ಸಂಶೋಧನಾ ವಿಶ್ಲೇಷಕ ಸಾಜನ್ ಅಬ್ರೋಲ್, ಎಂಜಿನಿಯರ್ ನಮನ್ ಅಹ್ಲುವಾಲಿಯಾ ತಮ್ಮ ವೃತ್ತಿ ಬದುಕಿನಲ್ಲಿ ಉತ್ತುಂಗಕ್ಕೆ ಏರಿದವರು. ಆದರೂ ಸಮಾಜದ ಬಗೆಗೆ ಅಪಾರ ಕಾಳಜಿಯನ್ನು ಹೊಂದಿರುವವರು. ಒಂದು ಹೊತ್ತಿನ ಹೊಟ್ಟೆ ತುಂಬಿಸಲು ಪರದಾಡುತ್ತಿರುವವರನ್ನು, ವರ್ಷಕ್ಕೊಂದೂ ಬಟ್ಟೆ ತೆಗೆಯುವ ಅದೃಷ್ಟವೂ ಇಲ್ಲದವರನ್ನು ಕಂಡು ಮರುಕಪಟ್ಟಿದ್ದ ಇವರು ಅವರಿಗೇನಾದರು ಮಾಡಬೇಕೆಂಬ ಪಣತೊಟ್ಟವರು. ಇವರ ಸಮಾಜಮುಖಿ ಚಿಂತನೆಯ ಫಲವಾಗಿ 2014ರ ಎಪ್ರಿಲ್ನಲ್ಲಿ ಜನ್ಮ ತಾಳಿದ್ದೇ ’ಕ್ಲೋತ್ಸ್ ಬಾಕ್ಸ್ ಫೌಂಡೇಶನ್’.
ಈ ವಿಭಿನ್ನ ಹೆಸರಿನ ಸಂಸ್ಥೆಯನ್ನು ಈ ಇಬ್ಬರು ಗೆಳೆಯರು ಹುಟ್ಟು ಹಾಕಿದ್ದೇ ಬಡವರ ಬಟ್ಟೆಯ ಕೊರತೆಯನ್ನು ನೀಗಿಸಲು. ತಮ್ಮ ಬಳಿ ಹೆಚ್ಚುವರಿಯಾಗಿರುವ ಅಥವಾ ಅವರು ಬಳಸಿದ್ದು ಉತ್ತಮ ಸ್ಥಿತಿಯಲ್ಲಿರುವ ಅಥವಾ ಹೊಸ ಬಟ್ಟೆಗಳನ್ನು ಕೊಡುವ ಇಚ್ಛೆಯಿರುವ ದಾನಿಗಳಿಂದ ಬಟ್ಟೆಯನ್ನು ಸಂಗ್ರಹಿಸಿ ಅದನ್ನು ಬಡ ಮಕ್ಕಳಿಗೆ, ದೊಡ್ಡವರಿಗೆ ಹಂಚಿಕೆ ಮಾಡುವುದೇ ಈ ಸಂಸ್ಥೆಯ ಕಾಯಕ.
ಈ ಸಂಸ್ಥೆಯ ಕಾಯಕ ಫೇಸ್ಬುಕ್ ಮೂಲಕ ಅತೀವ ಪಾರದರ್ಶಕವಾಗಿ ನಡೆಯುತ್ತದೆ. ಬಟ್ಟೆ ಕೊಡುವ ದಾನಿಗಳ ಸಂಪರ್ಕವನ್ನು ಫೇಸ್ಬುಕ್ ಮೂಲಕ ಇಟ್ಟುಕೊಳ್ಳಲಾಗುತ್ತದೆ. ಅಲ್ಲದೇ ಅವರು ಕೊಡುವ ಬಟ್ಟೆಗಳನ್ನು ಯಾವ ಮಕ್ಕಳಿಗೆ ನೀಡಲಾಗುತ್ತದೆಯೋ ಆ ಮಕ್ಕಳ ಫೋಟೋವನ್ನು ಬಟ್ಟೆಯ ಸಮೇತ ಫೇಸ್ಬುಕ್ನಲ್ಲಿ ಹಾಕಲಾಗುತ್ತಿದೆ. ಇದರಿಂದ ತಾವು ಮಾಡಿದ ದಾನ ಎಲ್ಲಿಗೆ ಹೋಯಿತು ಎಂಬುದು ಕೂಡ ದಾನಿಗಳಿಗೆ ತಿಳಿಯುತ್ತದೆ.
