ಮಂಗಳೂರು : ಅವರ ಅಭಿಮಾನಿಗಳೂ, ಶಿಷ್ಯರೂ ಸೇರಿ ಹಿರಿಯ ಖ್ಯಾತ ಸಮಾಜಸೇವಕ ಧರ್ಮ-ಸಾಹಿತ್ಯ ನೇತಾರ ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರ ಅಧ್ಯಕ್ಷತೆಯ ಅಭಿನಂದನಾ ಸಮಿತಿಯು ಸುಯೋಗ್ಯ ಸಾಧಕರಾದ ಡಾ| ಜಿ.ಎನ್.ಭಟ್ಟರನ್ನು ಅಭಿನಂದಿಸುತ್ತಿರುವುದು ಸ್ವಾಗತಾರ್ಹ. ಉತ್ತರಕನ್ನಡದಿಂದ ನಲವತ್ತು ವರ್ಷ ಮೊದಲು ಮಂಗಳೂರಿಗೆ ಬಂದು ಸಂಸ್ಕೃತ ಅಧ್ಯಾಪನ-ಸಂಶೋಧನೆಯೊಡನೆ ಇಲ್ಲಿಯ ಸಮಾಜದ ಸಾಂಸ್ಕೃತಿಕ ಸಂಪತ್ತನ್ನೂ ಹೆಚ್ಚಿಸಿದ ಕೀರ್ತಿ ಇವರದು. ಸಂಸ್ಕೃತ ಪರಿಷತ್ತು ಕಟ್ಟಿ ಸಂಸ್ಕೃತ ಕಲಿಕಾ ಸೌಲಭ್ಯವನ್ನು ಉಳಿಸಿ ಬೆಳೆಸಿದವರು. ಸಂಸ್ಕೃತ ತರಂಗಿಣಿ ಪತ್ರಿಕೆಯಿಂದ ಪ್ರಚಾರಗೈದವರು. ವೇದ ಸಂಶೋಧಕರಾದ ಡಾ| ಭಟ್ಟರು ವಿದ್ವಾಂಸರನ್ನು ಸಂಶೋಧನೆಯಲ್ಲಿ ತೊಡಗಿಸಿ ಹದಿಮೂರು ಮಂದಿಗೆ ಡಾಕ್ಟರೇಟ್ ಕೊಡಿಸಿದವರು. ನೂರಾರು ಗೋಷ್ಠಿ, ಪ್ರವಚನ, ಸಮಾವೇಶ, ಲೇಖನಗಳಿಂದ ದಕ್ಷಿಣ ಕನ್ನಡದ ಸಾರ್ವಜನಿಕರಲ್ಲಿ ಸಂಸ್ಕೃತ ಶಾಸ್ತ್ರ-ಸಾಹಿತ್ಯಗಳ ಆಳ, ವಿಸ್ತಾರ, ವೈಶಿಷ್ಯಗಳನ್ನು ಪ್ರಸಾರ ಮಾಡಿದವರು.
ಜಿಲ್ಲೆಯ ಮೂರು ಕಾಲೇಜುಗಳ ಪ್ರಾಂಶುಪಾಲರಾಗಿ ಮಂಗಳೂರು ವಿಶ್ವವಿದ್ಯಾಲಯದ ಚುನಾಯಿತ ಸೆನೆಟರ್ ಆಗಿ ಶೈಕ್ಷಣಿಕ ನೇತೃತ್ವ ನೀಡಿದವರು. ಆಡುವವರು ಹಲವರು; ಆಚರಿಸುವವರಿಲ್ಲ. ಬೌದ್ಧಿಕ ಜಿಜ್ಞಾಸಾ ಪರಿಣತರನೇಕರು ಆಚರಣೆಯಲ್ಲಿ ಅಲ್ಪರು. ಆದರೆ ಡಾ| ಜಿ.ಎನ್.ಭಟ್ಟರು ಕ್ರೀಯಾಶೀಲ ಕಾರ್ಯಸಾಧಕರು. ಆಡಿದ್ದನ್ನು ಮಾಡಿ ತೋರುವ ಬದ್ಧತೆ ಇವರದ್ದು. ಅದಕ್ಕೆ ಪೂರಕವಾಗಿ ದಕ್ಷಿಣ ಕನ್ನಡದ ಪ್ರಜ್ಞಾವಂತ ಸಮಾಜ ಡಾ| ಭಟ್ಟರಿಗೆ ಬೆಂಬಲ ನೀಡಿ ಬೆಳೆಸಿತು.
