ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಹೆತ್ತಿದ್ದ ತಾಯಿಯನ್ನು ನರ್ಸ್ ಒಬ್ಬಳು “ವೈದ್ಯರು ಕರೀತಿದ್ದಾರೆ, ಬನ್ನಿ” ಎಂದಳು. ನವಜಾತ ಶಿಶುವನ್ನು ತಪಾಸಣೆಗಾಗಿ ಕೈಗೆತ್ತಿಕೊಂಡಳು. ನೋಡ ನೋಡುತ್ತಿದ್ದಂತೆ ಶಿಶುವಿನೊಂದಿಗೆ ಆ ನರ್ಸ್ ಕಣ್ಮರೆಯಾದಳು. ಶಿಶುವಿನ ತಾಯಿ ಅನಂತರ ಬಂದು ನೋಡಿದರೆ ಆ ನರ್ಸ್ ಕೂಡಾ ಇಲ್ಲ. ಮಗುವೂ ಇಲ್ಲ.
ಪಾಪ, ಆ ಶಿಶುವನ್ನು ಕಳೆದುಕೊಂಡ ತಾಯಿಯ ದುಃಖ ಹೇಗಿರಬೇಡ. ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ವೈದ್ಯರ ಸೂಚನೆ ಮೇರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಹತ್ತನೇ ದಿನ ನರ್ಸ್ ದಿರಿಸು ತೊಟ್ಟ ಮಹಿಳೆಯೊಬ್ಬಳು ವಾರ್ಡ್ಗೆ ಬಂದು ವೈದ್ಯರು ತಪಾಸಣೆಗೆ ಕರೆಯುತ್ತಿದ್ದಾರೆ ಎಂದು ಹೇಳಿದಳು. ಇದನ್ನು ನಂಬಿದ ಪೋಷಕರು ಮಗುವಿನ ಜೊತೆಗೆ ತಪಾಸಣೆಗೆಂದು ಆಕೆಯ ಜೊತೆ ಹೊರಬಂದರು. ಮಗುವನ್ನು ಕೈಗೆತ್ತಿಕೊಂಡ ನರ್ಸ್ವೇಷಧಾರಿ ಇವರ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾಳೆ. ಪೋಲೀಸರು ತಪಾಸಣೆ ಬಳಿಕ ಸಿಸಿ ಕ್ಯಾಮೆರಾದಲ್ಲಿ ಅಪಹರಣಕಾರ್ತಿಯ ಚಲನವಲನ ಹಾಗು ಮುಖ ಸೆರೆಯಾಗಿದೆ. ಅನಂತರ ಒಂದೇ ದಿನದಲ್ಲಿ ಅಪಹರಣಕಾರ್ತಿಯನ್ನು ಪೋಲೀಸರು ಪತ್ತೆಹಚ್ಚಿದ್ದಾರೆ. ಅಪಹರಣಕಾರ್ತಿ ಸುರೇಖ ಎಂಬ ಧಾರವಾಡದ ನಿವಾಸಿ. ಆಕೆ ಮಗುವನ್ನು ಅಪಹರಿಸಿದ್ದಕ್ಕೆ ಕಾರಣ, ಆಕೆಗೆ ಎರಡು ಬಾರಿ ಗರ್ಭಪಾತ ಆದಮೇಲೂ ಮಗು ಹೆರುವ ಆಸೆ ಕೈಗೂಡಿರಲಿಲ್ಲ. ಇದಕ್ಕಾಗಿ ಬೇರೊಬ್ಬರ ಮಗುವನ್ನು ಅಪಹರಿಸುವ ದುಸ್ಸಾಹಸಕ್ಕೆ ಕೈಯಿಕ್ಕಿದ್ದಳು. ಆದರೆ ತನ್ನ ಬಣ್ಣ ಬಯಲಾಗಿದ್ದರಿಂದ ಮಾನಸಿಕವಾಗಿ ನೊಂದು ಆಕೆ ನೇಣಿಗೆ ಶರಣಾದಳು.
