ಬೆಳ್ತಂಗಡಿ: ಸರಕಾರದ ಆದಾಯದಲ್ಲಿ ಸೋರಿಕೆಯಾಗುತ್ತಿದ್ದು ಇದರ ತಡೆಗಟ್ಟುವಿಕೆಗೆ ಮದ್ಯದಂಗಡಿ ಮತ್ತು ಬಾರ್ಗಳಿಗೆ ಪರವಾನಿಗೆ ನೀಡಬೇಕೆಂಬ ಅಬಕಾರಿ ಸಚಿವರಾದ ಮನೋಹರ್ ತಹಶೀಲ್ದಾರ್ರವರ ಪ್ರಸ್ತಾವವನ್ನು ಪರಿಶೀಲಿಸಿ ಹೆಚ್ಚಳಕ್ಕೆ ಚಿಂತನೆ ಮಾಡಲಾಗುವುದೆಂಬ ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆಯನ್ನು ಜನಜಾಗೃತಿ ವೇದಿಕೆ ತೀವ್ರವಾಗಿ ವಿರೋಧಿಸಿದೆ.
ಅಕ್ರಮ ಮದ್ಯಮಾರಾಟ, ಖಾಸಗಿ ಮದ್ಯದಂಗಡಿಗಳ ನಿಯಂತ್ರಣ ಮಾಡಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಬದಲು ಮದ್ಯಪಾನ ಕುಡಿಯುವವರ ಸಂಖ್ಯೆ ಏರುತ್ತಲೇ ಇದೆ. ಸರಕಾರದ ಬೊಕ್ಕಸ ಖಾಲಿಯಾಗುತ್ತಿದೆ ಎನ್ನುವ ಕಾರಣ ನೀಡಿ ರಾಜ್ಯದಲ್ಲಿ 1750 ಹೊಸ ಲೈಸನ್ಸ್ ಕೊಡಲು ಚಿಂತಿಸುತ್ತಿರುವುದು ಸರಕಾರಕ್ಕೆ ಶೋಭೆಯಲ್ಲ. ಇದನ್ನು ವೇದಿಕೆ ಕಟುವಾಗಿ ವಿರೋಧಿಸಿದೆ. ವೇದಿಕೆಯ ವಿರೋಧವನ್ನು ಪರಿಗಣಿಸಿ ಸರಕಾರ ಈ ನಿರ್ಧಾರದಿಂದ ಹೊರಬರಬೇಕು. ರಾಜ್ಯದಲ್ಲಿ ಯಾವುದೇ ಮದ್ಯದಂಗಡಿಗಳಿಗೆ ಅವಕಾಶ ನೀಡಬಾರದು. ರೈತರ ಆತ್ಮಹತ್ಯೆ, ಅಪಘಾತಗಳು, ಸುಲಿಗೆ, ದರೋಡೆ, ಅತ್ಯಾಚಾರ, ಅನಾಚಾರಗಳಿಗೆ ಮೂಲಕಾರಣವಾಗುತ್ತಿರುವ ರೈತರ, ಬಡವರ ಪಾಲಿನ ಶತ್ರುವಾಗಿರುವ ಈ ಮದ್ಯದಂಗಡಿಗಳನ್ನು ಯಾವುದೇ ಕಾರಣಕ್ಕೂ ಮರುಸ್ಥಾಪಿಸಲು ಸರಕಾರ ಅವಕಾಶ ನೀಡಬಾರದು. ಈಗಾಗಲೇ ಮದ್ಯ ಮಾರಾಟದಲ್ಲಿ ಅಬಕಾರಿ ಟಾರ್ಗೆಟ್ ಮೂಲಕ ಗುರಿ ಮೀರಿದ ಸಾಧನೆ ಮಾಡಿದ ಸರಕಾರ ಇನ್ನಷ್ಟು ಜನರನ್ನು ದರಿದ್ರತನಕ್ಕೆ ತಳ್ಳುವುದು ಶೋಭೆಯಲ್ಲ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಸತೀಶ್ ಹೊನ್ನವಳ್ಳಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ವೇದಿಕೆಯ ಸಭೆ ಕರೆದು ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಹಕ್ಕೊತ್ತಾಯ ಮಂಡಿಸಲಿದ್ದೇವೆ. ಹಾಗೂ ರಾಜ್ಯ ವೇದಿಕೆಯ ನಿಯೋಗ ಮಾನ್ಯ ಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರನ್ನು