ಮಂಗಳೂರು: ಕೃಷಿಋಷಿ ಪುರುಷೋತ್ತಮರಾಯರ ಸ್ಮರಣಾರ್ಥ ಪುರುಷೋತ್ತಮ ಸನ್ಮಾನ ಸಮಾರಂಭವು ಶನಿವಾರ ನಗರದ ಸಂಘನಿಕೇತನ ಸಭಾಭವನದಲ್ಲಿ ನೆರವೇರಿತು.
ಶ್ರೀ ಪುರುಷೋತ್ತಮ ರಾವ್ ಅವರು 1989 ರಲ್ಲಿ ರಾಸಾಯನಿಕ ಕೃಷಿಯನ್ನು ಬಿಟ್ಟು ಸಾವಯವ ಕೃಷಿ ಪ್ರಾರಂಭ ಮಾಡಿದರು. ಅದೇ ರೀತಿ ಅನೇಕ ಕೃಷಿಕರಿಗೆ ಪ್ರೇರಣೆ ನೀಡಿದವರು. ಜನರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕೆಂಬ ಇಚ್ಛೆಯಿಂದ ತಮ್ಮ ಸ್ವಂತ ಜಮೀನಿನ ಸುಮಾರು 10 ಎಕರೆ ಪ್ರದೇಶವನ್ನು ಸಾವಯವ ಕೃಷಿ ಪರಿವಾರಕ್ಕೆ ದಾನವಾಗಿ ನೀಡಿದ ಮಹನೀಯರು. ಇವರ ಸ್ಮರಣಾರ್ಥ ರಾಜ್ಯದ ವಿವಿಧ ಭಾಗಗಳಿಂದ ಸಾವಯವ ಕೃಷಿಕರನ್ನು ಆಯ್ಕೆ ಮಾಡಿ ಅವರ ಕುಟುಂಬವನ್ನು ಸನ್ಮಾನಿಸಲಾಗುತ್ತದೆ. ಪ್ರತಿವರ್ಷ ಪುರುಷೋತ್ತಮರಾಯರ ಸವಿನೆನಪಿನಲ್ಲಿ ಸಾವಯವ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕೃಷಿಕ ದಂಪತಿಗಳಿಗೆ ಅಥವಾ ಸಂಸ್ಥೆಗೆ ’ಪುರುಷೋತ್ತಮ ಸನ್ಮಾನ’ವನ್ನು ನೀಡಿ ಗೌರವಿಸುತ್ತಿದೆ.
ಈ ಬಾರಿ ಸಾಧಕ ಸಾವಯವ ಕೃಷಿ ಕುಟುಂಬದವರಾದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅಮೃತಾಪುರ ಹೋಬಳಿಯ ವಿಠಲಾಪುರ ಗ್ರಾಮದ ಆದೀಕೆರೆ ಮನೆತನದವರಾದ ಶ್ರೀಮತಿ ರುದ್ರಮ್ಮ ಮತ್ತು ಶ್ರೀ ರುದ್ರಪ್ಪ ಹಾಗೂ ಶ್ರೀಮತಿ ಚಂದ್ರಮ್ಮ ಮತ್ತು ಶ್ರೀ ವೀರಪ್ಪ(ವೀರಣ್ಣ) ಇವರ ಪರಿವಾರಕ್ಕೆ ಪುರುಷೋತ್ತಮ ಸನ್ಮಾನವನ್ನು ನೀಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಾಧಕ ಕುಟುಂಬದವರನ್ನು ಮಂಗಳೂರಿನ ಉರ್ವ ಮಾರುಕಟ್ಟೆ ಸಮೀಪವಿರುವ ಮಾರಿಗುಡಿಯಿಂದ ಮೆರವಣಿಗೆಯ ಮೂಲಕ ಸಂಘನಿಕೇತನಕ್ಕೆ ಕರೆತರಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆರೆಸ್ಸೆಸ್ನ ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖರಾದ ಮುಕುಂದ್ ಅವರು ‘ಸಾಧಕ- ಸಾಧನೆ’ ಪುಸ್ತಕ ಬಿಡುಗಡೆ ಮಾಡಿ, ಭಾರತ ಕೃಷಿ ಪರಂಪರೆಯನ್ನು ಅಳವಡಿಸಿಕೊಂಡಿದ್ದು, ಕೃಷಿಯೇ ಭಾರತದ ಬೆನ್ನೆಲುಬು