ಬೆಳ್ತಂಗಡಿ : ಜಾತಿ, ಕಂದಾಚಾರಗಳ ನಿರ್ಮೂಲನೆ ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳಿಂದ ಸಾಧ್ಯ. ಹೀಗಾಗಿ ಅದಕ್ಕೆ ಕಾನೂನಿನ ಅವಶ್ಯಕತೆ ಇಲ್ಲ ಎಂದು ರಾಜ್ಯ ಸಹಕಾರಿ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್ ಹೇಳಿದರು.ಅವರು ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ ೮೩ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಹಿಷ್ಣುತೆ ಭಾರತದ ಪರಂಪರೆಯೇ ಆಗಿದೆ. ಎಲ್ಲಾ ಧರ್ಮ, ಮತ, ಪಂಥಗಳ ಅಂತಿಮಗುರಿ ಶಾಂತಿಯೇ ಆಗಿದೆ. ಭಾರತದಲ್ಲಿ ವಿವಿಧ ರೂಢಿ, ಸಂಪ್ರದಾಯಗಳು ಇದ್ದರೂ ಮೂಲಭೂತವಾಗಿ ಯಾರೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ದೇಶದಲ್ಲಿ ಅಸಹಿಷ್ಣುತೆಗೆ ಎಂದಿಗೂ ಅವಕಾಶವಿರಬಾರದು. ಇಂದು ವಿದೇಶಿಯರು ಕೂಡ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಧರ್ಮ, ರಾಜಕೀಯದ ಹೆಸರಿನಲ್ಲಿ ಹಿಂಸೆ ಸಲ್ಲದು ಎಂದರು.
ಬೂಟಾಟಿಕೆಯು ಅಪನಂಬಿಕೆಗಿಂತ ಹೆಚ್ಚು ಅಪಾಯಕಾರಿ. ದ್ವೇಷವು ಅಹಿಂಸೆಯನ್ನು ಹತ್ತಿಕ್ಕಿ ಮಾನವೀಯತೆಯನ್ನು ನಾಶ ಮಾಡುತ್ತದೆ. ಜಾತಿ, ಕಂದಾಚಾರ, ಮೂಢನಂಬಿಕೆಗಳ ಕಾನೂನಿನ ಅವಶ್ಯಕತೆ ಇಲ್ಲ ಎಂದ ಅವರು ಧಾರ್ಮಿಕ ಕ್ಷೇತ್ರಗಳೇ ಸಹಭೋಜನ ಮೊದಲಾದ ಕಾರ್ಯಗಳ ಮೂಲಕ ಅದನ್ನು ಹೋಗಲಾಡಿಸುತ್ತಿವೆ ಎಂದರು. ಧರ್ಮಸ್ಥಳದಲ್ಲಿ ಏಕಪ್ರಕಾರದ ಆತಿಥ್ಯ ಅನುಕರಣೀಯ. ಕ್ಷೇತ್ರವು ಧರ್ಮಸಹಿಷ್ಣುತೆಗೆ ಹೆಸರುವಾಸಿಯಾಗಿದೆ.ಇಲ್ಲಿನ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಗಳಿಂದ ಆತ್ಯಹತ್ಯೆ ಪ್ರಕರಣಗಳು ಇಲ್ಲವಾಗಿವೆ. ನಾಗರಿಕತೆ ಬೆಳೆದಷ್ಟು ಧರ್ಮಕ್ಷೇತ್ರಗಳ ಕಾರ್ಯವೂ ವಿಸ್ತಾರಗೊಳ್ಳುತ್ತದೆ ಎಂದರು.
ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ್ದ ಹರಿದ್ವಾರ ವಿಶ್ವಗಾಯತ್ರಿ ಪರಿವಾರ ಮುಖ್ಯಸ್ಥ ಡಾ| ಪ್ರಣವ್ ಪಾಂಡ್ಯ ಅವರು ಕಳೆದ ಮೂವತ್ತು ವರ್ಷಗಳಿಂದ ವೈಜ್ಞಾನಿಕ ಬದಲಾವಣೆಗಳು ಅಗಾಧವಾಗಿ ಬೆಳೆದಿದೆ. ಮಹಾಯುದ್ದವೇ ನಡೆಯದಿದ್ದರೂ ಸಣ್ಣ ಸಣ್ಣ ಯುದ್ದಗಳು ಮನುಷ್ಯರೊಳಗೆ ನಡೆಯುತ್ತಿದೆ. ಬಡತನ, ಮಕ್ಕಳಲ್ಲಿ ಅಪೌಷ್ಠಿಕತೆ, ಮಕ್ಕಳಿಗೆ ಲೈಂಗಿಕ ಹಿಂಸೆಗೆ ಕೊನೆಯಿಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ವೈಜ್ಞಾನಿಕ ಅನ್ವೇಷಣೆ ಮಾನವನ ಹಿತಕ್ಕೆ ಬಳಕೆಯಾಗಬೇಕು. ಭಾರತೀಯರ ವಸುಧೈವಕುಟುಂಬಕಂ ಎಂಬ ಸೂತ್ರಎಲ್ಲದಕ್ಕೂ ಪರಿಹಾರವಾಗಬಲ್ಲುದು ಎಂದು ಅವರು ಆಶಿಸಿದರು.