ಮೊನ್ನೆ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ಭದ್ರತೆಯ ದೃಷ್ಟಿಯಿಂದ 15 ಸಹಸ್ರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರಂತೆ. ಗಣರಾಜ್ಯೋತ್ಸವ ಪೆರೇಡ್ಗೆ ಯಾವುದೇ ವಿಘ್ನ ಉಂಟಾಗದಿರಲೆಂದು ಈ ಮುನ್ನೆಚ್ಚರಿಕೆಯ ಕ್ರಮ. ಗಣರಾಜ್ಯೋತ್ಸವಕ್ಕೂ ಮುನ್ನ ಮೂರು ದಿನಗಳ ಹಿಂದೆ ದೇಶಾದಾದ್ಯಂತ 15 ಕ್ಕೂ ಹೆಚ್ಚು ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಕಾರಣಕ್ಕಾಗಿಯೇ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಒಟ್ಟಾರೆ ಗಣರಾಜ್ಯೋತ್ಸವ ಯಾವುದೇ ವಿಘ್ನವಿಲ್ಲದೆ ಸಾಂಗವಾಗಿ ನೆರವೇರಿತು.
ಧಾರವಾಡದ ಸಾಹಿತಿ, ಕಲಬುರ್ಗಿಯವರ ಕೊಲೆ ಪ್ರಕರಣ ನಮಗೆಲ್ಲಾ ಗೊತ್ತು. ಕೊಲೆ ಮಾಡಿದವರು ಯಾರು ಎಂಬುದು ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಅವರ ಮನೆಯ ಸಮೀಪದಲ್ಲೇ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದರೂ ಕೊಲೆಗಾರರನ್ನು ಪತ್ತೆಹಚ್ಚಲು ಆ ಕ್ಯಾಮೆರಾ ನೆರವಾಗಲಿಲ್ಲ. ಈಗ ಎಲ್ಲಿ ನೋಡಿದರೂ ಸಿಸಿ ಕ್ಯಾಮೆರಾಗಳದ್ದೇ ಕಾರುಬಾರು. ಮಾಲ್, ಬಜಾರ್, ಚಿನ್ನಾಭರಣ ಅಂಗಡಿ, ದೊಡ್ಡ ದೊಡ್ಡ ಕಛೇರಿಗಳು, ಹೋಟೆಲ್ಗಳು… ಹೀಗೆ ಎಲ್ಲೆಡೆಯಲ್ಲೂ ಸಿಸಿ ಕ್ಯಾಮೆರಾ ನಮ್ಮನ್ನು ಸ್ವಾಗತಿಸುತ್ತವೆ. ಈಚೆಗೆ ಶಾಲೆಗಳಲ್ಲಿ ಕಾಮಪಿಪಾಸು ಶಿಕ್ಷಕರು, ಸಿಬ್ಬಂದಿಗಳ ಹಾವಳಿ ಹೆಚ್ಚಾದ ಬಳಿಕ ಅಲ್ಲೂ ಸಿಸಿ ಕ್ಯಾಮೆರಾ ಕಡ್ಡಾಯಗೊಳಿಸಲಾಗಿದೆ. ಇನ್ನು ಕೆಲವೆಡೆ ದೇವಸ್ಥಾನಗಳಂಥ ಜಾಗದಲ್ಲೂ “ನೀವೀಗ ಸಿಸಿ ಕ್ಯಾಮೆರಾ ಪ್ರದೇಶ ವ್ಯಾಪ್ತಿಯಲ್ಲಿದ್ದೀರಿ” ಎಂಬ ಎಚ್ಚರಿಕೆಯ ಫಲಕಗಳು ಕಾಣಸಿಗುತ್ತವೆ. ಅಲ್ಲಿ ನಿಜವಾಗಿ ಸಿಸಿ ಕ್ಯಾಮೆರಾ ಅಳವಡಿಸಿರುತ್ತಾರೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಅಳವಡಿಸಿದ್ದರೂ ಆ ಸಿಸಿ ಕ್ಯಾಮೆರಾ ಸೂಕ್ತವಾಗಿ ಕಾರ್ಯನಿರ್ವಹಿಸುತ್ತದೋ ಇಲ್ಲವೋ ಅದೂ ಗೊತ್ತಿಲ್ಲ. ಆದರೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಫಲಕವೇ ಜನರನ್ನು ಎಚ್ಚರಿಕೆಯಿಂದ ಇರುವಂತೆ ಪ್ರೇರಿಸಲು ಸಾಕಾಗುತ್ತದೆ.
