ಮಂಗಳೂರು : ಕ್ರೀಡಾಭಾರತಿ ಮಂಗಳೂರು ಘಟಕವು, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ದ.ಕ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದಲ್ಲಿ 3500 ಕ್ಕೂ ಮಿಕ್ಕಿದ ಕ್ರೀಡಾಪಟುಗಳ ಜಿಲ್ಲಾ ಮಟ್ಟದ ಕಿರಿಯರ ಒಲಿಂಪಿಕ್ಸ್ 2016 ನ್ನು ಆಯೋಜಿಸುವ ಬೃಹತ್ ತೀರ್ಮಾನವನ್ನು ಮಾಡುವ ಮೂಲಕ ಐತಿಹಾಸಿಕ ಹೆಜ್ಜೆಯನ್ನು ಪ್ರಥಮ ಸಭೆಯಲ್ಲಿ ಪ್ರಾರಂಭಿಸಿತು.
4300 ಕ್ಕೂ ಮಿಕ್ಕಿದ ಕ್ರೀಡಾಪಟುಗಳು ಬೃಹತ್ ಕಿರಿಯರ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಮೂಲಕ ದ.ಕ. ಜಿಲ್ಲೆಯ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಜನವರಿ 15, 16 ರಂದು ಮಂಗಳಾ ಕ್ರೀಡಾಂಗಣದಲ್ಲಿ ಬರೆದು, ಈ ಕಿರಿಯರ ಒಲಿಂಪಿಕ್ಸ್ ಐತಿಹಾಸಿಕವಾಗಿ ಸ್ಮರಣೀಯಗೊಳ್ಳುವುದರ ಮೂಲಕ ಮುಂದಿನ ದಿನಗಳಲ್ಲಿ ಭವಿಷ್ಯದ ಕ್ರೀಡಾಪಟುಗಳಿಗೆ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆಯನ್ನು ನಿರ್ಮಿಸಿದ್ದನ್ನು ಎಲ್ಲಾ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಮುಕ್ತ ಕಂಠದಿಂದ ಆನಂದಿಸಿದ್ದಾರೆ ಹಾಗೂ ಅಭಿನಂದಿಸಿದ್ದಾರೆ.
ವಯೋಮಾನ 10, 12, 14, 17ರ ವಿಭಾಗದ ಹುಡುಗ ಹುಡುಗಿಯರಿಗೆ 58 ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ವಯೋಮಾನ 14, 17 ರ ವಿಭಾಗದ ಹುಡುಗ, ಹುಡುಗಿಯರಿಗೆ ಕಬಡ್ಡಿ, ವಾಲಿಬಾಲ್ ಪಂದ್ಯಾಟಗಳನ್ನು, 17 ರ ವಯೋಮಾನದ ಹುಡುಗ ಹುಡುಗಿಯರಿಗೆ ಹ್ಯಾಂಡ್ಬಾಲ್, ಬ್ಯಾಡ್ಮಿಂಟನ್ ಪಂದ್ಯಾಟಗಳನ್ನು, 14, 17 ರ ವಯೋಮಾನದ ಹುಡುಗರಿಗೆ 11 ಕುಸ್ತಿ ಸ್ಪರ್ಧೆಗಳನ್ನು ಮತ್ತು 96 ವಿವಿಧ ಈಜು ಸ್ಪರ್ಧೆಗಳನ್ನು ನಡೆಸಲಾಯಿತು.
ಒಟ್ಟು 295 ಚಿನ್ನದ ಪದಕ, 295 ಬೆಳ್ಳಿ ಪದಕ ಮತ್ತು 176 ಕಂಚಿನ ಪದಕಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಿರುವುದನ್ನು ಸಮಗ್ರ ಚಾಂಪಿಯನ್, 14 ಟೀಮ್ ಚಾಂಪಿಯನ್ ಶಿಪ್, 14 ಟೀಮ್ ಚಾಂಪಿಯನ್ ಶಿಪ್ ರನ್ನರ್ಸ್, 32 ವೈಯಕ್ತಿಕ ಚಾಂಪಿಯನ್ ಶಿಪ್ಗಳನ್ನು ವಿದ್ಯಾರ್ಥಿಗಳು ಗೆದ್ದುಕೊಂಡಿರುವರು ಮತ್ತು ವಿಜೇತರಿಗೆ ಆಕರ್ಷಕ ಸರ್ಟಿಫಿಕೇಟ್ಗಳನ್ನು ಭಾವಚಿತ್ರಗಳನ್ನು ಅಳವಡಿಸಿ ನೀಡಲಾಗಿದೆ.
