ಬೆಳ್ತಂಗಡಿ : ಟೊಯೊಟಾ ಕಿರ್ಲೋಸ್ಕರ್ ಮೊಟಾರ್ ಪ್ರೈ. ಲಿ. ವತಿಯಿಂದ ನಡೆಸಲ್ಪಡುವ ಟೊಯೋಟಾ ತಾಂತ್ರಿಕ ಶಿಕ್ಷಣ ಕಾರ್ಯಕ್ರಮವನ್ನು( T-TEP TOYOTA Tachnical Education Programe) ವೇಣೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (S.D.M I.T.I Venur)ಯಲ್ಲಿ ಪ್ರಾರಂಭಿಸುವ ಬಗ್ಗೆ ಉಭಯ ಸಂಸ್ಥೆಗಳು ಒಪ್ಪಂದಕ್ಕೆ ಬಂದಿವೆ. ಈ ಸಂಬಂಧ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಟೊಯೋಟಾ ಸಂಸ್ಥೆಯ ಉಪಾಧ್ಯಕ್ಷ ಬಿ. ಪದ್ಮನಾಭ ಒಪ್ಪಂದಕ್ಕೆ ಸಹಿ ಹಾಕಿ ಒಪ್ಪಂದ ಪತ್ರಗಳನ್ನು ಹಸ್ತಾಂತರಿಸಿಕೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ. ಪದ್ಮನಾಭ ಅವರು ತಾಂತ್ರಿಕ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳನ್ನು ಕೈಗಾರಿಕೆಗಳಿಗೆ ನೇರವಾಗಿ ಆಯ್ಕೆ ಮಾಡಿಕೊಂಡರೆ ಅಲ್ಲಿ ಅವರಿಗೆ ನಮ್ಮ ಅಗತ್ಯಕ್ಕೆ ತಕ್ಕಂತೆ ಅವರನ್ನು ಸಿದ್ದ ಮಾಡಲು ಅವರಿಗೆ ಆರು ತಿಂಗಳು ಬೇಕಾಗುತ್ತವೆ. ಯಾಕೆಂದರೆ ಅವರಿಗೆ ಪ್ರಾಕ್ಟಿಕಲ್ ಜ್ಞಾನವೂ ನೈಪುಣ್ಯತೆಯೂ ಇರುವುದಿಲ್ಲ. ಹೀಗಾಗಿ ಟೊಯೋಟಾ ಕಿರ್ಲೋಸ್ಕರ ಸಂಸ್ಥೆಯು ಐಟಿಐ ತರಬೇತಿ ನೀಡುವ ಸಂಸ್ಥೆಗಳೊಂದಿಗೆ ಸಂಬಂಧ ಬೆಳೆಸಿಕೊಂಡು ವಿದ್ಯಾರ್ಥಿದೆಸೆಯಲ್ಲಿಯೇ ಆತ್ಯಾಧುನಿಕ ತಾಂತ್ರಿಕ ತರಬೇತಿ ನೀಡಿ ಪರಿಣತರನ್ನಾಗಿ ಮಾಡುವ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಕಾರ್ಯಕ್ರಮದಡಿ ಈಗಾಗಲೇ ದೇಶದ 4,200 ಮಂದಿಗೆ ತರಬೇತಿ ನೀಡಿದ್ದೇವೆ. 2900ಮಂದಿ ಟೊಯೋಟಾ ಡೀಲರ್ಸ್ಗಳಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿರುವ ಐಟಿಐ ಸಂಸ್ಥೆಗಳೊಂದಿಗೆ ಹೆಚ್ಚಾಗಿ ಸಂಬಂಧ ಬೆಳೆಸಲು ಪ್ರಾರಂಭಿಸಿದ್ದೇವೆ. ಇದರಿಂದ ಕೈಗಾರಿಕೆಗಳಿಗೆ, ಸಂಸ್ಥೆಗೆ ಹಾಗೂ ಸಮಾಜಕ್ಕೆ ಒಳಿತಾಗುತ್ತದೆ ಎಂಬ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ ಎಂದ ಅವರು ಈ ಯೋಜನೆಯಡಿ ೪೩ ನೇ ಸಂಸ್ಥೆಯಾಗಿ ವೇಣೂರು ಐಟಿಐ ಇದ್ದು ಕರ್ನಾಟಕದಲ್ಲಿ ಇದು ಮೂರನೆಯದ್ದಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು, ಯಾವುದೇ ಕಂಪೆನಿಗೆ ಸೇರಿದರೂ ಏಕಾಗ್ರತೆಯಿಂದ, ಮನಸ್ಸಿಟ್ಟು ಕೆಲಸ ಮಾಡುವುದು ಮುಖ್ಯ. ಕೆಲಸದ ವೇಳೆ ಬೇರೆ ಆಲೋಚನೆಗಳಿಗೆ ಅವಕಾಶ ನೀಡಬಾರದು. ಅದೇ ರೀತಿ ಮನೆಯಲ್ಲಿರುವಾಗ ಕಂಪೆನಿಯ ಚಿಂತೆ ಮಾಡಬಾರದು. ನಮಗೆ ಕೆಲಸ ಕೊಟ್ಟವರ ನಿರೀಕ್ಷೆಗಳನ್ನು ಈಡೇರಿಸಬೇಕಾದದ್ದು ಮುಖ್ಯ ಕರ್ತವ್ಯವಾಗುತ್ತದೆ. ಶಿಸ್ತಿನಲ್ಲಿ ಬದ್ಧತೆಯಲ್ಲಿ ಕಾರ್ಯ ನಿರ್ವಹಿಸಿದರೆ ಉನ್ನತ ಹುದ್ದೆ ಖಂಡಿತ ಎಂದ ಅವರು ಜಪಾನ್ ದೇಶವು ದುಡಿಮೆಗೆ ಪ್ರಾಶಸ್ತ್ಯ ನೀಡಿರುವುದರಿಂದ ಅಲ್ಲಿ ಏನೆಲ್ಲಾ ಪ್ರಗತಿ ಆಗಿರುವುದನ್ನು ಅವರು ನೆನಪಿಸಿದರು.
ಟೊಯಾಟಾ ಕಂಪೆನಿಯವರು ಕಾರ್ಯಕ್ರಮ ಪ್ರಧಾನ ಮಂತ್ರಿಗಳ ಭವಿಷ್ಯದ ಯೋಜನೆಗಳಿಗೆ ಪೂರಕವಾಗಿವೆ. ಕಂಪೆನಿಯವರು ನೀಡುವ ತರಬೇತಿಯನ್ನು ಪಡೆದ ಇಲ್ಲಿನ ವಿದ್ಯಾರ್ಥಿಗಳು ಯಾವುದೇ ಕಂಪೆನಿಗೆ ಹೋದರೂ ಎಸ್ಡಿಎಂನ ಘನತೆಯನ್ನು ಹೆಚ್ಚಿಸುವ ಬಗ್ಗೆಯೂ ಆಲೋಚಿಸಬೇಕು ಎಂದ ಅವರು ತರಬೇತಿಯನ್ನು ಪಡೆಯಲು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ನ ಉಪ ಮಹಾ ಪ್ರಬಂಧಕ ನೀರಜ್ ಶರ್ಮಾ, ಹಿರಿಯ ಪ್ರಬಂಧಕ ಶಂಭು ಶರ್ಮ, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಉಪಸ್ಥಿತರಿದ್ದರು.ಐಟಿಐ ಪ್ರಾಚಾರ್ಯ ಸದಾನಂದ ಪೂಜಾರಿ ಸ್ವಾಗತಿಸಿದರು. ನೇಮಕಾತಿ ಅಧಿಕಾರಿ ಎಮ್. ಆರ್.