ಶೀಘ್ರವೇ ಭೇಟಿ ಮಾಡಲಿದೆ ಎಂದು ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ನಡೆಯುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಕಳೆದ ೩ ದಶಕಗಳಿಂದ ಮದ್ಯಪಾನಾದಿ ದುಶ್ಚಟದ ವಿರುದ್ದ ಹೋರಾಟ ನಡೆಸುತ್ತಿದೆ. ರಾಜ್ಯದಲ್ಲಿ ಈ ವಿಚಾರದಂತೆ ವಿಶೇಷ ಸಾಧನೆ ಮಾಡಿದ ವೇದಿಕೆಗೆ ಬೆಂಬಲ ನೀಡಿ ಇದರ ಹತೋಟಿ ಮತ್ತು ನಿರ್ವಹಣೆ ಮಾಡುವ ಬಗ್ಗೆ ಗಮನಹರಿಸಲಿ ಎಂದು ಜನಜಾಗೃತಿ ವೇದಿಕೆ ಸರಕಾರಕ್ಕೆ ಒತ್ತಾಯಿಸಿದೆ. ಸಾವಿರಾರು ಪಾನಮುಕ್ತರನ್ನು ಮದ್ಯವರ್ಜನ ಶಿಬಿರದ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳಿಸಿದ ವೇದಿಕೆಗೆ ಈ ನಿರ್ಧಾರದಿಂದ ತುಂಬಾ ನೋವಾಗಿದೆ ಎಂದು ರಾಜ್ಯ ಕಾರ್ಯದರ್ಶಿ ವಿವೇಕ್ ವಿ.ಪಾಸ್ರವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ ಜನತೆಯ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಅರಿತು ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ರಾಜ್ಯಾದ್ಯಂತ ಈಗಾಗಲೇ 9700 ಕ್ಕೂ ಮೇಲ್ಪಟ್ಟು ವೈನ್ಶಾಪ್ಗಳಿದ್ದು, 400 ಕ್ಕೂ ಮೇಲ್ಪಟ್ಟು ಎಮ್.ಎಸ್.ಐ.ಎಲ್. ಮದ್ಯದಂಗಡಿಗಳನ್ನು ಈಗಾಗಲೇ ವಿಸ್ತರಿಸಿರುತ್ತಾರೆ. ಇನ್ನಷ್ಟು ಮದ್ಯದಂಗಡಿಗಳಿಗೆ ಲೈಸನ್ಸ್ ನೀಡದಲ್ಲಿ ರಾಜ್ಯದ ಜನತೆ ಇದನ್ನು ಸಹಿಸಲು ಸಾಧ್ಯವಿಲ್ಲವೆಂದು ಸ್ಥಾಪಕಾಧ್ಯಕ್ಷರಾದ ಕೆ. ವಸಂತ ಸಾಲ್ಯಾನ್ರವರು ಅಭಿಪ್ರಾಯಪಟ್ಟರು.
ವೇದಿಕೆಯ ಕೇಂದ್ರ ಕಛೇರಿ ಬೆಳ್ತಂಗಡಿಯಲ್ಲಿ ನಡೆದ ತುರ್ತು ಸಭೆಯಲ್ಲಿ ವೇದಿಕೆ ಮಾಜಿ ರಾಜ್ಯಾಧ್ಯಕ್ಷ ದೇವದಾಸ್ ಹೆಬ್ಬಾರ್, ಉಭಯ ಜಿಲ್ಲಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ವೇದಿಕೆಯ ಕಾರ್ಯಕಾರಿ ಮಂಡಳಿ ಸದಸ್ಯರಾದ ಸದಾಶಿವ ಶೆಟ್ಟಿ ಮಂಗಳೂರು, ಪ್ರತಾಪ್ಸಿಂಹ ನಾಯಕ್, ತಿಮ್ಮಪ್ಪ ಗೌಡ, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.