಅವಳಿಗೆ ಆತ್ಮಹತ್ಯೆಗೈಯುವ ಕಾರಣವೇ ಇರಲಿಲ್ಲ. ಅವಳು ಯಾವುದೇ ಪ್ರೀತಿ, ಪ್ರೇಮ, ಪ್ರಣಯದಲ್ಲಿ ಸಿಕ್ಕಿಬಿದ್ದವಳಲ್ಲ. ಅವಳಿಗೆ ಕಲಿಯುವುದು ಬಿಟ್ಟು ಬೇರೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ.
ಅವಳು ಕಲಿಕೆಯಲ್ಲಿ ಹಿಂದೆ ಬಿದ್ದವಳಲ್ಲ. ಮಾರ್ಕ್ ಕಡಿಮೆ ಬಂದ ಕಾರಣಕ್ಕೆ ಅವಳು ಸತ್ತಳು ಎಂದು ಹೇಳುವ ಚಾನ್ಸ್ ಇರಲೇ ಇಲ್ಲ. ಯಾರಾದರೂ ಕಾಲೇಜಿನಲ್ಲಿ ಚುಡಾಯಿಸುತ್ತಿದ್ದರಾ, ಯಾರಾದರೂ ಇವಳ ಚಾರಿತ್ರ್ಯ ವಧೆಗೆ ಇಳಿದಿದ್ದರಾ, ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸವನ್ನು ಮೊದಲು ಪೊಲೀಸರು ಮಾಡಬೇಕು. ಅನೇಕ ಸಜ್ಜನ ಹೆಣ್ಣುಮಕ್ಕಳು ತಮ್ಮ ಬದುಕನ್ನು ಅಂತ್ಯಗೊಳಿಸುವುದು ಅದೇ ಕಾರಣಕ್ಕೆ. ತುಂಬಾ ಬೋಲ್ಡ್ ಇಲ್ಲದ ಹೆಣ್ಣು ಜೀವಗಳು ಕುತ್ತಿಗೆಗೆ ತಾಳಿ ನಿರಾಕರಿಸಿ ಹಗ್ಗ ಬಿಗಿದುಕೊಳ್ಳುವುದು ಚಾರಿತ್ರ್ಯದ ಕಾರಣಕ್ಕೆ ಮಾತ್ರ. ಅದರ ಗೊಡವೆನೆ ಇಲ್ಲದ ಹುಡುಗಿಯರು ಎನೇ ಆಗಲಿ ಸಾವಿಗೆ ಮನಸೋಲುವುದೇ ಇಲ್ಲ.ಅದೇ ಕುಂದಾಪುರದ ಅಕ್ಷತಾ ಎನ್ನುವ ಹುಡುಗಿ ತನ್ನ ಹೆಸರು ಕೊನೆಯ ಬೆಂಚಿನಲ್ಲಿ ಯಾರೋ ಕೆತ್ತಿದರು ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಆದರೆ ನಿಮಗೆ ಒಂದು ವಿಷಯ ಗೊತ್ತಿರುತ್ತೆ. ನೇಣು ಹಾಕಿಕೊಂಡು ಸಾಯುವುದಕ್ಕೂ, ಬೆಂಕಿ ಸುಟ್ಟುಕೊಂಡು ಸಾಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನೇಣು ಹಾಕಿಕೊಂಡ ವ್ಯಕ್ತಿ ಕಾಲುಗಳನ್ನು ಕೆಲವು ಕ್ಷಣ ಒದ್ದಾಡಿ ನಂತರ ನಾಲಿಗೆ ಹೊರಗೆ ಹಾಕಿ, ಸ್ವಲ್ಪ ಪ್ರಮಾಣ ಮೂತ್ರಶಂಕೆ ಮಾಡಿ, ಕೆಲವೊಮ್ಮೆ ಮಲ ಹೊರಗೆ ಕೂಡ ಬಂದ ಸ್ಥಿತಿಯಲ್ಲಿ ಪ್ರಾಣ ಬಿಟ್ಟಿರುತ್ತಾನೆ. ಆದರೆ ಬೆಂಕಿಯ ಕೆನ್ನಾಲಿಗೆ ಹಾಗೆ ಅಲ್ಲ. ಅದು