ಬುದ್ದ, ಮಹಾವೀರರಂತಹ ಮಹಾನುಭಾವರು ತ್ಯಾಗದ ಮೂಲಕ ಮನೆಮಾತಾಗಿದ್ದಾರೆ. ತ್ಯಾಗಿಯನ್ನು ಸಮಾಜವೇ ನೋಡಿಕೊಳ್ಳುತ್ತದೆ ಎಂದ ಅವರು ಸಹಿಷ್ಣುತೆಯ ಪರಾಕಾಷ್ಠೆ ಇರುವುದೇ ಭಾರತದಲ್ಲಿ. ಹಿಂಸೆಯಿಂದಯಾರಿಗೂ, ಎಂದಿಗೂ ಯಾವುದೇ ಅನುಕೂಲತೆಗಳು ಉಂಟಾಗುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ ಎಂದರು.
ಸ್ವಾಗತಿಸಿ ಮಾತನಾಡಿದ ಸ್ವಾಗತ ಮಂಡಳಿಯ ಅಧ್ಯಕ್ಷರಾದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ನನ್ನಧರ್ಮವನ್ನು ಮೊದಲ ತಿಳಿದುಕೊಂಡು ಇತರ ಧರ್ಮಗಳ ಬಗ್ಗೆ ಕುತೂಹಲವನ್ನು ಬೆಳೆಸಿಕೊಳ್ಳಬೇಕು. ಈ ಅರಿವು ಇದ್ದಾಗ ನಮ್ಮ ಚಿಂತನೆಗಳು ವಿಶಾಲವಾಗುತ್ತವೆ. ಇಹ ಲೋಕದ ಸತ್ಚಿಂತನೆ, ಸತ್ಕರ್ಮಗಳಲ್ಲಿ ಪರಲೋಕದ ಅಂದರೆ ಮುಕ್ತಿಯ ಬೀಜ ಅಡಗಿದೆ. ಧರ್ಮಗಳಲ್ಲಿ ಅನೇಕ ವಿಭಾಗಗಳು ಇದ್ದರೂ ಭಿನ್ನತೆಯಲ್ಲಿಏಕತೆಯನ್ನುಗುರುತಿಸುವುದು ಬಹಳ ಮುಖ್ಯವಾದ ಕೆಲಸ ಎಂದರು.
ಬದಲಾವಣೆಗಳು ನಿರಂತರ ಆಗುತ್ತಲೇ ಇರುತ್ತವೆ. ಅವುಗಳನ್ನು ಗುರುತಿಸಿ ಅದರಿಂದ ಹೇಗೆ ಬದುಕನ್ನು ಸುಂದರವಾಗಿಸಬಹುದು, ಸಾಮರಸ್ಯದ ಬದುಕನ್ನು ಹೇಗೆ ಮೂಡಿಸಬಹುದು ಎಂದು ಗುರುತಿಸುವುದರಲ್ಲಿದೆ. ನಮ್ಮ ಪ್ರತ್ಯೇಕತೆಯನ್ನು ಗುರುತಿಸುವುದು ಸಂದೇಶವಾಗಿರಬಾರದು ಎಂದ ಅವರು ನಮ್ಮ ತಾಳ್ಮೆ ಹೆಚ್ಚಬೇಕು. ಸಂಯಮ ಹೆಚ್ಚಬೇಕು.ಇತರರ ವ್ಯವಹಾರದಲ್ಲಿ ಬರಬಹುದಾದಂತಹ ಅನೇಕ ನಮ್ಮದೃಷ್ಟಿಗೆ ಸರಿ-ಬರದ ವಿಚಾರಗಳನ್ನು ಕೂಡ, ಜೈನಧರ್ಮದಲ್ಲಿ ಹೇಳಿದಂತೆ ಅನೇಕಾಂತವಾದ ದೃಷ್ಟಿಯಿಂದ ಅದನ್ನು ನೋಡುವಂತಾಗಬೇಕು ಎಂದು ಆಶಿಸಿದರು.
