ಅವರೊಬ್ಬ ಅಜಾನುಬಾಹು ವ್ಯಕ್ತಿ. ಪದವಿ ಪಡೆದ ಬಳಿಕ ಶಿಕ್ಷಕರಾಗಿ ಉದ್ಯೋಗ ನಿರ್ವಹಿಸುತ್ತಿದ್ದರು. ಅವರು ಕೇರಳದ ಕಣ್ಣೂರು ಜಿಲ್ಲೆಯ ಪೆರಿಂಚೆರೆ ಗ್ರಾಮದಲ್ಲಿರುವ ಹೈಸ್ಕೂಲನಲ್ಲಿ ಅಧ್ಯಾಪಕರಾಗಿದ್ದರು. ಪತ್ನಿ ವನಿತಾರಾಣಿ ಮತ್ತು ಪುತ್ರಿ ಯಮುನಾ ಭಾರತಿಯೊಂದಿಗೆ ಸುಖೀ ಸಂಸಾರ ಅವರದ್ದಾಗಿತ್ತು. ಆದರೆ ಒಂದು ಸಂಜೆ ಶಾಲೆ ಮುಗಿಸಿ ಮನೆಗೆ ಮರಳುತ್ತಿರುವಾಗ ಹನ್ನೆರಡು ಮಂದಿ ದುಷ್ಕರ್ಮಿಗಳ ತಂಡ ಹಿಂದಿನಿಂದ ಬಂದೆರಗಿ ಹಲ್ಲೆ ನಡೆಸಿತು. ಕೈಗಳನ್ನು ಬಿಗಿಯಾಗಿ ಹಿಡಿದು, ಅವರ ಎರಡೂ ಕಾಲುಗಳನ್ನು ಹರಿತವಾದ ಗರಗಸ, ಮಚ್ಚುಗಳಿಂದ ನಿರ್ದಯವಾಗಿ ಕತ್ತರಿಸಿಹಾಕಿ ಪರಾರಿಯಾದರು. ಪ್ರಜ್ಞೆ ತಪ್ಪಿ ಕೆಳಗೆ ಕುಸಿದುಬಿದ್ದ ಆ ಅಧ್ಯಾಪಕರನ್ನು ಅದೇ ದಾರಿಯಲ್ಲಿ ಹೋಗುತ್ತಿದ್ದವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು.
ಈಗ ಅವರಿಗೆ ಎರಡೂ ಕಾಲುಗಳು ಇಲ್ಲ. ಕೃತಕ ಕಾಲುಗಳನ್ನು ಅಳವಡಿಸಿಕೊಂಡು ನಡೆಯುತ್ತಾರೆ. ಆಗಾಗ ತೊಡೆಯಲ್ಲಿ ಯಮಯಾತನೆ ಕಾಣಿಸಿಕೊಳ್ಳುತ್ತಿದೆ. ಆಗ ಡಾಕ್ಟರ್ ಬಳಿ ಹೋಗಿ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ. ಕಣ್ಣೂರಿನ ದುಃಸ್ವಪ್ನ ಮರೆಯಲು ತ್ರಿಶೂರಿಗೆ ತಮ್ಮ ಮನೆಯನ್ನು ಸ್ಥಳಾಂತರಿಸಿ ಪೇರಮಂಗಲದಲ್ಲಿರುವ ದುರ್ಗಾ ವಿಲಾಸಂ ಹೈಯರ್ ಸೆಕೆಂಡರಿ ಸ್ಕೂಲ್ನಲ್ಲಿ ಅಧ್ಯಾಪಕರಾಗಿದ್ದಾರೆ.
