ಬೆಳ್ತಂಗಡಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶತಾಯಗತಾಯ ಯಾವುದೇ ರೀತಿಯಲ್ಲಿ ಪ್ರಯತ್ನ ಮಾಡಿದರು ರಾಜ್ಯದ ಜನತೆಯಲ್ಲಿ ವಿಶ್ವಾಸ ಉಂಟು ಮಾಡಲು ಆಗುತ್ತಿಲ್ಲಾ. ತಮ್ಮ ವೈಫಲ್ಯ ಮುಚ್ಚಲು ದ್ವೇಷದ ರಾಜಕಾರಣವನ್ನು ಮಾಡುತ್ತಿದ್ದಾರೆ. ಇವರು ಬಿಜೆಪಿಯನ್ನು ವಿರೋಧಿಸುವ ಕಾಂಗ್ರೇಸ್ ನಾಯಕನೆ ಹೊರತು ರಾಜ್ಯದ ಮುಖ್ಯಮಂತ್ರಿಯೇ ಅಲ್ಲ ಎಂದು ಶಾಸಕ, ವಿಧಾನಪರಿಷತ್ ಚುನಾವಣಾ ಪ್ರಮುಖ್ ಸುರೇಶ್ ಕುಮಾರ್ ಹೇಳಿದರು. ಅವರು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದ ಆಡಳಿತ ವೈಫಲ್ಯಗಳನ್ನು ಬಿಚ್ಚಿಟ್ಟರು.
ಸರಕಾರಕ್ಕೆ 2 ವರ್ಷ 7 ತಿಂಗಳು ಆಗಿದೆ. ಪ್ರಸಕ್ತ ಆರ್ಥಿಕ ವರ್ಷ ಮುಗಿಯಲು ಎನ್ನು 3 ತಿಂಗಳು ಬಾಕಿ ಇದೆ. 15 ದಿನಗಳ ಹಿಂದೆ ಮುಖ್ಯಮಂತ್ರಿಯವರು ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳ ಮೇಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ಥಿಕ ವರ್ಷದಲ್ಲಿ ಅನುದಾನದಲ್ಲಿ ಖರ್ಚಾದ್ದು ಶೇ.25 ರಿಂದ 30 ಮಾತ್ರ. ಕೃಷಿ ಭಾಗ್ಯದಲ್ಲಿ ಶೇ. 25 ರಷ್ಟೂ ಖರ್ಚಾಗಿಲ್ಲ. ಅಹಿಂದ ಭಾಗ್ಯದಲ್ಲಿ ಶೇ. 20 ರಷ್ಟು ಮಾತ್ರ ಆಗಿದೆ. ರಾಜ್ಯದ ಪ್ರಾಥಮಿಕ ಶಾಲೆಗಳ ನಿರ್ವಹಣೆಗೆ ಹಣ ಕೊಡದೇ ಇರುವುದರಿಂದ ಚಾಕ್ ಪೀಸ್ಗೂ ಗತಿಯಿಲ್ಲವಾಗಿದೆ ಹೀಗಾಗಿ ಶಿಕ್ಷಕರು ಜನವರಿಯಲ್ಲಿ 3 ದಿನ ಶಾಲೆ ಬಂದ್ ಮಾಡಿ ಪ್ರತಿಭಟಿಸಲು ಆಲೋಚಿಸಿದ್ದಾರೆ. ಇದು ಶಾಲಾ ಮುಚ್ಚುವ ಭಾಗ್ಯ ಆಗಲಿದೆ.
ಸಮಾಜ ಕಲ್ಯಾಣ ಸಚಿವರ ಹಗರಣ ಬಯಲಾಗಿದ್ದರೂ ಅವರನ್ನು ಸಚಿವ ಸಂಪುಟದಿಂದ ತೆಗೆಯದಿದ್ದದ್ದು ವಿಚಿತ್ರ. ಇಡೀ ರಾಜ್ಯ ಕೂಗಿ ಹೇಳಿದರೂ ಲೋಕಾಯುಕ್ತ ಭಾಸ್ಕರ್ ರಾವ್ ಬಂಧಿಸುವ ಕಾರ್ಯಕ್ಕೆ ಎಸ್ಐಟಿ ಹೋಗಿಲ್ಲ. ಈ ವಿಚಾರದಲ್ಲಿ ವಿಚಾರಣೆಗೆ ಮುಕ್ತ ಸ್ವಾತಂತ್ರ್ಯವಿಲ್ಲವೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀನಾಮೆ ನೀಡಿದ್ದಾರೆ. ಕೈಗಾರಿಕಾ ಸಚಿವರೇ ಇತ್ತೀಚಿಗೆ ಬಂದಿದ್ದಾರೆ. ಒಟ್ಟಾರೆ ರಾಜ್ಯದ ಆರ್ಥಿಕ ಸ್ಥಿತಿ ನೋಡಿದರೆ ಸರಕಾರ ಇದೆಯೋ ಇಲ್ಲವೋ ಎಂದು ಅನಿಸುತ್ತಿದೆ. ಲವಲವಿಕೆ ಇಲ್ಲದ ನಿಷ್ಕೀಯ ಮಂತ್ರಿಗಳಿರುವ ನಿಷ್ಕೀಯ ಸರಕಾರ ಇದಾಗಿದೆ ಎಂದರು.
