ಬೆಳ್ತಂಗಡಿ : ಅವಕಾಶಗಳ ನಿರ್ಮಾಣದಿಂದ ದೇಶದಲ್ಲಿ ಪರಿವರ್ತನೆ ಮೂಡತೊಡಗಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರಿಂದ ಸಮಾಜ ಪ್ರಗತಿ ಹೊಂದಲು ಸಾಧ್ಯ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಸೋಮವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ದ.ಕ.ಜಿ.ಪಂ., ತಾ.ಪಂ.ಬೆಳ್ತಂಗಡಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ದ.ಕ ನಿರ್ಮಿತಿ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ವರ್ಗದ ಆಶ್ರಮ ಶಾಲೆ ಧರ್ಮಸ್ಥಳ ಇಲ್ಲಿನ ವಸತಿ ನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ದೇಶ ಮತ್ತು ರಾಜ್ಯದಲ್ಲಿ ಶಿಕ್ಷಣ, ಉದ್ಯೋಗ, ವಸತಿ ಕ್ಷೇತ್ರದಲ್ಲಿ ಅದ್ಭುತ ಪ್ರಗತಿಯಾಗಿದೆ. ಅದಕ್ಕಾಗಿ ಸರಕಾರಗಳನ್ನು ಅಭಿನಂದಿಸುತ್ತೇನೆ. ಪಂಚವಾರ್ಷಿಕ ಯೋಜನೆಗಳಲ್ಲಿ ಹಿಂದುಳಿದ ವರ್ಗದವರನ್ನು ಹುರಿದುಂಬಿಸಲು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಲಾಗಿದೆ. ಅವಕಾಶಗಳನ್ನು ನಿರ್ಮಾಣಮಾಡುವುದರ ಜೊತೆಗೆ ಅವಕಾಶಗಳನ್ನು ದಾನ ಮಾಡುವುದೂ ಪ್ರಗತಿಗೆ ಅಗತ್ಯವಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಮೇಲೆ ಪರಿಶಿಷ್ಟ ವರ್ಗಗಳ ಪ್ರಗತಿಯನ್ನು ಕಾಣಬಹುದು. ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಜನಸಾಮಾನ್ಯರ ಪ್ರತಿನಿಧಿಯಾಗಿ ಗುರುತಿಸಿಕೊಂಡು ಸಮಾಜದ ಕಣ್ಣು ತೆರೆಸಿದ ವ್ಯಕ್ತಿ. ಅವರು ಗ್ರಾಮೀಣ ಜನತೆಯ ಜೀವನದ ಆಳವನ್ನು ಗುರುತಿಸಿಕೊಂಡವರಾಗಿದ್ದರು ಎಂದರು.
ಪರಿಸರಕ್ಕೆ ಪೂರಕವಾಗಿರುವ ವಸ್ತುಗಳನ್ನು ಬಳಸಿ ಕಟ್ಟಡ ನಿರ್ಮಾಣ ಮಾಡುವುದು ಧರ್ಮಸ್ಥಳದ ಮಣ್ಣಿನ ಗುಣ. ಮರದ ಬಳಕೆ ಮಾಡದೆ ಅನ್ನಪೂರ್ಣ ಛತ್ರವನ್ನು ನಿರ್ಮಾಣಮಾಡಲಾಗಿದೆ. ಶಾಸಕರು ಈ ಶಾಲೆಯ ಬಗ್ಗೆ ಮುತುವರ್ಜಿ ವಹಿಸಿರುವುದು ಅಭಿನಂದನೀಯ ಎಂದ ಡಾ| ಹೆಗ್ಗಡೆ ಅವರು ಅದೇ ರೀತಿಯಲ್ಲಿ ಇಲ್ಲಿ ವಸತಿ ನಿಲಯವನ್ನು ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಆಕರ್ಷಕ ಕಟ್ಟಡವನ್ನು ನಿರ್ಮಿಸಲಾಗಿದೆ. ಇಲ್ಲಿರುವ ಮಕ್ಕಳು ಭಾಗ್ಯವಂತರು. ಅವರು ಅವಕಾಶಗಳ ಮೆಟ್ಟಿಲುಗಳನ್ನು ಏರಿ ಯಶಸ್ಸುಗಳಿಸಬೇಕು ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ವಸಂತ ಬಂಗೇರ ಅವರು ದ.ಕ. ಜಿಲ್ಲೆಯಲ್ಲಿ ಅತಿಹೆಚ್ಚು ವಸತಿ ನಿಲಯಗಳನ್ನು ಹೊಂದಿರುವ ತಾಲೂಕು ಬೆಳ್ತಂಗಡಿಯಾಗಿದೆ. ತಾಲೂಕಿನಲ್ಲಿ 33 ಹಾಸ್ಟೇಲ್ಗಳು, 4 ಆಶ್ರಮ ಶಾಲೆಗಳು ಇವೆ. ಈ ವರ್ಷ ಎರಡು ಮಂಜೂರು ಆಗಿದೆ. ಹಾಗೂ ಮುಂದಿನ ವರ್ಷ ಒಂದು ಬಾಲಕರ ಹಾಗೂ ಇನ್ನೊಂದು ಬಾಲಕಿಯರ ಹಾಸ್ಟೇಲ್ ಮಂಜೂರು ಆಗಲಿವೆ. ಎಲ್ಲಾ ಹಾಸ್ಟೇಲ್ ವಿದ್ಯಾರ್ಥಿಗಳು ಪ್ರತಿಶತ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ. ಶಿಕ್ಷಕರ ಕೊರತೆಯನ್ನು ನೀಗಿಸಲು ಪ್ರಯತ್ನಿಸಲಾಗುವುದು ಎಂದರು.
ತಾಪಂ ಅಧ್ಯಕ್ಷೆ ಜಯಂತಿ ಪಾಲೇದು ಶುಭ ಹಾರೈಸಿದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ವಿಷ್ಣು ಮರಾಠೆ, ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೇತನಾ ಚಂದ್ರಶೇಖರ್, ತಾ.ಪಂ.ಸದಸ್ಯ ಕೇಶವ ಎಂ., ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಅಚ್ಯುತ ಪೂಜಾರಿ, ಸಹಾಯಕ ಸಮಾಜ ಕಲ್ಯಾಣ ಇಲಾಖಾಧಿಕಾರಿ ಮೋಹನ ಕುಮಾರ್ ಉಪಸ್ಥಿತರಿದ್ದರು.ಡಾ| ಹೆಗ್ಗಡೆಯವರನ್ನು ಸಮ್ಮಾನಿಸಲಾಯಿತು. ಶಾಸಕರನ್ನು, ರಾಜೇಂದ್ರ ಕಲ್ಬಾವಿ, ಇಂಜಿನಿಯರ್ ನವೀನ್, ಗುತ್ತಿಗೆದಾರ ಪ್ರಶಾಂತ ಎಂ. ಇವರನ್ನು ಗೌರವಿಸಲಾಯಿತು.
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಸ್ವಾಗತಿಸಿ, ಪ್ರಸ್ತಾವಿಸಿದರು. ಗೇರುಕಟ್ಟೆ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಧರ್ಮಸ್ಥಳ ಆಶ್ರಮ ಶಾಲೆಯ ಮುಖ್ಯ ಶಿಕ್ಷಕಿ ಹೇಮಲಾತಾ ಎಂ. ವಂದಿಸಿದರು.
3.37 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಆಶ್ರಮ ಶಾಲೆಯು 13,800 ಚದರ ಅಡಿ ವಿಸ್ತಾರವನ್ನು ಹೊಂದಿದೆ. ಮೂರು ಮಹಡಿ ಹೊಂದಿರುವ ಶಾಲೆಯಲ್ಲಿ ಮೊದಲ ಅಂತಸ್ತಿನಲ್ಲಿ ವಸತಿ ಕೊಠಡಿ, ಕಚೇರಿಗಳು, ಅಡುಗೆ ಕೋಣೆ, ಊಟದ ಹಾಲ್, ವೈದ್ಯಕೀಯ ಕೊಠಡಿ, ಎರಡನೇ ಅಂತಸ್ತಿನಲ್ಲಿ ಮೂರು ವಸತಿ ಕೋಠಡಿಗಳು, ವಾಚನಾಲಯ, ತರಗತಿ ಕೊಠಡಿಗಳು, ಮೂರನೇ ಅಂತಸ್ತಿನಲ್ಲಿ ತಾರಸಿ ಮೇಲೆ ಕಬ್ಬಿಣದ ಶೀಟುಗಳ ಛಾವಣಿಯನ್ನು ನಿರ್ಮಿಸಲಾಗಿದ್ದು ಇಲ್ಲಿ ಮಕ್ಕಳಿಗೆ ಬಟ್ಟೆ ಒಗೆಯುವ ಮತ್ತು ಒಣಗಿಸಲು ವ್ಯವಸ್ಥೆಯನ್ನು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.