ತನ್ನೆರಡೂ ಕಾಲು ಕಳೆದುಕೊಂಡರೂ ಜೀವನೋತ್ಸಾಹ ಕಳೆದುಕೊಳ್ಳದೆ ಹಸನ್ಮುಖಿಯಾಗಿರುವ ಈ ವ್ಯಕ್ತಿ ಸಿ. ಸದಾನಂದ ಮಾಸ್ಟರ್. ಅವರ ಮೇಲೆ ಹಲ್ಲೆ ನಡೆಸಿ, ಎರಡೂ ಕಾಲುಗಳನ್ನು ತುಂಡರಿಸಿದ ದುಷ್ಟರು ಮಾರ್ಕ್ಸಿಸ್ಟ್ ಗೂಂಡಾಗಳು. ಅದು ನಡೆದಿದ್ದು 1994 ರ ಜನವರಿ 25 ರಂದು. ಸದಾನಂದ ಮಾಸ್ಟರ್ ಮಾಡಿದ ಅಪರಾಧ – ಆರೆಸ್ಸೆಸ್ಗೆ ಸೇರಿ ಸಕ್ರಿಯ ಕಾರ್ಯಕರ್ತರಾಗಿ ಕಣ್ಣೂರು ಜಿಲ್ಲೆಯಾದ್ಯಂತ ಸಂಘಕಾರ್ಯವನ್ನು ವ್ಯಾಪಕವಾಗಿ ವಿಸ್ತರಿಸಿದ್ದು! ಕಣ್ಣೂರು ಹೇಳಿಕೇಳಿ ಮಾರ್ಕ್ಸಿಸ್ಟ್ ಕಮ್ಯೂನಿಸ್ಟರ ಭದ್ರಕೋಟೆಯೆಂದು ಪ್ರತೀತಿ. (ಈಗ ಆ ಪ್ರತೀತಿಗೆ ಹೊಡೆತ ಬಿದ್ದಿದೆ!) ತಮ್ಮ ಭದ್ರ ಕೋಟೆಯೊಳಗೇ ಆರೆಸ್ಸೆಸ್ ಈ ಪರಿ ಬೆಳೆಯುತ್ತಿರುವುದನ್ನು ಮಾರ್ಕ್ಸಿಸ್ಟರು ಸಹಿಸುವುದಾದರೂ ಹೇಗೆ? ತಾತ್ವಿಕ ವಿರೋಧದಿಂದ ಆರೆಸ್ಸೆಸ್ಸನ್ನು ಮಟ್ಟ ಹಾಕುವುದು ಸಾಧ್ಯವಿಲ್ಲ ಎಂದೆನಿಸಿರಬಹುದು ಅವರಿಗೆ. ಅದಕ್ಕೇ ಅವರು ಹಿಡಿದ ಹಾದಿ – ಭಯಾನಕ ಹಿಂಸಾಚಾರದ್ದು. ತಮಗಾಗದ ವಿರೋಧಿಗಳನ್ನು ಶಾರೀರಿಕವಾಗಿ ‘ಮುಗಿಸುವುದು’. ಇಂತಹ ದೈಹಿಕ ಹಿಂಸಾಚಾರದ ಮೂಲಕ ಭಯಾನಕ ವಾತಾವರಣ ನಿರ್ಮಿಸಿ, ಆರೆಸ್ಸೆಸ್ ಕಡೆಗೆ ಯಾವ ತರುಣರೂ ಆಕರ್ಷಿತರಾಗದಂತೆ ಮಾಡಬಹುದೆಂದು ಅವರು ಲೆಕ್ಕ ಹಾಕಿದ್ದರು. ಆದರೆ ಮಾರ್ಕ್ಸಿಸ್ಟರ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ. ಮಾರ್ಕ್ಸಿಸ್ಟರ ಹಿಂಸಾಚಾರ ಹೆಚ್ಚಿದಷ್ಟೂ ಆರೆಸ್ಸೆಸ್ ಚಟುವಟಿಕೆಗಳು ಇನ್ನಿಲ್ಲದಂತೆ ಗ್ರಾಮಗ್ರಾಮಗಳಲ್ಲಿ ಗರಿಗೆದರಿ ವೇಗವಾಗಿ ಬೆಳೆದಿವೆ, ಬೆಳೆಯುತ್ತಿವೆ. ಮಾರ್ಕ್ಸಿಸ್ಟ್ ನಾಯಕರ ತವರು ನೆಲದಲ್ಲೇ ಸಂಘದ ಶಾಖೆಗಳು ಆರಂಭವಾಗಿವೆ. ಹಿಂಸಾಚಾರಕ್ಕೆ ಆರೆಸ್ಸೆಸ್ ಮಣಿಯಲಿಲ್ಲ. ಹಿಂದುತ್ವದ ಆದರ್ಶ, ಸಿದ್ಧಾಂತಗಳಿಗೆ ಸೋಲಾಗಲಿಲ್ಲ. ಆ ಆದರ್ಶ, ಸಿದ್ಧಾಂತಗಳನ್ನು ಎತ್ತಿ ಹಿಡಿಯಲು ಕೊಲೆ, ಕ್ರೌರ್ಯಗಳಿಗೆ ಹೆದರದೆ ಗ್ರಾಮ ಗ್ರಾಮಗಳಿಂದ, ಎಲ್ಲ ಜಾತಿ ವರ್ಗಗಳಿಂದ ಸಾವಿರಾರು ತರುಣರು ಎದ್ದು ಬಂದರು. ಮಾರ್ಕ್ಸಿಸ್ಟರ ಹಿಂಸಾಚಾರದ ಸವಾಲುಗಳಿಗೆ ದಿಟ್ಟ ಪ್ರತ್ಯುತ್ತರ ನೀಡಿದರು. ಆದರೆ ಇಂತಹ ಸಂಘರ್ಷದಲ್ಲಿ ತಮ್ಮ ಅಮೂಲ್ಯ ಜೀವವನ್ನೇ ಅವರು ಕಳೆದುಕೊಳ್ಳಬೇಕಾಯಿತು. ಕಣ್ಣೂರು ಜಿಲ್ಲೆಯೊಂದರಲ್ಲೇ ಮಾರ್ಕ್ಸಿಸ್ಟರ ಹಿಂಸಾಚಾರಕ್ಕೆ ಜೀವ ಕಳೆದುಕೊಂಡು ಹುತಾತ್ಮರಾದವರ ಸಂಖ್ಯೆ ಇದುವರೆಗೆ 100 ಕ್ಕೂ ಹೆಚ್ಚು. ಹೀಗೆ ಹುತಾತ್ಮರಾದವರಲ್ಲಿ ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು, ಸ್ಕೂಲ್ ಮಾಸ್ಟರ್ಗಳು, ಮೀನು ಹಿಡಿಯುವ ಬೆಸ್ತರು, ಸಣ್ಣ ಪುಟ್ಟ ಉದ್ಯೋಗ ನಿರ್ವಹಿಸುವವರು, ವಕೀಲರು, ಗೃಹಿಣಿಯರು – ಹೀಗೆ ಎಲ್ಲರೂ ಇದ್ದಾರೆ.
ಸದಾನಂದ ಮಾಸ್ಟರ್ ಮೊದಲು ಆರೆಸ್ಸೆಸ್ನಲ್ಲಿ ಇರಲಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಅವರು ಮಾರ್ಕ್ಸಿಸ್ಟ್ ಯುವವಿದ್ಯಾರ್ಥಿ ಸಂಘಟನೆಯಾಗಿರುವ ಎಸ್ಎಫ್ಐನ ಸಕ್ರಿಯ ಕಾರ್ಯಕರ್ತರಾಗಿದ್ದರಂತೆ. ಅವರ ತಂದಯವರೂ ಸಿಪಿಎಂನ ಸಕ್ರಿಯ ಕಾರ್ಯಕರ್ತರಂತೆ. ಆದರೆ ಆರೆಸ್ಸೆಸ್ ತತ್ವ, ಸಿದ್ಧಾಂತ ಅವರನ್ನು ಬಲವಾಗಿ ಆಕರ್ಷಿಸಿತ್ತು. ಮಾರ್ಕ್ಸಿಸ್ಟ್ ಆದರ್ಶ, ಸಿದ್ಧಾಂತದಲ್ಲಿ ಭ್ರಮನಿರಸನ ಉಂಟಾಯಿತು. ಮಾರ್ಕ್ಸಿಸ್ಟರು ಸೋಲುತ್ತಿರುವುದೇ ಇಲ್ಲಿ. ಕೇರಳದಲ್ಲಿ ಸಿಪಿಎಂನಿಂದ ಸಂಘ ಪರಿವಾರದತ್ತ ಆಕರ್ಷಿತರಾಗಿ ಬಂದ ಕಾರ್ಯಕರ್ತರ ಸಂಖ್ಯೆ ಸಾಕಷ್ಟಿದೆ. ಅದಕ್ಕೆ ಕಡಿವಾಣ ಹಾಕುವುದು ಮಾರ್ಕ್ಸಿಸ್ಟ್ ನಾಯಕರಿಗೆ ಈಗಲೂ ಸಾಧ್ಯವಾಗಿಲ್ಲ. ಆರೆಸ್ಸೆಸ್ಗೆ ಸೇರಿದರೆ ಯಾವ ಆರ್ಥಿಕ ಲಾಭವೂ ಇಲ್ಲ. ತಮ್ಮ ಜೀವವನ್ನೇ ಪಣಕ್ಕೊಡ್ಡುವ ಅಪಾಯ ಎದುರಿಸಬೇಕಾಗುತ್ತದೆಂದು ಗೊತ್ತಿದ್ದೂ ಮಾರ್ಕ್ಸಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಕಳೆದುಕೊಂಡ ತರುಣರು ಆರೆಸ್ಸೆಸ್ನತ್ತ ಆಕರ್ಷಿತರಾಗಿರುವುದು ಮಾತ್ರ ಸೋಜಿಗ, ಆದರೂ ನಿಜ! ಮಾರ್ಕ್ಸಿಸ್ಟರು ಗುರಿ ಇಟ್ಟಿರುವುದೂ ಕೂಡ ಅಂಥವರ ಮೇಲೆಯೇ. ಕಳೆದ ಮೂರು ದಶಕಗಳ ಅವಧಿಯಲ್ಲಿ (1969-2000) 160 ಕ್ಕೂ ಹೆಚ್ಚು ಸಂಘಪರಿವಾರದ ಕಾರ್ಯಕರ್ತರನ್ನು ಮಾರ್ಕ್ಸಿಸ್ಟ್ ಗೂಂಡಾಗಳು ಕೊಚ್ಚಿ ಕೊಂದು ಹಾಕಿದ್ದಾರೆ. ನೂರಾರು ಮಂದಿ ಅಂಗವಿಕಲರಾಗುವಂತೆ ಮಾಡಿದ್ದಾರೆ. ಸದಾನಂದ ಮಾಸ್ಟರ್ ತಮ್ಮೆರಡು ಕಾಲುಗಳನ್ನು ಕಳೆದುಕೊಂಡಿದ್ದರೆ, ಕತಿರೂರು ಬಿಜೆಪಿ ಅಧ್ಯಕ್ಷ ಪಿ. ಶಿವಾಜಿ ತಮ್ಮೆರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಮಾರ್ಕ್ಸಿಸ್ಟ್ ಗೂಂಡಾಗಳ ಬಾಂಬ್ ದಾಳಿಯಲ್ಲಿ ಮೂರ್ಜಿಕ್ಕರದ ಕಂಡ್ಯನ್ ಶಶಿ ಅವರ ಒಂದು ಕಾಲು ಊನವಾಗಿದೆ.
ಮೊನ್ನೆ ಮೊನ್ನೆ, ಫೆ. 15 ರಂದು ಸುಜಿತ್ (27) ಎಂಬ ಸಂಘದ ಕಾರ್ಯಕರ್ತನನ್ನು ಕಣ್ಣೂರು ಜಿಲ್ಲೆಯ ಪಪ್ಪಿನಿಸ್ಸೆರಿ ಎಂಬಲ್ಲಿ ಮನೆಗೇ ನುಗ್ಗಿ ಕೊಂದು ಹಾಕಿದ್ದಾರೆ. ರಾತ್ರಿ 11.30 ರ ವೇಳೆಗೆ ಸುಜಿತ್ ಮನೆಗೆ ನುಗ್ಗಿದ ಸಿಪಿಎಂ ಗೂಂಡಾಗಳು ಅವರ ಪೋಷಕರು ತಡೆದರೂ ಕೂಡ ಸುಜಿತ್ನ ಮೇಲೆ ದಾಳಿ ನಡೆಸಿ ಅವನನ್ನು ಮುಗಿಸಿದ್ದಾರೆ. ಆತನ ಕುಟುಂಬದ ಸದಸ್ಯರಿಗೂ ಗಾಯಗಳಾಗಿವೆ. ಫೆ. 17 ರಂದು ತಲಶ್ಶೆರಿಯ ಇನ್ನೊಬ್ಬ ಆರೆಸ್ಸೆಸ್ ಕಾರ್ಯಕರ್ತ ಸುಬ್ರಮಣಿಯನ್ ಮನೆಯ ಮೇಲೆ ಸಿಪಿಎಂ ಗೂಂಡಾಗಳು ಬಾಂಬ್ ದಾಳಿ ನಡೆಸಿದರು. ಹೀಗೆ ಸಿಪಿಎಂ ಗೂಂಡಾಗಳ ಕ್ರೌರ್ಯ ಮುಂದುವರೆಯುತ್ತಲೇ ಇದೆ. ಕೊಲೆ ಎನ್ನುವುದು ಅವರ ಕೊನೆಯ ಅಸ್ತ್ರವಾಗಿದೆ.
