×
Home About Us Advertise With s Contact Us

ಮಂಗಳೂರಿನಲ್ಲಿ ಜ. 9 ರಂದು ಶಾಂತಿ ಸೌಹಾರ್ದ ಅದಾಲತ್

ಮಂಗಳೂರು : ಜಿಲ್ಲಾಡಳಿತದ ಸಹಯೋಗದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ) (ಕರ್ನಾಟಕ ಪತ್ರಕರ್ತರ ಸಂಘ) ಜನವರಿ 9 ಶನಿವಾರ ಮಧ್ಯಾಹ್ನ 2.00 ರಿಂದ ಸಂಜೆ 6.00 ರವರೆಗೆ ಕೆ.ಎಸ್.ರಾವ್ ರಸ್ತೆಯ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ 6ನೇ ಮಹಡಿಯಲ್ಲಿರುವ ಸಭಾಭವನದಲ್ಲಿ ‘ಶಾಂತಿ ಸೌಹಾರ್ದ ಅದಾಲತ್’ ಕಾರ್ಯಕ್ರಮ ಆಯೋಜಿಸಿದೆ.

ಶನಿವಾರ ಮಧ್ಯಾಹ್ನ 2.00 ಗಂಟೆಗೆ ಈ ಕಾರ್ಯಕ್ರಮದ ಉಧ್ಘಾಟನೆ ಜರುಗಲಿದ್ದು, ಉದ್ಘಾಟನೆಯನ್ನು ಜಸ್ಟಿಸ್ ವಿಶ್ವನಾಥ ಶೆಟ್ಟರು (ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು) ನೆರವೇರಿಸಿ ಕೊಡಲಿದ್ದಾರೆ.

Press

ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಪದೇ ಪದೇ ನಡೆಯುತ್ತಿರುವ ಮತೀಯ ಗಲಭೆಯಿಂದಾಗಿ ವಿವಿಧ ರೂಪದಲ್ಲಿ ನಾವು ನಷ್ಟ ಅನುಭವಿಸುತ್ತಿದ್ದೇವೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಜಿಲ್ಲೆಯಲ್ಲಿ ಪ್ರಮುಖವಾಗಿ ನಾಲ್ಕು ಧರ್ಮ ಹಾಗೂ ವಿವಿಧ ಸಮುದಾಯಕ್ಕೆ ಸೇರಿದ ಜನರು ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಬೆರಳೆಣಿಕೆಯ ಸಂಖ್ಯೆಯಲ್ಲಿರುವ ಕಿಡಿಗೇಡಿಗಳ ಕೃತ್ಯದಿಂದಾಗಿ ದೊಡ್ಡ ಪ್ರಮಾಣದಲ್ಲಿ ನೋವುಣ್ಣುವಂತಾಗುತ್ತಿದೆ. ಭಾವನಾತ್ಮಕ ವಿಚಾರವನ್ನು ಇಟ್ಟುಕೊಂಡು ಕಿಚ್ಚು ಹೊಚ್ಚುತ್ತಿರುವ ಅ ಬೆರಳೆಣಿಕೆಯ ಜನರ ಮನಸ್ಥಿತಿಯನ್ನು ಹಂತ ಹಂತವಾಗಿ ಬದಲಾಯಿಸಬಹುದಾಗಿದೆ. ಜೊತೆಗೆ ಈ ವಿಚಾರವನ್ನು ಜಿಲ್ಲೆಯ ಕೊನೆಯ ಹಂತದವರೆಗೆ ತಲುಪಿಸಬೇಕಾಗಿದೆ.

ಈ ನಿಟ್ಟಿನಲ್ಲಿ ‘ಶಾಂತಿ ಸೌಹಾರ್ದ ಅದಾಲತ್’ ಎಂಬ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮವನ್ನು 2016 ಜನವರಿ 9 ಶನಿವಾರ ಮದ್ಯಾಹ್ನ 2 ಘಂಟೆಯಿಂದ ಸಂಜೆ 6.30 ರವರೆಗೆ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಧರ್ಮ ಹಾಗು ಜಾತಿಯ ಮಧ್ಯೆ ದೊಡ್ಡ ಕಂದಕವನ್ನು ಕೃತಕವಾಗಿ ನಿರ್ಮಿಸಲಾಗಿದೆ. ಅದನ್ನು ಮುಚ್ಚುವ ಕಾರ್ಯ ಪ್ರಮುಖವಾಗಿ ಆಗಲೇಬೇಕು. ಅದೇ ಕಾರ್ಯವನ್ನು ನಾವೆಲ್ಲರೂ ಸೇರಿ ಕೈಗೆತ್ತಿಕೊಳ್ಳುವುದರ ಮೊದಲ ಹೆಜ್ಜೆಯೇ ಈ ಕಾಯಕ್ರಮ.