ಸುಡುತ್ತಿದ್ದ ಹಾಗೆ ಆ ಮನುಷ್ಯ ನಿಂತ ಕಡೆ ನಿಲ್ಲಲು ಆಗದೆ ಜಾಗ ಸಿಕ್ಕಿದ ಕಡೆಯಲ್ಲೆಲ್ಲಾ ಓಡಲು ಶುರು ಮಾಡುತ್ತಾನೆ. ಇಡೀ ಮನೆಗೆ ಬೆಂಕಿಯನ್ನು ವ್ಯಾಪಿಸಿ ನಂತರ ಅದರಲ್ಲಿ ತಾನು ಸುಟ್ಟ ಗಾಯಗಳ ನೋವಿನಿಂದ ಸಾಯುತ್ತಾನೆ. ಆದರೆ ಇಲ್ಲಿ ಭಾಗ್ಯಶ್ರೀ ನೇಣು ಬಿಗಿದು ಸತ್ತಿಲ್ಲ. ಅವಳು ದೇಹಕ್ಕೆ ಬೆಂಕಿ ತಾಗಿ ಸತ್ತು ಹೋಗಿದ್ದಾಳೆ. ಆದರೆ ಆಶ್ವರ್ಯ ಎಂದರೆ ಹುಡುಗಿ ತಾನು ಬೆಂಕಿ ತಗುಲಿದ ತಕ್ಷಣ ಎಲ್ಲೂ ಕೂಡ ಓಡಿ ಹೋಗಿಲ್ಲ. ಅವಳು ಇಡೀ ದೇಹ ಸುಟ್ಟು ಹೋಗುವ ತನಕ ಒಂದೇ ಕಡೆ ಇದ್ದಳು. ನಂತರ ಬಹುತೇಕ ಸುಟ್ಟ ಬಳಿಕ ಮನೆಯ ಅಟ್ಟದಿಂದ ಕೆಳಗೆ ಬಿದ್ದಿದ್ದಾಳೆ. ಆಗ ಅವಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹಾಗಾದರೆ ಇದು ಆತ್ಮಹತ್ಯೆ ಅಲ್ಲ. ದೇಹಕ್ಕೆ ಬೆಂಕಿ ಕೊಟ್ಟು ಒಂದೇ ಕಡೆ ತುಂಬಾ ಹೊತ್ತು ನಿಲ್ಲಲು ಭಾಗ್ಯಶ್ರೀ ಎನೂ ದೇವರಲ್ಲ. ಹಾಗಾದರೆ ಎನು ಆಗಿರಬಹುದು, ಸಂಶಯವೇ ಇಲ್ಲ, ಅದು ಕೊಲೆ.
ಅದೇ ಕಾರಣಕ್ಕೆ ಭಾಗ್ಯಶ್ರೀ ತಂದೆ ರಾಮಪ್ಪ ಸಾಲಿಯಾನ್ ವೇಣೂರು ಪೊಲೀಸರ ಮುಂದೆ “ನನ್ನ ಮಗಳದ್ದು ಆತ್ಮಹತ್ಯೆ ಅಲ್ಲ, ಕೊಲೆ” ಎಂದು ಖಡಾ ಖಂಡಿತವಾಗಿ ಹೇಳಿರುವುದು. ಆದರೆ ಭಾಗ್ಯಶ್ರೀ ಬೆಂಕಿ ತಗುಲಿಸಿಕೊಂಡಿರುವುದು ತನ್ನ ಮನೆಯ ಅಟ್ಟದ ಮೇಲೆ. ನೀವು ಬಹುತೇಕ ಹಳೆಯ ಮನೆಗಳನ್ನು ನೋಡಿದಿದ್ದರೆ ಹೆಚ್ಚಿನ ಮನೆಗಳಿಗೆ ಅಟ್ಟ ಇರುತ್ತದೆ. ಅಲ್ಲಿ ಮನೆಯ ಹಳೆವಸ್ತುಗಳನ್ನು ಶೇಖರಿಸಿ ಇಟ್ಟಿರುತ್ತಾರೆ. ಅಲ್ಲಿ ನಾವು ಹೋಗುವುದು ಕಡಿಮೆನೆ. ಅಗತ್ಯ ಇದ್ದರೆ ಯಾರ ಸಹಾಯವಾದರೂ ಪಡೆದುಕೊಂಡು ನಾವು ಎಣಿ ಹತ್ತಿ ಅಟ್ಟಕ್ಕೆ ಹೋಗುತ್ತೆವೆ. ಆದರೆ ಆವತ್ತು ಅಂದರೆ ಸೋಮವಾರ ಎಪ್ರಿಲ್ ೬ ರಂದು ಭಾಗ್ಯಶ್ರೀ ಅಟ್ಟ ಎರಿದ್ದಾಳೆ, ಅದು