ಬೆಳ್ತಂಗಡಿ : ಗ್ರಾಮೀಣ ಜನರಿಗೆ ಕಾನೂನಿನ ಕುರಿತು ಅರಿವು ಮೂಡಿಸಲು ನಡೆಸಲಾಗುತ್ತಿರುವ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ 10ನೇ ಅಭಿಯಾನ ಮಾ.8 ರಿಂದ 11 ರವರಗೆ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಾಘವೇಂದ್ರ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಬೆಳ್ತಂಗಡಿ, ವಿವಿಧ ಸರ್ಕಾರಿ ಇಲಾಖೆಗಳ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಅಭಿಯಾನ ನಡೆಯಲಿದ್ದು ಮಾ. 8 ರಂದು ಬೆಳಿಗ್ಗೆ 9-30ಕ್ಕೆ ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಪ್ರಧಾನ ಹಿರಿಯ ಸಿವಿಲ್ ಜಡ್ಜ್ ರಾಘವೇಂದ್ರ ಜಿ. ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಧಾನ ಸಿವಿಲ್ ಜಡ್ಜ್ ಅರುಣ ಕುಮಾರಿ, ತಹಸೀಲ್ದಾರ್ ಪ್ರಸನ್ನ ಮೂರ್ತಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ಭಟ್, ಪೋಲಿಸ್ ವೃತ್ತ ನಿರೀಕ್ಷಕ ಬಿ.ಆರ್. ಲಿಂಗಪ್ಪ ಪೂಜಾರಿ ಮತ್ತಿತರರು ಅತಿಥಿಗಳಾಗಿರುತ್ತಾರೆ. ಬಳಿಕ 10 ಗಂಟೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಎಸ್‌ಡಿಎಂ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ಮಹಿಳೆಯರ ಹಕ್ಕುಗಳ ಬಗ್ಗೆ ವಕೀಲೆ ಸ್ವರ್ಣಲತಾ, ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ವಕೀಲೆ ಆರ್. ಸುಭಾಷಿಣಿ ಅನಂತ್ ಉಪನ್ಯಾಸ ನೀಡಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಅರುಣೋದಯ ಮಹಾಸಂಘ ಹಾಗೂ ಡಿಕೆಆರ್‌ಡಿಎಸ್ ಇವರ ಸಹಯೋಗದಲ್ಲಿ ಬೆಳ್ತಂಗಡಿ ಉದಯನಗರ ಸೈಂಟ್ ಲಾರೆನ್ಸ್ ಚರ್ಚ್ ಹಾಲ್‌ನಲ್ಲಿ ಮಹಾಸಂಘದ ಅಧ್ಯಕ್ಷೆ ತುಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ವಿಲುನಾಮೆ ಮತ್ತು ಸಾಮಾನ್ಯ ಮೊಕ್ತ್ಯಾರ್ ನಾಮೆ ಬಗ್ಗೆ ವಕೀಲೆ ಹರಿಣಿ ಕುಮಾರಿ, ಕೌಟುಂಬಿಕ ದೌರ್ಜನ್ಯ ಕಾಯ್ದೆ-2015ರ ಕುರಿತು ವಕೀಲೆ ಮುಮ್ತಾಜ್ ಬೇಗಂ ಉಪನ್ಯಾಸ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಹಯೋಗದಲ್ಲಿ ಸಂಸ್ಥೆಯ ವಠಾರದಲ್ಲಿ ಸಿರಿ ನಿರ್ದೇಶಕಿ ಮನೋರಮಾ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ದೈನಂದಿನ ಜೀವನದಲ್ಲಿ ಕಾನೂನು ಕುರಿತು ವಕೀಲ ಎನ್. ಡಿ. ರತ್ನವರ್ಮ ಬುಣ್ಣು, ಕನಿಷ್ಠ ವೇತನ ಕಾಯ್ದೆಯ ವಿಚಾರವಾಗಿ ವಕೀಲ ಧನಂಜಯ ಕುಮಾರ್ ಉಪನ್ಯಾಸ ನೀಡಲಿದ್ದಾರೆ.
ಮಾ. 9 ರಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ಆರಕ್ಷಕ ಠಾಣೆಯ ಸಹಯೋಗದೊಂದಿಗೆ ಲಾಯಿಲ ಭಜನಾ ಮಂದಿರದಲ್ಲಿ ಬೆಳ್ತಂಗಡಿ ಎಸ್. ಐ. ಸಂದೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಗೆ ಬಗ್ಗೆ ವಕೀಲ ಸೇವಿಯರ್ ಪಾಲೇಲಿ, ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011 ಬಗ್ಗೆ ವಕೀಲ ನವೀನ್ ಬಿ.ಕೆ. ಉಪನ್ಯಾಸ ನೀಡಲಿದ್ದಾರೆ.ಮಧ್ಯಾಹ್ನ 2 ಗಂಟೆಗೆ ಇಂದಬೆಟ್ಟು ಚರ್ಚ್ ಹಾಲ್‌ನಲ್ಲಿ ತಾ.ಪಂ. ಬೆಳ್ತಂಗಡಿ ಸಹಕಾರದೊಂದಿಗೆ ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ –2015 ಬಗ್ಗೆ ವಕೀಲ ಜೆ.ಕೆ. ಪೌಲ್, ಮೋಟಾರು ವಾಹನಗಳ ಚಾಲನೆ, ನೋಂದಣಿ ಮತ್ತು ವಿಮೆ ಬಗ್ಗೆ ವಕೀಲ ಮನೋಹರ ಕುಮಾರ್ ಉಪನ್ಯಾಸ ನೀಡಲಿದ್ದಾರೆ. ಸಂಜೆ 5 ಗಂಟೆಗೆ ಸ.ಹಿ.ಪ್ರಾ.ಶಾಲೆ ಪಾಲಡ್ಕ ಮಚ್ಚಿನದಲ್ಲಿ ಪಾಲಡ್ಕ ಉದಯಕಲಾ ಯುವಕ ಮಂಡಲ ಅಧ್ಯಕ್ಷ ಸುಕುಮಾರ್ ಪೇರೂರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ಮಕ್ಕಳಲ್ಲಿ ಅಪೌಷ್ಠಿಕ ತಡೆಗಟ್ಟುವಿಕೆ ಬಗ್ಗೆ ವಕೀಲ ವಸಂತ ಮರಕಡ, ಜನನ ಪ್ರಮಾಣಪತ್ರದಲ್ಲಿನ ದೋಷಗಳ ತಿದ್ದುಪಡಿ ಕಾರ್ಯವಿಧಾನ ಬಗ್ಗೆ ವಕೀಲ ಅಕ್ಷಯ ರಾವ್ ಉಪನ್ಯಾಸ ನೀಡಲಿದ್ದಾರೆ.
