ಬೆಳ್ತಂಗಡಿ : ಮನೆ ಹಾಗೂ ಮನದಲ್ಲಿ ಧರ್ಮವನ್ನು ಬೆಳೆಸಿಕೊಳ್ಳುವ ಮನೋಭಾವವನ್ನು ಇರಬೇಕು. ಅಭಿವೃದ್ಧಿಯ ಪಥದತ್ತ ಸಾಗುವಾಗ ಅಹಂಕಾರ ಸಲ್ಲದು. ಜೀವನದಲ್ಲಿ ಪ್ರತಿಫಲವನ್ನು ಪಡೆದು, ಅಹಂ ಇಲ್ಲದೆ ನಮ್ರತೆಯಿಂದ ವರ್ತಿಸಿದಾಗ ವ್ಯಕ್ತಿತ್ವ ನಾಶವಾಗದು ಎಂದು ಧ. ಗ್ರಾ. ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್ ಹೆಚ್. ಮಂಜುನಾಥ್ ಹೇಳಿದ್ದಾರೆ.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಾಯಿಲಾ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಲಾಯಿಲಾ ಇದರ ವತಿಯಿಂದ ವಿಘ್ನೇಶ್ವರ ಕಲಾ ಮಂದಿರದಲ್ಲಿ ಲಾಲ ವಲಯದ ಸಾಧನಾ ಸಮಾವೇಶ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಚಿಂತನೆಯೊಂದಿಗೆ ಗ್ರಾಮಾಭಿವೃದ್ಧಿ ಯೋಜನೆಯು ಪ್ರತೀ ಕುಟುಂಬದಲ್ಲಿ ಇಂತಹ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಯತ್ನಿಸಿದ್ದು ಇದರಿಂದಾಗಿ ಇಂದು ಸಾವಿರಾರು ಕುಟುಂಬಗಳು ಸ್ವಯಂ ಉದ್ಯೋಗ, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಮನೆಗಳಲ್ಲಿ ಸಂಸ್ಕಾರಯುತ ಜೀವನ ನಡೆಸಲು ಕಾರಣವಾಗಿದೆ.
ಹೈನುಗಾರಿಕೆ, ಕೃಷಿ, ಉದ್ಯಮ ಇನ್ನಿತರ ಕ್ಷೇತ್ರಗಳಲ್ಲಿ ಅಶಕ್ತ ಮಹಿಳೆಯರು ಸಾಧನೆಗಳನ್ನು ಮಾಡಿ ಸಬಲೀಕರಣರಾಗುತ್ತಿದ್ದಾರೆ. ಕಳೆದ 25 ವರ್ಷಗಳ ಹಿಂದೆ ಯೋಜನೆ ಪ್ರಾರಂಭವಾಗುವಾಗ ತಾಲೂಕಿಗೆ ಹಾಲನ್ನು ಬೇರೆ ಕಡೆಯಿಂದ ಆಮದುಗೊಳಿಸಲಾಗುತ್ತಿತ್ತು. ಇಂದು ಯೋಜನೆಯ ನಿರಂತರ ಶ್ರಮದ ಫಲವಾಗಿ ತಾಲೂಕಿನಿಂದ ಬೇರೆ ಕಡೆಗೆ ರಫ್ತು ಮಾಡಲಾಗುತ್ತಿದೆ. ಇದರಿಂದಾಗಿ ಅನೇಕ ಕುಟುಂಬಗಳು ಯೋಜನೆಯ ಮಾಹಿತಿ ಫಲದಿಂದಾಗಿ ಸ್ವ ಉದ್ಯೋಗ ಮಾಡಿ ಸ್ವಯಂ ಜೀವನ ಮಾಡುತ್ತಿದ್ದಾರೆ ಎಂದು ಅರ್ಥವಾಗಿದೆ ಎಂದರು.
ಪ್ರತೀ ಕುಟುಂಬಗಳು ಮದ್ಯ ಮುಕ್ತ ಕುಟುಂಬಗಳಾಗಬೇಕು ಯೋಜನೆಯ ಚಿಂತನೆಯಾಗಿದ್ದು ಇದಕ್ಕಾಗಿ ಜನಜಾಗೃತಿ ವೇದಿಕೆಯ ಮೂಲಕ ಮದ್ಯ ವರ್ಜನ ಶಿಬಿರ ನಡೆಸಿ ಸಾವಿರಾರು ಕುಟುಂಬಗಳನ್ನು ಮದ್ಯಮುಕ್ತ ಕುಟುಂಬಗಳನ್ನಾಗಿಸಿದೆ. ಪೋಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ನೀಡಿ ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮುಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಮಾತನಾಡಿ, ಧರ್ಮ ಸಂಸ್ಕೃತಿಯಿಂದ ಮಾನವ ಧರ್ಮ ಉಳಿಯಬಹುದು. ಸಂಘ ಸಂಸ್ಥೆಗಳಾಗಲಿ, ಸರಕಾರವಾಗಲಿ ಕೊಡುವಂತಹ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಬಳಸಿ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಸತೀಶ್ ಓಡದಕರಿಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ರೂಪಾ ಜೈನ್, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಗೌರವಾಧ್ಯಕ್ಷ ವಿವೇಕಾನಂದ ಪ್ರಭು ಉಪಸ್ಥಿತರಿದ್ದರು. ಈ ಸಂದರ್ಭ ವಿವಿಧ ಸಾಧನ ಒಕ್ಕೂಟ ಹಾಗೂ ಸದಸ್ಯರನ್ನು ಗೌರವಿಸಲಾಯಿತು.
ರುಕ್ಮಯ ಕನ್ನಾಜೆ ಸ್ವಾಗತಿಸಿ, ಲಾಲ ಸೇವಾ ಪ್ರತಿನಿಧಿ ಗೀತಾ ವರದಿ ವಾಚಿಸಿದರು. ವಲಯ ಮೇಲ್ವಿಚಾರಕ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.