ಬೆಳ್ತಂಗಡಿ : ಮದ್ಯವ್ಯಸನಿಗಳನ್ನು ದುರುಪಯೋಗಪಡಿಸುವ ವ್ಯವಸ್ಥೆ ಸಮಾಜದಲ್ಲಿದೆ. ಯಾರೂ ಮಾಡದ ಕೆಲಸಗಳನ್ನು ಮದ್ಯದ ಆಮಿಷವೊಡ್ಡಿ ಮಾಡಿಸುವುದು ವಿಷಾಧನೀಯ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸ್ವಾಮಿ ಕೃಪಾ ಕಲ್ಯಾಣ ಮಂಟಪ ಕನ್ಯಾಡಿಯಲ್ಲಿ ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ 61ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.
ಗಲೀಜು ಸ್ಥಳಗಳನ್ನು ಸ್ವಚ್ಚಗೊಳಿಸಲು, ಸೇಡು ತೀರಿಸಲು, ಕೊಲೆ, ಕಳ್ಳತನ ಮುಂತಾದ ಕಾನೂನು ಬಾಹಿರ ಕೃತ್ಯಗಳನ್ನು ಮಾಡಲು ಮದ್ಯಪಾನಿಗಳನ್ನು ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಅವನನ್ನು ಅಮಾನವೀಯವಾಗಿ ಪರಿಗಣಿಸುವ, ಅಸ್ಪೃಶ್ಯನಂತೆ ಕಾಣುವ ವ್ಯಕ್ತಿಗಳೂ ಇದ್ದಾರೆ. ಇಂತಹ ವ್ಯವಸ್ಥೆಯ ಮಧ್ಯೆ ವ್ಯಸನಿ ಬದುಕು ನಡೆಸುವುದಾದರೂ ಹೇಗೆ? ಈ ಪ್ರಶ್ನೆಗಳಿಗೆ ಉತ್ತರವಾಗಿ ದುಡಿಯುವ ಸಂಸ್ಥೆಯೇ ಜನಜಾಗೃತಿ ವೇದಿಕೆ. ಮದ್ಯಪಾನಿ ಸಮಾಜದಿಂದ ಕಡೆಗಣಿಸಲ್ಪಟ್ಟವನಲ್ಲ, ಯಾವುದೋ ಒಂದು ಕೆಟ್ಟಗಳಿಗೆ ಅವನನ್ನು ವ್ಯಸನಿಯನ್ನಾಗಿ ಮಾಡಿದೆ. ಆದುದರಿಂದ ಸಮಾಜ ಅವನನ್ನು ಪರಿವರ್ತಿಸುವ ಪ್ರಯತ್ನ ಮಾಡಬೇಕು. ಇಂತಹ ಪ್ರಯತ್ನ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಲ್ಲಿ ಆಗುತ್ತಿದೆ ಎಂದರು.
ಶಿಬಿರಗಳಲ್ಲಿ ಚಿಕಿತ್ಸೆ, ಸಲಹೆ ನೀಡುವುದಲ್ಲದೆ ಅವನನ್ನು ಆತ್ಮಾವಲೋಕನ ಮಾಡಲು ಅವಕಾಶ ನೀಡಲಾಗುತ್ತಿದೆ. ಕೌಟುಂಬಿಕವಾಗಿ ಸತಿ-ಪತಿಗಳನ್ನು ಸೇರಿಸಿ ಸಾಂತ್ವನ ನೀಡಲಾಗುತ್ತಿದೆ. ಈ ಪ್ರಯತ್ನದಿಂದ ವೇದಿಕೆಯ ಶಿಬಿರಗಳು ಉತ್ತಮ ಫಲಿತಾಂಶವನ್ನು ಹೊಂದಿವೆ ಎಂದು ತಿಳಿಸಿದರು.
ಶಿಬಿರದಲ್ಲಿ ೬೭ ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪಟ್ಟಣ ಪಂಚಾಯತ್ ಅಧ್ಯಕ್ಷರು, ಪಕ್ಷದ ಕಾರ್ಯದರ್ಶಿಗಳು, ಪಂಚಾಯತ್ ಸದಸ್ಯರು, ಶಿಕ್ಷಕರು, ದಂತ ವೈದ್ಯರು ಹೀಗೆ ವಿವಿಧ ವಿಭಾಗಗಳ ಪ್ರತಿಷ್ಠಿತ ವ್ಯಕ್ತಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಡಿ.ಎ.ರಹಿಮಾನ್, ಕಿಶೋರ್ ಹೆಗ್ಡೆ, ಪ್ರತಾಪ್ಸಿಂಹ ನಾಯಕ್, ಅಡೂರು ವೆಂಕಟ್ರಾಯ, ತಿಮ್ಮಪ್ಪ ಗೌಡ ಬೆಳಾಲು, ವಿಶ್ವನಾಥ್ ಪೈ, ಡಾ|ಮೋಹನ್ ದಾಸ್ ಗೌಡ, ಡಾ|ಪ್ರಭಾಶ್, ಕೆ.ವಸಂತ ಸಾಲ್ಯಾನ್, ರಾಜು ಪೂಜಾರಿ, ಕೆ.ಸತೀಶ್ ಹೊನ್ನವಳ್ಳಿ, ಸುಮನಾ ಪಿಂಟೋ, ಡಾ|ಸಂತೋಷ್ ಪ್ರಭು, ಎ.ಶ್ರೀಹರಿ, ಸುಬ್ರಹ್ಮಣ್ಯ ಪ್ರಸಾದ್, ಕೆ.ಮಹಾವೀರ ಅಜ್ರಿ, ಹರೀಶ್ ರಾವ್ ಭಾಗವಹಿಸಿದ್ದರು. ನವಜೀವನ ಸದಸ್ಯರು ದಿನಕ್ಕೆ ೫ ಮಂದಿಯಂತೆ ಅನಿಸಿಕೆಯನ್ನು ಹೇಳಿದರು.
ಶಿಬಿರವನ್ನು ನಿರ್ದೇಶಕರಾದ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಶಿಬಿರಾಧಿಕಾರಿ ಭಾಸ್ಕರ್, ಗಣೇಶ್, ಆರೋಗ್ಯ ಸಹಾಯಕಿ ಚಿತ್ರಾ, ನೇತ್ರಾವತಿ ನಿರ್ವಹಿಸಿರುತ್ತಾರೆ. ಎಸ್.ಡಿ.ಎಮ್.ಟ್ರಸ್ಟ್ನ ಕಾರ್ಯದರ್ಶಿ ಶಿಶುಪಾಲ್ ಪೂವಣಿಯವರು ಶಿಬಿರದ ವ್ಯವಸ್ಥೆಗೆ ಸಹಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.