ಮಂಗಳೂರು : ಶಿಕ್ಷಣ ಸಂಸ್ಥೆ ಹಳೆ ವಿದ್ಯಾರ್ಥಿಗಳನ್ನು ರೂಪಿಸಿದರೆ, ಹಳೆ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯನ್ನು ಬೆಳೆಸುತ್ತಾರೆ ಮತ್ತು ನಕ್ಷತ್ರಕ್ಕೆ ಗುರಿ ಇಟ್ಟರೆ ಮರದ ಮೇಲಾದರೂ ತಲುಪಬಹುದು ಎಂದು ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಸಿನ್ ವಿಭಾಗದ ಪ್ರೊ. ಮತ್ತು ಡೀನ್ ಆಗಿರುವ ಡಾ.ಎಂ.ವೆಂಕಟ್ರಾಯ ಪ್ರಭು ಅಭಿಪ್ರಾಯಪಟ್ಟರು.
ಅವರು ಮಂಗಳೂರು ಪುರಭವನದಲ್ಲಿ ನಡೆದ ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಎಕ್ಸ್‌ಪರ್ಟ್ ಡೇ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ವಿಷನ್’ ಮತ್ತು ‘ಮಿಷನ್’ ಇಂದಿನ ಜಗತ್ತಿನಲ್ಲಿ ಉಪಯೋಗವಾಗುತ್ತಿರುವ ಪ್ರಮುಖ ಪದಗಳು. ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ಜೀವನದಲ್ಲಿ ಸಾಧನೆಯ ಪಥವನ್ನು ಮುಟ್ಟಲು ಮಾಡು ಇಲ್ಲವೇ ಮಡಿ ಎಂಬಂತೆ ಕಾರ್ಯಪ್ರವೃತ್ತರಾಗಬೇಕು. ಇಂಗ್ಲೆಂಡ್‌ನಲ್ಲಿರುವ ಪ್ರಸಿದ್ಧ ಶಾಲೆಯಿಂದ 16 ವಿದ್ಯಾರ್ಥಿಗಳು ದೇಶದ ಪ್ರಧಾನಮಂತ್ರಿಗಳು ಆಗಿದ್ದರು. ಹಾಗೆಯೇ ಎಕ್ಸ್‌ಪರ್ಟ್ ಕಾಲೇಜಿನಿಂದಲೂ ವಿದ್ಯಾರ್ಥಿಗಳು ಕೀರ್ತಿ ಪತಾಕೆಯನ್ನು ಗಗನದೆತ್ತರಕ್ಕೆ ಹಾರಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಕಾಣಲು ಕಠಿಣವಾದ ಪರಿಶ್ರಮವನ್ನು ಪಡಬೇಕು. ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಮತ್ತು ಹೆತ್ತವರ ಪಾತ್ರ ಬಹಳ ಮುಖ್ಯ. ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಮಾತ್ರವೇ ತೊಡಗಿಸಿಕೊಳ್ಳದೇ ಪಠ್ಯೇತರ ಚಟುವಟಿಗಳಲ್ಲಿಯೂ ತೊಡಗಿಸಿಕೊಂಡು ಜ್ಞಾನ, ಪ್ರತಿಭೆಯ ವಿಕಸನವನ್ನು ಕಾಣಬೇಕು ಎಂದು ಹೇಳಿದರು.
ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಗಳ ಶಿಸ್ತಿನ ಕ್ಷಣವನ್ನು ನೋಡಿ ಮೂಕವಿಸ್ಮಿತನಾದೆ. ಯಾಕೆಂದರೆ ಇಲ್ಲಿನ ವಿದ್ಯಾರ್ಥಿಗಳ ಕೈಯಲ್ಲಿ ಮೊಬೈಲ್ ಇಲ್ಲವೇ ಇಲ್ಲ. ಭಾಷಣವನ್ನು ತುಂಬ ಚೆನ್ನಾಗಿ ಆಲಿಸುತ್ತಿದ್ದಾರೆ. ಇತರ ಸಮಾರಂಭಗಳಲ್ಲಿ 60 ಶೇಕಡಾ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಮುಳುಗಿರುತ್ತಾರೆ ಎಂದು ಅತಿಥಿಗಳಾಗಿ ಮಂಗಳೂರು ಡೈಜಿವರ್ಲ್ಡ್ ಸಮೂಹ ಮಾಧ್ಯಮದ ಸಂಸ್ಥಾಪಕ ಮತ್ತು ನಿರ್ದೇಶಕರಾದ ಶ್ರೀ ವಾಲ್ಟರ್ ನಂದಳಿಕೆರವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಸಮಾಜದಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೆಕು. ವಿದ್ಯಾರ್ಥಿಗಳು ಹೊರಸಮಾಜಕ್ಕೆ ಮೃದು ಮನಸ್ಸಿನಿಂದ ಹಾಗೂ ಒಳಮನಸ್ಸಿನಲ್ಲಿ ಗಟ್ಟಿಮನಸ್ಸನ್ನು ಹೊಂದಿರಬೇಕು. ಆ ಮೂಲಕ ಆತ್ಮವಿಶ್ವಾಸದಿಂದ ಸಮಸ್ಯೆಗಳನ್ನು ಪರಿಸಹರಿಸಬೇಕು ಎಂದು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಸಂಚಾಲಕಿ ಮತ್ತು ಕಾರ್ಯದರ್ಶಿ ಶ್ರೀಮತಿ ಉಷಾಪ್ರಭಾ ಎನ್. ನಾಯಕ್ ರವರು ಹೇಳಿದರು.
1986 ಡಿಸೆಂಬರ್ 29 ರಂದು ಮೊದಲ ತರಗತಿಯನ್ನು ಪ್ರಾರಂಭಿಸಿದೆ. ಸಾಧನೆಯ ಪಥ ಸಾಗುತ್ತಿದೆ, ನಡೆದು ಬಂದ ದಾರಿಯನ್ನು ಅವಲೋಕಿಸಿದರೆ ಬಹಳಷ್ಟು ಸಂತಸವೆನಿಸುತ್ತದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಮಾತನಾಡಿದರು.
ಅವರು ಕಠಿಣ ಪರಿಶ್ರಮದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ನಾವು ಪ್ರತಿವರ್ಷ ವಿದ್ಯಾರ್ಥಿವೇತನ, ಪದಕಗಳನ್ನು ನೀಡಿ ಗೌರವಿಸುತ್ತೇವೆ. ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಕಲಿಯ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸಾಧನೆಯ ಮಾರ್ಗದಲ್ಲಿ ಸಿಹಿಕಹಿಗಳು ಸಹಜ ನಮ್ಮ ಗುರಿಯನ್ನು ಮುಟ್ಟುವಲ್ಲಿ ಅಚಲವಾದ ವಿಶ್ವಾಸವಿದ್ದಾಗ ಸಾಧನೆ ಮಾಡಲು ಸಾಧ್ಯವೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮಚಂದ್ರ ಭಟ್‌ರವರು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ವೇದಿಕೆಯಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಅಂಕುಶ್ ಎನ್. ನಾಯಕ್, ಶೈಕ್ಷಣಿಕ ಸಲಹೆಗಾರ ಮತ್ತು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರದೀಪ್ ಕುಮಾರ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು, ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ದೀಪ್ತಿ ಜೋಶಿ ಉಪಸ್ಥಿತರಿದ್ಧರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವೈಷ್ಣವಿ ಬಲ್ಲಾಳ್ ವಂದಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸೃಷ್ಠಿ ಮತ್ತು ಪ್ರೇರಣಾ ನಿರೂಪಿಸಿದರು. ಅತಿ ಹೆಚ್ಚು ಅಂಕ ಪಡೆದ ಹಳೆ ವಿದ್ಯಾರ್ಥಿನಿ ಶಿವಾನಿ ಪೂವಯ್ಯ ಮತ್ತು ಇತರ ವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.