ನವದೆಹಲಿ: ಭಾರತದಲ್ಲಿ ಹೊಸ ಅಲೆ ಸೃಷ್ಟಿಸಿರುವ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜ.16ರಂದು ಕೇಂದ್ರ ಸರಕಾರ ಕ್ರಿಯಾಯೋಜನೆಯೊಂದನ್ನು ಬಿಡುಗಡೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಭಾನುವಾರ ತಮ್ಮ ಜನಪ್ರಿಯ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ ಸೇವಾವಲಯ, ಕೃಷಿ, ಉತ್ಪಾದನೆ ಸೇರಿದಂತೆ ಪ್ರತಿಯೊಂದು ವಲಯದಲ್ಲೂ ಹೊಸತನ ಮೂಡಬೇಕು, ಹೀಗಾಗಿಯೇ ದೇಶದ ಯುವ ಸಮೂಹಕ್ಕೆ ನೆರವಾಗುವ ನಿಟ್ಟಿನಲ್ಲಿ ‘ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ’ ಎಂಬ ವಿನೂತನ ಯೋಜನೆಯನ್ನು ರೂಪಿಸಿದ್ದೇವೆ ಎಂದಿದ್ದಾರೆ.
ಜ.16ರಂದು ಈ ಯೋಜನೆಗೆ ಚಾಲನೆ ನೀಡುವುದಾಗಿ ಅವರು ಘೋಷಿಸಿದ್ದಾರೆ. ಈ ಯೋಜನೆ ದೇಶದ ಯುವ ಸಮೂಹಕ್ಕೆ ಅವಕಾಶಗಳ ಹೊಸ ಬಾಗಿಲು ತೆರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ಟಾರ್ಟ್ಅಪ್ ಉದ್ಯಮಿಗಳಿಗೆ ಹಣಕಾಸಿನ ನೆರವು ಮತ್ತು ಇಂಥ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಈ ಯೋಜನೆ ಜಾರಿಗೆ ಮುಂದಾಗಿದೆ.
ಈ ಯೋಜನೆಯನ್ನು ಐಐಟಿ, ಐಐಎಂ, ಕೇಂದ್ರೀಯ ವಿ.ವಿ.ಗಳು, ಎನ್ಐಟಿಗಳ ಮೂಲಕ ದೇಶಾದ್ಯಂತ ತಲುಪುವ ಯತ್ನ ಮಾಡಲಾಗುವುದು. ಎಲ್ಲೆಲ್ಲಿ ಯುವ ಸಮೂಹ ಇದೆಯೋ ಅಲ್ಲಿ ನೇರವಾಗಿ ಯೋಜನೆ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.
ಇದೇ ವೇಳೆ ವಿಕಲಚೇತನರನ್ನು ಇನ್ನು ಮುಂದೆ ‘ದಿವ್ಯಾಂಗ’ ಎಂದು ಸಂಬೋಧಿಸುವಂತೆ ಮೋದಿ ಕರೆ ನೀಡಿದ್ದಾರೆ. ‘ಬಹಳಷ್ಟು ಜನ ಮಾಡಲಾಗದ್ದನ್ನು ಅಂಗವಿಕಲರು ಮಾಡಿ ತೋರಿಸುತ್ತಾರೆ. ಅವರಲ್ಲಿ ಅಪರೂಪವಾದ್ದೇನೋ ಇರುತ್ತದೆ. ಹೀಗಾಗಿ ಅವರನ್ನು ನಾನು ದಿವ್ಯಾಂಗ ಎಂದೇ ಕರೆಯಲು ಬಯಸುವೆ’ ಎಂದಿದ್ದಾರೆ.
ಜ.೧೨ರಿಂದ ೧೬ರ ವರೆಗೆ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ರಾಯ್ಪುರದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ನಡೆಯಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.