ಬೆಳ್ತಂಗಡಿ : ಶ್ರೇಷ್ಠತೆ, ದಿವ್ಯತೆಯನ್ನು ಪಡೆದುಕೊಳ್ಳಲು ಇರುವ ಬದುಕನ್ನು ಹಾಳು ಮಾಡದೇ ಭಗವಂತನ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಕಾವೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.ಅವರು ನಾವೂರು ಶ್ರೀಗೋಪಾಲಕೃಷ್ಣ ದೇವರ ನೂತನ ಶಿಲಾಮಯ ದೇವಾಲಯದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಭಾನುವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ವೈಶಿಷ್ಟ್ಯಪೂರ್ಣವಾದ ಪರಂಪರೆಯುಳ್ಳ ಪುಣ್ಯಭೂಮಿ ನಮ್ಮದು. ನಾವು ಆಧ್ಯಾತ್ಮಿಕ ಮಾರ್ಗದಲ್ಲಿ ಹೋದರೆ ಮನುಷ್ಯ ಜೀವನದ ಮೌಲ್ಯಗಳನ್ನು ಉಳಿಸಿಕೊಳ್ಳಬಹುದಲ್ಲದೆ ಶಾಂತಿ, ನೆಮ್ಮದಿ, ಸಡಗರವನ್ನು ಕಾಣಬಹುದು. ಈ ಎಲ್ಲಾ ವಿಚಾರಗಳಿಗೆ ಪುಷ್ಠಿಯನ್ನು ನೀಡಿದವನೇ ಶ್ರೀಕೃಷ್ಣ ಪರಮಾತ್ಮ. ಆತನು ಉಪದೇಶಿಸಿದ ಭಗವದ್ಗೀತೆಗೆ ಮನಸ್ಸಿನ ವ್ಯಾಧಿ, ಭಾಧೆಗಳನ್ನು ನಿವಾರಿಸುವ ಶಕ್ತಿಯಿದೆ. ಮಾನಸಿಕ ಅಸ್ಥಿತರತೆಯನ್ನು ಹೋಗಲಾಡಿಸಿ, ಸನ್ನಡತೆಯತ್ತ ಪ್ರೇರೇಪಿಸುವಲ್ಲಿ ಕೃಷ್ಣನ ಪಾತ್ರ ಬಹುಮುಖ್ಯ. ಕೃಷ್ಣನನ್ನು ತಿಳಿದುಕೊಂಡವರಿಗೆ ಕಷ್ಟ,ನಷ್ಟಗಳಿಲ್ಲ ಎಂದರು.
ಭಗವಂತನನ್ನು ಕಾಣಲೇಬೇಕೆಂಬ ಉದ್ದೇಶದಿಂದ ದೇವಾಲಯಗಳ ನಿರ್ಮಾಣವಾಗಿದೆ. ನಾವೂರಿನಲ್ಲಿ ಸುಂದರವಾದ ದೇಗುಲ ನಿರ್ಮಾಣವಾಗಬೇಕೆಂದು ಭಗವಂತನೂ ಕೂಡ ಸಂಕಲ್ಪಿಸಿದ್ದನೆಂದು ಕಾಣುತ್ತದೆ. ನಾವೂರಿನ ಗ್ರಾಮಸ್ಥರ ಮೂಲಕ ಈ ಕಾರ್ಯವನ್ನು ದೇವರೇ ಮಾಡಿಸಿದ್ದಾನೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಯು. ವಿಜಯರಾಘವ ಪಡ್ವಟ್ನಾಯ ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ಡಾ| ಶ್ರೀಪತಿ ಕಜಂಪಾಡಿ ಕಾಸರಗೋಡು ಮಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಬಿಜೆಪಿ ಬೆಳ್ತಂಗಡಿ ಮಂಡಲಾಧ್ಯಕ್ಷ ಬಾಲಕೃಷ್ಣ ವಿ. ಶೆಟ್ಟಿ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ ಜಿ. ಗೌಡ, ನಾವೂರು ಗ್ರಾ.ಪಂ. ಉಪಾಧ್ಯಕ್ಷ ಎನ್. ಗಣೇಶ್ ಗೌಡ, ಸದಸ್ಯ ಜಯಂತ ಕೆ. ಹೊಡಿಕ್ಕಾರು, ಅಭಿವೃದ್ಧಿ ಅಧಿಕಾರಿ ಉಮೇಶ್, ಕಾನರ್ಪ ಶ್ರೀ ರಾಮಾಂಜನೇಯ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ. ಕಿಶೋರ್ ಕುರುಡ್ಕ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜಾ, ಪ್ರಧಾನ ಕಾರ್ಯದರ್ಶಿ ಎ.ಬಿ.ಉಮೇಶ್ ಅತ್ಯಡ್ಕ ಇದ್ದರು. ಸಭಾ ಕಾರ್ಯಕ್ರಮ ನಿರ್ವಹಣಾ ಸಮಿತಿ ಸಂಚಾಲಕ ಮೋಹನ್ ಬಂಗೇರ ಸ್ವಾಗತಿಸಿದರು. ಬಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ|ಪ್ರದೀಪ್ ವಂದಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
6 ದಿನಗಳ ಕಾಲ ನಡೆದ ಶ್ರೀಗೋಪಾಲಕೃಷ್ಣ ದೇವರ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶೋತ್ಸವ ಇತ್ಯಾಧಿ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಪದ್ಮನಾಭ ತಂತ್ರಿಗಳನ್ನು, ಹಿರಿಯ ದೈವಜ್ಞ ಶ್ರೀಧರ ಗೋರೆ ಅವರನ್ನು, ವಾಸ್ತು ಶಾಸ್ತ್ರಜ್ಞ ಪ್ರಸಾದ್ ಭಟ್ ಎಂ.ಎಸ್. ಮುನಿಯಂಗಳ ಅವರನ್ನು ಹಾಗೂ ದೇವಳದ ಪ್ರಧಾನ ಅರ್ಚಕ ವೇ|ಮೂ| ಗುರುರಾಜ ಶಬರಾಯ ಅವರನ್ನು ಸಮ್ಮಾನಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.