ಉಡುಪಿ : ಅನ್ನ ಬ್ರಹ್ಮನ ಕ್ಷೇತ್ರದಲ್ಲಿ ಶ್ರೀಕೃಷ್ಣನದ್ದೇ ದರ್ಬಾರು. ಆದರೆ ಭಾನುವಾರದ ಸುಂದರ ಸಂಜೆ ದೇವಾಲಯಗಳ ನಗರಿಯಲ್ಲಿ ಲಕ್ಷ ಮಂದಿಗೆ ದರ್ಶನ ಕೊಟ್ಟಿದ್ದು ಕಾಂಚನ ಬ್ರಹ್ಮ, ತಿರುಪತಿ ವೆಂಕಟರಮಣ, ಎಲ್ಲರ ಆರಾಧ್ಯ ದೈವ ಶ್ರೀನಿವಾಸ.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣವೇ ದೇವರ ಮದುವೆಗೆ ಸಭಾಂಗಣ . ಸಮುದ್ರ ರಾಜನ ಮಗಳಾದ ಲಕ್ಷ್ಮೀದೇವಿ ಮತ್ತು ಭೂದೇವಿಯೊಂದಿಗೆ ಶ್ರೀನಿವಾಸ ದೇವರ ಜೊತೆ ವಿಜೃಂಭಣೆಯಿಂದ ಕಲ್ಯಾಣ ನಡೆಯಿತು. ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಪರ್ಯಾಯದ ಕೊನೆಯ ದೊಡ್ಡ ಕಾರ್ಯಕ್ರಮ ವಾಗಿ ಶ್ರೀನಿವಾಸ ಕಲ್ಯಾಣ ನಡೆಯಿತು.
ಕೊಂಬು, ಕಹಳೆ, ಕೇರಳದ ಚಂಡೆ, ವಾದ್ಯಗಳ ನಿನಾದ ದೇವರ ಮದುವೆಗೆ ಮತ್ತಷ್ಟು ರಂಗು ನೀಡಿತ್ತು. ಗೋಧೂಳಿ ಲಗ್ನದಲ್ಲಿ ಭಗವಂತನ ಮದುವೆ ನೆರವೇರಿತು. ವೇದಿಕೆಯ ಮೇಲೆ ತಾಳಿ ಕಟ್ಟುವ- ಹೂ ಹಾರ ಬದಲಾಯಿಸಿಸುವ ವಿಧಿ ನಡೆದಾಗ ಜನಸಾಗರ ಭಕ್ತಿರಸದಲ್ಲಿ ಮಿಂದೆದ್ದರು. ಜನರ ಸುಭೀಕ್ಷೆ, ಸಮೃದ್ಧಿ ಸಂಕಲ್ಪವನ್ನು ಈ ಸಂದರ್ಭದಲ್ಲಿ ತಿರುಪತಿಯ ಅರ್ಚಕ ವರ್ಗ ಮಾಡಿತು. ಭಗವಂತ ದೇವಿಯರ ಮದುವೆ ಕಂಡ ಭಕ್ತರು ಸಂತುಷ್ಟಭಾವ ಹೊಂದಿದರು.
ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತರು ದೇವರ ಮದುವೆ ಕಣ್ಣಾರೆ ಕಂಡ ಸಂಭ್ರಮದಲ್ಲಿದ್ದರು. ತಿರುಪತಿಗೆ ತೆರಳಲು ಸಾಧ್ಯವಾಗದ ಜನ ಕೃಷ್ಣನ ನಾಡಿನಲ್ಲೇ ತಿಮ್ಮಪ್ಪನ ವೈಭವ ಕಂಡು ಕೃತಾರ್ಥರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.