ಕಛೇರಿಗಳಲ್ಲಿ ದಬ್ಬಾಳಿಕೆ, ಮಹಿಳೆಯರ ಮೇಲೆ ದೌರ್ಜನ್ಯ, ರಾತ್ರಿ ವೇಳೆ ಕ್ಲಬ್-ಪಬ್ಗಳಲ್ಲಿ ಹೊಡೆದಾಟ ಇತ್ಯಾದಿ ವಿದ್ಯಮಾನಗಳು ಹೆಚ್ಚಿದಂತೆಲ್ಲಾ ಎಲ್ಲೆಡೆ ಸಿಸಿ ಕ್ಯಾಮೆರಾ ರಕ್ಷಣೆಗೆ ಧಾವಿಸಿದೆ. ಒಂದು ರೀತಿಯಲ್ಲಿ ಸಿಸಿ ಕ್ಯಾಮೆರಾ ಸಂಭಾವ್ಯ ಅನಾಹುತಗಳನ್ನು ತಡೆಯುವಲ್ಲಿ ಅತ್ಯಂತ ಉಪಕಾರಿ. ಆದರೆ ಸಿಸಿ ಕ್ಯಾಮೆರಾ ತಂತ್ರಜ್ಞಾನ ಬರುವುದಕ್ಕೂ ಮುನ್ನ ಯಾಕೆ ಇಂತಹ ಅನಾಹುತಗಳು ನಡಯುತ್ತಿರಲಿಲ್ಲ ಎಂಬ ಪ್ರಶ್ನೆಯೂ ಕಾಡುತ್ತದೆ. ಕೆಲವೇ ವರ್ಷಗಳ ಹಿಂದೆ ಸಿಸಿ ಕ್ಯಾಮೆರಾ ಎಂಬ ಶಬ್ದವೇ ಯಾರಿಗೂ ಗೊತ್ತಿರಲಿಲ್ಲ. ಎಲ್ಲೋ ಅತ್ಯಂತ ಎಚ್ಚರಿಕೆ ಇರಬೇಕಾದ, ಭದ್ರತೆಯ ದೃಷ್ಟಿಯ ಇಸ್ರೋ, ವಿದ್ಯುತ್ ನಿರ್ಮಾಣ ಕೇಂದ್ರಗಳು ಮುಂತಾದ ಕಡೆ ಮಾತ್ರ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿತ್ತು. ಉಳಿದ ಕಡೆ ಅಂತಹ ಯಾವುದೇ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಶಾಲೆ, ದೇವಸ್ಥಾನ, ಮಾಲ್, ಬಜಾರ್, ಮಳಿಗೆ, ಕ್ಲಬ್ ಇತ್ಯಾದಿ ಎಲ್ಲೆಡೆಯಲ್ಲೂ ಸಿಸಿ ಕ್ಯಾಮೆರಾ ಅಳವಡಿಸಬೇಕಾದ ಅನಿವಾರ್ಯತೆ ಬಂದೊದಗಿರುವುದು ವರ್ತಮಾನದ ವೈರುಧ್ಯವಲ್ಲವೇ?
ಕನಕದಾಸರ ಬದುಕಿನ ಕಥೆಯೊಂದು ನೆನಪಿಗೆ ಬರುತ್ತದೆ. ಗುರುಗಳು ಎಲ್ಲ ಶಿಷ್ಯರಿಗೆ ಬಾಳೆಹಣ್ಣು ನೀಡಿ, ಅದನ್ನು ಯಾರೂ ನೋಡದ ಸ್ಥಳದಲ್ಲಿ ತಿಂದು ಬರಬೇಕೆಂದು ಹೇಳುತ್ತಾರೆ. ಎಲ್ಲ ಶಿಷ್ಯರೂ ತಮಗೆ ಅನಿಸಿದಂತೆ ಯಾರೂ ನೋಡದ ಸ್ಥಳಕ್ಕೆ ತೆರಳಿ ಬಾಳೆಹಣ್ಣು ತಿಂದು ಬರುತ್ತಾರೆ. ಆದರೆ ಕನಕದಾಸ ಮಾತ್ರ ಆ ಬಾಳೆಹಣ್ಣು ತಿನ್ನದೆ ಕೈಯಲ್ಲಿ ಹಾಗೆಯೇ ಹಿಡಿದುಕೊಂಡಿದ್ದ. ಬಾಳೆಹಣ್ಣು ತಿಂದ ಶಿಷ್ಯರೆಲ್ಲರೂ ಸಂತಸದಿಂದ ಗುರುಗಳ ಬಳಿ ತಾವು ಹೇಗೆ ಯಾರ ಕಣ್ಣಿಗೂ ಬೀಳದಂತೆ ಬಾಳೆಹಣ್ಣು ತಿಂದೆವೆಂದು ವರ್ಣಿಸುತ್ತಾರೆ. ಆಗ ಗುರುಗಳು ಕನಕನಿಗೆ ನೀನೇಕೆ ಹಣ್ಣು ತಿನ್ನಲಿಲ್ಲ ಎಂದು ಪ್ರಶ್ನಿಸುತ್ತಾರೆ. ಆಗ ಕನಕ ನೀಡಿದ ಉತ್ತರ ಅತ್ಯಂತ ಮಾರ್ಮಿಕ: “ಗುರುಗಳೇ, ಯಾರಿಗೂ ಕಾಣಿಸದಂತೆ ಹಣ್ಣು ತಿನ್ನುವುದು ಹೇಗೆ? ಏಕೆಂದರೆ ಎಲ್ಲೆಡೆಯಲ್ಲೂ ಪರಮಾತ್ಮ ಇದ್ದಾನಲ್ಲ. ಆತನ ಕಣ್ಣಿಗೆ ಬೀಳದ ಜಾಗ ಎಲ್ಲಿದೆ?”. ಕನಕನ ಉತ್ತರ ಕೇಳಿ ಗುರುಗಳು ಸಂತಸಪಟ್ಟರೆ, ಉಳಿದ ಶಿಷ್ಯರು ಮಾತ್ರ ಪೆಚ್ಚಾದರು!