ಬೆಂಗಳೂರು ಪಾರ್ಸಿ ಜೊರಾಸ್ಟ್ರೀಯನ್ ಅಂಜುಮಾನ್ ಕಾರ್ಯದರ್ಶಿ ಶೆರಿಯಾರ್ ಡಿ. ವಕೀಲ್ ಪಾರ್ಸಿ ಧರ್ಮದಲ್ಲಿ ಸಮನ್ವಯದೃಷ್ಟಿ ಎಂಬ ವಿಚಾರವಾಗಿ, ಚೆನ್ನೈ ಮದ್ರಾಸ್ ವಿವಿಯ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥೆಡಾ.ತಮಿಳ್ ಸೆಲ್ವಿ ಜೈನಧರ್ಮದಲ್ಲಿ ಸಮನ್ವಯದೃಷ್ಟಿ ಬಗ್ಗೆ ಮತ್ತು ಸಾಹಿತಿ ಡಾ| ಸೈಯದ್ ಶಹಾಬುದ್ದೀನ್ ಅವರು ಇಸ್ಲಾಂ ಧರ್ಮದಲ್ಲಿ ಸಮನ್ವಯದೃಷ್ಟಿ ಎಂಬ ವಿಚಾರಗಳಲ್ಲಿ ಉಪನ್ಯಾಸಗಳನ್ನು ನೀಡಿದರು.
ವೇದಿಕೆಯಲ್ಲಿ ಧ.ಶಿ.ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಪ್ರಭಾಕರ್, ಸ್ವಾಗತ ಸಮಿತಿ ಉಪಾಧ್ಯಕ್ಷ ಸುರೇಂದ್ರಕುಮಾರ್ ವೇದಿಕೆಯಲ್ಲಿದ್ದರು.ಸಮಾರಂಭದಲ್ಲಿ www.veerendraheggade.in ಎಂಬ ಅಧ್ಯಕ್ಷೀಯಅಂತರ್ಜಾಲ ಪುಟಕ್ಕೆಡಾ| ಪಾಂಡ್ಯ ಚಾಲನೆ ನೀಡಿದರು.
ಉಪನ್ಯಾಸಕ ಡಾ| ಬಿ.ಪಿ.ಸಂಪತ್ ಕುಮಾರ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಉದ್ಘಾಟಕರ ಸಮ್ಮಾನ ಪತ್ರವನ್ನು, ಉಪನ್ಯಾಸಕ ಸುನಿಲ್ ಪಂಡಿತ್ ಅಧ್ಯಕ್ಷರ ಸಮ್ಮಾನ ಪತ್ರವನ್ನು ವಾಚಿಸಿದರು.ಎಸ್ಕೆಡಿಆರ್ಡಿಪಿ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್.ಮಂಜುನಾಥ್ ವಂದಿಸಿದರು.
ಬಹುಸಂಖ್ಯಾತ ಹಿಂದುಗಳು ಡಾ|ಹೆಗ್ಗಡೆಯವರನ್ನು ಹಿಂದೂವೆಂದೇ ತಿಳಿದುಕೊಂಡಿರಾದ್ದೆಯೇ ಹೊರತು ಜೈನರೆಂದಲ್ಲ. ಮನೆ ಮನೆಗಳಲ್ಲಿ ಅವರ ಭಾವಚಿತ್ರವನ್ನುಇರುವುದು ಕಾಣಬಹುದಾಗಿದೆ. ಹೀಗಾಗಿ ಅವರು ಸರ್ವ ಸಮಾನತೆಯ ಮಹಾನುಭಾವರು ಆಗಿದ್ದಾರೆ- ಹೆಚ್. ಎಸ್. ಮಹಾದೇವ ಪ್ರಸಾದ್
ಮುಂದಿನ 10 ವರ್ಷಗಳಲ್ಲಿ ಗಂಗೆ ಸಹಿತ ಭಾರತದ ಎಲ್ಲಾ ಪ್ರಮುಖ ನದಿಗಳ ಸ್ವಚ್ಛತಾ ಕಾರ್ಯವನ್ನು ವಿಶ್ವಗಾಯತ್ರಿ ಪರಿವಾರದ ಕಾರ್ಯಕರ್ತರು ಕೈಗೊಳ್ಳಲಿದ್ದಾರೆ- ಡಾ| ಪ್ರಣವ್ ಪಾಂಡ್ಯ
ಧರ್ಮ, ಅರ್ಥ, ಕಾಮ- ಈ ತ್ರಿವರ್ಗಗಳನ್ನು ಇತಿಮಿತಿಯಲ್ಲಿ ಮತ್ತು ಸಮಯೋಚಿತವಾಗಿ, ಕಾಲೋಚಿತವಾಗಿ ಸರ್ವರಿಗೂ ಮಾನ್ಯವಾಗುವ ರೀತಿಯಲ್ಲಿ ಬಳಸಿದರೆ ಸರ್ವರಿಗೂ ಶ್ರೇಯಸ್ಸುಉಂಟಾಗುತ್ತದೆ-ಡಾ| ಹೆಗ್ಗಡೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.