ಬೆಳ್ತಂಗಡಿ : ಆಕಾಶದಲ್ಲಿ ಮೋಡವಿದ್ದಾಗ ಸೂರ್ಯನ ಪ್ರಖರತೆ ಮರೆಯಾದಂತೆ ಮನುಷ್ಯನ ಮೂಲ ಸ್ವಭಾವದ ವಿಶೇಷತೆಗಳನ್ನು ತಿಳಿಯಲು ದುಶ್ಚಟಗಳು ಅಡ್ಡಿಯಾಗುತ್ತದೆ. ಮದ್ಯವ್ಯಸನಿ ಅಮಲೆಂಬ ರೋಗಕ್ಕೆ ಬಲಿಯಾಗಿದ್ದಾನೆ ಎಂದು ಒಪ್ಪಿಕೊಂಡಾಗ ಮಾತ್ರ ಪರಿವರ್ತನೆ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಅವರು ಈಚೆಗೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮದ್ಯವರ್ಜನ ಸಲಹಾ ಕೇಂದ್ರದಲ್ಲಿ ನಡೆಸಲ್ಪಡುವ 49ನೇ ವಿಶೇಷ ಮದ್ಯವರ್ಜನ ಶಿಬಿರದ 6ನೇ ದಿನದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಆಶೀರ್ವದಿಸಿರು.
ಕುಡಿತ ಬಿಡುವುದೊಂದು ಪರೀಕ್ಷೆ.ಇದನ್ನು ಸಾಧನೆ ಮತ್ತು ಪ್ರಯತ್ನದಿಂದ ಮಾತ್ರ ಸಾರ್ಥಕಗೊಳಿಸಬಹುದು. ವ್ಯಸನದಲ್ಲಿದ್ದ ವ್ಯಕ್ತಿಗೂ ಪರಕಾಯ ಪ್ರವೇಶ ಅಥವಾ ಪರಆತ್ಮಕ್ಕೆ ಒಳಪಟ್ಟ ವ್ಯಕ್ತಿಗೂ ಯಾವುದೇ ವ್ಯತ್ಯಾಸವಿಲ್ಲ. ಕುಡಿತ ಎಲ್ಲಾ ದೋಷಗಳ, ಎಲ್ಲಾ ಪಾಪಗಳ, ರೋಗಗಳ, ದಾರಿದ್ರ್ಯ ತನದ ಸಂಕೇತವಾಗಿದೆ. ಹಿಮಾಲಯ ಪರ್ವತ ಹತ್ತಬೇಕೆಂದರೆ ದೈಹಿಕಶಕ್ತಿಯಿದ್ದರೆ ಸಾಲದು, ಮಾನಸಿಕ ಸಂಕಲ್ಪವೂ ಬೇಕು. ಅಂತೆಯೇ ವ್ಯಸನಮುಕ್ತರಾಗಲು ಇದು ಅತ್ಯಗತ್ಯ ಎಂದರು.
ಈ ಶಿಬಿರದಲ್ಲಿ ಕರ್ನಾಟಕ ರಾಜ್ಯದ 75 ಮಂದಿ ಶಿಬಿರಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಇಂಜಿನಿಯರ್, ಪ್ರಾದ್ಯಾಪಕರು, ಪೋಲಿಸ್ ಇಲಾಖೆ, ಸಾರಿಗೆ ಇಲಾಖೆ, ಬ್ಯಾಂಕ್ಉದ್ಯಮಿ, ಸರಕಾರಿ ನೌಕರರು, ಸ್ವಉದ್ಯೋಗಿಗಳು, ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವ ನೌಕರರು, ಕೃಷಿಕಾರ್ಮಿಕರು ಈ ಶಿಬಿರದಲ್ಲಿ ಭಾಗವಹಿಸಿರುತ್ತಾರೆ. ಪ್ರಸ್ತುತ ಇಂತಹ ತಿಂಗಳಿಗೊಂದು ಶಿಬಿರ ನಡೆಯುತ್ತಿದೆ. ಬೇಡಿಕೆ ಜಾಸ್ತಿ ಇರುವುದರಿಂದ ಮುಂದಿನ ದಿನಗಳಲ್ಲಿ 2 ಶಿಬಿರಗಳನ್ನು ನಡೆಸಬೇಕಾಗುವುದು ಎಂದು ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ.ಪಾಸ್ ತಿಳಿಸಿದರು. ಸಭೆಯಲ್ಲಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಶಿಬಿರಾಧಿಕಾರಿಗಳಾದ ನಾಗೇಶ್, ದಿವಾಕರ್, ನಂದಕುಮಾರ್, ಆರೋಗ್ಯ ಸಹಾಯಕರಾದ ಚಿತ್ರಾ, ನೇತ್ರಾವತಿ, ಸೌಮ್ಯ ಉಪಸ್ಥಿತರಿದ್ದರು. ಮುಂದಿನ ಶಿಬಿರ ಮೇ ಪ್ರಥಮ ಸೋಮವಾರದಿಂದ ಆರಂಭವಾಗಲಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.