ಬೆಳ್ತಂಗಡಿ : ಶಿಕ್ಷಣ ಕ್ಷೇತ್ರದಲ್ಲಿ ಮನಶಾಸ್ತ್ರಜ್ಞರಿಗೆ ಯಶಸ್ಸುಗಳಿಸಲು ಅಪಾರವಾದ ಅವಕಾಶವಿದ್ದು, ಸಂಶೋಧನಗೂ ಹೆಚ್ಚಿನ ಅವಕಾಶವಿದೆ ಎಂದು ಮೈಸೂರು ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರೋಫೆಸರ್ ಡಾ| ಸಿ.ಜಿ. ವೆಂಕಟೇಶ್ ಮೂರ್ತಿ ಅಭಿಪ್ರಾಯಪಟ್ಟರು.
ಅವರು ಗುರುವಾರ ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದವರು ಯುಜಿಸಿ ಪ್ರಾಯೋಜಿತ ಮನಶಾಸ್ತ್ರ ಅಧ್ಯಯನದ ಸದ್ಯದ ಪರಿಸ್ಥಿತಿ ಮತ್ತು ಅದು ಒಳಗೊಂಡಿರುವ ಕ್ಷೇತ್ರಗಳು ಎಂಬ ವಿಚಾರದಲ್ಲಿ ಮೂರು ದಿನಗಳ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ೨೧ ನೇ ಶತಮಾನದ ಮನಃಶಾಸ್ತ್ರ ಶಿಕ್ಷಣದ ದೃಷ್ಟಿಕೋನ ಎಂಬ ವಿಚಾರದ ಬಗ್ಗೆ ಮಾತನಾಡಿದರು.
ಮಕ್ಕಳ ಅಧ್ಯಯನ ವಿಚಾರದಲ್ಲಿ ಮನಶಾಸ್ತ್ರದ ಪ್ರಯೋಜನ ಅತಿ ಮುಖ್ಯವಾಗಿದೆ. ತರಗತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಎಲ್ಲರದ್ದೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಪಾಠ ನಡೆಸಬೇಕಾಗುತ್ತದೆ. ಇಂದಿನ ಸ್ಥಿತಿಯಲ್ಲಿ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ ಪರಿಪಾಠ ಹೆಚ್ಚಾಗಿದೆ. ಹೀಗಾಗಿ ಶಿಕ್ಷಕರಿಗೆ ಮಕ್ಕಳ ಮನೋಭಾವದ ವಿಚಾರದಲ್ಲಿ ಮನಃಶಾಸ್ತ್ರದ ಅಗತ್ಯವಾದ ತರಬೇತಿಯನ್ನು ನೀಡುವುದು ಮುಖ್ಯವಾಗುತ್ತದೆ ಎಂದರು.
ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ತಾನೇ ಗುಣಾತ್ಮಕ ಪರಿಹಾರ ಕಂಡುಕೊಳ್ಳುವ ಕ್ಷಮತೆ ಶಿಕ್ಷಕರಿಗೆ ಬೇಕಾಗುತ್ತದೆ. ಶಿಕ್ಷಣಕ್ಕೆ ಬೇಕಾದ ಆವಶ್ಯಕತೆಗಳನ್ನು ಅರ್ಥಮಾಡಿಕೊಂಡು ಮಕ್ಕಳಿಗೆ ಪಾಠ ಮಾಡುವ ಪದ್ಧತಿ ಬರಬೇಕು. ದೇಶದ ಸುಮಾರು 300 ವಿವಿಗಳ ಪೈಕಿ 16 ವಿವಿಗಳಲ್ಲಿ ಮಾತ್ರ ಮನಶಾಸ್ತ್ರದ ಅಧ್ಯಯನ ನಡೆಯುತ್ತಿದೆ. ಶಿಕ್ಷಣ ಎಂಬುದು ವಿದ್ಯಾರ್ಥಿಕೇಂದ್ರಿತವಾಗಿರಬೇಕೆ ವಿನಾ ಪಠ್ಯವಸ್ತುವಿಗೆ ಹೊಂದಿಕೊಂಡು ಅಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಧ. ಮಂ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಅವರು ಇಂದಿನ ಒತ್ತಡದ ಜನಜೀವನದಲ್ಲಿ ಮನಃಶಾಸ್ತ್ರಜ್ಞರ ಆವಶ್ಯಕತೆ ಎಲ್ಲೆಂದರಲ್ಲಿ ಬೇಕಾಗಿದೆ. ವಿಶ್ವಗೋಳೀಯಕರಣವಾದ ಬಳಿಕ ವಿಜ್ಞಾನವೂ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹಿಂದೆ ಹಿರಿಯರು ಕೊಟ್ಟದ್ದನ್ನು ಮಾತ್ರ ಮಕ್ಕಳು ತೆಗೆದುಕೊಳ್ಳುತ್ತಿದ್ದರು. ಆದರೆ ಮಕ್ಕಳ ಬೇಡಿಕೆಗಳಂತೆ ಹಿರಿಯರು ವ್ಯವಹರಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಕೊಟ್ಟವನಿಗೂ ಒತ್ತಡ, ತೆಗೆದುಕೊಳ್ಳುವವನಿಗೂ ಒತ್ತಡ ಅಧಿಕವಾಗುತ್ತದೆ ಎಂದರು.
ಮನಃಶಾಸ್ತ್ರ ನಿವೃತ್ತ ಪ್ರೋಫೆಸರ್ಡಾ| ಸುಧಾ ಭೋಗ್ಲೆ ಮನಶಾಸ್ತ್ರ ಅಧ್ಯಯನದ ಸದ್ಯದ ಪರಿಸ್ಥಿತಿ ಮತ್ತುಅದು ಒಳಗೊಂಡಿರುವ ಕ್ಷೇತ್ರಗಳು ಎಂಬ ವಿಚಾರದಲ್ಲಿ ದಿಕ್ಸೂಚಿ ಭಾಷಣ ನೀಡಿದರು. ಎಸ್ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಎಂ.ವೈ.ಮಂಜುಳಾ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ನವ್ಯಶ್ರೀ ಜಿ. ಸಿ.ವಂದಿಸಿದರು. ವಿದ್ಯಾರ್ಥಿನಿ ರಕ್ಷಿತಾ ಎನ್. ಜೆ. ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.