ವೈಯಕ್ತಿಕ ಸ್ಪರ್ಧೆಗಳಿಗೆ ರೂ. 300/-, ರೂ. 2೦೦/-, ರೂ. 15೦/-ರಂತೆ ನೀಡಲಾಗಿದ್ದು, ಟೀಮ್ ಚಾಂಪಿಯನ್ ಶಿಪ್ಗಳಿಗೆ ಕ್ರಮವಾಗಿ ರೂ. 3000/-, 2000/-, 1000 /-ದಂತೆ ನೀಡಲಾಗಿದ್ದು ಸುಮಾರು ರೂ. 1,92,500 /- ಇದಕ್ಕಾಗಿ ವಿನಿಯೋಗಿಸಲಾಗಿದೆ.
15-01-2016 ರ ಬೆಳಗ್ಗೆ ದ.ಕ. ಜಿಲ್ಲೆಯ ವ್ಯಾಪ್ತಿಯ ಎಲ್ಲಾ ಹಳ್ಳಿ ಹಾಗೂ ಪಟ್ಟಣದಿಂದ ಬಂದ 4300 ಕ್ಕೂ ಮಿಕ್ಕಿದ ಕ್ರೀಡಾಪಟುಗಳು, ೩೮೦ಕ್ಕೂ ಮಿಕ್ಕಿದ ಕ್ರೀಡಾಧಿಕಾರಿಗಳು, 600 ಕ್ಕೂ ಮಿಕ್ಕಿದ ಬ್ಯಾಂಡ್ ಸದಸ್ಯರು, ಸೇರಿದಂತೆ 5000 ಮಿಕ್ಕಿದ ಸಂಖ್ಯೆಯಲ್ಲಿ ಆಕರ್ಷಕ ಪಥಸಂಚಲನವು ಮಂಗಳಾ ಕ್ರೀಡಾಂಗಣದ ರಾಜಮಾರ್ಗದಿಂದ ಬಂದು ಮಂಗಳಾ ಕ್ರೀಡಾಂಗಣದಲ್ಲಿ ಮುಖ್ಯ ಅತಿಥಿಯವರಿಗೆ ವಂದನೆ ಸಮರ್ಪಿಸಿರುವ ದೃಶ್ಯ ಮನಮೋಹಕವಾಗಿತ್ತು, ಐತಿಹಾಸಿಕವಾಗಿತ್ತು. ಕ್ರೀಡಾಜ್ಯೋತಿ ಉರ್ವಾ ಮಾರಿಯಮ್ಮ ದೇವರ ಸನ್ನಿಧಿಯಿಂದ ಕ್ರೀಡಾಂಗಣಕ್ಕೆ ಆಗಮಿಸಿ, ಎಲ್ಲರಿಗೂ ಸುರಕ್ಷತೆಯ ಅಭಯ ನೀಡಿ ಉದ್ಘಾಟನೆಗೊಂಡಿತು. ಜೆಸ್ಟಿಸ್ ಕೆ.ಎಸ್. ಹೆಗ್ಡೆ ಆಕರ್ಷಕ ವೇದಿಕೆಯಲ್ಲಿ ಲೋಕಸಭಾ ಸದಸ್ಯರಾದ ಶ್ರೀಯುತ ನಳಿನ್ ಕುಮಾರ್ ಕಟೀಲ್, ಶಾಸಕರಾದ ಶ್ರೀ ಜೆ. ಆರ್. ಲೋಬೋ, ಕ್ರೀಡಾಭಾರತಿ ಪ್ರಾಂತ ಸಂಯೋಜಕರಾದ ಶ್ರೀ ವಿ. ಮಂಜುನಾಥ್, ಉಪನಿರ್ದೇಶಕರಾದ ಶ್ರೀ ವಾಲ್ಟರ್ ಹೆಚ್. ಡಿಮೆಲ್ಲೋ, ಸ್ಥಳೀಯ ಮ.