ಈ ಅದಾಲತ್ ಕಾರ್ಯಕ್ರಮದಲ್ಲಿನ ನ್ಯಾಯ ಸ್ಥಾನವನ್ನು ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಧೀಶರಾದ ವಿಶ್ವನಾಥ ಶೆಟ್ಟಿಯವರು ವಹಿಸಲಿದ್ದಾರೆ. ಗುರುಗಳಾದ ಸಂತೋಷ್ ಗುರೂಜಿ, ಮಂಗಳೂರು ಖಾಜೀಯವರಾದ ಹಾಜಿ ತ್ವಾಕಾ ಅಹಮ್ಮದ್ ಮುಸ್ಲಿಯಾರ್ ಹಾಗೂ ಧರ್ಮ ಪಂಡಿತರಾದ ಡಾ. ಬ್ರದರ್ ಆಂಡ್ರೋ ರಿಚರ್ಡ್ ರವರು ಉಪಸ್ಥಿತರಿರುತ್ತಾರೆ. ಇವರೊಡನೆ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಅಭಯ್ ಚಂದ್ರ ಜೈನ್, ಸಂಸದರಾದ ನಳಿನ್‌ಕುಮಾರ್ ಕಟೀಲ್, ಶಾಸಕರುಗಳಾದ ಜೆ.ಆರ್. ಲೋಬೊ, ವಸಂತ್ ಬಂಗೇರ, ಅಂಗಾರ, ಮೊಯ್ದಿನ್ ಬಾವಾ, ಐವನ್ ಡಿಸೋಜಾ, ಕಾಪ್ಟನ್ ಗಣೇಶ್ ಕಾರ್ಣಿಕ್ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಎ.ಬಿ ಇಬ್ರಾಹಿಂ, ಪೋಲಿಸ್ ಆಯುಕ್ತರಾದ ಚಂದ್ರಶೇಖರ್, ಡಿ.ಸಿ.ಪಿ ಶಾಂತರಾಜು (ಕಾನೂನು ಮತ್ತು ಸುವ್ಯವಸ್ಥೆ), ದ.ಕ ಜಿಲ್ಲಾ ಎಸ್ಪಿ ಡಾ| ಶರಣಪ್ಪ, ವಾರ್ತಾಧಿಕಾರಿಗಳಾದ ಖಾದರ್ ಷಾ, ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಶಿವಪೂಜಿ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.

ಎಲ್ಲಾ ಸಮುದಾಯದ ಒಬ್ಬೊಬ್ಬ ಮುಖಂಡರು, ಜಿಲ್ಲೆಯಲ್ಲಿನ ಬಹುತೇಕ ಸಂಘಸಂಸ್ಥೆಗಳ ಅಧ್ಯಕ್ಷರು ಅಥವಾ ಅವರು ಸೂಚಿಸಿದ ವ್ಯಕಿ, ಸಾಹಿತಿಗಳು, ಬುದ್ಧಿಜೀವಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಮಹಿಳಾನಾಯಕಿಯರು, ವಿದ್ಯಾರ್ಥಿ ನಾಯಕರು, ನ್ಯಾಯವಾದಿಗಳು, ಹಿರಿಯರು ಹಾಗೂ ಪತ್ರಕರ್ತರೂ ಸೇರಿದಂತೆ ಸಮಾಜದ ವಿವಿಧ ವಿಭಾಗದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಒಟ್ಟಾರೆಯಾಗಿ ಈ ಜಿಲ್ಲೆಯಲ್ಲಿನ ನೈಜ್ಯ ಸಮಸ್ಯೆಯನ್ನು ಹುಡುಕಿ ನಿವಾರಿಸುವ ನಿಟ್ಟಿನಲ್ಲಿ ಸಾಗುವುದು ಮತ್ತು ಒಟ್ಟಾಗಿ ಜಿಲ್ಲೆಯ ಶಾಂತಿ-ಅಭಿವೃದ್ಧಿಗೆ ಪಣತೊಡುವುದರ ಬಗ್ಗೆ ಪ್ರತಿಜ್ಞೆ ಸ್ವೀಕರಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಸುದೇಶ್ ಕುಮಾರ್ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಾಪಿಕಾಡ್, ಸಹಕಾರ್ಯದರ್ಶಿ ಐಸಾಕ್ ರಿಚರ್ಡ್ ಹಾಗೂ ಖಜಾಂಜಿ ಮೊಹಮ್ಮದ್ ಹಕೀಮ್ ಉಪಸ್ಥಿತರಿದ್ದರು.

 

Recent News

Back To Top
error: Content is protected !!