ಕೂಡ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ. ಆವತ್ತು ಅವಳ ಮನೆಯಲ್ಲಿ ಯಾರೂ ಇರಲಿಲ್ಲ. ತಾಯಿ ಸಮೀಪದ ಶಾಲೆಗೆ ಮಧ್ಯಾಹ್ನದ ಬಿಸಿಯೂಟದ ಕೆಲಸಕ್ಕೆ ಹೋಗಿದ್ದರು. ತಂದೆ ಕೂಲಿ ಕೆಲಸಕ್ಕೆ ಹೋಗಿದ್ದರು. ಏಕೈಕ ಸಹೋದರ ಕಾಲೇಜಿಗೆ ರಜೆ ಇರುವುದರಿಂದ ಮಂಗಳೂರಿನ ಬೇಕರಿ ಒಂದಕ್ಕೆ ಕೆಲಸಕ್ಕೆ ಹೋಗಿದ್ದ. ಬಹುಶ; ಅದೇ ಸಮಯಕ್ಕೆ ಯಾರಾದರೂ ಭಾಗ್ಯಶ್ರೀ ಮನೆಯನ್ನು ಪ್ರವೇಶಿಸಿದ್ದರಾ? ಅವಳನ್ನು ಅತ್ಯಾಚಾರಕ್ಕೆ ಪ್ರಯತ್ನಿಸಿ ಕೊನೆಗೆ ಅವಳನ್ನು ಅಟ್ಟದಲ್ಲಿ ಬೆಂಕಿ ಕೊಟ್ಟು ಸುಟ್ಟು ಕೊನೆಗೆ ಹೆಣವನ್ನು ಕೆಳಗೆ ಬಿಸಾಡಿ ಮನೆಗೆ ಬೀಗ ಹಾಕಿ ಹೊರಟು ಹೋದರಾ? ಅಂತಹ ಒಂದು ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗುತ್ತದೆ. ಇಲ್ಲದಿದ್ದರೆ ಪುತ್ತೂರಿನ ಟೀಚರೊಬ್ಬರ ಪತ್ನಿಯ ನಿಗೂಢ ಸಾವಿನಂತೆ ಈ ಪ್ರಕರಣ ಹಾಗೆ ಉಳಿದು ಬಿಡಲಿದೆ.
ಯಾಕೆಂದರೆ ಇದೇ ವರ್ಷದ ಫೆಬ್ರವರಿಯಲ್ಲಿ ಸುಬ್ರಹ್ಮಣ್ಯದ ಹತ್ತಿರವಿರುವ ನಾಲ್ಕೂರು ಗ್ರಾಮ ಉತ್ರಂಬೆಯ ಅಕ್ಷಿತಾ ಎಂಬ ಯುವತಿ ಹೀಗೆ ನಿಗೂಢವಾಗಿ ಬೆಂಕಿಗೆ ಆಹುತಿಯಾಗಿದ್ದಳು. ಆವತ್ತು ಕೂಡ ಅಕ್ಷಿತಾ ತನ್ನ ಮನೆಯಲ್ಲಿ ಒಂಟಿಯಾಗಿದ್ದಳು. ಆಕೆಯ ಹೆಣ ಬೆಡ್ರೂಂವಿನಲ್ಲಿ ಮಲಗಿದ ಸ್ಥಿತಿಯಲ್ಲಿಯೇ ಪತ್ತೆಯಾಗಿತ್ತು. ಕೊಂದದ್ದು ಯಾರೆಂದು ಗೊತ್ತಾಗಿರಲೇ ಇಲ್ಲ. ಇಲ್ಲೂ ಕೂಡ ಅದೇ ಕತೆ. ಒಟ್ಟಿನಲ್ಲಿ ಧರ್ಮಸ್ಥಳದ ಪುಣ್ಯ ಭೂಮಿಯ ಊರಿನಲ್ಲಿ ಒಂದೊಂದೇ ಹೆಣ್ಣು ಮಕ್ಕಳು ನಿಗೂಢವಾಗಿ ಸಾವನ್ನು ಅಪ್ಪುತ್ತಿದ್ದಾರೆ. ಅಷ್ಟಕ್ಕೂ ಇದು ಆಕಸ್ಮಿಕ ಘಟನೆನಾ, ಇದಕ್ಕೆ ಉತ್ತರ ನಕಾರಾತ್ಮಕವಾಗಿಯೇ ಇರುತ್ತದೆ. ಕಾರಣ ಮನೆಯ ಸಿಲಿಂಡರ್ ಏನೂ ಆಗಿಲ್ಲ. ಅದಲ್ಲದೆ ಮನೆಯ ಎದುರಿನ ಬಾಗಿಲಿಗೆ ಬೀಗ ಹಾಕಿರುವುದು ಎಲ್ಲಾ ಸಂಶಯಕ್ಕೆ ಕಾರಣವಾಗಿದೆ.
