ಬೆಳ್ತಂಗಡಿ : ಜಮಾಬಂದಿ ಪರಿಶೀಲನೆಗೆಂದು ಬೆಳ್ತಂಗಡಿ ತಾಲೂಕು ಕಚೇರಿಗೆ ಬಂದ ಜಿಲ್ಲಾಧಿಕಾರಿಯವರು ಇಲಾಖಾ ಸಿಬಂದಿಗಳ ಬೇಜವಾಬ್ದಾರಿಯಿಂದಾಗಿ ಪರಿಶೀಲಿಸಲು ಸಾಧ್ಯವಾಗದೆ ಅಸಮಾಧಾನ ವ್ಯಕ್ತಪಡಿಸಿ ಕಾರ್ಯಕ್ರಮ ರದ್ದುಪಡಿಸಿ ತೆರಳಿದ ಘಟನೆ ಶನಿವಾರ ನಡೆದಿದೆ. ಈ ಸಂಬಂಧವಾಗಿ ಕಾರಣ ಕೇಳಿ ಜಿಲ್ಲಾಧಿಕಾರಿಗಳು ಇಲ್ಲಿನ ತಹಶಿಲ್ದಾರ್ ಪ್ರಸನ್ನ ಮೂರ್ತಿ ಅವರಿಗೆ ಶೋಕಾಸ್ ನೋಟೀಸು ಜಾರಿ ಮಾಡಿದ್ದಾರೆ.
ಇತ್ತೀಚೆಗೆ ಕಂದಾಯ ಇಲಾಖೆ ಬಗ್ಗೆ ದೂರುಗಳನ್ನು ಆಲಿಸಲು ಪ್ರತಿ ತಿಂಗಳ ಕೊನೆ ಗುರುವಾರ ಬೆಳ್ತಂಗಡಿ ತಾಲೂಕು ಕಚೇರಿಗೆ ಭೇಟಿ ನೀಡುತ್ತಿರುವ ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ ಅವರಿಗೆ ಇಲಾಖೆ ಕೈ ಕೆಳಗೆ ಬರುವ ಭೂಮಾಪನಾ ಶಾಖೆ ಸೇರಿದಂತೆ ಕಂದಾಯ ಇಲಾಖೆ ಬಗ್ಗೆ ಜನರಲ್ಲಿ ಭಾರೀ ಆಕ್ರೋಶಇವರುದನ್ನು ಗುರುತಿಸಿದ್ದ ಜಿಲ್ಲಾಧಿಕಾರಿಗಳು ಶೀಘ್ರವೇ ಇಲಾಖೆ ಬಗ್ಗೆ ವಿಶ್ವಾಸ ಮೂಡಲು ಕಂದಾಯ ಇಲಾಖೆ ಜಮಾಬಂದಿ ಕರೆಯುವಂತೆ ಆದೇಶಿಸಿದ್ದರು.
ತಾಲೂಕಿನ ಕಂದಾಯ ವಿಭಾಗದ ಜಮಾಬಂದಿ ಕಾರ್ಯಕ್ರಮ ಶನಿವಾರ ನಿಗದಿಯಾಗಿತ್ತು. ಇದಕ್ಕಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಜಮಾಬಂದಿಯ ಕಡತಗಳನ್ನು ಪರಿಶೀಲಿಸಲು ಕ್ಲಪ್ತ ಸಮಯಕ್ಕೆ ಬೆಳ್ತಂಗಡಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ಆದರೆ ಅವರು ಬಂದು ನೋಡುವಾಗ ಜಮಾಬಂದಿಯನ್ನು ನಿರ್ವಹಿಸಬೇಕಾಗಿದ್ದ ಗ್ರಾಮಕರಣಿಕರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮಾತ್ರಯಾವುದೇ ತಯಾರಿಯನ್ನು ನಡೆಸದೆ ಬಂದಿದ್ದರು. ಇದನ್ನು ನೋಡಿ ಡಿಸಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿಯವರು ಮುಂದಿನ ಜಮಾಬಂದಿಗೆ ಎಲ್ಲರೂ ತಯಾರಾಗಿರಬೇಕು. ಎಲ್ಲಾ ಸಮರ್ಪಕ ದಾಖಲೆಗಳನ್ನು ಸಿದ್ದಪಡಿಸಿಕೊಂಡಿರಬೇಕು. ಕೇಳಲಾಗುವ ಯಾವ ಮಾಹಿತಿಗೂ ಹಾರಿಕೆಯ ಉತ್ತರವನ್ನು ನೀಡಕೂಡದೂ. ಸರ್ವರೀತಿಯಲ್ಲೂ ಸಿದ್ದತೆ ನಡೆಸಿರಬೇಕು. ಕೂಡಲೇ ದಿನಾಂಕ ನಿರ್ಧರಿಸಲಾಗುವದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ಸಭೆಯನ್ನು ಮುಂದೂಡಿದರು.
