ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ಸುಳ್ಳು ಆಪಾದನೆಗಳನ್ನು ಮಾಡಿ ಮಾನಹಾನಿ ಗೈದಿರುವುದಕ್ಕಾಗಿ ಬೆಳ್ತಂಗಡಿ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಆರೋಪಿ ರಂಜನ್ರಾವ್ ಎರ್ಡೂರುರವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮಾನ್ಯ ಬೆಳ್ತಂಗಡಿ ಜೆ.ಎಮ್.ಎಫ್.ಸಿ ನ್ಯಾಯಾಲಯವು ಆದೇಶಿಸಿದೆ.
ಆರೋಪಿ ಗುರುವಾಯನಕೆರೆ ರಂಜನ್ರಾವ್ ಎರ್ಡೂರು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ದ ನಿರಂತರವಾಗಿ ಸುಳ್ಳು ಆಪಾದನೆಗಳನ್ನು ಮಾಡುತ್ತಾ ಬಂದಿರುತ್ತಾರೆ. ಬೆಳ್ತಂಗಡಿ ಸಮಾಜ ಮಂದಿರವನ್ನು ಅಕ್ರಮವಾಗಿ ಕಟ್ಟಿದ್ದಾರೆಂದು ಮತ್ತು ಇಲಾಖೆಯ ಪರವಾನಿಗೆಯಿಲ್ಲದೆ ಕಲ್ಯಾಣ ಮಂಟಪ ಕಟ್ಟಿದ್ದಾರೆಂದು ಸುಳ್ಳು ಆರೋಪಗಳನ್ನು ಮಾಡಿ ಸರ್ಕಾರದ ವಿವಿಧ ಇಲಾಖೆಗಳಿಗೆ ಮತ್ತು ಪೊಲೀಸರಿಗೆ ರಂಜನ್ರಾವ್ ಎರ್ಡೂರುರವರು ದೂರು ನೀಡಿದ್ದರು. ಅಲ್ಲದೆ ಸಮಾಜ ಮಂದಿರದ ಜಾಗವನ್ನು ಶಾಂತಿವನ ಟ್ರಸ್ಟ್ನ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆಯೆಂದು ರಂಜನ್ರಾವ್ ಎರ್ಡೂರು ನೀಡಿದ ದೂರನ್ನು ತನಿಖೆ ನಡೆಸಿದ ಪೊಲೀಸ್ ಇಲಾಖೆ ಆತನು ನೀಡಿದ ದೂರು ಆಧಾರರಹಿತ ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು.
ಕೆಲ ದುಷ್ಟಶಕ್ತಿಗಳ ಜೊತೆ ಕೈಜೋಡಿಸಿ ಆರೋಪಿ ರಂಜನ್ರಾವ್ ಎರ್ಡೂರುವರು ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾನಹಾನಿ ಗೈದಿದ್ದಾರೆ ಎಂದು ಸದ್ರಿ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಲಾಗಿದೆ.
ನ್ಯಾಯಾಲಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರವಾಗಿ ರತ್ನವರ್ಮ ಬುಣ್ಣು ಮತ್ತು ಸುಬ್ರಾಯ ಶೆಣೈ, ಅಡೂರು ವೆಂಕಟ್ರಾವ್ ಮತ್ತು ಶ್ರೀನಿವಾಸರಾವ್ ರವರು ಹೇಳಿಕೆಗಳನ್ನು ನೀಡಿದರು. ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಜೆ.ಎಮ್.ಎಫ್.ಸಿ ನ್ಯಾಯಾಲಯವು ಆರೋಪಿ ರಂಜನ್ರಾವ್ ಎರ್ಡೂರು ಐ.ಪಿ.ಸಿ ಕಲಂ ೫೦೦ರಂತೆ ಮಾನಹಾನಿ ಕೃತ್ಯವನ್ನು ಎಸಗಿದ್ದಾನೆಂದು ಮೇಲ್ಕಂಡಂತೆ ಸಾಕಷ್ಟು ಸಾಕ್ಷ್ಯಧಾರಗಳು ಇವೆ ಎಂದು ತೀರ್ಮಾನಿಸಿ ಆರೋಪಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ ಮತ್ತು ಆರೋಪಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿ ಆದೇಶಿಸಿದೆ.