ಮಾ.10 ರಂದು ಬೆಳಿಗ್ಗೆ 10 ಗಂಟೆಗೆ ವೇಣೂರು ಪೋಲಿಸ್ ಠಾಣೆ ಸಹಯೋಗದೊಂದಿಗೆ ಗ್ರಾಮ ಪಂಚಾಯತ್ ಸಭಾ ಭವನ ವೇಣೂರು ಇಲ್ಲಿ ಎಸ್.ಐ. ವಿನಾಯಕ ಬಿಲ್ಲವ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ಮಾನಸಿಕ ಆರೋಗ್ಯ ಅಧಿನಿಯಮದ ಬಗ್ಗೆ ವಕೀಲ ಪಿ. ಸುಬ್ರಹ್ಮಣ್ಯ ಕುಮಾರ್, ಕ್ರಿಮಿನಲ್ ಕಾನೂನು ಮತ್ತು ಪೋಲಿಸ್ ವ್ಯವಸ್ಥೆ ಬಗ್ಗೆ ವಕೀಲ ಶಿವಯ್ಯ ಎಸ್. ಎಲ್. ಉಪನ್ಯಾಸ ನೀಡಲಿದ್ದಾರೆ.ಮಧ್ಯಾಹ್ನ 2 ಗಂಟೆಗೆ ಅರಣ್ಯ ಇಲಾಖಾ ಸಹಯೋಗದಲ್ಲಿ ನಾವೂರು ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ಬೆಳ್ತಂಗಡಿ ವಲಯಾರಣ್ಯಾಧಿಕಾರಿ ಸುಂದರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ಅರಣ್ಯ ಕಾಯಿದೆ ದಂಡ ಮತ್ತು ಕಾರ್ಯವಿಧಾನದ ಬಗ್ಗೆ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ವನ್ಯಜೀವಿ ಕಾಯಿದೆ-1972 – ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನ ಮತ್ತು ಮುಚ್ಚಲ್ಪಟ್ಟ ಪ್ರದೇಶಗಳ ಬಗ್ಗೆ ವಕೀಲ ಧನಂಜಯರಾವ್ ಉಪನ್ಯಾಸ ನೀಡಲಿದ್ದಾರೆ.ಸಂಜೆ 5 ಗಂಟೆಗೆ ಚಾರ್ಮಾಡಿ ಗ್ರಾ. ಪಂ. ಸಹಯೋಗದಲ್ಲಿ ಪಂ.ಸಭಾಗಂಣದಲ್ಲಿ ಪಂ. ಅಧ್ಯಕ್ಷೆ ಶೈಲಾಜಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ಆಸ್ತಿ ವರ್ಗಾವಣಾ ಅಧಿನಿಯಮ ಬಗ್ಗೆ ವಕೀಲ ವೈ. ರಾಧಾಕೃಷ್ಣ, ಮಾಹಿತಿ ಹಕ್ಕು ಕಾಯಿದೆ ಕುರಿತು ವಕೀಲ ಫ್ರಾನ್ಸಿಸ್ ಕೆ.ವಿ. ಉಪನ್ಯಾಸ ನೀಡಲಿದ್ದಾರೆ.
ಮಾ. 11 ರಂದು ಬೆಳಿಗ್ಗೆ 10 ಗಂಟೆಗೆ ಶಿಶು ಅಭಿವೃದ್ದಿ ಯೋಜನಾ ಇಲಾಖೆ ಸಹಯೋಗದಲ್ಲಿ ಬೆಳ್ತಂಗಡಿ ಅಂಬೇಡ್ಕರ ಭವನದಲ್ಲಿ ಶಿಶಿ ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಂದರ್ಭ ಹಿಂದು ದತ್ತಕ ಕಾಯಿದೆ ಬಗ್ಗೆ ವಕೀಲ ಪ್ರಸಾದ್ ಕೆ.ಎಸ್., ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ವಕೀಲ ಶ್ರೀನಿವಾಸ ಗೌಡ ಅವರು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 2 ರಿಂದ ಬೆಳ್ತಂಗಡಿ ಸಂಜಯನಗರದಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ಕಾರ್ಯಕ್ರಮ ನಡೆಯಲಿದೆ. ಸಂಜೆ 4-30 ಕ್ಕೆ ನ್ಯಾಯಾಲಯದ ಸಂಕೀರ್ಣದಲ್ಲಿ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದೆ.
ನ್ಯಾಯಾಲಯದಲ್ಲಿ ವಿಲೇವಾರಿಗೆ ಬಾಕಿ ಇರುವ ವಿವಿಧ ಪ್ರಕರಣ, ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು ವಕೀಲರು ಮತ್ತು ಕಕ್ಷಿಗಾರರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.