ಮಾರ್ಕ್ಸಿಸ್ಟ್ರ ಭದ್ರಕೋಟೆಯಾಗಿದ್ದ ಕಣ್ಣೂರು, ಪಾಲಕ್ಕಾಡ್ಗಳೆಲ್ಲಾ ಈಗ ಛಿದ್ರಗೊಂಡಿವೆ. ಸಂಘಕಾರ್ಯ ಅಲ್ಲೆಲ್ಲಾ ವ್ಯಾಪಕವಾಗಿ ವಿಸ್ತರಿಸಿದೆ. ಆದರೆ ಸಂಘಕಾರ್ಯದ ಇಂತಹ ವಿಸ್ತಾರಕ್ಕೆ ಕಾರ್ಯಕರ್ತರು ತೆತ್ತ ಬೆಲೆ ಮಾತ್ರ ಅಪಾರ. ಸಾಕಷ್ಟು ರಕ್ತ ಅಲ್ಲೆಲ್ಲಾ ಚೆಲ್ಲಾಡಿದೆ. ಮುಗಿಲು ಮುಟ್ಟುವ ಆಕ್ರಂದನ ಅಲ್ಲಿನ ಗಾಳಿಯಲ್ಲಿ ಅಲೆಅಲೆಯಾಗಿ ಬೆರೆತಿದೆ. ತಲಶ್ಶೆರಿಯ ತೃಕ್ಕೈ ಶಿವಕ್ಷೇತ್ರಂ ಮಂದಿರದ ಬಳಿ ನಿರ್ಮಿಸಲಾಗಿರುವ ‘ಸಾವರ್ಕರ್ ಸದನ’ ಸಂಘ ಕಾರ್ಯಾಲಯದ ಮೊದಲನೇ ಮಹಡಿಯ ಹಾಲ್ನಲ್ಲಿ ಗೋಡೆಯ ಮೇಲೆ ಮಾರ್ಕ್ಸಿಸ್ಟ್ ಗೂಂಡಾಗಳಿಂದ ಹತರಾದ 66 ಮಂದಿ ಹುತಾತ್ಮರ ಭಾವಚಿತ್ರಗಳನ್ನು ಸಾಲಾಗಿ ಜೋಡಿಸಿಡಲಾಗಿದೆ. ಕೆಳಗೆ ಮಲಯಾಳ ಭಾಷೆಯಲ್ಲಿ ‘ವೀರಸ್ಮ ತಿ’ ಎಂಬ ಶೀರ್ಷಿಕೆ ಇದೆ. 1969 ಏಪ್ರಿಲ್ 28 ರಂದು ಹತರಾದ ತಲಶ್ಶೆರಿಯ ಮುಖ್ಯಶಿಕ್ಷಕ ಟೈಲರ್ ವಡಿಕ್ಕಲ್ ರಾಮಕೃಷ್ಣನ್ ಅವರಿಂದ ಹಿಡಿದು, ಹೆಂಡತಿ ಜೊತೆಗಿದ್ದಾಗಲೇ ಬರ್ಬರವಾಗಿ ಹತ್ಯೆಗೀಡಾದ ಪನ್ಯನೂರು ಚಂದ್ರನ್, ಶಾಲೆಯಲ್ಲಿ ಮಕ್ಕಳೆದುರೇ ಭೀಕರವಾಗಿ ಕೊಲೆಗೀಡಾದ ಪಾನೂರು ಕೆ.ಟಿ. ಜಯಕೃಷ್ಣನ್ ಮಾಸ್ಟರ್, ಬಂಧುಗಳ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದಾಗ ಹಲ್ಲೆಗೀಡಾಗಿ ಅಸುನೀಗಿದ ಆರೆಸ್ಸೆಸ್ ಕಾರ್ಯಕರ್ತನೊಬ್ಬನ ತಾಯಿ ಇರಟ್ಟಿಯ ಅಮ್ಮುಅಮ್ಮ ತಿಲಂಗೇರಿ, ಪಾನೂರಿನ ಅಡ್ವೊಕೇಟ್ ವಲ್ಸರಾಜನ್, ಕೂತುಪರಂಬದ ಶಾಜಿ ಪದುವಿಲೈ, ಶಿಜು ಕೆ. ಚಮ್ಮೋರಂ, ಚಂದ್ರಾಂಗದನ್ ಇಡಿಮಾರ್, ಪಾವೂರಿನ ಚಂಬಟ್ಟ ಕೆ.