ಘಟನೆಯನ್ನು ಮೊದಲು ನೋಡಿದ್ದು ಸ್ಥಳೀಯ ನಿವಾಸಿ ಹಾಗೂ ಸಂಬಂಧಿಯೂ ಆಗಿರುವ ಸುನೀಲ್. ಮನೆಯ ಅಟ್ಟಲಿಗೆಯಲ್ಲಿ ಬೆಂಕಿಯ ಕೆನ್ನಾಲಿಗೆಯನ್ನು ಕಂಡ ಸುನೀಲ್, ಶಾಲೆಗೆ ಹೋಗಿ ಅಡುಗೆ ನಿರತ ಭಾಗ್ಯಶ್ರೀಯ ತಾಯಿ ಶಶಿಕಲಾ ಅವರು ಅರ್ಜೆಂಟ್ ಬನ್ನಿ ಎಂದು ಕರೆದಿದ್ದಾನೆ. ಬೀಗ ತೆಗೆದು ನೋಡಿದಾಗ ಮಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದಾಳೆ. ಈಗ ಎಲ್ಲ ನಿಗೂಢ ಸಾವಿನ ಪ್ರಕರಣದಂತೆ ಈ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕಾದರೆ ಭಾಗ್ಯಶ್ರೀಯ ಮೊಬೈಲ್ಗೆ ಬರುತ್ತಿದ್ದ ಕರೆಗಳನ್ನು ಪತ್ತೆ ಮಾಡಬೇಕು. ಅವಳಿಗೆ ಯಾರೆಲ್ಲಾ ಕರೆ ಮಾಡುತ್ತಿದ್ದರು, ಯಾರು ಎಷ್ಟು ಬಾರಿ ಕರೆ ಮಾಡಿದ್ದಾರೆ ಎಂದು ಮಾಹಿತಿ ಕಲೆ ಹಾಕಿದರೆ ತನಿಖೆಗೆ ಪೂರಕ ಆಗಲಿದೆ. ಮೊದಲ ಬಾರಿ ಪೊಲೀಸರು ತನಿಖೆಗೆ ಬಂದಾಗ ಸಿಮ್ ಅವರಿಗೆ ಸಿಕ್ಕಿರಲಿಲ್ಲ ಎಂದೇ ಹೇಳಲಾಗಿತ್ತು. ಆದರೆ ಈಗ ಸಿಮ್ ತಮ್ಮ ಬಳಿ ಇದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಪೊಲೀಸರು ಈ ಸಾವಿನ ನಿಗೂಢತೆಯನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ಅನೇಕ ಸಂಘಟನೆಗಳು ಈಗಾಗಲೇ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿವೆ. ಆದರೆ ವೇಣೂರು ಪೊಲೀಸರು ಮನಸ್ಸು ಮಾಡಿದರೆ ಯಾವುದು ಕಷ್ಟವಲ್ಲ; ಹೊರಗಿನ ಶಕ್ತಿಗಳು ಒತ್ತಡ ತರುವವರೆಗೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.