ದೇವೀ ಆರಾಧಕರಾದ ಡಾ| ಗೋಪಾಲಕೃಷ್ಣ ಭಟ್ಟರು ಬುದ್ಧಿಗಿಂತಲೂ ಭಾವನೆಗಳ ಬಲವುಳ್ಳವರು. ಭಾವನೆಗಳಿಗೆ ಒಲಿವ ಭಗವಂತ ಇವರಿಗೆ ಅಪೂರ್ವ ಅನುಭವಗಳನ್ನಿತ್ತಿರುವನು. ತಮ್ಮೂರಿನ ನೆಲೆಮಾವು ಮಠದಲ್ಲಿ ಜಪ-ತಪ-ಪೂಜೆ, ಯಜ್ಞ-ಅನುಷ್ಠಾನಗಳಿಂದ ಉತ್ತರ ಕನ್ನಡದ ಜಡ ಸಮಾಜದಲ್ಲಿ ಜಾಗೃತಿ ತರಲು ಯತ್ನಿಸಿದರು. ತಂಬಾಕು-ಗುಟ್ಕಾಗಳ ನಶೆಗೆ ಸಿಕ್ಕು ಸೋತಿರುವ ಹಲವರನ್ನು ಪರಿವರ್ತಿಸಲು ಪ್ರಯತ್ನಿಸುತ್ತಿರುವವರು. ಸ್ವಸ್ಥ ಸಮಾಜದ ಕನಸು ಕಂಡು ಇಂತಹ ಹಲವು ಪ್ರಯೋಗಗಳನ್ನು ಮಾಡಿದರು. ಎನ್.ಎಸ್.ಎಸ್. ಮೂಲಕ ಸಮಾಜ ಸೇವೆಯಲ್ಲಿ ತೊಡಗಿ ರಾಷ್ಟ್ರ ಪ್ರಶಸ್ತಿ ಪಡೆದ ಅಧಿಕಾರಿ ಇವರು. ಕಟೀಲು ದೇವಳದ ಸಂಪತ್ತನ್ನು ಸಂಸ್ಕೃತ ವಿದ್ಯೆಯ ವಿಕಾಸಕ್ಕಾಗಿ ವಿನಿಯೋಗಿಸಿದವರು.
ಕುಟುಂಬದಲ್ಲಿ ಬಂದ ತೀವ್ರತರವಾದ ಏರುಪೇರುಗಳನ್ನೆದುರಿಸಿ ಭಗವದರ್ಪಿತವಾಗಿ ನಿಯತವಾಗಿ ಕರ್ಮರತರಾದ ಕರ್ಮಯೋಗಿಯಾದ ಡಾ| ಜಿ.ಎನ್.ಭಟ್ಟರನ್ನು ಅಭಿನಂದಿಸಿ ಬೆಂಗಳೂರಿಗೆ ಬಿಳ್ಕೊಡುವ ಸಮಾರಂಭ ಸಂಘಟಿತವಾಗಿದ್ದು ಸರ್ವಥಾ ಶ್ಲಾಘ್ಯವಾಗಿದೆ. ಗುಣಗ್ರಾಹಿಗಳಾದ ನಾವು ಅವರ ಸಿದ್ಧಿ ಸಾಧನೆಗಳ ಸದ್ಗುಣಗಳನ್ನು ಹೀಗೆ ಪ್ರಕಟಿಸಿ ನೂರಾರು ಭಟ್ಟರು ಬೆಳೆದು ಬರಲೆಂದು ಹಾರೈಸೋಣ.