ಸಿ. ಕೇಳು, ಕದಿರೂರು ಪ್ರದೀಪನ್, ಪುಲಿಂಜೋವಿಂಟವಿಡ ಬಾಲನ್… ಹೀಗೆ 66 ಮಂದಿ ಹುತಾತ್ಮರ ಭಾವಚಿತ್ರಗಳು ಮಾರ್ಕ್ಸಿಸ್ಟ್ ಕಮ್ಯುನಿಸ್ಟ್ ಗೂಂಡಾಗಳ ಕ್ರೌರ್ಯಕ್ಕೆ ಮೂಕ ಸಾಕ್ಷಿಯಾಗಿ ನಿಂತಿವೆ. ಹತ್ಯೆಗೀಡಾದ ನಾಲ್ಕೈದು ಮಂದಿ ಕಾರ್ಯಕರ್ತರ ಭಾವಚಿತ್ರಗಳು ಲಭ್ಯವಿಲ್ಲದೆ, ಆ ಜಾಗದಲ್ಲಿ ಸುಂದರವಾಗಿ ಅರಳಿನಿಂತ ಗುಲಾಬಿ ಹೂವಿನ ಚಿತ್ರವನ್ನಿಡಲಾಗಿದೆ. ಸೂಕ್ಷ್ಮ ಸಂವೇದನೆಯುಳ್ಳವರಿಗೆ ಆ ಗುಲಾಬಿ ಹೂ ನೋಡಿದಾಗ ಕಣ್ಣು ತುಂಬಿ ಬರದೇ ಇರದು. ಆ ವೀರ ಸ್ಮ ತಿಯಲ್ಲಿರುವುದು 1969 ರಿಂದ 2009 ರ ವರೆಗಿನ ಹುತಾತ್ಮರ ಭಾವಚಿತ್ರಗಳು ಮಾತ್ರ. ಅನಂತರವೂ ಅನೇಕ ಮುಗ್ಧ ಕಾರ್ಯಕರ್ತರು ಮಾರ್ಕ್ಸಿಸ್ಟರ ಕ್ರೌರ್ಯಕ್ಕೆ ಬಲಿಯಾಗುತ್ತಲೇ ಇದ್ದಾರೆ.
ಮಾರ್ಕ್ಸಿಸ್ಟ್ ಸರ್ಕಾರ ಕೇರಳದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಆರೆಸ್ಸೆಸ್ ಮತ್ತು ಪರಿವಾರ ಸಂಘಟನೆ ಮೇಲೆ ಹಲ್ಲೆ ನಡೆಸಲು, ದೈಹಿಕವಾಗಿ ಮುಗಿಸಲು ಮಾರ್ಕ್ಸಿಸ್ಟ್ ಗೂಂಡಾಗಳಿಗೆ ಅಸುರಬಲ ಪ್ರಾಪ್ತವಾಗುತ್ತದೆ. ಏಕೆಂದರೆ ಆಗ ಪೋಲೀಸರು ಕೂಡ ಗೂಂಡಾಗಳ ಪರ ವಹಿಸುತ್ತಾರೆ. ಸಾಕ್ಷ್ಯಗಳನ್ನು ನಾಶಪಡಿಸುತ್ತಾರೆ. ಕೇಸು ಖುಲಾಸೆಯಾಗುವಂತೆ ನೋಡಿಕೊಳ್ಳುತ್ತಾರೆ. ಹಾಗಾಗಿಯೇ ಜಯಕೃಷ್ಣನ್ ಮಾಸ್ಟರ್ ಅವರನ್ನು ಶಾಲೆಯಲ್ಲಿ ವಿದ್ಯಾರ್ಥಿಗಳೆದುರಲ್ಲೇ ಕೊಚ್ಚಿ ಕೊಂದುಹಾಕಿದ್ದಕ್ಕೆ ವಿದ್ಯಾರ್ಥಿಗಳು ಹಾಗೂ ಸಹ ಅಧ್ಯಾಪಕರು, ಶಾಲಾ ಸಿಬ್ಬಂದಿ ಸಾಕ್ಷ್ಯ ಹೇಳಿದರೂ ಅದು ಸಾಬೀತಾಗಲೇ ಇಲ್ಲ. ಹಂತಕರಿಗೆ ಶಿಕ್ಷೆಯಾಗಲೇ ಇಲ್ಲ. ಒಂದಷ್ಟು ದಿನ ಜೈಲಿನಲ್ಲಿದ್ದು, ಕೇಸು ಖುಲಾಸೆಯಾದ ಮೇಲೆ ಅಪರಾಧಿಗಳು ಬಿಡುಗಡೆಯಾಗಿ ಬಂದು ಈಗ ಹಾಯಾಗಿ ತಿರುಗಾಡಿಕೊಂಡಿದ್ದಾರೆ. ೧೯೮೦ರಲ್ಲಿ ಸಿಪಿಎಂ ಸರ್ಕಾರ ಅಧಿಕಾರದಲ್ಲಿದ್ದಾಗ ಕಣ್ಣೂರು ಜಿಲ್ಲೆಯ ಎಸ್ಪಿ ಒಂದು ಆಕ್ಷೇಪಾರ್ಹ, ಸಂವಿಧಾನ ವಿರೋಧಿ ಸರ್ಕ್ಯುಲರ್ ಹೊರಡಿಸಿದ್ದ. ‘Not only RSS