ಬಿಸಿ ಮುಟ್ಟಿಸಿದ ಪುತ್ತೂರು ಎಸಿ: ಡಿಸಿಯವರು ಅಸಮಾಧಾನಗೊಂಡು ತೆರಳಿದ ಬಳಿಕ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಪುತ್ತೂರು ವಿಭಾಗಾಧಿಕಾರಿ ಡಾ| ರಾಜೇಂದ್ರ ಅವರು ಗರಂ ಆಗಿ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು. ಕರ್ತವ್ಯ ಲೋಪ ಸಲ್ಲದು. ಲೋಪವಾದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಿಸಿ ಕ್ಯಾಮರಾ ಅಳವಡಿಸಿದ್ದರೂ ಇಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಲ್ಲ ಎಂಬುದು ಗಮನಕ್ಕೆ ಬಂದಿದೆ.
ಇಲಾಖೆಯಲ್ಲಿ ಸಮರ್ಪಕವಾಗಿ ಕೆಲಸಗಳು ಆಗುತ್ತಿಲ್ಲ ಎಂದು ಸಾರ್ವಜನಿಕರಿಂದ ಇನ್ನು ದೂರು ಕೇಳಿ ಬಂದಲ್ಲಿ ಸಂಬಂಧಪಟ್ಟವರ ಮೇಲೆ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮುಂದಿನ ಜಮಾ ಬಂದಿಯ ದಿನಾಂಕದ ಮುಂಚಿತವಾಗಿ ಎಲ್ಲರೂ ಅದಕ್ಕೆ ಸಂಬಂಧ ಪಟ್ಟ ಕಡತಗಳನ್ನು ಸಿದ್ದತೆಯಲ್ಲಿಡಬೇಕು ಎಂದ ಅವರು ನಿಮ್ಮನ್ನು ಇಲಾಖೆ ಆಯ್ಕೆ ಮಾಡಿರುವುದು ಜನರಿಗೆ ಬೇಕಾದ ಕೆಲಸ ಮಾಡಿಕೊಡಲು ವಿನಾ ಬೇರೆ ಕಾರಣಕ್ಕೆ ಅಲ್ಲ ಎಂದು ಪರೋಕ್ಷವಾದ ಮಾತುಗಳಲ್ಲಿ ಎಸಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಎಡಿಎಲ್ಆರ್ ಶ್ರೀನಿವಾಸ್, ತಹಶೀಲ್ದಾರ್ ಪ್ರಸನ್ನಮೂರ್ತಿ ಉಪಸ್ಥಿತರಿದ್ದರು.
ಕಂದಾಯಇಲಾಖೆಯ ಲೆಕ್ಕಪತ್ರ, ಜನತೆಗೆ ಇಲಾಖೆಯಲ್ಲಿ ಆಗಬೇಕಾಗಿರುವ ಕೆಲಸಕಾರ್ಯಗಳಲ್ಲಿ ವಿಳಂಬ ಮತ್ತು ತೊಂದರೆ ಇತ್ಯಾಧಿ ವಿಚಾರಗಳ ಬಗ್ಗೆ ಅನೇಕ ವರ್ಷಗಳಿಂದ ಸಭೆ ಕರೆಯದೇ ಇದ್ದ ಬಗ್ಗೆ ಘರಂ ಆಗಿದ್ದ ಜಿಲ್ಲಾಧಿಕಾರಿಗಳು ಫೆ. ೬ ರಂದು ಸಭೆ ನಡೆಸಲು ಆದೇಶ ನೀಡಿದ್ದರೂ ಸಭೆ ನಡೆಸದೆ, ಜನತೆಗೆ ಮಾಹಿತಿ ನೀಡz. ಮಾಧ್ಯಮದವರನ್ನೂ ಆಹ್ವಾನಿಸದೆ ಇದ್ದುದಕ್ಕೆ ಜಿಲ್ಲಾಧಿಕಾರಿ, ಅಪರಜಿಲ್ಲಾಧಿಕಾರಿ, ಸಹಾಯಕ ಆಯುಕ್ತರೂ ಸೇರಿದಂತೆ ಆಗಮಿಸಿದ್ದ ಮೇಲಧಿಕಾರಿಗಳು ಗರಂ ಆಗಿ ತಹಶಿಲ್ದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.