ಈ ಮುಖಾಂತರ ಕ್ಲೋತ್ಸ್ ಬಾಕ್ಸ್ ಫೌಂಡೇಶನ್ ಇದುವರೆಗೆ 12 ಸಾವಿರ ಬಟ್ಟೆಗಳನ್ನು ಸಂಗ್ರಹಿಸಿದೆ, ಅದರಲ್ಲಿ 11,500 ಬಟ್ಟೆಗಳನ್ನು ಈಗಾಗಲೇ ಹಂಚಿಕೆ ಮಾಡಿದೆ. ದೆಹಲಿ, ಮುಂಬಯಿ, ಹೈದರಾಬಾದ್, ಬೆಂಗಳೂರು, ಕೋಲ್ಕತ್ತಾ, ಭೋಪಾಲ್, ಛಂಡೀಗಢ, ಅಸ್ಸಾಂ, ಭುವನೇಶ್ವರ, ಅಂಬಾಲ, ಸೂರತ್ಗಳಲ್ಲಿ ಈ ಸಂಸ್ಥೆಯ ಸದಸ್ಯರು ಬಟ್ಟೆಗಳನ್ನು ಸಂಗ್ರಹಿಸಿದ್ದಾರೆ. ದಾನಿಗಳ ಫೋಟೋವನ್ನು ತೆಗೆದು ಅದನ್ನು ಸಂಸ್ಥೆಯ ಫೇಸ್ಬುಕ್ ಪೇಜ್ನಲ್ಲಿ ಟ್ಯಾಗ್ ಮಾಡಿದ್ದಾರೆ. ಟ್ರಾನ್ಸ್ಪೋರ್ಟ್ ಖರ್ಚನ್ನು ತಾವೇ ಭರಿಸುತ್ತಾರೆ.
ಇತ್ತೀಚೆಗೆ ಗುರುಗಾಂವ್ ನಲ್ಲಿ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕ್ಲೋತ್ಸ್ ಬಾಕ್ಸ್ ಫೌಂಡೇಶನ್ ಏರ್ಪಡಿಸಿದ್ದ ಸಣ್ಣ ಕಾರ್ಯಕ್ರಮವೊಂದರಲ್ಲಿ ಹಿಂದಿ ಚಲನಚಿತ್ರರಂಗದ ನಟ ಅಮಿತಾಬ್ ಬಚ್ಚನ್ ಅವರು ಕೂಡಾ ತಮ್ಮ ಕೆಲವು ಬಟ್ಟೆಗಳನ್ನು ಬಡವರಿಗಾಗಿ ನೀಡಿ, ಕ್ಲೋತ್ಸ್ ಬಾಕ್ಸ್ ಫೌಂಡೇಶನ್ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಶ್ಲಾಘಿಸಿದ್ದರು.
ಇದೀಗ ಒಂದು ಹೆಜ್ಜೆ ಮುಂದೆ ಹೋಗಲು ಬಯಸಿರುವ ಕ್ಲೋತ್ಸ್ ಬಾಕ್ಸ್ ಫೌಂಡೇಶನ್ ಸಂಸ್ಥೆ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಸಂಗ್ರಹ ಮಾಡುವ ಉದ್ದೇಶ ಹೊಂದಿದೆ. ಇದನ್ನೂ ಫೇಸ್ಬುಕ್ನಲ್ಲಿ ಪಾರದರ್ಶಕವಾದ ರೀತಿಯಲ್ಲಿ ಮಾಡುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.