ಅಲ್ಲದೆ ಸಮಾಜ ಮಂದಿರ ಸೊಸೈಟಿಯ ಕಾರ್ಯದರ್ಶಿ ಶ್ರೀ ರತ್ನವರ್ಮ ಬುಣ್ಣುರವರ ವಿರುದ್ದ ಕೂಡಾ ಸುಳ್ಳು ಆಪಾದನೆ ಮಾಡಿ ಆರೋಪಿ ಮಾನಹಾನಿ ಕೃತ್ಯವೆಸಗಿದ್ದಾರೆ ಎಂದು ಕೂಡಾ ಆರೋಪಿಯ ವಿರುದ್ದ ದೂರು ದಾಖಲಾಗಿದ್ದು, ಈ ಪ್ರಕರಣದಲ್ಲಿ ಕೂಡಾ ಆರೋಪಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶವಾಗಿದೆ. ಈ ರೀತಿ ಆರೋಪಿಯ ವಿರುದ್ದ ಎರಡು ಕ್ರಿಮಿನಲ್ ಮೊಕದ್ದಮೆ ದಾಖಲಾಗಿವೆ.
ಬೆಳ್ತಂಗಡಿ ಸಮಾಜ ಮಂದಿರ ಬಿಲ್ಡಿಂಗ್ ಸೊಸೈಟಿ ಸದಸ್ಯರೆಲ್ಲರ ವಿನಂತಿ ಮೇರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ವತಿಯಿಂದ ಸಮಾಜ ಮಂದಿರದ ಪಕ್ಕದಲ್ಲಿ ಸುಂದರವಾದ ಕಲ್ಯಾಣ ಮಂಟಪವನ್ನು ಬೆಳ್ತಂಗಡಿಯಲ್ಲಿ ಕಟ್ಟಿದ್ದು, ಅದು ಸಾರ್ವಾಜನಿಕರ ಉಪಯೋಗಕ್ಕೆ ಮೀಸಲಾಗಿದೆ. ಆರೋಪಿ ಸತ್ಯಾಂಶಗಳನ್ನು ಬಚ್ಚಿಟ್ಟು ಆಧಾರರಹಿತ ಸುಳ್ಳು ಆಪಾದನೆಗಳನ್ನು ಮಾಡುತ್ತಿರುವುದು ದುರದೃಷ್ಟಕರ ಎಂದು ನ್ಯಾಯಾಲಯದಲ್ಲಿ ಸಲ್ಲಿಸಿದ ಪಿರ್ಯಾದಿಯಲ್ಲಿ ವಿವರಿಸಲಾಗಿದೆ.
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಷ್ಟ್ರವು ಮೆಚ್ಚುವಂತಹ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಕ್ಷೇತ್ರದ ಹೆಸರನ್ನು ಹಾಳು ಮಾಡಬೇಕೆಂಬ ದೃಷ್ಟಿಯಿಂದ ನಾಗರಿಕ ಸೇವಾ ಟ್ರಸ್ಟ್ ಹಾಗೂ ಅವರ ಟ್ರಸ್ಟಿ ರಂಜನ್ರಾವ್ ಎರ್ಡೂರು ಮತ್ತು ಅವರ ಸಹಚರರು ಕ್ಷೇತ್ರದ ವಿರುದ್ದ ಆಧಾರರಹಿತ ಆಪಾದನೆಗಳನ್ನು ಮಾಡುತ್ತಾ ಬಂದಿರುವುದು ಅತ್ಯಂತ ಕಳವಳಿಯಾಗಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಪಿರ್ಯಾದಿಯಲ್ಲಿ ವಿವರಿಸಲಾಗಿದೆ.
ನ್ಯಾಯಾಲಯದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪರವಾಗಿ ನ್ಯಾಯವಾದಿ ಶ್ರೀ. ಪಿ.ಪಿ. ಹೆಗ್ಡೆಯವರು ಪ್ರಕರಣವನ್ನು ದಾಖಲಿಸಿ ವಾದ ಮಂಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.