ಕರಾವಳಿ ಕರ್ನಾಟಕದ ಸಂಶೋಧಕ ಪ್ರಾಧ್ಯಾಪಕರಾದ ಡಾ| ಜಿ.ಎನ್.ಭಟ್ಟರನ್ನು ಅವರ ನಾಲ್ಕು ದಶಕಗಳ ವಿದ್ವತ್ ಸೇವೆಗಾಗಿ ಅಭಿನಂದಿಸುತ್ತಾ, ಅವರಿಂದ ಡಾಕ್ಟರೇಟ್ ಪಡೆದ ಹದಿಮೂರು ವಿದ್ವಾಂಸರನ್ನು ಗೌರವಿಸಲಾಗುವುದು. ಸಂಸದರೂ, ಶಾಸಕರೂ, ವಿದ್ಯಾಸಂಸ್ಥೆಗಳ ಪ್ರಮುಖರೂ, ಸಂಸ್ಕೃತ ವಿದ್ವಾಂಸರೂ ಡಾ| ಭಟ್ತರ ಶಿಷ್ಯರೂ ಭಾಗವಹಿಸುವ ಈ ಸಮಾರಂಭದಲ್ಲಿ ಅವರ ವಿಶಿಷ್ಟ ಸಾಧನೆಗಳ ಲೋಕೋತ್ತರ ವಿಚಾರಗಳ ಅಭಿನಂದನಗ್ರಂಥ ಭಟ್ಟರ ಬದುಕು ಬಿಡುಗಡೆಯಾಗಲಿದೆ. ಮಂತ್ರಾರ್ಥದೀವಿಕೆ ಎಂಬ ಮತ್ತೊಂದು ವಿಶಿಷ್ಟ ಗ್ರಂಥವೂ ಪ್ರಕಟವಾಗಲಿದ್ದು, ವೇದ ಮಂತ್ರಗಳ ಅರ್ಥವಿಲ್ಲಿದೆ. ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ವಿಚಾರ ಸತ್ರಕ್ಕೆ ಸಮಿತಿಯು ಸರ್ವರಿಗೂ ಸ್ವಾಗತ ಕೋರಿದೆ.
ವಿಶಿಷ್ಟ್ಯ ವಿಚಾರ ಗೋಷ್ಠಿ
ತತ್ವಜ್ಞಾನ ಲೋಕದಲ್ಲಿ ಭಾರತದ್ದೇ ಪಾರಮ್ಯ. ಆದರೆ ಭಾರತೀಯರಾದ ನಮ್ಮವರನೇಕರು ವಿದೇಶಗಳಲ್ಲಿದ್ದಾಗ ಅಲ್ಲಿನ ಜಿಜ್ಞಾಸುಗಳೆದುರು ಪೆದ್ದರಾಗಿ ನಿಂತ ಸಂದರ್ಭಗಳುಂಟು. ಅತ್ಯಂತ ಸರಳವಾಗಿ ಭಾರತೀಯ ತತ್ವಶಾಸ್ತ್ರದ ಮುಖ್ಯಾಂಶಗಳನ್ನು ಸೂತ್ರಗಳನ್ನು ತಿಳಿಸುವ ಅತ್ಯಪರೂಪದ ’ಸನಾತನ ಸಂಪ್ರದಾಯ ಗೋಷ್ಠಿ’ಯು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ದಶಂಬರ್ ೨೭ರಂದು ಪೂರ್ವಾಹ್ನ ನಡೆಯಲಿದೆ. ಅಂತೆಯೇ ನಮ್ಮ ಬಹುಪಾಲು ಧಾರ್ಮಿಕ ಆಚರಣೆಗಳ ಅರ್ಥ ನಮಗೆ ತಿಳಿದಿಲ್ಲ. ನಮ್ಮ ಹಲವಾರು ಆಚರಣೆಗಳೇ ’ಮೌಡ್ಯ’ಗಳಾಗಿ ನಗೆಪಾಟಲಾಗಿವೆ. ಹಾಗಾಗಿ ನಮ್ಮ ಕರ್ಮಾನುಷ್ಠಾನಗಳ ಅರ್ಥ-ಅನರ್ಥ ನಂಬಿಕೆ-ಮೌಡ್ಯಗಳನ್ನು ಕುರಿತು ಮುಕ್ತ ಸಂವಾದ ಈ ಗೋಷ್ಠಿಯ ವಿಶೇಷ. ಆದಿಚುಂಗನಗಿರಿಯ ವಿದ್ವಾಂಸ ಡಾ| ಮಧುಸೂಧನ ಅಡಿಗ, ಹೊನ್ನಾವgದ ಪುರೋಹಿತ ಪ್ರವರ ಡಾ| ಶಂಕರ ಭಟ್ಟ ಧಾರೇಶ್ವರ, ಡಾ| ಹಂಪಿಹೊಳಿ, ಡಾ| ಪದ್ಮನಾಭ ಮರಾಠೆ ಮತ್ತು ಹಲವು ಪರಿಣತರು ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.