ಈ ಕಥೆಯನ್ನು ನಾನಿಲ್ಲಿ ಉಲ್ಲೇಖಿಸಿದ್ದು ಸಿಸಿ ಕ್ಯಾಮೆರಾ ಈಗ ಅನಿವಾರ್ಯವಾಗುತ್ತಿರುವುದರ ಪ್ರಸ್ತುತತೆಯ ಹಿನ್ನೆಲೆಯಲ್ಲಿ. ಸಿಸಿ ಕ್ಯಾಮೆರಾ ಇಲ್ಲದಿದ್ದಾಗ ಏಕೆ ಅನಾಹುತಗಳು, ಅಪಸವ್ಯಗಳು ಆಗುತ್ತಿರಲಿಲ್ಲ? ಆಸ್ಪತ್ರೆಯಿಂದ ನರ್ಸ್ ನವಜಾತ ಶಿಶುವನ್ನು ಏಕೆ ಕದಿಯುತ್ತಿರಲಿಲ್ಲ? ಅಂಗಡಿಗಳಿಂದ ಯಾರೂ ಕೂಡ ಏಕೆ ವಸ್ತುಗಳನ್ನು ಎಗರಿಸುತ್ತಿರಲಿಲ್ಲ? ಚಿನ್ನಾಭರಣ ಮಳಿಗೆಯಿಂದ ಯಾರೊಬ್ಬರೂ ಏಕೆ ಒಂದು ಚಿಕ್ಕ ಚಿನ್ನದ ಚೂರನ್ನೂ ಅಪಹರಿಸುತ್ತಿರಲಿಲ್ಲ?
ಈ ಪ್ರಶ್ನೆಗಳಿಗೆ ನಮಗೆ ಉತ್ತರ ದೊರಕಿದರೆ ಆಗ ಸಿಸಿ ಕ್ಯಾಮೆರಾ ಏಕೆ ಅನಿವಾರ್ಯವಾಗಿರಲಿಲ್ಲ ಎಂಬುದು ಅರ್ಥವಾಗುತ್ತದೆ. ನಮ್ಮ ಜನರಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ ಮುಂತಾದ ಗುಣಗಳೆಲ್ಲಾ ಕಡಿಮೆಯಾಗುತ್ತಾ ಬಂದಂತೆ ಸಿಸಿ ಕ್ಯಾಮೆರಾ ಅನಿವಾರ್ಯವಾಗತೊಡಗಿದೆ. ಪ್ರತಿಯೊಬ್ಬರ ಅಂತರಂಗದಲ್ಲಿ ಇರಬೇಕಾದ ಸಿಸಿ ಕ್ಯಾಮೆರಾ ಈಗ ಮಾಲ್ಗಳಲ್ಲಿ, ಚಿನ್ನಾಭರಣ ಅಂಗಡಿಗಳಲ್ಲಿ, ಹೊಟೇಲ್ಗಳಲ್ಲಿ ರಾರಾಜಿಸಬೇಕಾಗಿದೆ. ಅಂತರಂಗ ಶುದ್ಧವಾಗಿದ್ದರೆ ಬಹಿರಂಗವೂ ಶುದ್ಧವಾಗಿರುತ್ತದೆ ಎಂದು ಶರಣರು ಬಹಳ ಹಿಂದೆಯೇ ಸಾರಿದ್ದಾರೆ. ಅಂತರಂಗ-ಬಹಿರಂಗದ ನಡುವೆ ಅಂತರವಿಲ್ಲದಿದ್ದಾಗ ಯಾವ ಸಿಸಿ ಕ್ಯಾಮೆರಾದ ಅಗತ್ಯವೂ ಇರುವುದಿಲ್ಲ. ಅಂತರಂಗವೇ ಬೇರೆ, ಬಹಿರಂಗವೇ ಬೇರೆ ಎಂಬಂತಾದಾಗ ಸಿಸಿ ಕ್ಯಾಮೆರಾ ಬೇಕಾಗುತ್ತದೆ. ಆದರೆ ಎಷ್ಟೊಂದು ಸಿಸಿ ಕ್ಯಾಮೆರಾ ಅಳವಡಿಸಲು ಸಾಧ್ಯ? ಇಡೀ ದೇಶದ ಕೋಟಿಕೋಟಿ ಜನರ ರಕ್ಷಣೆಗಾಗಿ ಎಷ್ಟೊಂದು ಪೊಲೀಸರನ್ನು ನಿಯುಕ್ತಿಗೊಳಿಸಲು ಸಾಧ್ಯ? ಒಂದು ವೇಳೆ ಕೋಟ್ಯಂತರ ಸಿಸಿ ಕ್ಯಾಮೆರಾಗಳನ್ನು ದೇಶದುದ್ದಗಲಕ್ಕೆ ಅಳವಡಿಸಲು ಸಾಧ್ಯ ಎಂದಿಟ್ಟುಕೊಂಡರೂ, ಆ ಸಿಸಿ ಕ್ಯಾಮೆರಾಗಳೆಲ್ಲವೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದಕ್ಕೆ ಏನು ಗ್ಯಾರಂಟಿ? ಒಂದು ವೇಳೆ ಆ ಸಿಸಿ ಕ್ಯಾಮೆರಾಗಳೆಲ್ಲವೂ ದೋಷರಹಿತವಾಗಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರೂ, ಆ ಸಿಸಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸುವ ಚಾತುರ್ಯ ಜನರಿಗಿದ್ದೇ ಇದೆ. ಹಲವೆಡೆ ದರೋಡೆ ನಡೆದಾಗ, ದರೋಡೆಕೋರರು ಮೊದಲು ಸಿಸಿ ಕ್ಯಾಮೆರಾಗೆ ಮುಸುಕುಹಾಕಿ ಅಥವಾ ಅದನ್ನು ಒಡೆದು ಹಾಕಿ ಅನಂತರ ತಮ್ಮ ‘ಸಾಹಸ’ಕ್ಕೆ ಮುಂದಾದ ನಿದರ್ಶನಗಳು ಎಷ್ಟೋ ಇವೆ.
ಹೀಗಾಗಿ ದೇಶದಲ್ಲಿ ಅತ್ಯಾಚಾರ, ಅನಾಚಾರ, ಅನಾಹುತ, ಲೂಟಿ, ಭಯೋತ್ಪಾದನೆ ಮುಂತಾದ ಅನಿಷ್ಟಗಳನ್ನು ನಿಯಂತ್ರಿಸಲು ಸಿಸಿ ಕ್ಯಾಮೆರಾದಿಂದಲೇ ಸಾಧ್ಯ ಎಂಬುದು ಕೇವಲ ಭ್ರಮೆ. ನಮ್ಮ ಅಂತರಂಗದ ಸಿಸಿ ಕ್ಯಾಮೆರಾಗಳಿಗೆ ಹಾಕಿದ ಮುಸುಕನ್ನು ನಾವೆಲ್ಲರೂ ತೆರೆಯಲು ಸಾಧ್ಯವಾದರೆ ಬಹಿರಂಗದಲ್ಲಿ ಯಾವ ಸಿಸಿ ಕ್ಯಾಮೆರಾಗಳೂ ಬೇಕಾಗುವುದಿಲ್ಲ. ಅಂತರಂಗದ ಸಿಸಿ ಕ್ಯಾಮೆರಾ ಮುಸುಕು ಸರಿಸಿ, ಅದರ ಮೇಲಿರುವ ಧೂಳನ್ನು ಒರೆಸಿ ಸುಸ್ಥಿತಿಯಲ್ಲಿಡೋಣ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.