workers should be arrested, anybody offering surety for them should also be detained u/s. 107 and 151 Cr. pc (no. 3962/8B/80, September 29, 1980)’ ಅದು ಅಲ್ಲಿನ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇಂತಹ ಕಾನೂನು ವಿರೋಧಿ, ಅನ್ಯಾಯದ ಆದೇಶದ ವಿರುದ್ಧ ಆರೆಸ್ಸೆಸ್ ತಿರುವನಂತಪುರಂನ ಸೆಕ್ರೆಟರಿಯೇಟ್ ಎದುರು ಭಾರೀ ಧರಣಿ ನಡೆಸಿ ಪ್ರತಿಭಟಿಸಿತ್ತು.
ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ರೋಹಿತ್ ವೇಮುಲ ಎಂಬ ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿ ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಆಕಾಶ-ಭೂಮಿ ಒಂದು ಮಾಡಿ ಬೊಬ್ಬೆ ಹೊಡೆಯುವ ಕಮ್ಯುನಿಸ್ಟರು, ಬುದ್ಧಿಜೀವಿಗಳು, ದೆಹಲಿ ವಿವಿಯಲ್ಲಿ ಕನ್ಹಯ್ಯಕುಮಾರ್ ಎಂಬ ವಿದ್ಯಾರ್ಥಿನಾಯಕ ಅಫ್ಜಲ್ಗುರುಗೆ ಜೈಕಾರ ಹಾಕಿದ್ದನ್ನು ಸಮರ್ಥಿಸಿಕೊಳ್ಳುವ ಎಡ ಪಂಥೀಯರು ಕೇರಳದಲ್ಲಿ ಮಾರ್ಕ್ಸಿಸ್ಟರ ಗೂಂಡಾಗಿರಿಗೆ ಸಾವನ್ನಪ್ಪುತ್ತಿರುವ ನೂರಾರು ಆರೆಸ್ಸೆಸ್ ಕಾರ್ಯಕರ್ತರ ಬಗ್ಗೆ ಮಾತ್ರ ತುಟಿಬಿಚ್ಚದೆ ಏಕೆ ಮೌನವಾಗಿದ್ದಾರೆ? ಮಾರ್ಕ್ಸಿಸ್ಟ್ ಗೂಂಡಾಗಳು ನಡೆಸುವ ಈ ಹೇಯ ಕೃತ್ಯಗಳು ಮಾನವೀಯತೆಗೆ ಕಳಂಕ ತರುವಂತಹದಲ್ಲವೇ? ಮಾನವ ಹಕ್ಕುಗಳನ್ನೇ ದಮನಿಸುವ ಹೇಯಕೃತ್ಯವೆಸಗುತ್ತಿರುವ ಮಾರ್ಕ್ಸಿಸ್ಟ್ ಕಾರ್ಯಕರ್ತರ ಕೃತ್ಯವನ್ನು ಖಂಡಿಸಲು ಎಡಪಂಥೀಯರಿಗೆ, ಅವರ ಚೇಲಾ ಬುದ್ಧಿಜೀವಿಗಳಿಗೆ ನಾಲಿಗೆ ಬಿದ್ದುಹೋಗಿದೆಯೇ? ಕಾಮ್ರೇಡ್ಗಳ ಕ್ರೌರ್ಯಕ್ಕೆ ನಿಮ್ಮ ರಕ್ತವೇಕೆ ಕುದಿಯುವುದಿಲ್ಲ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.