ಅದರಲ್ಲೂ ಸಾವಯವ ಕೃಷಿ ಮಾಡುವುದರಿಂದ ಫಸಲು ಮತ್ತು ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೇ ಭಾರತದ ಆರ್ಥಿಕತೆ ಸುದೃಢಗೊಳ್ಳುವುದು. ರಾಸಾಯನಿಕಗಳನ್ನು ಬಳಿಸಿ ವ್ಯವಸಾಯ ಮಾಡುವುದರಿಂದ ಪ್ರಾಣಿ ಪಕ್ಷಿಗಳ ಸಂಕುಲ ಮತ್ತು ಮನುಷ್ಯನ ಆರೋಗ್ಯ ಹಾಳಾಗುತ್ತಿದ್ದು, ಸಾವಯವ ಕೃಷಿಯಿಂದ ಇದನ್ನು ತಡೆಗಟ್ಟಬಹುದು. ಆ ಮೂಲಕ ಮುಂದಿನ ಜನಾಂಗಕ್ಕೆ ಸಾವಯವ ಕೃಷಿಯಲ್ಲಿ ತೊಡಗುವಂತೆ ಪ್ರೇರಣೆ ನೀಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶ್ರೀಮತಿ ರುದ್ರಮ್ಮ ಮತ್ತು ಶ್ರೀ ರುದ್ರಪ್ಪ ಹಾಗೂ ಶ್ರೀಮತಿ ಚಂದ್ರಮ್ಮ ಮತ್ತು ಶ್ರೀ ವೀರಪ್ಪ ಕುಟುಂಬಗಳಿಗೆ ಪುರುಷೋತ್ತಮ ಸನ್ಮಾನಿಸಿ ಗೌರವಿಸಿದರು. ಅವರು ಸಾವಯವ ಕೃಷಿ ಆರೋಗ್ಯಕ್ಕೆ ಪೂರಕವಾಗಿದ್ದು ರಾಸಾಯನಿಕ ಗೊಬ್ಬರ ಬಳಸುವುದಕ್ಕಿಂತ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಆ ಮೂಲಕ ಮಣ್ಣಿನ ಫಲವತ್ತೆ ಹೆಚ್ಚಿಸಿ ಮುಂದಿನ ಜನಾಂಗಕ್ಕೂ ಅನುವು ಮಾಡಿದಂತಾಗುತ್ತದೆ ಎಂದರು. ಅಲ್ಲದೆ ಸಾವಯಕ ಕೃಷಿಕರನ್ನು ಸನ್ಮಾನ ಮಾಡುವುದರಿಂದ ಅವರಿಗೆ ಇನ್ನೂ ಹೆಚ್ಚಿನ ಸಾಧನೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಮತ್ತು ಸಾವಯವ ಕೃಷಿ ಮಾಡಿದವರಿಗೆ ಪ್ರೋತ್ಸಾಹ ಮಾಡಿದಂತಾಗುತ್ತದೆ ಎಂದರು.
ಈ ಕಾರ್ಯಕ್ರಮಕ್ಕೆ ಕೃಷಿ ಪ್ರಯೋಗ ಪರಿವಾರ, ಸಾವಯವ ಕೃಷಿ ಪರಿವಾರ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಸಾವಯವ ಕೃಷಿ ಪರಿವಾರಗಳು, ಮಂಗಳೂರಿನ ಸಾವಯವ ಗ್ರಾಹಕ ಪರಿವಾರ ಮತ್ತು ಕೇಶವ ಸ್ಮೃತಿ ಸಂವರ್ಧನ ಸಮಿತಿ ಸಂಸ್ಥೆಗಳು ಸಹಕಾರ ನೀಡಿದವು.
ಸಾವಯವ ಕೃಷಿ ಉತ್ಪನ್ನಗಳು, ಪುಸ್ತಕಗಳು, ದೇಸೀ ಬೀಜಗಳು, ಶ್ರಮ ಉಳಿಸುವ ಸಾಧನಗಳ ಪ್ರದರ್ಶಿನಿಯನ್ನು ಏರ್ಪಡಿಸಿದ್ದರು.
ಶ್ರೀ ಸುಬ್ರಹ್ಮಣ್ಯ ಅವರು ಸ್ವಾಗತಿಸಿ, ಶ್ರೀ ಅರುಣ್ಕುಮಾರ್ ವಿ.ಕೆ. ವಂದಿಸಿದರು. ಶ್ರೀ ಪರೀಕ್ಷಿತ ತೋಳ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.