ಎಚ್.ಕೆ.ಪಾಟೀಲರು ಮಾರ್ಚನೊಳಗೆ ರಾಜ್ಯದ ಜನತೆಗೆ ಶುದ್ಧ ನೀರು ಒದಗಿಸುತ್ತೇನೆ ಎಂದು ಪ್ರಕಟಿಸಿದ್ದಾರೆ. ಇವರು ಹೇಳಿಕೆಯ ಬಂಡವಾಳ ಬಯಲಾಗುವ ವೇಳೆ ಅವರು ಕಿಸೆಯಲ್ಲಿ ರಾಜೀನಾಮೆ ಪತ್ರ ಇಟ್ಟುಕೊಂಡು ತಿರುಗಾಡುವ ಪರಿಸ್ಥಿತಿ ಬಂದೊದಗಲಿದಯೋ ಎಂದು ಕಾದು ನೋಡಬೇಕಾಗಿದೆ. ನಿರಾಶಾದಾಯಕ ಆಡಳಿತ ರಾಜ್ಯದಲ್ಲಿದೆ. ಅಧಿಕಾರಿಗಳ ಅಸಹಕಾರ ನೋಡಿದರೆ ಇನ್ನೂ ಯಾವುದೂ ಆಗಲು ಸಾಧ್ಯವಿಲ್ಲ. ಹಿಂದಿನ ಸರಕಾರದಲ್ಲಿ ಮತಭೇದಗಳಿದ್ದರೂ ಯೋಜನೆಗಳ ಅನುಷ್ಠಾನದಲ್ಲಿ ಯಶಸ್ವಿಯಾಗಿತ್ತು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಯೋಚನೆ-ಯೋಜನೆ-ಚೈತನ್ಯ ಕೊಡುವ ಮುಖ್ಯಮಂತ್ರಿ ಬೇಕೆ ವಿನಹಃ ಉಡಾಫೆ ಮಾತನಾಡುವ ಮುಖ್ಯ ಮಂತ್ರಿ ಅಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ನೆರೆಯ ರಾಜ್ಯದ ಮುಖ್ಯಮಂತ್ರಿ ತನ್ನ ರಾಜ್ಯಕ್ಕೆ ಬಂಡವಾಳ ಹರಿದು ಬರಲು ಬಹಳಷ್ಟು ಶ್ರಮಿಸುತ್ತಿದ್ದಾರೆ. ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುವಷ್ಟು ಮುಂದುವರಿದ್ದಿದ್ದಾರೆ. ಆದರೆ ನಮ್ಮ ಮುಖ್ಯಮಂತ್ರಿ ಮಾತ್ರ ನಿದ್ರಾವಸ್ಥೆಯಲ್ಲಿದ್ದಾರೆ. ಒಂದೆಡೆ ಕೇಂದ್ರದಿಂದ ಬರ ಪರಿಹಾರ ಕ್ಕೆ ಏನೂ ಬಂದಿಲ್ಲವೆಂದು ವಾದಿಸುತ್ತಾರೆ. ಆದರೆ 1,530 ಕೋಟಿ ರೂ ಬಂದಿದೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳುತ್ತಾರಾದರೂ ಅದನ್ನು ಉಪಯೋಗಿಸಿಕೊಳ್ಳುವುದಿಲ್ಲ. ಬಿಜೆಪಿ ವಿರೋಧಿಸುವುದನ್ನು ಬಿಟ್ಟು ರಾಜ್ಯದ ಅಭಿವೃದ್ದಿಗೆ ಗಮನಕೊಡಿ ಎಂದು ಅವರು ಹೇಳಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಿಂದಾಗಿ ಕಾಂಗ್ರೇಸ್ ಸಾಕಷ್ಟು ಗೊಂದಲ ಅನುಭವಿಸುತ್ತಿದೆ. ಈ ಭಾಗದ ಮಂತ್ರಿಗಳು ಎಷ್ಟೇ ಕಸರತ್ತು ಮಾಡಿದರೂ ಅವರು ಕಹಿ ಫಲಿತಾಂಶವನ್ನು ನೋಡಬಹುದು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ, ಚುನಾವಣಾ ವಕ್ತಾರ ಮೋನಪ್ಪ ಭಂಡಾರಿ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಮತಗಳನ್ನು ಉಳಿಸಿಕೊಂಡು ಹೊರಗಿನ ಮತಗಳನ್ನು ಎಷ್ಟು ಪಡೆಯಬಹುದು ಎಂಬುದರ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.
ಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಯುವ ಮೊರ್ಚಾ ಜಿಲ್ಲಾಧ್ಯಕ್ಷ ರಂಜನ್ ಗೌಡ, ತಾಲೂಕು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೀತಾರಾಮ, ನಂದಕುಮಾರ್ ಮತ್ತಿತರರು ಇದ್ದರು.
ರಾಜ್ಯದ ವಿಫಲ ಆಡಳಿತವನ್ನು, ಮುಖ್ಯಮಂತ್ರಿಗಳ ಕಾರ್ಯವೈಖರಿಯನ್ನು ನೋಡಿದಾಗ ಸಿದ್ದರಾಮಯ್ಯನವರೇ ಸ್ವತಃ ತಾನು ರಾಜ್ಯದಲ್ಲಿ ಕಾಂಗ್ರೇಸ್ನ ಕೊನೆಯ ಮುಖ್ಯಮಂತ್ರಿ ಆಗಲು ಸಿದ್ದಮಾಡಿಕೊಳ್ಳುತ್ತಿದ್ದಾರೆ ಎಂದು ಅನಿಸುತಿದೆ. ಇದನ್ನು ಭಾರತೀಯ ಜನತಾ ಪಾರ್ಟಿ ತುಂಬು ಹೃದಯದಿಂದ ಸ್ವಾಗತಿಸುತ್ತದೆ- ಸುರೇಶ್ ಕುಮಾರ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.