ಜೈನ್ ಪ್ರಸ್ತಾವಿಸಿದರು. ಉಪನ್ಯಾಸಕ ವಿಶ್ವೇಶ್ವರ ಪ್ರಸಾದ ವಂದಿಸಿದರು. ಟೊಯೋಟಾದ ಅಶ್ವಿನಿ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಟೊಯೋಟಾ ಕಂಪೆನಿ ವಾರ್ಷಿಕ 1 ಕೋಟಿ ವಾಹನಗಳನ್ನು ಉತ್ಪಾದಿಸುತ್ತಿದೆ. ಈ ವಾಹನಗಳನ್ನು ನಮ್ಮ ದೇಶದ ಯುವಕರು ತಯಾರಿಸುತ್ತಿದ್ದಾರೆ ಎಂಬುದು ಹೆಮ್ಮೆಯ ವಿಚಾರ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಯೋಜನೆಗಳಿಗೆ ಪೂರಕವಾಗಿ T-TEP ನಡೆಯುತ್ತಿದೆ. ಇದರಲ್ಲಿ ಅತ್ಯಾಧುನಿಕ ವಾಹನ ತಂತ್ರಜ್ಞಾನದ ಬಗ್ಗೆ ಮಾಹಿತಿ, ದುರುಸ್ತಿ ತರಬೇತಿ ನೀಡಲಾಗುತ್ತಿದೆ – ಬಿ.ಪದ್ಮನಾಭ
ಪ್ರಜೆಗಳು ಬಲಿಷ್ಠವಾದರೆ, ದೇಶ ಬಲಿಷ್ಠವಾಗುತ್ತದೆ. ಪ್ರಯತ್ನದಿಂದ ಏನನ್ನೂ ಸಾಧಿಸಬಹುದು. ಟೊಯೋಟಾದಲ್ಲಿ ಉನ್ನತ ಸ್ಥಾನದಲ್ಲಿರುವ ಬಿ. ಪದ್ಮನಾಭ ಹಾಗೂ ಶಂಭು ಭಟ್ ಅವರು ಎಸ್ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾಗಿರುವುದು ಹೆಮ್ಮೆಯ ಸಂಗತಿ – ಡಾ| ಹೆಗ್ಗಡೆ
ಟೊಯೋಟಾ ಕಂಪೆನಿಯವರು ಐಟಿಐಗೆ ಸುಮಾರು ರೂ. 20 ಲಕ್ಷ ಮೌಲ್ಯದ ತರಬೇತಿ ಉಪಕರಣಗಳನ್ನು ನೀಡಿದರು. ತರಬೇತಿಗಾಗಿ ಇರುವ ಮೆಟಿರಿಯಲ್ ಕಂಟೆಂಟ್ ಬೋರ್ಡನ್ನು ಐಟಿಐ ಪ್ರಾಚಾರ್ಯರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ T-TEP ಬಗ್ಗೆ ಪವರ್ಪಾಯಿಂಟ್ ಪ್ರಸೆಂಟೇಶನ್ ಮಾಡಲಾಯಿತು. ಟೋಯೋಟೋ ಕಂಪೆನಿಯಲ್ಲಿ ತರಬೇತಿ ಪಡೆದು ಬಂದಿರುವ ಐಟಿಐನ ಉಪನ್ಯಾಸಕ ಜಾಕೋಬ್ ಅವರಿಗೆ ಪಮಾಣ ಪತ್ರವನ್ನು ಕಂಪೆನಿಯ ಉಪಾಧ್ಯಕ್ಷರು ಹಸ್ತಾಂತರಿಸಿದರು.
ಕಂಪೆನಿಯ ವಿವಿಧ ಅಧಿಕಾರಿ ವರ್ಗದವರು ಐಟಿಐ ಆವರಣದಲ್ಲಿ ಒಪ್ಪಂದದ ನೆನಪಿಗಾಗಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟರು.ಕರ್ನಾಟಕದ 700 ಮಂದಿ ತರಬೇತಿಯನ್ನು ಇದುವರೆಗೆ ಪಡೆದಿದ್ದು 700 ಮಂದಿ ದೇಶದ ವಿವಿದೆಡೆ ಟೊಯೋಟಾ ಡೀಲರ್ಸ್ಗಳಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.