ನ.ಪಾ. ಸದಸ್ಯರಾದ ಶ್ರೀಮತಿ ಜಯಂತಿ ಆಚಾರ್ ವಿಪಕ್ಷ ನಾಯಕರಾದ (ಮ.ನ.ಪಾ.) ಶ್ರೀ ಸುಧೀರ್ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಪ್ರಾಂತ ಸಹಸಂಘಚಾಲಕರಾದ ಡಾ| ವಾಮನ್ ಶೆಣೈ, ಮಾಜಿ ಸಂಸದರಾದ ಶ್ರೀಮತಿ ತೇಜಸ್ವಿನಿ ಗೌಡ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಉಸ್ತುವಾರಿ ಸಚಿವರಾದ ಶ್ರೀ ಬಿ. ನಾಗರಾಜ ಶೆಟ್ಟಿ ಮೊದಲಾದವರ ಸಮ್ಮುಖದಲ್ಲಿ ಕ್ರೀಡಾಕೂಟದ ಉದ್ಘಾಟನೆಯಾಯಿತು. ಮತ್ತು ರಾಜ್ಯ ಒಲಿಂಪಿಕ್ಸ್ ಸಂಸ್ಥೆಯಿಂದ ಪ್ರಶಸ್ತಿ ಪಡೆದ ಶ್ರೀ ಎ. ಸದಾನಂದ ಶೆಟ್ಟಿಯವರಿಗೆ, ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಉಪನಿರ್ದೇಶಕರರಾದ ಶ್ರೀ ವಾಲ್ಟರ್ ಹೆಚ್ ಡಿಮೆಲ್ಲೋರವರನ್ನು ಸನ್ಮಾನಿಸಲಾಯಿತು.
ಈ ಎರಡು ದಿನಗಳಲ್ಲಿ ಕಿರಿಯರ ಒಲಿಂಪಿಕ್ಸ್ನಲ್ಲಿ ಊಟ ಮತ್ತು ಉಪಹಾರದ ವ್ಯವಸ್ಥೆಯಿದ್ದು, ಸುಮಾರು 16000 ಕ್ಕೂ ಹೆಚ್ಚು ಜನರು ಇದರ ಸದುಪಯೋಗವನ್ನು ಪಡೆದಿರುವುದೇ ಈ ಯಶಸ್ವೀ ಕ್ರೀಡಾಕೂಟದ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರೆ ಖಂಡಿತಾ ಅತಿಶಯೋಕ್ತಿಯಾಗಲಾರದು.
