ಬೆಳ್ತಂಗಡಿ: ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯೊಂದಿಗೆ ತಳಮಟ್ಟದಲ್ಲಿ ಪ್ರತಿಯೊಬ್ಬರಿಗೂ ಇದರ ಪ್ರಯೋಜನವಾಗಬೇಕು. ಜೀವನಮಟ್ಟ ಸುಧಾರಣೆಯೊಂದಿಗೆ ನೆಮ್ಮದಿಯ ಜೀವನ ನಡೆಸುವಂತೆ ಮಾಡುವುದೇ ನಿಜವಾದ ಪ್ರಗತಿಯಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಡಾ. ಎನ್. ಕೆ. ತಿಂಗಳಾಯ ಹೇಳಿದರು.
ಅವರು ಶುಕ್ರವಾರ ಮಂಗಳೂರು ವಿ.ವಿ. ಅರ್ಥಶಾಸ್ತ್ರ ಸಂಘದ ನೇತೃತ್ವದಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನಲ್ಲಿ ಆಯೋಜಿಸಲಾದ ರಾಷ್ಟ್ರಮಟ್ಟದ ’ಸಹಭಾಗಿತ್ವ ಪ್ರಗತಿಯ ಸವಾಲುಗಳು ಮತ್ತು ವಿದ್ಯಮಾನಗಳು’ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರಗತಿಗಾಗಿ ಕಳೆದ 60 ವರ್ಷಗಳಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದರೂ ಅನಕ್ಷರತೆ, ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗಲಿಲ್ಲ. ಶೇ. 8ರಷ್ಟು ಯುವಜನತೆ ಇಂದು ನಿರುದ್ಯೋಗಿಗಳಾಗಿದ್ದಾರೆ. ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಸೇವೆ ಮತ್ತು ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಅವರು ಸಲಹೆ ನೀಡಿದರು. ಸಿಂಡಿಕೇಟ್ ಬ್ಯಾಂಕ್ ಮಹಿಳೆಯರ ನೇಮಕಾತಿಗೆ ಆದ್ಯತೆ ನೀಡುತ್ತಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ನಡೆಸಲ್ಪಡುತ್ತಿರುವ ರುಡ್ಸೆಟ್ ಸಂಸ್ಥೆಗಳ ಮೂಲಕ ಸ್ವ-ಉದ್ಯೋಗ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಉನ್ನತ ಸಾಧನೆ ಮಾಡಲಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂಬಯಿ ಮತ್ತು ಮಂಗಳೂರು ಮಧ್ಯೆ ಇರುವ ರೈಲು ಮಾರ್ಗ ಅಭಿವೃದ್ಧಿ ಪಡಿಸಬೇಕು. ಬಜ್ಪೆ ವಿಮಾನ ನಿಲ್ದಾಣದ ಬಳಿ ರೈಲು ನಿಲ್ದಾಣ ಮಾಡಿದರೆ ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಶಿಖರೋಪನ್ಯಾಸ ನೀಡಿದ ಮೈಸೂರು ವಿ.ವಿ.ಯ ಡಾ| ರೇಣುಕಾರ್ಯ ಮಾತನಾಡಿ ಮೀಸಲಾತಿ, ಧನಸಹಾಯ, ಪರಿಹಾರ ಧನ ನೀಡುವುದರಿಂದ ರೈತರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಕೃಷಿಯಲ್ಲಿ ತಂತ್ರಜ್ಞಾನ ಬಳಸಬೇಕು. ಉತ್ಪಾದನಾ ಶಕ್ತಿ ಹೆಚ್ಚಿಸಬೇಕು. ಆರ್ಥಿಕ ಅಸಮಾನತೆ ಹೋಗಲಾಡಿಸಿ ಪ್ರಗತಿಯೊಂದಿಗೆ ಆರ್ಥಿಕ ಭದ್ರತೆ ನೀಡಬೇಕು. ಅಸನ, ವಸನ, ವಸತಿ ಮತ್ತು ಅಪೌಷ್ಠಿಕತೆಯ ಸಮಸ್ಯೆ ನಿವಾರಿಸಿ ಪ್ರತಿಯೊಬ್ಬರೂ ಶ್ರಮ ಸಂಸ್ಕೃತಿಯೊಂದಿಗೆ ಶಾಂತಿ, ನೆಮ್ಮದಿ ಮತ್ತು ಸಂತೋಷದ ಜೀವನ ನಡೆಸುವುದೇ ಪ್ರಗತಿಯ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ, ವೃತ್ತಿ-ಪ್ರವೃತ್ತಿಯಲ್ಲಿ ಕೌಶಲ ಅಭಿವೃದ್ಧಿ ಪಡಿಸಿಕೊಳ್ಳಬೇಕು. ವೃತ್ತಿಪರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಮಂಗಳೂರು ವಿ.ವಿ. ಅರ್ಥಶಾಸ್ತ್ರ ಸಂಘದ ಅಧ್ಯಕ್ಷ ಡಾ. ಎ. ಜಯಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ವಿಚಾರ ಸಂಕಿರಣದ ಉದ್ದೇಶವನ್ನು ವಿವರಿಸಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಸ್. ಮೋಹನ ನಾರಾಯಣ ಮತ್ತು ಪ್ರೊ. ಶ್ರೀಪತಿ ಕಲ್ಲೂರಾಯ ಉಪಸ್ಥಿತರಿದ್ದರು. ಪ್ರೊ. ಕೆ. ಬಾಲಕೃಷ್ಣ ಸ್ವಾಗತಿಸಿದರು. ಪ್ರೊ. ಜೋಸೆಫ್ ಎನ್. ಎಂ. ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.