ಸಮಾರೋಪ ಸಮಾರಂಭವು 16-01-2016 ರ ಸಂಜೆ 5 ಗಂಟೆಗೆ ನಡೆಸಲಾಗಿದ್ದು ವೇದಿಕೆಯಲ್ಲಿ ಶ್ರೀಯುತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಪ್ರಾಂತ ಸಹಸಂಘ ಚಾಲಕರಾದ ಡಾ| ವಾಮನ್ ಶೆಣೈ, ಉರ್ವ ಚರ್ಚಿನ ಧರ್ಮಗುರುಗಳು, ರಾ.ಸ್ವ.ಸಂ. ಮಾನ್ಯ ಮಹಾನಗರ ಸಂಘಚಾಲಕರಾದ ಡಾ| ಸತೀಶ್ ರಾವ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಾಜಿ ಉಸ್ತುವಾರಿ ಸಚಿವರಾದ ಶ್ರೀ ಬಿ. ನಾಗರಾಜ್ ಶೆಟ್ಟಿ, ಅಧ್ಯಕ್ಷರಾದ ಕೆ. ಚಂದ್ರಶೇಖರ ರೈ ಮೊದಲಾದವರು ಭಾಗವಹಿಸಿ ಎಲ್ಲಾ ಕ್ರೀಡಾಪಟುಗಳಿಗೆ ಪದಕ, ಸರ್ಟಿಫಿಕೇಟ್, ಸಮಗ್ರ ಚಾಂಪಿಯನ್ ಶಿಪ್ ಮತ್ತು ನಗದು ಪುರಸ್ಕಾರಗಳನ್ನು ನೀಡಿ ಗೌರವಿಸಿದರು. ಕ್ರೀಡಾಭಾರತಿ ಮಂಗಳೂರು, ಜಿಲ್ಲಾ ಶಿಕ್ಷಣ ಇಲಾಖೆ ಮತ್ತು ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸೇರಿದಂತೆ ಎಲ್ಲರ ಅವಿರತವಾದ ಶ್ರಮದಿಂದ ಅತ್ಯಂತ ಯಶಸ್ವಿ ಐತಿಹಾಸಿಕ ಕಿರಿಯರ ಒಲಿಂಪಿಕ್ಸ್ 2016 ಚರಿತ್ರೆಯಲ್ಲಿ ದಾಖಲಾಯಿತು. ಶ್ರೀಯುತ ಕರಿಯಪ್ಪ ರೈ ಕೆ. ರೊಸಾರಿಯೊ ಪ್ರೌಢಶಾಲೆ, ಶ್ರೀಮತಿ ಸೇವಂತಿ, ಶ್ರೀ ದಾಮೋದರ ಗೌಡ, ಶ್ರೀಯುತ ಪಾಂಡುರಂಗ ಗೌಡ, ಯುವಜನ ಕ್ರೀಡಾ ಇಲಾಖೆಯ ಉಪನಿರ್ದೇಶಕರು ಮತ್ತು ನೆಲ್ಯಾಡಿಯ ಉಲಾಹನ್ನನ್ ಇವರುಗಳನ್ನು ಕಿರಿಯರ ಒಲಿಂಪಿಕ್ಸ್ನ ಸಂಘಟನಾ ಸಹಕಾರಕ್ಕಾಗಿ ಸನ್ಮಾನಿಸಲಾಯಿತು.
ಕ್ರೀಡಾಭಾರತಿ ಕಿರಿಯರ ಒಲಿಂಪಿಕ್ಸ್ 2016 ರ ಗೌರವ ಅಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕ್ರೀಡಾಭಾರತಿಯ ಗೌರವ ಅಧ್ಯಕ್ಷರಾದ ಶ್ರೀ ಬಿ. ನಾಗರಾಜ ಶೆಟ್ಟಿ, ಅಧ್ಯಕ್ಷರಾದ ಶ್ರೀ ಕೆ. ಚಂದ್ರಶೇಖರ್ ರೈ, ಸಂಚಾಲಕರಾದ ಬಿ. ಭೋಜರಾಜ್ ಕಲ್ಲಡ್ಕ, ಕಾರ್ಯದರ್ಶಿಯಾದ ಪ್ರಮೋದ್ ಆರಿಗ, ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷರಾದ ಶ್ರೀ ಕೆ.ಎಚ್. ನಾಯಕ್ ತಾಲೂಕು ಅಧ್ಯಕ್ಷರಾದ ಶ್ರೀ ದಯಾನಂದ ಮಾಡ, ಕಾರ್ಯದರ್ಶಿಯಾದ ಹರೀಶ್ ರೈ ಮತ್ತು ಎಲ್ಲಾ ಕ್ರೀಡಾಭಾರತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಅವಿರತ ಶ್ರಮದಿಂದ ಕಿರಿಯರ ಒಲಿಂಪಿಕ್ಸ್ 2016 ಐತಿಹಾಸಿಕವಾಗಿ ದಾಖಲಾಗಿದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ. ವಂದೇ ಮಾತರಂ ಹಾಡುವುದರೊಂದಿಗೆ ಕಿರಿಯರ ಒಲಿಂಪಿಕ್ಸ್ 2016 ಕ್ಕೆ ಪೂರ್ಣ ವಿರಾಮ ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.